ಎಂಟಿಎನ್​ಎಲ್ ಸಾವು ಬದುಕಿನ ಹೋರಾಟ; ಹೆಚ್ಚಾದ ಸಾಲದ ಹೊರೆ, ಬಿಎಸ್​ಎನ್​ಎಲ್​ಗೆ ಹೊಣೆ; ಸರ್ಕಾರದಿಂದಲೇ ಬಾಂಡ್ ಬಡ್ಡಿ

MTNL crisis news: ಬಿಎಸ್​ಎಲ್​ಎಲ್ ಅಧೀನದ ಎಂಟಿಎನ್​ಎಲ್ ವಿಪರೀತ ಸಾಲದ ಹೊರೆಯಿಂದ ಮುಚ್ಚುವ ಸ್ಥಿತಿಯಲ್ಲಿದೆ. ಇದನ್ನು ಉಳಿಸಲು ಸರ್ಕಾರ ಕಸರತ್ತು ನಡೆಸುತ್ತಿದೆ. ಬಿಎಸ್​ಎನ್​ಎಲ್ ಜೊತೆ ಎಂಟಿಎನ್​ಎಲ್ ಅನ್ನು ವಿಲೀನಗೊಳಿಸುವ ಬದಲು ಅದರ ಕಾರ್ಯಾಚರಣೆಯ ಜವಾಬ್ದಾರಿ ಮಾತ್ರ ಕೊಡಬಹುದು. ಇದೇ ವೇಳೆ, ಎಂಟಿಎನ್​ಎಲ್ ವಿತರಿಸಿದ್ದ ಸಾಲಪತ್ರದ ಬಡ್ಡಿಹಣವನ್ನು ಸರ್ಕಾರವೇ ಸಂದಾಯ ಮಾಡಲಿದೆ.

ಎಂಟಿಎನ್​ಎಲ್ ಸಾವು ಬದುಕಿನ ಹೋರಾಟ; ಹೆಚ್ಚಾದ ಸಾಲದ ಹೊರೆ, ಬಿಎಸ್​ಎನ್​ಎಲ್​ಗೆ ಹೊಣೆ; ಸರ್ಕಾರದಿಂದಲೇ ಬಾಂಡ್ ಬಡ್ಡಿ
ಬಿಎಸ್​ಎನ್​ಎಲ್, ಎಂಟಿಎನ್​ಎಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 14, 2024 | 12:06 PM

ನವದೆಹಲಿ, ಜುಲೈ 14: ದೆಹಲಿ ಮತ್ತು ಮುಂಬೈನಲ್ಲಿ ಮಾತ್ರ ಕಾರ್ಯಾಚರಿಸುತ್ತಿದ್ದ ಎಂಟಿಎನ್​​ಎಲ್ (ಮಹಾನಗರ್ ಟೆಲಿಫೋನ್ ನಿಗಮ್ ಲಿ) ಸಂಸ್ಥೆ ಸಾಲದ ಹೊರೆಯಿಂದ ತತ್ತರಿಸುತ್ತಿದೆ. ಈ ಸ್ಥಿತಿಯಲ್ಲಿ ಎಂಟಿಎನ್​ಎಲ್​ನ ಕಾರ್ಯಾಚರಣೆ ಹೊಣೆಯನ್ನು ಅದರ ಮಾತೃ ಸಂಸ್ಥೆಯಾದ ಬಿಎಸ್​ಎನ್​ಎಲ್​ಗೆ ವಹಿಸಲು ಸರ್ಕಾರ ಆಲೋಚಿಸುತ್ತಿದೆ. ಬಿಎಸ್​ಎನ್​ಎಲ್ ಜೊತೆಗೆ ಎಂಟಿಎನ್​ಎಲ್ ಅನ್ನು ವಿಲೀನಗೊಳಿಸುವುದು ಒಂದು ಮಾರ್ಗವಾದರೆ, ಎಂಟಿಎನ್​ಎಲ್ ಅನ್ನು ಬಿಎಸ್​ಎನ್​ಎಲ್​ಗೆ ವಹಿಸಿ ಅದರ ಹಣಕಾಸು ಪರಿಸ್ಥಿತಿಯನ್ನು ಸುಧಾರಿಸುವುದು ಇನ್ನೊಂದು ಮಾರ್ಗ. ಈ ಎರಡನೇ ಮಾರ್ಗವನ್ನು ಸರ್ಕಾರ ಆಯ್ಕೆ ಮಾಡಬಹುದು ಎನ್ನಲಾಗುತ್ತಿದೆ. ಒಂದು ನಿರ್ಧಾರಕ್ಕೆ ಬಂದ ಬಳಿಕ ಕ್ಯಾಬಿನೆಟ್ ಅನುಮೋದನೆಗೆ ಕಳುಹಿಸಿಕೊಡುವ ನಿರೀಕ್ಷೆ ಇದೆ.

