EPF: ಇಪಿಎಫ್ ಪೋರ್ಟಲ್ ಈಗಲೂ ತೆರೆಯುತ್ತಿಲ್ಲವಾ? ನಿಮ್ಮ ಪಿಎಫ್ ಬ್ಯಾಲೆನ್ಸ್ ನೋಡಲು ಬೇರೆ ಸರಳ ಮಾರ್ಗಗಳೂ ಉಂಟು
Alternative Ways To Get EPF Service: ಇಪಿಎಫ್ನ ಪೋರ್ಟಲ್ನಲ್ಲಿ ಪಾಸ್ಬುಕ್ ಸೇವೆ ತಾತ್ಕಾಲಿಕವಾಗಿ ಅಲಭ್ಯ ಇರುವುದರಿಂದ ಸದಸ್ಯರು ಎಸ್ಎಂಎಸ್ ಅಥವಾ ಮಿಸ್ಡ್ ಕಾಲ್ ಮೂಲಕ ಪಿಎಫ್ ಬ್ಯಾಲನ್ಸ್ ವೀಕ್ಷಿಸಬಹುದು. ಉಮಂಗ್ ಆ್ಯಪ್ ಡೌನ್ಲೋಡ್ ಮಾಡಿ ಅಲ್ಲಿಂದಲೂ ಇಪಿಎಫ್ ಸರ್ವಿಸ್ ಪಡೆಯಬಹುದು.
ಬೆಂಗಳೂರು: ಇಪಿಎಫ್ನ ಅಧಿಕೃತ ಪೋರ್ಟಲ್ನಲ್ಲಿ ಇ–ಪಾಸ್ಬುಕ್ ಸೇವೆಯಲ್ಲಿ (e-Passbook Service) ದೋಷ ಕಾಣಿಸಿ, ಆ ಪುಟ ತೆರೆಯುತ್ತಿಲ್ಲ ಎಂದು ಈಗಾಗಲೇ ಬಹಳ ಮಂದಿ ಸದ್ಯಸರು ಇಂಟರ್ನೆಟ್ನಲ್ಲಿ ವಿಚಾರ ಪ್ರಸ್ತಾಪಿಸಿದ್ದಾರೆ. ಈ ಸಮಸ್ಯೆ ತಲೆದೋರಿ ಹಲವು ದಿನಗಳೇ ಆಗಿವೆ. ತಿಂಗಳುಗಳಿಂದಲೂ ಈ ತೊಂದರೆ ಇದೆ. ಆರೇಳು ತಿಂಗಳ ಹಿಂದೆಯೇ ಇಪಿಎಫ್ನ ಇ–ಸೇವೆಗಳು ನಿಧಾನಗೊಂಡಿದ್ದವು. ಈಗ ಪೋರ್ಟಲ್ನಲ್ಲಿ ಸರ್ವಿಸ್ ಪುಟವೇ ತೆರೆಯುತ್ತಿಲ್ಲ ಎನ್ನಲಾಗಿದೆ. ಈ ಸಮಸ್ಯೆ ನಿವಾರಣೆಗೆ ಪ್ರಯತ್ನಿಸುತ್ತಿರುವುದಾಗಿ ಇಪಿಎಫ್ಒ ಸಂಸ್ಥೆ ಸ್ಪಷ್ಟಪಡಿಸಿದ್ದು, ಕೆಲ ದಿನಗಳವರೆಗೆ ಸಂಯಮದಿಂದ ಇರಬೇಕೆಂದು ಕೋರಿದೆ. ಆದಾಗ್ಯೂ ನಿಮ್ಮ ಇಪಿಎಫ್ ಖಾತೆಯ ವಿವರಗಳನ್ನು ನೋಡಲು ಬೇರೆ ಕೆಲ ಸರಳ ಮಾರ್ಗಗಳ ಆಯ್ಕೆ ನಿಮಗೆ ಇದೆ.
ಉಮಂಗ್ ಆ್ಯಪ್ ಮೂಲಕ ಇಪಿಎಫ್ ಪಾಸ್ಬುಕ್ ವೀಕ್ಷಿಸಬಹುದು
ನಿಮ್ಮಲ್ಲಿ UMANG ಆ್ಯಪ್ ಇದ್ದರೆ ಆನ್ಲೈನ್ನಲ್ಲೇ ಹಲವು ಸರ್ವಿಸ್ ಪಡೆಯಬಹುದು. ನಿಮ್ಮಲ್ಲಿ ಇದು ಇಲ್ಲದಿದ್ದರೆ ಪ್ಲೇಸ್ಟಓರ್ನಿಂದ UMANG ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
- ಉಮಂಗ್ ಆ್ಯಪ್ ತೆರೆದು ನಿಮ್ಮ ಖಾತೆಗೆ ಲಾಗಿನ್ ಆಗಿ
- ಅಲ್ಲಿ ಇಪಿಎಫ್ಒ ಸೆಕ್ಷನ್ ಕಾಣಿಸದಿದ್ದರೆ ಸರ್ಚ್ ಬಾರ್ನಲ್ಲಿ ಇಪಿಎಫ್ಒ ಎಂದು ಶೋಧಿಸಿ
- ಇಪಿಎಫ್ಒ ಮೇಲೆ ಕ್ಲಿಕ್ ಮಾಡಿ
- ಅಲ್ಲಿ ಹಲವು ಸೇವೆಗಳ ಪಟ್ಟಿ ನೋಡಬಹುದು. ಅದರಲ್ಲಿ ‘ವೀವ್ ಪಾಸ್ಬುಕ್’ ಆಯ್ಕೆ ಮಾಡಿ
- ನಿಮ್ಮ ಯುಎಎನ್ ನಂಬರ್ ನಂಬರ್ ನಮೂದಿಸಿ, ಒಟಿಪಿ ಹಾಕಿ, ನಂತರ ಸಬ್ಮಿಟ್ ಕ್ಲಿಕ್ ಮಾಡಿ.
