ಮುಂಬೈ: ಮುಕೇಶ್ ಅಂಬಾನಿ (Mukesh Ambani) ಎಂದಾಗ ಕೂಡಲೇ ನೆನಪಾಗುವುದು ರಿಲಾಯನ್ಸ್ ಜಿಯೋ. ದುಬಾರಿ ಡಾಟಾ ದರಗಳಿದ್ದ ಸಂದರ್ಭದಲ್ಲಿ ಟೆಲಿಕಾಂ ಮಾರುಕಟ್ಟೆಗೆ ಅಡಿ ಇಟ್ಟು ಅಗ್ಗದ ದರಗಳಿಗೆ ಡಾಟಾ ನೀಡಿ ಬಹುದೊಡ್ಡ ಡಿಜಿಟಲ್ ಇಂಡಿಯಾ ಕ್ರಾಂತಿಗೆ ಕಾರಣವಾದ ಮುಕೇಶ್ ಅಂಬಾನಿ ಇದೀ ಇನ್ನೊಂದು ಕ್ಷೇತ್ರದಲ್ಲಿ ಅಂಥದ್ದೇ ಸಂಚಲನ ಸೃಷ್ಟಿಸುತ್ತಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಬಹಳ ಮುಖ್ಯ ಎನಿಸಿರುವ ಜೆನಿಟಿಕ್ ಮ್ಯಾಪಿಂಗ್ (Genetic Mapping) ಕ್ಷೇತ್ರಕ್ಕೆ ಅಂಬಾನಿ ಅಡಿ ಇಡುತ್ತಿದ್ದಾರೆ. ನಮ್ಮಿಡೀ ದೈಹಿಕ ಆರೋಗ್ಯದ ಭವಿಷ್ಯಕ್ಕೆ ಕನ್ನಡಿ ಹಿಡಿಯುವಂತಹ ಜಿನೋಮ್ ಸೀಕ್ವೆನ್ಸಿಂಗ್ ಟೆಸ್ಟಿಂಗ್ ಕಿಟ್ (Genome Sequencing Test Kit) ಅನ್ನು ಮಾರುಕಟ್ಟೆಗೆ ತರಲಿದ್ದಾರೆ. ಆದರೆ, ಇದು ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಯ ಸಮಗ್ರ ಜಿನೋಮ್ ಸೀಕ್ವೆನ್ಸಿಂಗ್ ಟೆಸ್ಟ್ ಕಿಟ್ ಎಂಬುದು ಗಮನಾರ್ಹ.
ಬೆಂಗಳೂರು ಮೂಲದ ಸ್ಟ್ರಾಂಡ್ ಲೈಫ್ ಸೈನ್ಸಸ್ (Strand Life Sciences Pvt Ltd) ಎಂಬ ಸಂಸ್ಥೆ ಇತ್ತೀಚೆಗೆ ಜಿನೋಮ್ ಸೀಕ್ವೆನ್ಸಿಂಗ್ ಟೆಸ್ಟ್ ಕಿಟ್ ಅನ್ನು ಅಭಿವೃದ್ಧಿಪಡಿಸಿತ್ತು. 2021ರಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಬೆಂಗಳೂರಿನ ಈ ಕಂಪನಿಯನ್ನು ಖರೀದಿಸಿದ್ದು ಶೇ. 80ರಷ್ಟು ಪಾಲು ಹೊಂದಿದೆ. ಈ ಕಂಪನಿ ಅಭಿವೃದ್ಧಿಪಡಿಸಿದ ಟೆಸ್ಟ್ ಕಿಟ್ ಈಗ ಅಂಬಾನಿ ಪಾಲಿಗೆ ಮ್ಯಾಜಿಕ್ ದಂಡವಾಗಲಿದೆ. ಕೆಲವೇ ವಾರಗಳಲ್ಲಿ ಸಮಗ್ರ ಜಿನೋಮ್ ಸೀಕ್ವೆನ್ಸಿಂಗ್ ಟೆಸ್ಟ್ ಕಿಟ್ ಅನ್ನು ಕೇವಲ 145 ಡಾಲರ್ (ಸುಮಾರು 12,000 ರೂ) ಬೆಲೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.
