ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡುವುದಕ್ಕೆ ಥಾಯ್ಲೆಂಡ್​ ದೇಶಕ್ಕೆ ಆಹ್ವಾನ ನೀಡಿದ ಸಚಿವ ಮುರುಗೇಶ್ ನಿರಾಣಿ

| Updated By: Srinivas Mata

Updated on: Sep 04, 2021 | 4:51 PM

ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ ಸಚಿವ ಮುರುಗೇಶ್ ನಿರಾಣಿ ಅವರು ಥಾಯ್ಲೆಂಡ್​ ದೇಶದ ರಾಯಭಾರಿ ಮೂಲಕ ಆಹ್ಚಾನ ನೀಡಿದರು.

ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡುವುದಕ್ಕೆ ಥಾಯ್ಲೆಂಡ್​ ದೇಶಕ್ಕೆ ಆಹ್ವಾನ ನೀಡಿದ ಸಚಿವ ಮುರುಗೇಶ್ ನಿರಾಣಿ
ಥಾಯ್ಲೆಂಡ್​ ರಾಯಭಾರಿ ಜತೆಗೆ ಮುರುಗೇಶ್​ ನಿರಾಣಿ ಮಾತುಕತೆ
Follow us on

ಬೆಂಗಳೂರು: ಕರ್ನಾಟಕದಲ್ಲಿ ಬಂಡವಾಳ ಹೂಡಲು ಮುಂದೆ ಬಂದರೆ ಅಂತಹ ಕಂಪೆನಿಗಳಿಗೆ ಎಲ್ಲ ರೀತಿಯ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಅವರು ಆಶ್ವಾಸನೆ ಕೊಟ್ಟಿದ್ದಾರೆ.ಈ ಸಂಬಂಧ ಶನಿವಾರ ವಿಧಾನಸೌದದ ತಮ್ಮ ಕೊಠಡಿಯಲ್ಲಿ ಥಾಯ್ಲೆಂಡ್​ನ ರಾಯಭಾರಿ ನಿತಿರೂಗೆ ಪೋನ್ ಪ್ರಸರ್ಟ್ ಅವರನ್ನು ಭೇಟಿಯಾಗಿ, ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳನ್ನು ಮನವರಿಕೆ ಮಾಡಿಕೊಟ್ಟರು. ಇದೇ ಸಂದರ್ಭದಲ್ಲಿ ಥಾಯ್ಲೆಂಡ್​ ರಾಯಭಾರಿ ಭಾರತದಲ್ಲಿ ಉದ್ಯಮ ನಡೆಸಲು ಸ್ಟಾರ್ಟಪ್ ಮತ್ತು ಹೆಚ್ಚಿನ ಅನ್ವೇಷಣೆ ಬಗ್ಗೆ ಗಮನ ಸೆಳೆದರು. ಇದಕ್ಕೂ ಸಮ್ಮತಿಸಿದ ಸಚಿವ ನಿರಾಣಿ, ನೀವು ಸುಲಲಿತವಾಗಿ ಉದ್ಯಮ ನಡೆಸಲು ಯಾವೆಲ್ಲ ಸೌಲಭ್ಯಗಳು ಬೇಕೋ ಅವೆಲ್ಲವನ್ನೂ ಕಾಲಮಿತಿಯೊಳಗೆ ಒದಗಿಸಿಕೊಡುತ್ತೇವೆ ಎಂದು ಭರವಸೆ ನೀಡಿದರು. ಮುಕ್ತ ಮನಸ್ಸಿನಿಂದ ಬಂಡವಾಳ ಹೂಡಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ಸರ್ಕಾರ 2020-25ನೇ ಸಾಲಿನ ಹೊಸ ಕೈಗಾರಿಕಾ ನೀತಿಯನ್ನು ಜಾರಿಗೆ ತಂದಿದೆ. ಇದು ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾಗಿದೆ. ಇಡೀ ದೇಶಕ್ಕೆ ಮಾದರಿಯಾಗುವಂತಹ ನೀತಿ ಇದಾಗಿದೆ ಎಂದು ಪ್ರಶಂಸಿಸಿದರು. ಕರ್ನಾಟಕ ಇಂದು ದೇಶದಲ್ಲೇ ಅತಿ ಹೆಚ್ಚು ವಿದೇಶಿ ಬಂಡವಾಳ ಆಕರ್ಷಿಸುತ್ತಿರುವ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ನಾವು ಉದ್ಯಮಿಗಳಿಗೆ ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡುತ್ತಿದ್ದೇವೆ. ಮುಂಚೂಣಿಯಲ್ಲಿರುವ ಅನೇಕ ಜಾಗತಿಕ ಕಂಪೆನಿಗಳು ಇಂದು ಬಂಡವಾಳ ಹೂಡಿಕೆ ಮಾಡಿವೆ ಎಂದು ಹೇಳಿದರು.

