ನವದೆಹಲಿ, ಜನವರಿ 10: ಭಾರತದಲ್ಲಿ ಷೇರು ಮಾರುಕಟ್ಟೆ ಜನರಿಗೆ ಆಕರ್ಷಕ ಹೂಡಿಕೆ ಮಾರ್ಗವಾಗಿ ಕಾಣತೊಡಗಿದೆ. ಅದಕ್ಕೆ ಇಂಬುಕೊಡುವಂತೆ ಹೆಚ್ಚೆಚ್ಚು ಜನರು ಡೀಮ್ಯಾಟ್ ಅಕೌಂಟ್ಗಳನ್ನು ತೆರೆಯುತ್ತಿದ್ದಾರೆ. 2024-25ರ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ, ಅಂದರೆ ಏಪ್ರಿಲ್ನಿಂದ ಡಿಸೆಂಬರ್ವರೆಗಿನ 9 ತಿಂಗಳಲ್ಲಿ 4.6 ಕೋಟಿಯಷ್ಟು ಡೀಮ್ಯಾಟ್ ಅಕೌಂಟ್ಗಳು ತೆರೆಯಲ್ಪಟ್ಟಿವೆ. ಅಂದರೆ ಪ್ರತೀ ತಿಂಗಳು ಸರಾಸರಿಯಾಗಿ 38 ಲಕ್ಷ ಅಕೌಂಟ್ಗಳನ್ನು ತೆರೆಯಲಾಗುತ್ತಿದೆ. ಇದರೊಂದಿಗೆ ಒಟ್ಟಾರೆ ಡೀಮ್ಯಾಟ್ ಅಕೌಂಟ್ಗಳ ಸಂಖ್ಯೆ 18.5 ಕೋಟಿಗೆ ಏರಿದೆ.
ಕೋವಿಡ್ ಸಂದರ್ಭದಲ್ಲಿ ಮಾರುಕಟ್ಟೆ ಆಕರ್ಷಣೆ ಹೆಚ್ಚಾಗತೊಡಗಿದೆ. ಸುಲಭವಾಗಿ ಅಕೌಂಟ್ ತೆರೆಯುವುದು, ಸ್ಮಾರ್ಟ್ಫೋನ್ಗಳಿಂದ ಷೇರು ವ್ಯವಹಾರ ಸುಲಭಗೊಂಡಿದ್ದು, ಮಾರುಕಟ್ಟೆಯಿಂದ ರಿಟರ್ನ್ ಹೆಚ್ಚಾಗಿದ್ದು ಇವೆಲ್ಲಾ ಅಂಶಗಳು ಜನರನ್ನು ಡೀಮ್ಯಾಟ್ ಅಕೌಂಟ್ ತೆರೆಯಲು ಪ್ರೇರೇಪಿಸಿರಬಹುದು. 2019ರಲ್ಲಿ 3.93 ಕೋಟಿಯಷ್ಟು ಡೀಮ್ಯಾಟ್ ಅಕೌಂಟ್ಗಳಿದ್ದುವು. ಐದು ವರ್ಷದಲ್ಲಿ ಅದು ನಾಲ್ಕು ಪಟ್ಟು ಹೆಚ್ಚಾಗಿರುವುದು ಗಮನಾರ್ಹ.
