ಬೆಂಗಳೂರು: ಜಾಗತಿಕ ಆರ್ಥಿಕ ಹಿನ್ನಡೆಯಿಂದ (Global Slowdown) ಅನೇಕ ಕಂಪನಿಗಳು ಸಂಕಷ್ಟಕ್ಕೆ ಸಿಲುಕಿವೆ. ಖ್ಯಾತ ಟೆಕ್ ಕಂಪನಿ ಮೈಕ್ರೋಸಾಫ್ಟ್ (Microsoft) 1,000 ಮಂದಿ ಉದ್ಯೋಗಿಗಳನ್ನು ವಜಾ ಮಾಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಆ್ಯಕ್ಸಿಯೋಸ್’ ತಾಣ ವರದಿ ಮಾಡಿದೆ. ಎಕ್ಸ್ಬಾಕ್ಸ್ (Xbox), ಎಡ್ಜ್ (Edge) ಸೇರಿದಂತೆ ಅನೇಕ ತಂಡಗಳಿಂದ, ಜಗತ್ತಿನ ವಿವಿಧೆಡೆ ಕಾರ್ಯನಿರ್ವಹಿಸುತ್ತಿದ್ದ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ. ಇದರೊಂದಿಗೆ ಕಂಪನಿಯ ಒಟ್ಟು ಉದ್ಯೋಗಿಗಳ ಪೈಕಿ ಶೇಕಡಾ 1ರಷ್ಟು ಮಂದಿಯನ್ನು ವಜಾ ಮಾಡಿದಂತಾಗಿದೆ ಎಂದು ವರದಿ ಉಲ್ಲೇಖಿಸಿದೆ. ಈ ಹಿಂದಿನ ವರದಿಗಳ ಪ್ರಕಾರ, ಮೈಕ್ರೋಸಾಫ್ಟ್ನಲ್ಲಿ 2,21,000 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿತ್ತು.
ಅಮೆರಿಕದ ಹಲವು ಟೆಕ್ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುವ ಮತ್ತು ನೇಮಕಾತಿ ವಿಳಂಬದ ಮೊರೆ ಹೋಗಿವೆ. ಇದೀಗ ಮೈಕ್ರೋಸಾಫ್ಟ್ ಸಹ ಉಳಿದ ಕಂಪನಿಗಳ ಸಾಲಿಗೆ ಸೇರಿದೆ. ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮವಾಗಿ ಮೆಟಾ ಪ್ಲಾಟ್ಫಾರ್ಮ್ಸ್ ಇಂಕ್, ಟ್ವಿಟರ್ ಇಂಕ್, ಸ್ನ್ಯಾಪ್ ಇಂಕ್ಗಳು ಉದ್ಯೋಗ ಕಡಿತ ಮಾಡಿವೆಯಲ್ಲದೆ, ನೇಮಕಾತಿ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತಿವೆ.
ಇದನ್ನೂ ಓದಿ: ಭಾರತದಲ್ಲಿ ಎರಡು ಹೊಸ ಮಾದರಿಯ ಲ್ಯಾಪ್ಟಾಪ್ ಪರಿಚಯಿಸಿದ ಮೈಕ್ರೋಸಾಫ್ಟ್; ಬೆಲೆ ಎಷ್ಟು?
ಕೆಲವೇ ಸಂಖ್ಯೆಯ ಉದ್ಯೋಗಿಗಳನ್ನು ಕೆಲಸದಿಂದ ತೆರವುಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಮೈಕ್ರೋಸಾಫ್ಟ್ ಜುಲೈ ತಿಂಗಳಲ್ಲಿ ಹೇಳಿತ್ತು. ನಾವು ಕಡಿಮೆ ಸಂಖ್ಯೆಯ ಉದ್ಯೋಗಿಗಳನ್ನಷ್ಟೇ ವಜಾಗೊಳಿಸಿದ್ದೇವೆ. ಇತರ ಕಂಪನಿಗಳಂತೆ ನಾವೂ ಸಹ ನಮ್ಮ ವ್ಯಾಪಾರದ ಆದ್ಯತೆಗಳನ್ನು ಸದಾ ಮೌಲ್ಯಮಾನ ಮಾಡುತ್ತಿರುತ್ತೇವೆ. ಅದರಂತೆ ರಚನಾತ್ಮಕ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಕಂಪನಿ ಹೇಳಿತ್ತು.