ವಿದೇಶಿ ಬಂಡವಾಳ ಆಕರ್ಷಣೆಯಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ
2020-21ರಲ್ಲಿ ಅತಿ ಹೆಚ್ಚು ವಿದೇಶಿ ಬಂಡವಾಳ ಆಕರ್ಷಣೆ ಮಾಡಿರುವ ರಾಜ್ಯಗಳಲ್ಲಿ ಕರ್ನಾಟಕವು ಮೂರನೇ ರಾಜ್ಯವಾಗಿದೆ ಎಂದರು. ಸುಮಾರು 7.6 ಬಿಲಿಯನ್ ಡಾಲರ್ ಬಂಡವಾಳ ರಾಜ್ಯಕ್ಕೆ ಹರಿದು ಬಂದಿದೆ. ಇದು ದೇಶದ ಒಟ್ಟು ಪ್ರಮಾಣದ ಶೇ 16ರಷ್ಟು ಎಂದು ಹೇಳಿದರು. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಶ್ವದ ಯಾವುದೇ ಭಾಗಕ್ಕೂ ತಲುಪುವ ಸೌಲಭ್ಯ ಇದೆ. ವಿಶ್ವದ ಮುಂಚೂಣಿಯಲ್ಲಿರುವ ಸಿಪಿ ಗ್ರೂಪ್, ಅಲೈಡ್ ಮೆಟಲ್ಸ್, ಪ್ರಕ್ಷ ರಿಯಲ್ ಎಸ್ಟೇಟ್ ಸೇರಿದಂತೆ ಅನೇಕ ಕಂಪೆನಿಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ನಿರಾಣಿ ಮನವರಿಕೆ ಮಾಡಿದರು.

ಕರ್ನಾಟಕವು ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿವೆ. ನವೀಕರಿಸಬಹುದಾದ ಇಂಧನ, ಆಟೋ ಮೊಬೈಲ್, ಜವಳಿ, ರೇಷ್ಮೆ, ಕೃಷಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ನಾವು ಇತರೆ ರಾಜ್ಯಗಳಿಗಿಂತ ಮುಂದಿದ್ದೇವೆ ಎಂದರು. ಬೆಂಗಳೂರು ವಿಶ್ವದ 4ನೇ ಅತಿದೊಡ್ಡ ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಲಸ್ಟರ್ ಆಗಿದೆ. ಕೊರೊನಾ ಸಾಂಕ್ರಾಮಿಕ ಪರಿಸ್ಥಿತಿಯ ಹೊರತಾಗಿಯೂ ಕರ್ನಾಟಕವು ಕೈಗಾರಿಕೆಗಳನ್ನು ಬೆಂಬಲಿಸಲು ಮತ್ತು ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸಲು ಸಾಧ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಾರ್ಚ್ 2020ರಲ್ಲಿ ಆರಂಭದಿಂದ ಕರ್ನಾಟಕವು ಯಶಸ್ವಿಯಾಗಿ 1 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಹೂಡಿಕೆಗಳನ್ನು ಗಳಿಸಿದೆ. ಕೋವಿಡ್‌ನ ಮೊದಲ ಅಲೆಯ ಸಮಯದಲ್ಲಿ, ಲಾಕ್‌ಡೌನ್ ಅನ್ನು ತೆಗೆದುಹಾಕಿದ ಮೊದಲ ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎಂದು ತಿಳಿಸಿದರು. ಪ್ರಮುಖ ಉದ್ಯಮಗಳಾದ ಎಲೆಕ್ಟ್ರಾನಿಕ್ಸ್, ಏರೋಸ್ಪೇಸ್ ಮತ್ತು ರಕ್ಷಣೆಗೆ ಸಹಾಯ ಮಾಡಿತು. ಕೋವಿಡ್‌ನ ಎರಡನೇ ಅಲೆಯ ಸಮಯದಲ್ಲಿ, ಲಾಕ್‌ಡೌನ್ ಸಮಯದಲ್ಲಿ ಅಗತ್ಯ ಕೈಗಾರಿಕೆಗಳು ಕಾರ್ಯನಿರ್ವಹಿಸಲು ಅವಕಾಶ ನೀಡಲಾಯಿತು.