ಇದನ್ನೂ ಓದಿ: ಕೇಂದ್ರದಿಂದ ರಾಜ್ಯಗಳಿಗೆ ಜನವರಿಯಲ್ಲಿ 1,73,030 ಕೋಟಿ ರೂ ಜಿಎಸ್ಟಿ ಹಣ ಹಂಚಿಕೆ; ಕರ್ನಾಟಕಕ್ಕೆ ಸಿಕ್ಕಿದ್ದು 6,310 ಕೋಟಿ ರೂ
ಡೀಮ್ಯಾಟ್ ಅಕೌಂಟ್ಗಳಂತೆ ಮ್ಯೂಚುವಲ್ ಫಂಡ್ ಫೋಲಿಯೋಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಿದೆ. ಭಾರತೀಯ ಮ್ಯೂಚುವಲ್ ಫಂಡ್ ಸಂಸ್ಥೆಯಾದ ಎಎಂಎಫ್ಐ ನಿನ್ನೆ (ಜ. 9) ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಇಲ್ಲಿಯವರೆಗೆ (2024ರ ಡಿಸೆಂಬರ್) ಮ್ಯೂಚುವಲ್ ಫಂಡ್ ಫೋಲಿಯೋಗಳ ಸಂಖ್ಯೆ 22,50,03,545 ಇದೆ. ಅಂದರೆ 22.50 ಕೋಟಿ ಮ್ಯೂಚುವಲ್ ಫಂಡ್ ಫೋಲಿಯೋಗಳ ರಚನೆಯಾಗಿದೆ. 2024ರ ಮಾರ್ಚ್ ತಿಂಗಳಲ್ಲಿ 17.79 ಕೋಟಿ ಫೋಲಿಯೊಗಳಿದ್ದುವು. 2021ರ ಮೇ ತಿಂಗಳಲ್ಲಿ ಮ್ಯೂಚುವಲ್ ಫಂಡ್ ಫೋಲಿಯೋಗಳ ಸಂಖ್ಯೆ 10 ಕೋಟಿಯ ಮೈಲಿಗಲ್ಲು ದಾಟಿತ್ತು.
ನಿಯಮಿತವಾಗಿ ಹೂಡಿಕೆ ಮಾಡಲು ಅವಕಾಶ ಕೊಡುವ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ಅಥವಾ ಎಸ್ಐಪಿಯ ಜನಪ್ರಿಯತೆ ಹೆಚ್ಚುವುದು ನಿಂತಿಲ್ಲ. 2024ರ ಡಿಸೆಂಬರ್ ತಿಂಗಳಲ್ಲಿ 54 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಹೊಸ ಎಸ್ಐಪಿಗಳು ಆರಂಭವಾಗಿವೆ. ಆ ತಿಂಗಳಲ್ಲಿ ಒಟ್ಟಾರೆ ಎಸ್ಐಪಿ ಮೂಲಕ ಹರಿದುಬಂದ ಹೂಡಿಕೆ ಬರೋಬ್ಬರಿ 26,459.49 ಕೋಟಿ ರೂ. ನವೆಂಬರ್ ತಿಂಗಳಲ್ಲಿ 25,319.66 ಕೋಟಿ ರೂನಷ್ಟು ಹಣವು ಎಸ್ಐಪಿ ಮೂಲಕ ಹೂಡಿಕೆ ಆಗಿತ್ತು.
ಇದನ್ನೂ ಓದಿ: ಹೊಗೆಸೊಪ್ಪು ಕೃಷಿ ಲಾಭದಾಯಕವಾ? ತಂಬಾಕು ಬೆಳೆಯಲು ಅನುಮತಿ ಪಡೆಯುವುದು ಹೇಗೆ? ಇಲ್ಲಿದೆ ವಿವರ
ಇದರೊಂದಿಗೆ ಒಟ್ಟಾರೆ ಎಸ್ಐಪಿ ಅಕೌಂಟ್ಗಳ ಸಂಖ್ಯೆ 10,32,02,796 (10.32 ಕೋಟಿ) ಆಗಿದೆ. ಹಿಂದಿನ ತಿಂಗಳಲ್ಲಿ (2024ರ ನವೆಂಬರ್) 10.22 ಕೋಟಿ ಎಸ್ಐಪಿಗಳಿದ್ದುವು. ಮಾರುಕಟ್ಟೆ ಕುಸಿತ ಕಾಣುತ್ತಿರುವುದರಿಂದ ಎಸ್ಐಪಿ ಮೂಲಕ ಹೂಡಿಕೆ ಹೆಚ್ಚಾಗಿರುವ ಸಾಧ್ಯತೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