Spy Satellites: ಬೆಂಗಳೂರಿನ ಕಂಪನಿಗಳಿಂದ ಸ್ಪೈ ಸೆಟಿಲೈಟ್ಗಳ ತಯಾರಿಕೆ; ಪಾಕಿಸ್ತಾನದ ಮೇಲೆ ಹದ್ದಿನಗಣ್ಣಿಡಲು ಬಳಕೆ
Spy satellites constellation from India: ಭಾರತದ ಮೂರು ಕಂಪನಿಗಳು ಮಹತ್ವದ ಸರ್ವೇಲೆನ್ಸ್ ಸೆಟಿಲೈಟ್ಗಳನ್ನು ತಯಾರಿಸುವ ಜವಾಬ್ದಾರಿ ಪಡೆದಿವೆ. ಹೈದರಾಬಾದ್ನ ಅನಂತ್ ಟೆಕ್ನಾಲಜೀಸ್, ಬೆಂಗಳೂರಿನ ಸೆಂಟಮ್ ಎಲೆಕ್ಟ್ರಾನಿಕ್ಸ್ ಮತ್ತು ಆಲ್ಫ ಡಿಸೈನ್ ಟೆಕ್ನಾಲಜೀಸ್ ಸಂಸ್ಥೆಗಳಿಂದ ಸ್ಪೈ ಸೆಟಿಲೈಟ್ ತಯಾರಿಕೆ ನಡೆಯುತ್ತಿದೆ. 2028ಕ್ಕೆ ಉಪಗ್ರಹ ತಯಾರಿಸಿಕೊಡಬೇಕಿತ್ತು. ಈ ಡೆಡ್ಲೈನ್ ಅನ್ನು 2026ಕ್ಕೆ ಮೊಟಕುಗೊಳಿಸಲಾಗಿದೆ.

ಬೆಂಗಳೂರು, ಮೇ 12: ಪಾಕಿಸ್ತಾನದಿಂದ ಯಾವಾಗ ಬೇಕಾದರೂ ಕಿತಾಪತಿ ಎದುರಾಗುವ ಸಾಧ್ಯತೆ ದಟ್ಟವಾಗಿರುವ ಹಿನ್ನೆಲೆಯಲ್ಲಿ ಭಾರತವು ತನ್ನ ಶತ್ರು ದೇಶಗಳ ಮೇಲೆ ಹದ್ದಿನ ಕಣ್ಣಿಡಲು ಸರ್ವೇಲೆನ್ಸ್ ಸೆಟಿಲೈಟ್ಗಳನ್ನು (spy satellites) ಹೆಚ್ಚೆಚ್ಚು ಸಂಖ್ಯೆಯಲ್ಲಿ ನಿಯೋಜಿಸಲು ಹೊರಟಿದೆ. ಮುಂದಿನ ನಾಲ್ಕೈದು ವರ್ಷದಲ್ಲಿ ನಿರ್ಮಾಣವಾಗುವ ಉದ್ದೇಶವಿದ್ದ ಸ್ಪೈ ಸೆಟಿಲೈಟ್ಗಳನ್ನು ಸಾಧ್ಯವಾದಷ್ಟೂ ಶೀಘ್ರದಲ್ಲಿ ತಯಾರಿಸಿ ಆಗಸದಲ್ಲಿ ನಿಯೋಜಿಸುವ ಇರಾದೆಯಲ್ಲಿ ಸರ್ಕಾರ ಇದೆ. ವರದಿ ಪ್ರಕಾರ, ಕೆಲ ಸ್ಪೈ ಸೆಟಿಲೈಟ್ಗಳ ತಯಾರಿಕೆಗೆ ಮೂರು ಕಂಪನಿಗಳಿಗೆ ನೀಡಿದ್ದ ಡೆಡ್ಲೈನ್ನ ಅವಧಿಯನ್ನು ಕಡಿಮೆಗೊಳಿಸಲಾಗಿದೆ. ಈ ಮೂರು ಕಂಪನಿಗಳಲ್ಲಿ ಎರಡು ಬೆಂಗಳೂರಿನದ್ದಾಗಿವೆ.
ಹೈದರಾಬಾದ್ ಮೂಲದ ಅನಂತ್ ಟೆಕ್ನಾಲಜೀಸ್, ಬೆಂಗಳೂರು ಮೂಲದ ಸೆಂಟಮ್ ಎಲೆಕ್ಟ್ರಾನಿಕ್ಸ್ ಮತ್ತು ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಸಂಸ್ಥೆಗಳು ಸರ್ವೇಲೆನ್ಸ್ ಸೆಟಿಲೈಟ್ಗಳನ್ನು ತಯಾರಿಸಲು ಗುತ್ತಿಗೆ ಪಡೆದಿದ್ದುವು. 2028ರ ಕೊನೆಗೆ ಈ ಸೆಟಿಲೈಟ್ಗಳನ್ನು ತಯಾರಿಸಿಕೊಡಬೇಕು. ಆದರೆ, ಗಡುವನ್ನು 12-18 ತಿಂಗಳಿಗೆ ಪರಿಷ್ಕರಿಸಲಾಗಿದೆ. ಅಂದರೆ, 2028 ಬದಲು 2026ರಷ್ಟರಲ್ಲಿ ಈ ಸ್ಪೈ ಉಪಗ್ರಹಗಳನ್ನು ತಯಾರಿಸಬೇಕು ಎಂದು ಸರ್ಕಾರ ಸೂಚಿಸಿದೆ ಎಂದು ಮನಿ ಕಂಟ್ರೋಲ್ ವೆಬ್ಸಸೈಟ್ನಲ್ಲಿ ವರದಿಯಾಗಿದೆ.