ಎಲ್ಲದಕ್ಕಿಂತಲೂ ಕಡಿಮೆ ಬೆಲೆ
ಭಾರತದಲ್ಲಿ ಜಿನೋಮ್ ಸೀಕ್ವೆನ್ಸಿಂಗ್ ಟೆಸ್ಟ್ ಮಾಡುವ ಕಂಪನಿಗಳಿವೆ. ಮ್ಯಾಪ್ ಮೈ ಜಿನೋಮ್ (MapMyGenome), ಮೆಡ್ಜಿನೋಮ್ (MedGenome) ಮೊದಲಾದ ಕಂಪನಿಗಳ ಕಿಟ್ಗಳ ಬೆಲೆ 1 ಸಾವಿರ ಡಾಲರ್ಗಿಂತಲೂ ಹೆಚ್ಚು. ಅಂದರೆ 80 ಸಾವಿರ ರೂಗಿಂತಲೂ ಹೆಚ್ಚಿದೆ. ಹೀಗಾಗಿ, ಅಂಬಾನಿ ಕಂಪನಿ ಹೊರತರುವ ಟೆಸ್ಟ್ ಕಿಟ್ ಬಹಳ ದೊಡ್ಡ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: ವೈದ್ಯರೇಕೆ ತಿಳಿ ಬಣ್ಣದ ಉಡುಪಿನ ಜೊತೆ ಬಿಳಿ ಕೋಟನ್ನು ಧರಿಸುತ್ತಾರೆ? ಡಾ. ಪ್ರೀತಿ ಶಾನ್ಭಾಗ್ ಹೇಳುವುದು ಹೀಗೆ
ಅಮೆರಿಕದ 23ಅಂಡ್ಮೀ (23andMe) ಎಂಬ ಕಂಪನಿ ಕೂಡ ಕಡಿಮೆ ಬೆಲೆಗೆ ಜಿನೋಮ್ ಟೆಸ್ಟಿಂಗ್ ಕಿಟ್ ಅಭಿವೃದ್ಧಿಪಡಿಸಿದೆ. ಆದರೆ, ವ್ಯಕ್ತಿಯ ಆರೋಗ್ಯ ಚರಿತ್ರೆ ಹೇಳುವ ಕಿಟ್ಗೆ 99 ಡಾಲರ್ ಬೆಲೆ ಇದೆ. ಆದರೆ ಸಮಗ್ರ ಜಿನೋಮ್ ಸೀಕ್ವೆನ್ಸಿಂಗ್ ಕಿಟ್ಗೆ 199 ಡಾಲರ್ ಬೆಲೆಯಾಗುತ್ತದೆ. ಅಂದರೆ 16 ಸಾವಿರ ರೂಪಾಯಿಗೂ ತುಸು ಹೆಚ್ಚು.
ಇನ್ನು ಚೀನಾದ ಕೆಲ ಕಂಪನಿಗಳು ಕೇವಲ 7 ಸಾವಿರ ರೂಪಾಯಿಗೆ ಟೆಸ್ಟ್ ಕಿಟ್ ಸೇವೆ ಒದಗಿಸುತ್ತವೆ. ಆದರೆ, ಬಹಳಷ್ಟು ರೋಗಗಳ ಸೀಕ್ವೆನ್ಸಿಂಗ್ ಅನ್ನು ಈ ಕಿಟ್ಗಳು ಒಳಗೊಂಡಿರುವುದಿಲ್ಲ. ಸಮಗ್ರವೆನಿಸಿವ ಜಿನೋಮ್ ಸೀಕ್ವೆನ್ಸಿಂಗ್ ಟೆಸ್ಟ್ ಕಿಟ್ ಎಂದರೆ ಅಂಬಾನಿ ಕಂಪನಿಯದ್ದೇ ಅತ್ಯಂತ ಅಗ್ಗದ್ದಾಗುತ್ತದೆ. ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಯ ಜಿನೋಮ್ ಸೀಕ್ವೆನ್ಸಿಂಗ್ ಕಿಟ್ ಎನಿಸಲಿದೆ.
