ಗಮನ ಸೆಳೆಯುತ್ತಿದೆ ಕರ್ನಾಟಕದ ಐಟಿ, ಸ್ಪೇಸ್ಟೆಕ್, ಸ್ಟಾರ್ಟಪ್ ನೀತಿಗಳು; ಬೆಂಗಳೂರಿನಲ್ಲಿ ದಟ್ಟಣೆ ತಪ್ಪಿಸಲೂ ಕ್ರಮ
Karnataka's new policies on IT, SpaceTech and startups: ಕರ್ನಾಟಕ ಸರ್ಕಾರ ಬೆಂಗಳೂರು ಟೆಕ್ ಸಮಿಟ್ನಲ್ಲಿ ಮೂರು ಪ್ರಮುಖ ನೀತಿಗಳನ್ನು ಅನಾವರಣಗೊಳಿಸಿದೆ. ಹೊಸ ಐಟಿ ನೀತಿ, ಸ್ಪೇಸ್ಟೆಕ್ ನೀತಿ ಮತ್ತು ಸ್ಟಾರ್ಟಪ್ ನೀತಿಗಳನ್ನು ಜಾರಿಗೆ ತರಲು ಹೊರಟಿದೆ. ಈ ಮೂರೂ ಕ್ಷೇತ್ರಗಳಲ್ಲಿ ತನ್ನ ಮುಂಚಣಿ ಸ್ಥಾನ ಉಳಿಸಿಕೊಂಡು ಮುಂದುವರಿಯಲು ಈ ನೀತಿ ಸಹಾಯಕವಾಗುವ ನಿರೀಕ್ಷೆ ಇದೆ.

ಬೆಂಗಳೂರು, ನವೆಂಬರ್ 21: ಜನಸಂಖ್ಯೆ, ವಾಹನ ಮತ್ತು ಉದ್ಯಮಗಳ ದಟ್ಟಣೆಯಿಂದ ಬಳಲುತ್ತಿರುವ ಬೆಂಗಳೂರಿಗೆ ಒತ್ತಡ ಕಡಿಮೆ ಮಾಡಲು ರಾಜ್ಯ ಸರ್ಕಾರ ಗಂಭೀರ ಪ್ರಯತ್ನಗಳನ್ನು ಮಾಡುತ್ತಿದೆ. ಬೆಂಗಳೂರಿನಿಂದ ಹೊರಗೆ, ಕರ್ನಾಟಕದ (Karnataka) ಇತರ ಭಾಗಗಳಿಗೆ ಸ್ಟಾರ್ಟಪ್ಗಳನ್ನು (startups) ನೆಲೆಗೊಳಿಸುವ ದೃಷ್ಟಿಯಲ್ಲಿ ನೀತಿಗಳನ್ನು ರೂಪಿಸಿದೆ. ಬೆಂಗಳೂರು ಹೊರಗೆ ಸ್ಥಾಪನೆಯಾಗುವ ಸ್ಟಾರ್ಟಪ್ಗಳಿಗೆ ನಾನಾ ರೀತಿಯ ಉತ್ತೇಜನಗಳನ್ನು ಸರ್ಕಾರ ಒದಗಿಸಲು ಸಿದ್ಧವಿದೆ. ಬೆಂಗಳೂರಿನಿಂದ ಹೊರಗೆ ಉದ್ಯೋಗ ಮಾಡಲು ವರ್ಗಾವಣೆ ಆಗುವ ವ್ಯಕ್ತಿಗೂ 50,000 ರೂ ನೀಡಲು ಸರ್ಕಾರ ಸಿದ್ಧವಾಗಿದೆ.
ಬೆಂಗಳೂರು ಟೆಕ್ ಸಮಿಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಮೂರು ಪ್ರಮುಖ ನೀತಿಗಳನ್ನು ಬಿಡುಗಡೆ ಮಾಡಿದ್ದಾರೆ. 2025-30ರ ಕರ್ನಾಟಕದ ಐಟಿ ನೀತಿ, ಬಾಹ್ಯಾಕಾಶ ತಂತ್ರಜ್ಞಾನ ನೀತಿ, ಮತ್ತು ಸ್ಟಾರ್ಟಪ್ ನೀತಿಗಳನ್ನು ಸರ್ಕಾರ ಅನಾವರಣಗೊಳಿಸಿದೆ. ಐಟಿ, ಸ್ಪೇಸ್ ಮತ್ತು ಸ್ಟಾರ್ಟಪ್ ಸೆಕ್ಟರ್ಗಳಲ್ಲಿ ರಾಜ್ಯದ ನಾಯಕತ್ವ ಸ್ಥಾನವನ್ನು ಉಳಿಸಿಕೊಂಡು ಹೋಗಲು ಈ ನೀತಿಗಳು ಸಹಕಾರಿಯಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ಕಾರ್ಮಿಕ ಕ್ಷೇತ್ರದಲ್ಲಿ ದೊಡ್ಡ ಸುಧಾರಣೆ; ಹಳೆಯ 29 ಕಾನೂನುಗಳ ಬದಲು ಹೊಸ 4 ಕಾನೂನು ಸಂಹಿತೆ ಜಾರಿಗೆ
ಸ್ಟಾರ್ಟಪ್ಗಳಿಗೆ ಉತ್ತೇಜನ ನೀಡುವ ನೀತಿ…
ಬೆಂಗಳೂರಲ್ಲಿ ಮಾತ್ರವಲ್ಲದೆ ರಾಜ್ಯದ ಇತರ ನಗರಗಳಲ್ಲಿ ಸ್ಟಾರ್ಟಪ್ಗಳನ್ನು ಬೆಳೆಸುವ ಗುರಿ ಇಡಲಾಗಿದೆ. ಮೈಸೂರು, ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ ಧಾರವಾಡ, ಕಲಬುರ್ಗಿಯಂತಹ ನಗರಗಳಲ್ಲಿ ಸ್ಟಾರ್ಟಪ್ ಝೋನ್ಗಳು, ಇನ್ನೋವೇಶನ್ ಕ್ಲಸ್ಟರ್ಗಳು ಇತ್ಯಾದಿಯನ್ನು ನಿರ್ಮಿಸುವ ಪ್ಲಾನ್ ಮಾಡಲಾಗಿದೆ.