ಕರ್ನಾಟಕದಲ್ಲಿ ಉದ್ಯಮ ವಲಯಗಳಲ್ಲಿ ಥಾಯ್​ ಕಂಪೆನಿಗಳು
ವಿಶ್ವದ ಅತಿದೊಡ್ಡ ಕೃಷಿ ಸಮೂಹಗಳಲ್ಲಿ ಒಂದಾದ ಸಿಪಿ ಗ್ರೂಪ್ – 1997ರಲ್ಲಿ ರಾಜ್ಯಕ್ಕೆ ಬಂದಿತು. 2004ರಿಂದ ಥಾಯ್ ಏರ್​ವೇಸ್ ಅಂತರಾಷ್ಟ್ರೀಯ ಸ್ಥಳಗಳಿಗೆ ಬೆಂಗಳೂರನ್ನು ನೇರವಾಗಿ ಸಂಪರ್ಕಿಸುವ ಮೊದಲ ವಿಮಾನಯಾನ ಸಂಸ್ಥೆಯಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ಹೂಡಿಕೆದಾರರ ಸ್ನೇಹಪರತೆಯನ್ನು ಹೆಚ್ಚಿಸಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ನಾವು ಈಗಾಗಲೇ ಸಿಪಿ ಗ್ರೂಪ್, ಅಲೈಡ್ ಮೆಟಲ್ಸ್, ಪ್ರುಕ್ಸಾ ರಿಯಲ್ ಎಸ್ಟೇಟ್ ಮೊದಲಾದ ಬಹು ಥಾಯ್ ಕಂಪನಿಗಳಿಗೆ ನೆಲೆಯಾಗಿದ್ದು, ಕರ್ನಾಟಕದಲ್ಲಿ ಉದ್ಯಮ ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ‌ ಎಂಬುದನ್ನು ‌ತಿಳಿಸಿದರು.

ಕರ್ನಾಟಕ ಮತ್ತು ಥಾಯ್ಲೆಂಡ್​ನೊಂದಿಗೆ ಅಸ್ತಿತ್ವದಲ್ಲಿರುವ ಸಹಕಾರವನ್ನು ಹೆಚ್ಚಿಸುವ ಮೂಲಕ ಈ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ನಾವು ಉತ್ಸುಕರಾಗಿದ್ದೇವೆ. ಆಟೋ ಮತ್ತು ಆಟೋ ಎಲೆಕ್ಟ್ರಾನಿಕ್ಸ್, ಆಹಾರ ಸಂಸ್ಕರಣೆ, ಜವಳಿಯಂತಹ ಪ್ರಮುಖ ಉದ್ಯಮಗಳಲ್ಲಿ ಸಾಮ್ಯತೆಗಳು‌ ಇವೆ ಎಂದರು. ಎಲೆಕ್ಟ್ರಾನಿಕ್ಸ್ ವಿನ್ಯಾಸ, ಭಾರತದಲ್ಲಿ ರೇಷ್ಮೆ, ಕಾಫಿ ಉತ್ಪಾದನೆ, ನವೀಕರಿಸಬಹುದಾದ ಇಂಧನ, ಮೆಷಿನ್ ಟೂಲ್ಸ್ ತಯಾರಿಕೆ, ಭಾರತದ ಯಂತ್ರೋಪಕರಣಗಳ ಉತ್ಪಾದನೆಯಲ್ಲಿ 52ರಷ್ಟು ಪಾಲು ಕರ್ನಾಟಕದ್ದಾಗಿದೆ ಎಂದು ಅಂಕಿ ಅಂಶಗಳ ವಿವರ ನೀಡಿದರು. ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಮುಂದೆ ಬಂದರೆ ಅಗತ್ಯವಿರುವ ವಿದ್ಯುತ್, ನೀರು, ರಸ್ತೆ ಸೇರಿದಂತೆ ಎಲ್ಲ ಸೌಲಭ್ಯಗಳನ್ನೂ ಕಲ್ಪಿಸಿಕೊಡಲಿದ್ದೇವೆ ಎಂದು ಮುಕ್ತ ಮನಸ್ಸಿನಿಂದ ಬಂಡವಾಳ ಹೂಡಲು ಮುಂದೆ ಬರಬೇಕು ಎಂದು ಸಚಿವ ಮುರುಗೇಶ್ ನಿರಾಣಿ ಮನವಿ ಮಾಡಿದರು.

ಇದನ್ನೂ ಓದಿ: 15 ದಿನದೊಳಗೆ ಜಾಗತಿಕ ಹೂಡಿದಾರರ ಸಮಾವೇಶಕ್ಕೆ ದಿನಾಂಕ ನಿಗದಿ; ಸಚಿವ ಮುರುಗೇಶ್ ನಿರಾಣಿ ಘೋಷಣೆ

(Minister Murugesh Nirani Invites Thailand To Invest In Karnataka)