ಕ್ಯಾಲಿಫೋರ್ನಿಯಾ: ಸತತ ಮೂರು ತ್ರೈಮಾಸಿಕ ಅವಧಿಯಲ್ಲಿ ಆದಾಯ ಇಳಿಮುಖ ಕಾಣುತ್ತಾ ನಿರಾಸೆ ಹೊಂದಿದ್ದ ಮೆಟಾ ಪ್ಲಾಟ್ಫಾರ್ಮ್ಸ್ ಸಂಸ್ಥೆ (Meta Platforms Inc.) ಈ ಕ್ಯಾಲೆಂಡರ್ ವರ್ಷದ ಮೊದಲ ಕ್ವಾರ್ಟರ್ನಲ್ಲಿ ಅದ್ವಿತೀಯ ಆದಾಯ ಗಳಿಸಿರುವುದು ವರದಿಯಾಗಿದೆ. ವಾಟ್ಸಾಪ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನ ಮಾಲೀಕ ಸಂಸ್ಥೆ ಮೆಟಾ ಪ್ಲಾಟ್ಫಾರ್ಮ್ಸ್ನ ಆದಾಯ 2023 ಜನವರಿಯಿಂದ ಮಾರ್ಚ್ವರೆಗಿನ ಅವಧಿಯಲ್ಲಿ 28.6 ಬಿಲಿಯನ್ ಡಾಲರ್ (ಸುಮಾರು 2.33 ಲಕ್ಷ ಕೋಟಿ ರೂ) ಇದೆ. ಹಿಂದಿನ ವರ್ಷದ ಇದೇ ಅವಧಿಗಿಂತ ಆದಾಯದಲ್ಲಿ ಹೆಚ್ಚಳವಾಗಿರುವುದು ಕೇವಲ ಶೇ. 3 ಮಾತ್ರ. ಆದರೆ, ಇದು ಷೇರುಪೇಟೆ ನುರಿತರು ಅಂದಾಜು ಮಾಡಿದ್ದಕ್ಕಿಂತ ಉತ್ತಮವಾಗಿದೆ. ಇದರ ಪರಿಣಾಮವಾಗಿ ಷೇರುಪೇಟೆಗಳಲ್ಲಿ ಮೆಟಾ ಪ್ಲಾಟ್ಫಾರ್ಮ್ ಹಬ್ಬ ನಡೆದಿದೆ. ಮೆಟಾ ಷೇರು ಮೌಲ್ಯ ಶೇ. 15ರಷ್ಟು ಹೆಚ್ಚಳವಾಗಿದೆ.
ಏಪ್ರಿಲ್ 28 ಶುಕ್ರವಾರ ಮೆಟಾ ಷೇರುಬೆಲೆ 239 ಡಾಲರ್ (ಸುಮಾರು 19,500 ರೂ) ದಾಖಲಾಗಿದೆ. ಅಮೆರಿಕದ ಡೌ ಜೋನ್ಸ್, ಎಸ್ ಅಂಡ್ ಪಿ, ನಾಸ್ಡಾಕ್ ಷೇರುಪೇಟೆಗಳಲ್ಲಿ ಲಿಸ್ಟ್ ಆಗಿರುವ ಮೆಟಾ ಪ್ಲಾಟ್ಫಾರ್ಮ್ ಅಲ್ಲೆಲ್ಲಾ ಕಡೆಯೂ ವೃದ್ಧಿ ಕಂಡಿದೆ. ಇದರ ಪರಿಣಾಮವಾಗಿ ಮೆಟಾದ ಷೇರುಸಂಪತ್ತು ಗಮನಾರ್ಹವಾಗಿ ಹೆಚ್ಚಾಗಿದೆ. ಇದರ ಜೊತೆಗೆ ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ (Mark Zuckerberg) ಅವರ ವೈಯಕ್ತಿಕ ಷೇರುಸಂಪತ್ತು 10 ಬಿಲಿಯನ್ ಡಾಲರ್ನಷ್ಟು (ಸುಮಾರು 1.6 ಲಕ್ಷ ಕೋಟಿ ರೂ) ವೃದ್ಧಿ ಕಂಡಿದೆ.
