ನವಿ ಯುಪಿಐ ಆ್ಯಪ್ನಲ್ಲಿ ಸಿಗುತ್ತೆ ಬೆಂಗಳೂರಿನ ಮೆಟ್ರೋ ಕ್ಯುಆರ್ ಟಿಕೆಟ್
Bengaluru metro commuters can book QR tickets on Navi UPI app: ನವಿ ಯುಪಿಐ ಆ್ಯಪ್ ಇದೀಗ ಒಎನ್ಡಿಸಿ ನೆಟ್ವರ್ಕ್ ಆಧಾರದ ಮೇಲೆ ಮೆಟ್ರೋ ಟಿಕೆಟ್ ಖರೀದಿ ಸೌಲಭ್ಯ ಒದಗಿಸಿದೆ. ಬೆಂಗಳೂರು, ದೆಹಲಿ, ಮುಂಬೈನ ಮೆಟ್ರೋ ಪ್ರಯಾಣಿಕರು ಕ್ಯುಅರ್ ಟಿಕೆಟ್ಗಳನ್ನು ನವಿ ಆ್ಯಪ್ನಲ್ಲೇ ಬುಕ್ ಮಾಡಬಹುದು. ಇದರಿಂದ ಪ್ರಯಾಣಿಕರ ಸಮಯ ಉಳಿಯುತ್ತದೆ, ಒಂದೇ ಪ್ಲಾಟ್ಫಾರ್ಮ್ನಲ್ಲಿ ರೂಪ್ ಪ್ಲಾನ್, ಟಿಕೆಟ್ ಖರೀದಿ, ಹಣ ಪಾವತಿ ಮಾಡಲು ಸಾಧ್ಯ.

ಬೆಂಗಳೂರು, ನವೆಂಬರ್ 23: ಮೆಟ್ರೊ ಪ್ರಯಾಣವನ್ನು ಇನ್ನಷ್ಟು ಸರಳ, ವೇಗ ಹಾಗೂ ಸಂಪೂರ್ಣ ಡಿಜಿಟಲೀಕರಣಗೊಳಿಸುವ ನಿಟ್ಟಿನಲ್ಲಿ ಒಎನ್ಡಿಸಿ (ONDC- Open Network for Digital Commerce) ಜೊತೆಗೂಡಿ ನವಿ ಯುಪಿಐ ಮೆಟ್ರೊ ಕ್ಯೂಆರ್ ಕೋಡ್ ಟಿಕೆಟ್ ಖರೀದಿ ವ್ಯವಸ್ಥೆಯನ್ನು ತನ್ನ ಆಪ್ನಲ್ಲಿ ಪರಿಚಯಿಸಿದೆ. ಬೆಂಗಳೂರಿನ ನಮ್ಮ ಮೆಟ್ರೋದ ಕ್ಯುಆರ್ ಟಿಕೆಟ್ಗಳನ್ನು ನವಿ ಆ್ಯಪ್ನಲ್ಲಿ ಪಡೆಯಬಹುದು. ಬೆಂಗಳೂರು ಮಾತ್ರವಲ್ಲದೆ, ದೆಹಲಿ, ಮುಂಬೈನ ಮೆಟ್ರೊ ಪ್ರಯಾಣಿಕರು ಕೂಡ ನವಿ ಯುಪಿಐ ಆಪ್ನಲ್ಲೂ ಮೆಟ್ರೊ ಟಿಕೆಟ್ ಖರೀದಿಸಬಹುದಾಗಿದೆ. ಸದ್ಯದಲ್ಲೇ ಈ ಸೌಲಭ್ಯ ಚೆನ್ನೈ, ಹೈದರಾಬಾದ್ ಮತ್ತು ಕೊಚ್ಚಿ ನಗರಗಳಲ್ಲೂ ಲಭ್ಯವಾಗಲಿದೆ.
ಮೆಟ್ರೋ ಪ್ರಯಾಣಿಕರು ತಮ್ಮ ರೂಟ್ ಪ್ಲಾನ್ ಮಾಡಲು, ಕ್ಯುಆರ್ ಟಿಕೆಟ್ ಬುಕ್ ಮಾಡಲು ಮತ್ತು ಹಣ ಪಾವತಿಸಲು ಬೇರೆ ಬೇರೆ ಪ್ಲಾಟ್ಫಾರ್ಮ್ ಬಳಸುವ ತಲೆ ನೋವು ಇರುವುದಿಲ್ಲ. ಒಂದೇ ಪ್ಲಾಟ್ಫಾರ್ಮ್ನಲ್ಲಿ ಇವೆಲ್ಲವೂ ಸಾಧ್ಯ. ನವಿ ಯುಪಿಐ ಆ್ಯಪ್ನಲ್ಲಿನ ಈ ವ್ಯವಸ್ಥೆಯು ಪ್ರಯಾಣಿಕರಿಗೆ ಸರತಿ ಸಾಲಿನಲ್ಲಿ ಕಾಯುವ, ಬಹುಆಪ್ಗಳನ್ನು ಬಳಸಬೇಕಾದ ಅನಿವಾರ್ಯತೆಯನ್ನು ತಪ್ಪಿಸುವುದಲ್ಲದೇ ಸಂಪೂರ್ಣ ಡಿಜಿಟಲ್ ವ್ಯವಸ್ಥೆಯನ್ನು ನೀಡುತ್ತದೆ.
