Meta Layoffs- ಫೇಸ್​ಬುಕ್​ಗೆ ಶೇ.13ರಷ್ಟು ಲೇ ಆಫ್ ಸಾಕಾಗಿಲ್ಲ, ಮತ್ತೊಂದು ಸುತ್ತಿನ ಫೈರಿಂಗ್​ಗೆ ಮೆಟಾ ಅಣಿ

|

Updated on: Mar 07, 2023 | 10:41 AM

Meta Readies For Another Round of Job cuts: 2022ರ ನವೆಂಬರ್​ನಲ್ಲಿ 11,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ್ದ ಮೆಟಾ ಸಂಸ್ಥೆ ಇದೀಗ ಇನ್ನಷ್ಟು ಸಾವಿರಾರು ಮಂದಿಯನ್ನು ಮನೆಗೆ ಕಳುಹಿಸಲು ಯೋಜಿಸಿದೆ. ಇದು ಮುಂದಿನ ವಾರವೇ ಆಗಬಹುದು ಎನ್ನಲಾಗಿದೆ.

Meta Layoffs- ಫೇಸ್​ಬುಕ್​ಗೆ ಶೇ.13ರಷ್ಟು ಲೇ ಆಫ್ ಸಾಕಾಗಿಲ್ಲ, ಮತ್ತೊಂದು ಸುತ್ತಿನ ಫೈರಿಂಗ್​ಗೆ ಮೆಟಾ ಅಣಿ
ಮೆಟಾ
Follow us on

ವಾಷಿಂಗ್ಟನ್: ಫೇಸ್​ಬುಕ್​ನ ಮಾತೃಸಂಸ್ಥೆ ಮೆಟಾ (Meta Platforms) ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ಸಿದ್ಧತೆ ನಡೆಸಿದೆ ಎಂಬಂತಹ ಸುದ್ದಿ ಕೇಳಿಬರುತ್ತಿದೆ. ಮೂರ್ನಾಲ್ಕು ತಿಂಗಳ ಹಿಂದಷ್ಟೇ ಮೆಟಾ ತನ್ನ ಶೇ. 13ರಷ್ಟು, ಅಂದರೆ ಸುಮಾರು 11 ಸಾವಿರ ಉದ್ಯೋಗಿಗಳನ್ನು ಮನೆ ಕಳುಹಿಸಿತ್ತು. ಇದೀಗ ಮತ್ತೊಂದು ಸುತ್ತಿನ ಲೇ ಆಫ್ (Layoffs) ಮಾಡಲಿದೆ. ಈ ವಾರವೇ ಈ ಬಗ್ಗೆ ತೀರ್ಮಾನ ಆಗಬಹುದು. ಹಣಕಾಸು ಲೆಕ್ಕಾಚಾರ ಮೆಟಾದ ಈ ಕಠಿಣ ನಿರ್ಧಾರಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಬ್ಲೂಮ್​ಬರ್ಗ್ ಮಾಧ್ಯಮ ಸಂಸ್ಥೆಯ ವರದಿ ಪ್ರಕಾರ ಮುಂದಿನ ವಾರ ಮೆಟಾ ಲೇ ಆಫ್ ಬಗ್ಗೆ ಒಂದು ಸ್ಪಷ್ಟತೆ ಸಿಗಬಹುದು. ಸಿಬ್ಬಂದಿವರ್ಗದ ಸಂಖ್ಯೆ ಕಡಿಮೆ ಮಾಡಲು ಮೆಟಾ ಸಾಧ್ಯವಾದಷ್ಟೂ ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. ಮುಂದಿನ ವಾರ ಅಥವಾ ಇನ್ನೆರಡು ವಾರದಲ್ಲಿ ಲೇ ಆಫ್ ಪ್ರಾರಂಭವಾಗಬಹುದು ಎನ್ನಲಾಗಿದೆ.