ಇದನ್ನೂ ಓದಿ: Deepak Parekh: ಷೇರು ಬೇಡ, ಸಂಬಳ ಸಾಕು ಎನ್ನುವ ಮಾಲೀಕ; 5 ಲಕ್ಷ ಕೋಟಿ ಮೌಲ್ಯದ ಕಂಪನಿ ಛೇರ್ಮನ್ನ ಸರಳತೆ ಎಲ್ಲರಿಗೂ ಮಾದರಿ
ಮೆಟಾ ಪ್ಲಾಟ್ಫಾರ್ಮ್ಸ್ನ ಷೇರುಬೆಲೆ ಒಂದೇ ದಿನದಲ್ಲಿ ಶೇ. 15ರಷ್ಟು ಹೆಚ್ಚಾದ ಬೆನ್ನಲ್ಲೇ ಮಾರ್ಕ್ ಜುಕರ್ಬರ್ಗ್ ಅವರ ಒಟ್ಟು ಸಂಪತ್ತು 87.3 ಬಿಲಿಯನ್ ಡಾಲರ್ (ಸುಮಾರು 7.13 ಲಕ್ಷ ಕೋಟಿ ರೂ) ತಲುಪಿದೆ. ಬ್ಲೂಮ್ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದಲ್ಲಿ ಜುಕರ್ಬರ್ಗ್ 12ನೇ ಸ್ಥಾನಕ್ಕೇರಿದ್ದಾರೆ. ಈ ಮೂಲಕ ಶ್ರೀಮಂತಿಕೆಯಲ್ಲಿ ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿದ್ದಾರೆ. ಭಾರತದ ಅತಿಶ್ರೀಮಂತ ವ್ಯಕ್ತಿ ಎನಿಸಿರುವ ರಿಲಾಯನ್ಸ್ ಸಾಮ್ರಾಜ್ಯದ ಒಡೆಯ ಮುಕೇಶ್ ಅಂಬಾನಿ 12ನೇ ಸ್ಥಾನದಲ್ಲಿದ್ದವರು ಮಾರ್ಕ್ ಜುಕರ್ಬರ್ಗ್ಗೆ ಸ್ಥಾನ ಬಿಟ್ಟುಕೊಟ್ಟು 13ನೇ ಸ್ಥಾನಕ್ಕೆ ಇಳಿಯಬೇಕಾಯಿತು.
ಫೇಸ್ಬುಕ್ ಸಂಸ್ಥಾಪಕರೆಂದೇ ಜನಪ್ರಿಯರಾಗಿರುವ ಮಾರ್ಕ್ ಜುಕರ್ಬರ್ಗ್ ಅವರ ಸಂಪತ್ತು ಒಮ್ಮೆಗೇ 71 ಬಿಲಿಯನ್ ಡಾಲರ್ನಷ್ಟು (ಸುಮಾರು 5.8 ಲಕ್ಷ ಕೋಟಿ ರೂ) ಕರಗಿದ್ದಕ್ಕೆ 2022ರ ವರ್ಷ ಸಾಕ್ಷಿಯಾಗಿತ್ತು. ಮಾರ್ಕ್ ಜುಕರ್ಬರ್ಗ್ ಟಾಪ್-10 ಪಟ್ಟಿಯಿಂದ ದಿಢೀರ್ ಹೊರಗುಳಿದುಬಿಟ್ಟರು. ಈಗ 10 ಬಿಲಿಯನ್ ಡಾಲರ್ನಷ್ಟು ಷೇರು ಸಂಪತ್ತು ಏರಿಕೆ ಆಗಿರುವುದು 2022ರ ಆಘಾತಕಾರಿ ಹಿನ್ನಡೆಗೆ ಹೋಲಿಸಿದರೆ ಅಲ್ಪ ಮಾತ್ರ. ಆದರೂ ಕೂಡ ಮಾರ್ಕ್ ಜುಕರ್ಬರ್ಗ್ ಮತ್ತು ಮೆಟಾ ಮುನ್ನಡೆಗೆ ಈ ಬೆಳವಣಿಗೆ ಪ್ರೋತ್ಸಾಹ ಕೊಟ್ಟಿದೆ.