ಇದನ್ನೂ ಓದಿ: ಗಮನ ಸೆಳೆಯುತ್ತಿದೆ ಕರ್ನಾಟಕದ ಐಟಿ, ಸ್ಪೇಸ್ಟೆಕ್, ಸ್ಟಾರ್ಟಪ್ ನೀತಿಗಳು; ಬೆಂಗಳೂರಿನಲ್ಲಿ ದಟ್ಟಣೆ ತಪ್ಪಿಸಲೂ ಕ್ರಮ
ಒಎನ್ಡಿಸಿ ಜೊತೆಗಿನ ಪಾಲುದಾರಿಕೆ ಕುರಿತು ಮಾತನಾಡಿದ ನವಿ ಲಿಮಿಟೆಡ್ನ (ಈ ಮೊದಲು ನವಿ ಟೆಕ್ನಾಲಜೀಸ್ ಲಿಮಿಟೆಡ್) ಎಂಡಿ ಮತ್ತು ಸಿಇಒ ರಾಜೀವ್ ನರೇಶ್, “ಭಾರತದ ಮೆಟ್ರೊ ಪ್ರತಿದಿನ ಕೋಟ್ಯಾಂತರ ಜನರಿಗೆ ಸಾರಿಗೆ ವ್ಯವಸ್ಥೆಯನ್ನು ನೀಡುತ್ತದೆ. ಆದರೂ ದೊಡ್ಡ ಪ್ರಮಾಣದ ಪ್ರಯಾಣಿಕರು ಇನ್ನೂ ಹಣ ಪಾವತಿಸುವ ಮತ್ತು ಸರತಿ ಸಾಲಿನಲ್ಲಿ ನಿಲ್ಲುವ ಅನಿವಾರ್ಯತೆಯನ್ನು ಹೊಂದಿದ್ದಾರೆ. ಪಾವತಿ ವಿಳಂಬದಿಂದ ಪ್ರಯಾಣಿಕರ ಸಮಯ ವ್ಯರ್ಥವಾಗಬಾರದು. ಒಎನ್ಡಿಸಿ ಜೊತೆಗೂಡಿ ನಾವು ‘ಒಂದು ಆ್ಯಪ್ ಒಂದು ಕ್ಯುಆರ್ ಟಿಕೆಟ್, ಒಂದು ಒತ್ತು’ (One App, One QR Ticket, One Seamless Tap) ಮೂಲಕ ಮೆಟ್ರೊ ಪ್ರಯಾಣವನ್ನು ನಿಜವಾದ ಡಿಜಿಟಲ್ ವ್ಯವಸ್ಥೆಯಾಗಿ ಬದಲಾಯಿಸಿದ್ದೇವೆ. ನಿತ್ಯದ ಪ್ರತಿ ಪ್ರಯಾಣಿಕರಿಗೂ ಅವರ ಸಂಚಾರ ಸುಲಭ ಮತ್ತು ವೇಗವಾಗಿರಬೇಕು ಎಂಬುದು ನಮ್ಮ ಉದ್ದೇಶ” ಎಂದಿದ್ದಾರೆ.
ಒಎನ್ಡಿಸಿಯ ಹಿರಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ನಿತಿನ್ ನಾಯರ್ ಮಾತನಾಡಿ, ಓಪನ್ ನೆಟ್ವರ್ಕ್ ಸಿಸ್ಟಂಗಳು ಎಷ್ಟು ಪ್ರಯೋಜನಕಾರಿ ಎಂಬುದನ್ನು ವಿವರಿಸಿದ್ದಾರೆ. “ನವಿಯಂತೆ ಇನ್ನಷ್ಟು ಕಂಪನಿಗಳು ಓಪನ್ ಪ್ರೋಟೋಕಾಲ್ಗಳನ್ನು ಬಳಸತೊಡಗಿದರೆ ಗ್ರಾಹಕರಿಗೆ ಆಗುವ ಅನುಕೂಲವೂ ದ್ವಿಗುಣಗೊಳ್ಳುತ್ತದೆ. ಓಪನ್ ಇಕೋಸಿಸ್ಟಂಗಳು ಎಷ್ಟು ಪರಿಣಾಮಕಾರಿ ಎನಿಸುತ್ತದೆ ಎಂಬುದು ವೇದ್ಯವಾಗುತ್ತಿದೆ” ಎಂದಿದ್ದಾರೆ.
ಇದನ್ನೂ ಓದಿ: ಕಾರ್ಮಿಕ ಕ್ಷೇತ್ರದಲ್ಲಿ ದೊಡ್ಡ ಸುಧಾರಣೆ; ಹಳೆಯ 29 ಕಾನೂನುಗಳ ಬದಲು ಹೊಸ 4 ಕಾನೂನು ಸಂಹಿತೆ ಜಾರಿಗೆ
ಭಾರತದಲ್ಲಿರುವ ಮೆಟ್ರೋ ಟ್ರೈನುಗಳಲ್ಲಿ ಒಂದು ಕೋಟಿಗೂ ಅಧಿಕ ಜನರು ನಿತ್ಯ ಸಂಚರಿಸುತ್ತಾರೆ. ಶೇ. 40ಕ್ಕಿಂತ ಹೆಚ್ಚು ಪ್ರಯಾಣಿಕರು ಟಿಕೆಟ್ ಖರೀದಿಗೆ ಕ್ಯಾಷ್ ಅನ್ನೇ ಬಳಸುತ್ತಿದ್ದಾರೆ. ಈ ಮೆಟ್ರೋ ಟಿಕೆಟ್ ಖರೀದಿಯನ್ನು ಡಿಜಿಟಲೀಕರಣಗೊಳ್ಳುತ್ತಿರುವುದು ಗಮನಾರ್ಹ ಸಂಗತಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