ದೊಡ್ಡ ಸಾಲದ ಹೊರೆಯಲ್ಲಿ ಎಂಟಿಎನ್​ಎಲ್

ಎಂಟಿಎನ್​ಎಲ್ ಸಂಸ್ಥೆಯ ಒಟ್ಟು ಸಾಲ ಮೂರು ಲಕ್ಷ ಕೋಟಿ ರೂ ಇದೆ. ಕಳೆದ ವರ್ಷ 2480 ಕೋಟಿ ರೂ ಹಣವನ್ನು ಎನ್​ಸಿ ಡಿಬಂಚರ್​ಗಳ ಮೂಲಕ ಸಂಗ್ರಹಿಸಿತ್ತು. ಈ ಬಾಂಡ್​ಗಳಿಗೆ ವಾರ್ಷಿಕ ಬಡ್ಡಿ ಶೇ. 7.59ರಷ್ಟಿದೆ. ಪ್ರತೀ ಆರು ತಿಂಗಳಿಗೊಮ್ಮೆ ಹೂಡಿಕೆದಾರರಿಗೆ ಬಡ್ಡಿಹಣವನ್ನು ಕೊಡಬೇಕು. ಆ ಹಣವನ್ನು ಒಂದು ತಾತ್ಕಾಲಿಕ ಖಾತೆ ಅಥವಾ ಎಸ್​ಕ್ರೂ ಅಕೌಂಟ್​ಗೆ ಎಂಟಿಎನ್​ಎಲ್ ವರ್ಗಾಯಿಸಬೇಕಿತ್ತು. ಹಾಗೆ ಅದು ಮಾಡಿಲ್ಲ.

ಇದನ್ನೂ ಓದಿ: ಹಾಜರಾತಿ ಇದ್ದರೆ ಬೋನಸ್; ವರ್ಕೌಟ್ ಆಯ್ತು ಟಿಸಿಎಸ್ ಹೊಸ ನಿಯಮ; ಶೇ. 70 ಉದ್ಯೋಗಿಗಳು ಕಚೇರಿಗೆ ಹಾಜರ್

ಜುಲೈ 20ಕ್ಕೆ ಆ ಬಡ್ಡಿಹಣವನ್ನು ಹೂಡಿಕೆದಾರರಿಗೆ ತಲುಪಿಸದಿದ್ದರೆ ಡೀಫಾಲ್ಟ್ ಆಗಿಹೋಗಬಹುದು. ಈಗ ಸರ್ಕಾರವೇ ಈ ಬಾಂಡ್​ಗಳ ಹಣಕ್ಕೆ ಬಡ್ಡಿ ತಲುಪಿಸಲಿದೆ. ಹೀಗಾಗಿ, ಕಳೆದ ವರ್ಷ ಎಂಟಿಎನ್​ಎಲ್​ನ ನಾನ್ ಕನ್ವರ್ಟಿಬಲ್ ಡಿಬಂಚರ್​​ಗನ್ನು ಖರೀದಿಸಿದ ಹೂಡಿಕೆದಾರರು ಕಳವಳ ಪಡುವ ಅಗತ್ಯ ಇರುವುದಿಲ್ಲ.