ಇದನ್ನೂ ಓದಿ: EPF: ಇಪಿಎಫ್ ಪೋರ್ಟಲ್ ಈಗಲೂ ತೆರೆಯುತ್ತಿಲ್ಲವಾ? ನಿಮ್ಮ ಪಿಎಫ್ ಬ್ಯಾಲೆನ್ಸ್ ನೋಡಲು ಬೇರೆ ಸರಳ ಮಾರ್ಗಗಳೂ ಉಂಟು
ಮೆಟಾ ಪ್ಲಾಟ್ಫಾರ್ಮ್ ಆದಾಯ ಮತ್ತು ಲಾಭದಲ್ಲಿ ಅನಿರೀಕ್ಷಿತ ಹೆಚ್ಚಳ ಮತ್ತು ಷೇರುಸಂಪತ್ತು ಅದ್ವಿತೀಯವಾಗಿ ಹೆಚ್ಚಳ ಕಂಡಿರುವುದು ಮಾರ್ಕ್ ಜುಕರ್ಬರ್ಗ್ ಅವರ ಹುಮ್ಮಸ್ಸು ಹೆಚ್ಚಿಸಿದೆ. ಎಐ ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಬೆಳವಣಿಗೆಯತ್ತ ಸಂಸ್ಥೆ ಹೆಚ್ಚು ಗಮನ ಹರಿಸಲಿದೆ. ತನ್ನೆಲ್ಲಾ ಆ್ಯಪ್ಗಳ ಬಳಕೆದಾರರಿಗೆ ಎಐ ಏಜೆಂಟ್ಸ್ ನೆರವು ಒದಗಿಸುವುದಾಗಿ ಮಾರ್ಕ್ ಹೇಳಿದ್ದಾರೆ.
ಅಂದರೆ ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸಾಪ್ಗಳಲ್ಲಿ ಎಐ ಚ್ಯಾಟ್ಬಾಟ್ಗಳು ಬರಲಿವೆ. ಜನರು ನಿರೀಕ್ಷಿಸಿದ್ದಕ್ಕಿಂತ ಹೆಚ್ಚೇ ನೆರವಿಗೆ ಬರಲು ಈ ಚ್ಯಾಟ್ಬಾಟ್ಗಳು ಸಹಾಯಕವಾಗಲಿವೆ. ಚ್ಯಾಟ್ಜಿಪಿಟಿ ಬಂದ ಬಳಿಕ ಎಲ್ಲೆಡೆ ಎಐ ಬೋಟ್ಗಳ ಹವಾ ಶುರುವಾಗುತ್ತಿದ್ದು, ಮೆಟಾ ಕೂಡ ಈ ಹಾದಿಯಲ್ಲಿ ಹಿಂದುಳಿಯದಿರಲು ನಿರ್ಧರಿಸಿದಂತಿದೆ. ಈ ಚ್ಯಾಟ್ಬೋಟ್ಗಳು ಯಶಸ್ವಿಯಾದರೆ ಮಾರ್ಕ್ ಜುಕರ್ಬರ್ಗ್ ಅವರ ಕನಸಿನ ಮೆಟಾವರ್ಸ್ಗೆ ಪುಷ್ಟಿ ಸಿಗುವ ನಿರೀಕ್ಷೆ ಇದೆ.
Published On - 10:58 am, Fri, 28 April 23