ಕೊವಿಡ್- 19 ಕಾರಣಕ್ಕೆ ಈ ವರ್ಷ ಸಾವು- ನೋವುಗಳಿಂದ ಇಡೀ ವಿಶ್ವವೇ ನಲುಗಿದೆ. ಕಳೆದ ಹದಿನೆಂಟು ತಿಂಗಳಲ್ಲಿ ಎಲ್ಲ ಕಡೆಯೂ ಆತಂಕವೇ. ಇಂಥ ಸನ್ನಿವೇಶದಲ್ಲಿ ಮೈಕ್ರೋಸಾಫ್ಟ್ ಕಂಪೆನಿಯು 1,500 ಯುಎಸ್ಡಿ (ಅಂದಾಜು 1.12 ಲಕ್ಷ ರೂಪಾಯಿ) ಉಡುಗೊರೆಯನ್ನು ತನ್ನ ಎಲ್ಲ ಉದ್ಯೋಗಿಗಳಿಗಾಗಿ ಘೋಷಣೆ ಮಾಡಿದೆ ಎಂದು ಕಂಪೆನಿಯ ಆಂತರಿಕ ಸುತ್ತೋಲೆಯಿಂದ ತಿಳಿದುಬಂದಿದೆ ಎಂಬುದಾಗಿ ವರ್ಜ್ ವರದಿ ಮಾಡಿದೆ. ಆ ವರದಿಯ ಪ್ರಕಾರ, ಇದು ಒಂದು ಸಲದ ಬೋನಸ್ ಆಗಿದ್ದು, ವಿಶಿಷ್ಟ ಹಾಗೂ ಸವಾಲಿನ ಆರ್ಥಿಕ ವರ್ಷವನ್ನು ಮೈಕ್ರೋಸಾಫ್ಟ್ ಪೂರ್ತಿ ಮಾಡಿದ ಹಿನ್ನೆಲೆಯಲ್ಲಿ ಈ ನಡೆಗೆ ಮುಂದಾಗಿದೆ. ಮೈಕ್ರೋಸಾಫ್ಟ್ ಕಂಪೆನಿಯ ಚೀಫ್ ಪೀಪಲ್ ಆಫೀಸರ್ ಕಥ್ಲೀನ್ ಹೋಗಾನ್ ಗುರುವಾರದಂದು ಎಲ್ಲ ಸಿಬ್ಬಂದಿಗೆ ಬೋನಸ್ ಘೋಷಣೆ ಮಾಡಿದ್ದಾರೆ.
ವರದಿಯ ಪ್ರಕಾರವಾಗಿ, ಅಮೆರಿಕ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಅರ್ಹ ಸಿಬ್ಬಂದಿಗೆ ಈ ಬೋನಸ್ ವಿತರಣೆ ಮಾಡಲಾಗುತ್ತದೆ. ಯಾರು ಕಾರ್ಪೊರೇಟ್ ಉಪಾಧ್ಯಕ್ಷರ ಹುದ್ದೆಗಿಂತ ಕೆಳಗೆ ಇರುತ್ತಾರೋ ಅಂಥವರಿಗೆ, ಅರೆಕಾಲಿಕ ಉದ್ಯೋಗಿಗಳಿಗೂ ಈ ಬೋನಸ್ ಸಿಗಲಿದೆ. ಎಲ್ಲ ಸಿಬ್ಬಂದಿಗೂ ಈ ಬೋನಸ್ ನೀಡುವುದರಿಂದ ಮೈಕ್ರೋಸಾಫ್ಟ್ಗೆ 20 ಕೋಟಿ ಅಮೆರಿಕನ್ ಡಾಲರ್ ವೆಚ್ಚವಾಗಲಿದೆ. ಭಾರತದ ರೂಪಾಯಿ ಲೆಕ್ಕದಲ್ಲಿ 1480 ಕೋಟಿಗೂ ಹೆಚ್ಚಾಗುತ್ತದೆ. ಮೈಕ್ರೋಸಾಫ್ಟ್ನಲ್ಲಿ 1.75 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ವಿಶ್ವದಾದ್ಯಂತ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂದಹಾಗೆ ಮೈಕ್ರೋಸಾಫ್ಟ್ ಒಡೆತನದಲ್ಲೇ ಲಿಂಕ್ಡ್ಇನ್, ಗಿಟ್ಹಬ್ ಮತ್ತು ಝೆನಿಮ್ಯಾಕ್ಸ್ ಕೂಡ ಇದೆ. ಆದರೆ ಅಲ್ಲಿನ ಸಿಬ್ಬಂದಿಗೆ ಯಾವುದೇ ಬೋನಸ್ ದೊರೆಯುತ್ತಿಲ್ಲ.
ಸಿಎನ್ಬಿಸಿ ವರದಿ ಹೇಳುವಂತೆ, ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ತಮ್ಮ ಸಿಬ್ಬಂದಿಯನ್ನು ಸಂತೋಷವಾಗಿ ಇರಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ಈ ರೀತಿಯ ಬೋನಸ್ ನೀಡಲಾಗುತ್ತಿದೆ. ಮತ್ತು ಈಗಲೂ ಅದೆಷ್ಟೋ ಮಂದಿ ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದು, ಉತ್ಸಾಹದಿಂದ ಕಾರ್ಯ ನಿರ್ವಹಿಸುವುದಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹೀಗೆ ಮಾಡಲಾಗುತ್ತಿದೆ. ಕಚೇರಿಗಳು ಪುನರಾರಂಭ ಆಗುತ್ತಿದ್ದಂತೆ ಅನೇಕರು ಉದ್ಯೋಗ ತ್ಯಜಿಸುವ ಪ್ರವೃತ್ತಿ ಈಚೆಗೆ ಹೆಚ್ಚಾಗಿದೆ. ಫೇಸ್ಬುಕ್, ಅಮೆಜಾನ್ನಂಥ ಕಂಪೆನಿಗಳು ಸಹ ಹಣಕಾಸು ಉತ್ತೇಜನಗಳನ್ನು ಘೋಷಣೆ ಮಾಡುತ್ತಿವೆ. ಕಳೆದ ಒಂದು ವರ್ಷಗಳಲ್ಲಿ ಸಿಬ್ಬಂದಿಗೆ ಬೋನಸ್ ಮತ್ತಿತರ ರಿವಾರ್ಡ್ಗಳನ್ನು ಘೋಷಿಸಿವೆ.
ಇದನ್ನೂ ಓದಿ: Satya Nadella: 53 ವರ್ಷದ ಸತ್ಯ ನಾಡೆಲ್ಲಾಗೆ 143 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯದ ಮೈಕ್ರೋಸಾಫ್ಟ್ ಕಂಪೆನಿಯ ನೇತೃತ್ವ
(Tech giant Microsoft announced one time 1500 USD bonus to all employees. Here is the details)
Published On - 11:16 am, Fri, 9 July 21