ಮುಂಬೈ, ಡಿಸೆಂಬರ್ 10: ಮ್ಯೂಚುವಲ್ ಫಂಡ್ ಎಸ್ಐಪಿಯಲ್ಲಿ (Mutual Fund SIP) ಆಗಿರುವ ಹೂಡಿಕೆ ನವೆಂಬರ್ನಲ್ಲಿ ದಾಖಲೆ ಮಟ್ಟದಲ್ಲಿ ಇದ್ದ ಸುದ್ದಿ ಮೊನ್ನೆ ಬಂದಿತ್ತು. ಮ್ಯುಚುವಲ್ ಫಂಡ್ನಲ್ಲಿ ಎಸ್ಐಪಿ ಯೋಜನೆ ಪಡೆಯುವುದಾದರೆ ಕನಿಷ್ಠ ಹೂಡಿಕೆ ತಿಂಗಳಿಗೆ 500 ರೂ ಇದೆ. ಇದನ್ನು 250 ರೂಗೆ ಇಳಿಸಲು ಸೆಬಿ ಮುಖ್ಯಸ್ಥೆ ಮಾಧಬಿ ಪುರಿ ಬುಚ್ (Madhabi puri Buch) ಯೋಜಿಸಿದ್ದಾರೆ. ಅವರ ಪ್ರಕಾರ ಮ್ಯೂಚುವಲ್ ಫಂಡ್ ಹೂಡಿಕೆಗೆ ಇದು ಗೇಮ್ ಚೇಂಜರ್ ಆಗಬಹುದು.
‘ಮ್ಯುಚುವಲ್ ಫಂಡ್ ಉದ್ಯಮದೊಂದಿಗೆ ನಾವು ಸಮಾಲೋಚಿಸುತ್ತಿದ್ದೇವೆ. ತಿಂಗಳಿಗೆ 250 ರೂ ಎಸ್ಐಪಿ ಸಾಧ್ಯವಾಗಿಸಲು ಏನು ಮಾಡಬೇಕು ಎಂಬುದನ್ನು ಪರಾಮರ್ಶಿಸುತ್ತಿದ್ದೇವೆ,’ ಎಂದು ಹೇಳಿದ ಮಾಧಬಿ ಪುರಿ, ಹಿಂದೂಸ್ತಾನ್ ಲಿವರ್ನ ಶಾಂಪೂ ಪ್ಯಾಕೆಟ್ಗಳ ಉದಾಹರಣೆ ಕೊಟ್ಟಿದ್ದಾರೆ.
‘ಮ್ಯೂಚುವಲ್ ಫಂಡ್ ಎಸ್ಐಪಿಯಲ್ಲಿ ಕನಿಷ್ಠ ಹೂಡಿಕೆಯನ್ನು 250 ರೂಗೆ ಇಳಿಸುವುದು ಎಂದರೆ ಹಿಂದೂಸ್ತಾನ್ ಲಿವರ್ ಸಂಸ್ಥೆ ಈ ಹಿಂದೆ ಶಾಂಪೂ ಸಾಚೆ ಬಿಡುಗಡೆ ಮಾಡಿದಂತೆ. ನೀವು ಮಾರುಕಟ್ಟೆಯಲ್ಲಿ ಸ್ಫೋಟ ನಡೆಸಿಬಿಡುತ್ತೀರಿ. ಈ ರೀತಿ ಮಾಡುವುದರಿಂದ ಹಣಕಾಸು ಒಳಗೊಳ್ಳುವಿಕೆಯ ಗುರಿ ತಲುಪಲು ಸಾಧ್ಯವಾಗುವುದಷ್ಟೇ ಅಲ್ಲದೇ ಭಾರತೀಯ ಬಂಡವಾಳ ಮಾರುಕಟ್ಟೆಗೂ ಸಹಾಯವಾಗುತ್ತದೆ’ ಎಂದು ಸೆಬಿ ಮುಖ್ಯಸ್ಥೆ ತಿಳಿಸಿದ್ದಾರೆ.
ಎಸ್ಐಪಿ ಎಂದರೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್. ಮ್ಯುಚುವಲ್ ಫಂಡ್ನಲ್ಲಿ ಲಂಪ್ಸಮ್ ಆಗಿ ಹಣ ಹಾಕಲು ಸಾಧ್ಯವಾಗದವರು ಎಸ್ಐಪಿ ಮೂಲಕ ನಿಯಮಿತವಾಗಿ ನಿರ್ದಿಷ್ಟ ಮೊತ್ತದ ಹಣವನ್ನು ಹೂಡಿಕೆ ಮಾಡಬಹುದು. ಬ್ಯಾಂಕ್ನಲ್ಲಿ ಆರ್ಡಿ ಯೋಜನೆ ಇದ್ದರೆ ಮ್ಯುಚುವಲ್ ಫಂಡ್ನಲ್ಲಿಎಸ್ಐಪಿ ಇದೆ.
ಇದನ್ನೂ ಓದಿ: Gold Income: ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ಗೆ ನಿಮ್ಮ ಒಡವೆ ಬಳಸುವ ಮುನ್ನ ಈ ಸಂಗತಿಗಳನ್ನು ತಿಳಿದಿರಿ
ರೆಗ್ಯುಲರ್ ಮ್ಯುಚುವಲ್ ಫಂಡ್ನ ಎಸ್ಐಪಿಯಲ್ಲಿ ಕನಿಷ್ಠ ಹೂಡಿಕೆ ತಿಂಗಳಿಗೆ 500 ರೂ ಇದೆ. ಇದನ್ನು ಅರ್ಧದಷ್ಟು ಕಡಿಮೆ ಮಾಡಿದರೆ ಸಣ್ಣ ಆದಾಯದ ಜನರನ್ನೂ ಎಸ್ಐಪಿಗೆ ಒಳಗೊಳ್ಳಬಹುದು ಎಂಬುದು ಸೆಬಿ ಮುಖ್ಯಸ್ಥೆ ಚಿಂತನೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