ಏನಿದು ಜಿನೋಮ್ ಸೀಕ್ವೆನ್ಸಿಂಗ್?
ಇದು ನಮ್ಮ ದೇಹದ ಆರೋಗ್ಯ ಪರಿಸ್ಥಿತಿಗೆ ಕನ್ನಡಿ ಹಿಡಿಯುವ ಪರೀಕ್ಷೆ. ಯಾವ್ಯಾವ ರೋಗಗಳಿಗೆ ನಮ್ಮ ದೇಹ ಎಡೆಯಾಗುವ ಸಾಧ್ಯತೆ ಎಷ್ಟಿದೆ ಎಂಬುದನ್ನು ಇದು ತಪಾಸಿಸುತ್ತದೆ. ನಮ್ಮ ಜೀನ್ಗಳ ಮ್ಯಾಪಿಂಗ್ ಮಾಡುವ ತಂತ್ರಜ್ಞಾನವನ್ನು ಇಲ್ಲಿ ಬಳಸಲಾಗುತ್ತದೆ. ವೈಜ್ಞಾನಿಕವಾಗಿ ನಮ್ಮ ಆರೋಗ್ಯದ ಭವಿಷ್ಯ ಏನೆಂಬುದನ್ನು ಈ ಕಿಟ್ ಹೇಳುತ್ತದೆ. ಒಂದು ಎಂಆರ್ಐ ಸ್ಕ್ಯಾನ್ ಮಾಡಿಸುವಷ್ಟೇ ದುಡ್ಡಿನಲ್ಲಿ ನಾವು ಇಡೀ ಆರೋಗ್ಯ ಜಾತಕ ಪಡೆಯಬಹುದು.
ಇದನ್ನೂ ಓದಿ: Employee Insurance; ಹಲವು ಅನುಕೂಲತೆಗಳು, ನೆಮ್ಮದಿಯ ಜೀವನ ಕೊಡುವ ಉದ್ಯೋಗಿ ವಿಮೆ
ಒಂದು ಅಂದಾಜು ಪ್ರಕಾರ ಜೆನಿಟಿಕ್ ಟೆಸ್ಟಿಂಗ್ ಮಾರುಕಟ್ಟೆ ಬಹಳ ವಿಶಾಲವಾಗಿ ಬೆಳೆಯುತ್ತಿದೆ. 2019ರಲ್ಲಿ ಜಾಗತಿಕ ಜೆನಿಟಿಕ್ ಟೆಸ್ಟಿಂಗ್ ಮಾರುಕಟ್ಟೆ 12.7 ಬಿಲಿಯನ್ ಡಾಲರ್ (ಸುಮಾರು 1.05 ಲಕ್ಷ ಕೋಟಿ ರೂ) ಮೌಲ್ಯದ್ದಾಗಿತ್ತು. 2027ರಷ್ಟರಲ್ಲಿ ಇದು 21.3 ಬಿಲಿಯನ್ ಡಾಲರ್ (1.76 ಲಕ್ಷ ಕೋಟಿ ರೂ) ಮೊತ್ತಕ್ಕೆ ಬೆಳೆಯುವ ನಿರೀಕ್ಷೆ ಇದೆ.
ಈ ಕ್ಷೇತ್ರ ಬೆಳೆದಂತೆ ಅದರ ಪರಿಣಾಮವಾಗಿ ಫಾರ್ಮಾ ಕ್ಷೇತ್ರವೂ ಬೆಳೆಯುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಅಂಬಾನಿ ಇಟ್ಟಿರುವ ಹೆಜ್ಜೆಯತ್ತ ಬಹಳಷ್ಟು ಮಂದಿಯ ಕುತೂಹಲದ ಕಣ್ಣುಗಳು ನೆಟ್ಟಿವೆ.