2030ರೊಳಗೆ 30,000 ಸ್ಟಾರ್ಟಪ್ಗಳನ್ನು ಕರ್ನಾಟಕದಲ್ಲಿ ಸ್ಥಾಪಿಸುವ ಗುರಿ ಇದೆ. ಇದರಲ್ಲಿ 5,000 ಸ್ಟಾರ್ಟಪ್ಗಳು ಕೆಳ ಸ್ತರದ ನಗರಗಳಲ್ಲಿ ನಿರ್ಮಾಣವಾಗಬೇಕೆಂಬ ಆಶಯ ಇದೆ.
ಹೊಸ ಸ್ಟಾರ್ಟಪ್ಗಳಿಗೆ ಆಫೀಸ್ ರೆಂಟ್ನಲ್ಲಿ ಶೇ. 50ರಷ್ಟು ರೀಂಬರ್ಸ್ಮೆಂಟ್, ಪ್ರಾಪರ್ಟಿ ಟ್ಯಾಕ್ಸ್ನಲ್ಲಿ ಶೇ. 30 ವಿನಾಯಿತಿ ಸಿಗುತ್ತದೆ (ಸೀಮಿತ ಅವಧಿಗೆ).
ಬೆಂಗಳೂರಿನಿಂದ ಹೊರಗೆ ಶಿಫ್ಟ್ ಆಗುವ ಸ್ಟಾರ್ಟಪ್ಗಳಿಗೆ ಐದು ವರ್ಷ ವಿದ್ಯುತ್ ಸುಂಕದಲ್ಲಿ ವಿನಾಯಿತಿ ಸಿಗುತ್ತದೆ. 12 ಲಕ್ಷ ರೂವರೆಗೆ ಫೋನ್ ಮತ್ತು ಇಂಟರ್ನೆಟ್ ಬಿಲ್ನಲ್ಲಿ ರಿಯಾಯಿತಿ ಸಿಗುತ್ತದೆ. ಬೆಂಗಳೂರು ಹೊರಗೆ ವರ್ಗಾವಣೆಯಾಗುವ ಉದ್ಯೋಗಿಗೆ ಸರ್ಕಾರವು 50,000 ರೂ ಭತ್ಯೆ ಕೊಡುತ್ತದೆ.
ಇದನ್ನೂ ಓದಿ: ಪಿಎಫ್ ಅರ್ಹತೆಗೆ ವೇತನ ಮಿತಿ 15,000 ರೂನಿಂದ 25,000 ರೂಗೆ ಏರಿಸಲು ಸರ್ಕಾರದಿಂದ ಚಿಂತನೆ
ಇನ್ನೋವೇಶನ್ ಸೆಕ್ಟರ್ನಲ್ಲಿ ಹೂಡಿಕೆ ಮಾಡುವ ಕಂಪನಿಗಳಿಗೂ ಸರ್ಕಾರ ಸಾಕಷ್ಟು ಉತ್ತೇಜನ ನೀಡುತ್ತದೆ. ಆರ್ ಅಂಡ್ ಡಿ ವೆಚ್ಚದಲ್ಲಿ ಶೇ. 40ರಷ್ಟನ್ನು ಸರ್ಕಾರ ಭರಿಸುತ್ತದೆ. ಎಐ, ಮೆಷಿನ್ ಲರ್ನಿಂಗ್, ಕ್ವಾಂಟಂ ಕಂಪ್ಯೂಟಿಂಗ್, ಬ್ಲಾಕ್ಚೇನ್ನಲ್ಲಿ ಕೆಲಸ ಮಾಡುವ ಸ್ಟಾರ್ಟಪ್ಗಳಿಗೆ ಹೆಚ್ಚುವರಿ ಬಂಡವಾಳ ಉತ್ತೇಜನವನ್ನು ಸರ್ಕಾರ ನೀಡುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