ಇದೇ 25ರಂದು ಮೈಕ್ರೋಸಾಫ್ಟ್ ಎರಡನೇ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿದೆ.
ಮೆಟಾ ಇತ್ತೀಚೆಗೆ 60 ಗುತ್ತಿಗೆದಾರರನ್ನು ವಜಾಗೊಳಿಸಿತ್ತು. ಜಾಗತಿಕವಾಗಿ ಕಾಯಂ ಉದ್ಯೋಗಿಗಳ ಸಂಖ್ಯೆಯಲ್ಲಿ ಅಂದಾಜು ಶೇಕಡಾ 20ರಷ್ಟು ಕಡಿತ ಮಾಡುವುದಾಗಿ ಇದೇ ವರ್ಷ ಆಗಸ್ಟ್ 31ರಂದು ‘ಸ್ನ್ಯಾಪ್’ ಹೇಳಿತ್ತು.
ಭಾರತದಲ್ಲಿಯೂ ಉದ್ಯೋಗ ಕಡಿತ:
ಭಾರತದಲ್ಲಿಯೂ ವಿಪ್ರೊ, ಇನ್ಫೊಸಿಸ್ನಂಥ ಟೆಕ್ ಕಂಪನಿಗಳು ಈ ವರ್ಷ ಉದ್ಯೋಗ ಕಡಿತ ಮಾಡುವುದಾಗಿ ಈಗಾಗಲೇ ಘೋಷಿಸಿವೆ. ಮುಂದಿನ ತಿಂಗಳುಗಳಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿಯುವುದಾಗಿ ಆ್ಯಪಲ್, ಒರೇಕಲ್, ಗೂಗಲ್ ಹಾಗೂ ಇತರ ಕಂಪನಿಗಳು ಇತ್ತೀಚೆಗೆ ಘೋಷಿಸಿದ್ದವು.
ಕಂಪನಿಗಳ ಆರ್ಥಿಕ ಬೆಳವಣಿಗೆಯಲ್ಲಿ ಮುಂದಿನ ದಿನಗಳಲ್ಲಿ ಕುಸಿತವಾಗುವ ಸಾಧ್ಯತೆ ಇದ್ದು, 2023ರಲ್ಲಿ ಭಾರತದಲ್ಲಿ ಆರ್ಥಿಕ ಹಿಂಜರಿತ ಕಂಡುಬರಬಹುದು ಎಂದು ಹಲವು ಕಂಪನಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈಚೆಗೆ ಅಭಿಪ್ರಾಯಪಟ್ಟಿದ್ದಾರೆ. ಪರಿಣಾಮವಾಗಿ ನೇಮಕಾತಿ ಪ್ರಕ್ರಿಯೆಯಲ್ಲಿ ಕಡಿತವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಮೆರಿಕದಲ್ಲಿ 32,000 ಉದ್ಯೋಗ ಕಡಿತ:
ಉದ್ಯಮಕ್ಕೆ ಸಂಬಂಧಿಸಿದ ಮಾಹಿತಿ ತಾಣ ‘ಕ್ರಂಚ್ಬೇಸ್’ನಲ್ಲಿ ಪ್ರಕಟವಾದ ವಿಶ್ಲೇಷಣೆಯೊಂದರ ಪ್ರಕಾರ ಅಮೆರಿಕದ ಟೆಕ್ ಕಂಪನಿಗಳು ಜುಲೈನಲ್ಲಿ 32,000 ಉದ್ಯೋಗಿಗಳನ್ನು ವಜಾಗೊಳಿಸಿವೆ ಎನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:37 pm, Tue, 18 October 22