2024ರ ಅಕ್ಟೋಬರ್ನಲ್ಲಿ ಸರ್ಕಾರವು ಬಾಹ್ಯಾಕಾಶ ಆಧಾರಿತ ಸರ್ವೇಲೆನ್ಸ್-3 ಮಿಷನ್ ಅನ್ನು ಆರಂಭಿಸಿತು. 3 ಬಿಲಿಯನ್ ಡಾಲರ್ನ ಈ ಯೋಜನೆ ಅಡಿ 52 ಸೆಟಿಲೈಟ್ಗಳ ಜಾಲವನ್ನು ಭೂಕಕ್ಷೆಯಲ್ಲಿ ಸೇರಿಸುವ ಉದ್ದೇಶ ಇದೆ. ಭಾರತದ ಗಡಿ ಭಾಗಗಳನ್ನು ಗಮನಿಸಲು ಪ್ರಮುಖ ಉದ್ದೇಶ ಈ ಸ್ಪೈ ಸೆಟಿಲೈಟ್ಗಳದ್ದಾಗಿದೆ. ಈಗ ಪಾಕಿಸ್ತಾನದೊಂದಿಗಿನ ಸಂಬಂಧ ಮತ್ತಷ್ಟು ಸೂಕ್ಷ್ಮಗೊಂಡ ಹಿನ್ನೆಲೆಯಲ್ಲಿ ಈ ಸೆಟಿಲೈಟ್ಗಳ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಿರುತ್ತದೆ.
ಇದನ್ನೂ ಓದಿ: ಶತ್ರುಗಳ ಮೇಲೆ ಕಣ್ಣಿಡಲು 52 ಸ್ಪೈ ಸೆಟಿಲೈಟ್ಗಳ ನಿಯೋಜನೆಗೆ ಭಾರತ ನಿರ್ಧಾರ
ಚಂದ್ರಯಾನ ಯೋಜನೆಗಳೊಂದಿಗೆ ಇದೆ ಈ ಕಂಪನಿಗಳ ಸಂಬಂಧ
ಅನಂತ್ ಟೆಕ್ನಾಲಜೀಸ್, ಸೆಂಟಮ್ ಎಲೆಕ್ಟ್ರಾನಿಕ್ಸ್ ಮತ್ತು ಆಲ್ಫ ಡಿಸೈನ್ ಟೆಕ್ನಾಲಜೀಸ್ ಸಂಸ್ಥೆಗಳು ಈ ಮುಂಚೆಯೂ ಇಸ್ರೋಗೆ ವಿವಿಧ ಸೇವೆಗಳನ್ನು ನೀಡುತ್ತಾ ಬಂದಿವೆ. ಚಂದ್ರಯಾನ ಇತ್ಯಾದಿ ಯೋಜನೆಗಳಲ್ಲಿ ಇವರ ಪಾಲು ಇದೆ. 2024ರಲ್ಲಿ ಸ್ಪೈ ಸೆಟಿಲೈಟ್ಗಳ ಮಿಷನ್ ಆರಂಭವಾದಾಗಲೇ ಈ ಕಂಪನಿಗಳಿಗೆ ಗುತ್ತಿಗೆ ಕೊಡಲಾಗಿತ್ತು. ಈ ಪೈಕಿ ಅನಂತ್ ಟೆಕ್ನಾಲಜೀಸ್ ಸಂಸ್ಥೆಯ ಒಂದು ಸೆಟಿಲೈಟ್ ಅಂತಿಮ ಹಂತದ ಅಭಿವೃದ್ಧಿಯಲ್ಲಿದೆ. ಈ ವರ್ಷವೇ ಇದು ಬಿಡುಗಡೆ ಆಗಬಹುದು. ವರದಿ ಪ್ರಕಾರ ಈ ಸೆಟಿಲೈಟ್ ಅನ್ನು ಇಸ್ರೋದ ಎಲ್ವಿಎಂ-3 ಅಥವಾ ಸ್ಪೇಸ್ಎಕ್ಸ್ ರಾಕೆಟ್ ಮೂಲಕ ನಭಕ್ಕೆ ಕಳುಹಿಸುವ ಸಾಧ್ಯತೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