Money Laundering: ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್​ಗೆ ಬಿಗ್ ರಿಲೀಫ್​; ದೆಹಲಿ ಹೈಕೋರ್ಟ್​ನಿಂದ ಜಾಮೀನು

| Updated By: Ganapathi Sharma

Updated on: Nov 25, 2022 | 11:55 AM

ರಾಣಾ ಕಪೂರ್ ಅವರನ್ನು ಜಾರಿ ನಿರ್ದೇಶನಾಲಯ ಹಣಕಾಸು ಅಕ್ರಮ ತಡೆ ಕಾಯ್ದೆ (PMLA) ಅನ್ವಯ 2020ರಲ್ಲಿ ಬಂಧಿಸಿತ್ತು. ದೊಡ್ಡ ಮೊತ್ತದ ಸಾಲ ನೀಡುವುದಕ್ಕಾಗಿ ಲಂಚ ಪಡೆದ ಆರೋಪ ಅವರ ಮೇಲಿದೆ.

Money Laundering: ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್​ಗೆ ಬಿಗ್ ರಿಲೀಫ್​; ದೆಹಲಿ ಹೈಕೋರ್ಟ್​ನಿಂದ ಜಾಮೀನು
ರಾಣಾ ಕಪೂರ್ (ಪಿಟಿಐ ಚಿತ್ರ)
Image Credit source: PTI
Follow us on

ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ (Money Laundering Case) ಸಂಬಂಧಿಸಿ ಯೆಸ್ ಬ್ಯಾಂಕ್ (Yes Bank) ಸಂಸ್ಥಾಪಕ ರಾಣಾ ಕಪೂರ್​ಗೆ ದೆಹಲಿ ಹೈಕೋರ್ಟ್ (Delhi High Court) ಶುಕ್ರವಾರ ಜಾಮೀನು ನೀಡಿದೆ. ಇದರೊಂದಿಗೆ ಬಂಧನಕ್ಕೊಳಗಾದ ಎರಡು ವರ್ಷಗಳ ಬಳಿಕ ಅವರಿಗೆ ದೊಡ್ಡ ರಿಲೀಫ್ ದೊರೆತಂತಾಗಿದೆ. 466.51 ಕೋಟಿ ರೂ. ಮೊತ್ತದ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿ ರಾಣಾ ಕಪೂರ್ ವಿರುದ್ಧ ಜಾರಿ ನಿರ್ದೇಶನಲಾಯ (Enforcement Directorate) ಪ್ರಕರಣ ದಾಖಲಿಸಿತ್ತು. ಪ್ರಕರಣದಲ್ಲಿ ಬಂಧಿತರಾಗಿರುವ ರಾಣಾ ಕಪೂರ್ ನವೀ ಮುಂಬೈಯ ತಲೋಜ ಜೈಲಿನಲ್ಲಿದ್ದಾರೆ.

2020ರಲ್ಲಿ ವೈದ್ಯಕೀಯ ಕಾರಣಗಳನ್ನು ನೀಡಿ ಅವರು ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಜೈಲಿನಲ್ಲಿರುವಾಗ ಕೋವಿಡ್ ಸೋಂಕು ತಗಲುವ ಭೀತಿ ಇದೆ ಎಂದು ಅವರು ಹೇಳಿದ್ದರು. ದೀರ್ಘಕಾಲದ ಇಮ್ಯುನೊ ಡಿಫಿಷಿಯನ್ಸಿ ಸಿಂಡ್ರೋಮ್​ನಿಂದ ರಾಣಾ ಕಪೂರ್ ಬಳಲುತ್ತಿದ್ದು, ಇದು ಶ್ವಾಸಕೋಶ, ಸೈನಸ್ ಮತ್ತು ಚರ್ಮದ ಪುನರಾವರ್ತಿತ ಸೋಂಕುಗಳಿಗೆ ಕಾರಣವಾಗುತ್ತದೆ ಎಂದು ಅವರ ಪರ ವಕೀಲ ಸುಭಾಶ್ ಜಾಧವ್ ನ್ಯಾಯಾಲಯಕ್ಕೆ ತಿಳಿಸಿದ್ದರು. ಆದಾಗ್ಯೂ, ಅವರ ಜಾಮೀನು ಮನವಿ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.

2020ರಲ್ಲಿ ಬಂದನಕ್ಕೊಳಗಾಗಿದ್ದ ಕಪೂರ್

ರಾಣಾ ಕಪೂರ್ ಅವರನ್ನು ಜಾರಿ ನಿರ್ದೇಶನಾಲಯ ಹಣಕಾಸು ಅಕ್ರಮ ತಡೆ ಕಾಯ್ದೆ (PMLA) ಅನ್ವಯ 2020ರಲ್ಲಿ ಬಂಧಿಸಿತ್ತು. ದೊಡ್ಡ ಮೊತ್ತದ ಸಾಲ ನೀಡುವುದಕ್ಕಾಗಿ ಲಂಚ ಪಡೆದ ಆರೋಪ ಅವರ ಮೇಲಿದೆ. 4,300 ಕೋಟಿ ರೂ. ಲಂಚದ ಹಣ ಕಪೂರ್ ಕುಟುಂಬದವರ ಒಡೆತನದಲ್ಲಿರುವ ಕಂಪನಿಗಳಿಗೆ ಸಂದಾಯವಾಗಿದೆ ಎಂದು ಆರೋಪಿಸಲಾಗಿತ್ತು. ಕಪೂರ್ ಅವರು ಅಧಿಕಾರದ ಉತ್ತುಂಗದಲ್ಲಿದ್ದಾಗ ಯೆಸ್ ಬ್ಯಾಂಕ್ 30,000 ಕೋಟಿ ರೂ. ಸಾಲ ನೀಡಿತ್ತು. ಈ ಪೈಕಿ 20,000 ಕೋಟಿ ರೂ. ಮರುಪಾವತಿಯಾಗದ ಸಾಲವಾಗಿ ಮಾರ್ಪಟ್ಟಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

ದೊಡ್ಡ ಕಾರ್ಪೋರೇಟ್ ಕಂಪನಿಗಳಿಗೆ ಸುಲಭವಾಗಿ ಸಾಲ ಮಂಜೂರು ಮಾಡಲು ರಾಣಾ ಕಪೂರ್ ಲಂಚ ಪಡೆದಿದ್ದರು. ಹೀಗೆ ಮಂಜೂರಾದ ಸಾಲಗಳು ಅನುತ್ಪಾದಕ ಆಸ್ತಿಯಾಗಿ ಪರಿವರ್ತನೆಯಾಗಿವೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