ಸರ್ಕಾರ 28,000-30,000 ಕೋಟಿ ರೂ ಎಂಟಿಎನ್​ಎಲ್ ಸಾಲವನ್ನು ತೀರಿಸಲು ಮಾರ್ಗೋಪಾಯ ಹುಡುಕುತ್ತಿದೆ. ಇಷ್ಟು ದೊಡ್ಡ ಪ್ರಮಾಣದ ಸಾಲ ಇಲ್ಲದೇ ಹೋಗಿದ್ದರೆ ಎಂಟಿಎನ್​ಎಲ್ ಅನ್ನು ಬಿಎಸ್​ಎನ್​ಎಲ್ ಜೊತೆ ವಿಲೀನಗೊಳಿಸಬಹುದಿತ್ತು.

ಎಂಟಿಎನ್​ಎಲ್ ಗ್ರಾಹಕರ ಸಂಖ್ಯೆ ಎಷ್ಟಿದೆ..?

ಭಾರತದ ಅತ್ಯಂತ ಹಳೆಯ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಎಂಟಿಎನ್​ಎಲ್ ಕೇವಲ ಮುಂಬೈ ಮತ್ತು ದೆಹಲಿಯಲ್ಲಿ ಮಾತ್ರ ಕಾರ್ಯಾಚರಿಸುತ್ತದೆ. ಇನ್ನೊಂದೆಡೆ ಬಿಎಸ್​ಎನ್​ಎಲ್ ಈ ಎರಡು ನಗರ ಬಿಟ್ಟು ಬೇರೆಡೆ ಕಾರ್ಯಾಚರಿಸುತ್ತದೆ. ಎರಡೂ ಕೂಡ ಸರ್ಕಾರಿ ಸ್ವಾಮ್ಯದ ದೂರವಾಣಿ ಕಂಪನಿಗಳಾದ್ದರಿಂದ ಈ ಹೊಂದಾಣಿಕೆ ಸಾಧಿಸಲಾಗಿದೆ. ಎಂಟಿಎನ್​ಎಲ್ ಈ ಎರಡು ಮಹಾನಗರಗಳಿಂದ ಒಟ್ಟು 32 ಲಕ್ಷ ಗ್ರಾಹಕರನ್ನು ಹೊಂದಿದೆ.

ಇದನ್ನೂ ಓದಿ: ಏನಿದು ವಾಹನಗಳ ಸ್ಕ್ರ್ಯಾಪಿಂಗ್ ಪ್ರಕ್ರಿಯೆ? RTO ನಿಯಮಗಳು ಏನಿವೆ? ವೆಹಿಕಲ್ ಸ್ಕ್ರ್ಯಾಪಿಂಗ್ ಕೇಂದ್ರ ಸ್ಥಾಪಿಸುವುದು ಹೇಗೆ?

ಎಂಟಿಎನ್​ಎಲ್​ನ ರೀಚಾರ್ಚ್ ಪ್ಲಾನ್​​ಗಳೂ ಕೂಡ ಅಗ್ಗದ ದರ ಹೊಂದಿವೆ. ಅದರ 151 ರೂ ಪ್ಲಾನ್​ನಲ್ಲಿ ಅನ್​ಲಿಮಿಟೆಡ್ ಕರೆ, ದಿನಕ್ಕೆ 2 ಜಿಬಿ ಡಾಟಾ, 100 ಎಸ್ಸೆಮ್ಮೆಸ್ ಉಚಿತವಾಗಿ ಸಿಗುತ್ತದೆ. ಒಂದು ತಿಂಗಳ ವ್ಯಾಲಿಡಿಟಿ ಇದೆ.

1,097 ರೂ ಪ್ಲಾನ್ ಒಂದು ವರ್ಷದ ವ್ಯಾಲಿಡಿಟಿ ಹೊಂದಿದ್ದು 40 ಜಿಬಿ ಡಾಟಾ ಉಚಿತವಾಗಿ ಸಿಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