- ನಿಮ್ಮ ಯುಎಎನ್ ಅಡಿಯಲ್ಲಿ ಇಪಿಎಫ್ ಖಾತೆಗಳ ಪಟ್ಟಿ ನೋಡಬಹುದು. ಮೆಂಬರ್ ಐಡಿ ಆಯ್ಕೆ ಮಾಡಿ ಇ–ಪಾಸ್ಬುಕ್ ಡೌನ್ಲೋಡ್ ಮಾಡಿ.
ಎಸ್ಎಂಎಸ್ ಮೂಲಕ ಇಪಿಎಫ್ ಬ್ಯಾಲನ್ಸ್ ನೋಡಬಹುದು
ನೀವು ಇಪಿಎಫ್ಒನಲ್ಲಿ ನಿಮ್ಮ ಯುಎಎನ್ ನಂಬರ್ ಅನ್ನು ನೊಂದಾಯಿಸಿದ್ದರೆ ಬಹಳ ಸರಳ ಹಾಗೂ ಪರಿಣಾಮಕಾರಿ ಮಾರ್ಗಗಳ ಮೂಲಕ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸುವ ಅವಕಾಶ ಸಿಗುತ್ತದೆ. ಅದರಲ್ಲಿ ಎಸ್ಸೆಮ್ಮೆಸ್ ಕೂಡ ಒಂದು. ನಿಮ್ಮ ಯುಎಎನ್ ನಂಬರ್ಗೆ ಜೋಡಿತವಾಗಿರುವ ಮೊಬೈಲ್ ನಂಬರ್ನಿಂದ EPFOHO UAN ENG ಎಂದು ಟೈಪಿಸಿ 7738299899 ನಂಬರ್ಗೆ ಮೆಸೇಜ್ ಕಳುಹಿಸಿ. ನಿಮ್ಮ ಪಿಎಫ್ ಖಾತೆಯಲ್ಲಿ ಎಷ್ಟು ಹಣ ಇದೆ ಎಂಬ ಮಾಹಿತಿ ಇರುವ ಮೆಸೇಜ್ ನಿಮಗೆ ವಾಪಸ್ ಬರುತ್ತದೆ.
ಈ ಸೇವೆ ಪಡೆಯಲು ಪಿಎಫ್ ಹಣ ಹೋಗುವ ನಿಮ್ಮ ಬ್ಯಾಂಕ್ ಖಾತೆ, ಆಧಾರ್ ನಂಬರ್, ಪ್ಯಾನ್ ನಂಬರ್ಗೆ ಯುಎಎನ್ ನಂಬರ್ ಲಿಂಕ್ ಆಗಿದ್ದಿರಬೇಕು.
ಇಲ್ಲಿ ಮೆಸೇಜ್ ಕಂಟೆಂಟ್ನಲ್ಲಿ EPFOHO UAN ENG ಎಂದಿದೆ. ಇದರಲ್ಲಿ ENG ಬದಲು KAN ಎಂದು ಹಾಕಿದರೆ ಕನ್ನಡದಲ್ಲೂ ಮೆಸೇಜ್ ಬರುತ್ತದೆ.
ಮಿಸ್ಡ್ ಕಾಲ್ ಮೂಲಕವೂ ಇಪಿಎಫ್ ಬ್ಯಾಲನ್ಸ್ ತಿಳಿಯಬಹುದು
ಆಗಲೇ ಹೇಳಿದಂತೆ ಇಪಿಎಫ್ಒಗೆ ಯುಎಎನ್ ಅನ್ನು ನೊಂದಾಯಿಸಿದ್ದರೆ ಮಿಸ್ಡ್ ಕಾಲ್ ಮೂಲಕ ಪಿಎಫ್ ಬ್ಯಾಲನ್ಸ್ ತಿಳಿಯಬಹುದು. ನಿಮ್ಮ ನೊಂದಾಯಿತ ಮೊಬೈಲ್ ನಂಬರ್ನಿಂದ 9966044425 ಗೆ ಮಿಸ್ಡ್ ಕಾಲ್ ಕೊಟ್ಟರೆ ನಿಮಗೆ ಪಿಎಫ್ ಬ್ಯಾಲನ್ಸ್ ವಿವರ ಇರುವ ಮೆಸೇಜ್ ಬರುತ್ತದೆ.
ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:22 pm, Thu, 27 April 23