ಕಳೆದ ವರ್ಷ, 2022 ನವೆಂಬರ್​ನಲ್ಲಿ ಮೆಟಾ ಸಂಸ್ಥೆ ಫೇಸ್​ಬುಕ್ ಸೇರಿದಂತೆ ತನ್ನ ಎಲ್ಲಾ ಪ್ಲಾಟ್​ಫಾರ್ಮ್​ಗಳಿಂದ ಒಟ್ಟು ಶೇ. 13ರಷ್ಟು ಸಿಬ್ಬಂದಿ ಸಂಖ್ಯೆಯನ್ನು ಕಡಿತಗೊಳಿಸಿತ್ತು. ಒಟ್ಟು 11 ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಂಡರು. ಮೆಟಾ ಇತಿಹಾಸದಲ್ಲೇ ಇದು ಅತಿದೊಡ್ಡ ಲೇ ಆಫ್ ಆಗಿದೆ. ಟೆಕ್ ಉದ್ಯಮ ಇತಿಹಾಸದಲ್ಲೇ ಒಮ್ಮೆಗೇ ಅತಿ ಹೆಚ್ಚು ಜನರನ್ನು ಕೆಲಸದಿಂದ ತೆಗೆದ ಕಂಪನಿಗಳ ಪಟ್ಟಿಗೆ ಮೆಟಾ ಸೇರಿದೆ.

ಬೇರೆ ಕೆಲ ಟೆಕ್ ಕಂಪನಿಗಳು ಲೇ ಆಫ್ ಭರಾಟೆಯಲ್ಲಿವೆ. ಗೂಗಲ್, ಮೈಕ್ರೋಸಾಫ್ಟ್, ಅಮೇಜಾನ್, ಇಂಟೆಲ್ ಮೊದಲಾದ ಕಂಪನಿಗಳು ಸಾವಿರಾರು ನೌಕರರನ್ನು ಕೆಲಸದಿಂದ ಬಿಡಿಸಿವೆ, ಬಿಡಿಸುತ್ತಿವೆ. ಇಂಟೆಲ್ ಕಂಪನಿಯಂತೂ 1 ಲಕ್ಷಕ್ಕೂ ಹೆಚ್ಚು ಮಂದಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು ಆಲೋಚಿಸುತ್ತಿರುವ ಭಯಾನಕ ಸುದ್ದಿ ಇದೆ.

ಇದನ್ನೂ ಓದಿAirbnb Layoffs: ಶೇ. 30ರಷ್ಟು ಹೆಚ್​ಆರ್ ಸಿಬ್ಬಂದಿ ಮನೆಗೆ ಕಳುಹಿಸಿದ ಏರ್​ಬಿಎನ್​ಬಿ

ಇತ್ತ, ಮೆಟಾದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಉದ್ಯೋಗಿಗಳಿಗೂ ಆತಂಕ ಶುರುವಾಗಿದೆ. ತಮ್ಮ ಕಣ್ಣೆದುರೇ ತಮ್ಮ ತಂಡಗಳಲ್ಲಿ ಕೆಲಸ ಮಾಡುತ್ತಿದ್ದವರು ದಿಢೀರನೇ ಕೆಲಸ ಕಳೆದುಕೊಂಡಿದ್ದನ್ನು ಕಂಡು ದಿಗ್ಭ್ರಮೆಗೊಂಡಿದ್ದ ಉದ್ಯೋಗಿಗಳಿಗೆ ಮುಂದಿನ ದಿನಗಳಲ್ಲಿ ತಾವೂ ಮನೆಯ ದಾರಿ ಹಿಡಿಯಬೇಕಾದೀತೆಂಬ ಭೀತಿ ಇದೆ.

ವಿಚಿತ್ರ ಎಂದರೆ ಈಗ ಸಂಬಳ ಪರಿಷ್ಕರಣೆಯ ಕಾಲಘಟ್ಟ. ಹೆಚ್​ಆರ್​ನಿಂದ ಸಂಬಳ ಹೆಚ್ಚಾಗಿರುವ ಬಗ್ಗೆ ಮೇಲ್ ಬರುತ್ತದೋ ಅಥವಾ ಲೇ ಆಫ್ ಆಗಿದೆ ಎಂದು ಲೆಟರ್ ಬರುತ್ತದೋ ಎಂಬ ಗೊಂದಲದಲ್ಲಿ ಮೆಟಾ ಉದ್ಯೋಗಿಗಳು ಸಿಲುಕಿದ್ದಾರೆ. ಅಮೆರಿಕದ ಈ ಕಂಪನಿಯು ಫೇಸ್​ಬುಕ್, ಇನ್ಸ್​ಟಾಗ್ರಾಮ್ ಮತ್ತು ವಾಟ್ಸಾಪ್ ಅಪ್ಲಿಕೇಶನ್​ಗಳ ಮಾಲೀಕ ಸಂಸ್ಥೆಯಾಗಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:41 am, Tue, 7 March 23