ವಿಶ್ವದ ಜನಪ್ರಿಯ ಕಂಟೆಂಟ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ ಸತತ ಎರಡನೇ ತ್ರೈಮಾಸಿಕದಲ್ಲಿ ಸುಮಾರು 1 ಮಿಲಿಯನ್ ಚಂದಾದಾರನ್ನು ಕಳೆದುಕೊಂಡಿದೆ. ಅಂದರೆ ಸುಮಾರು 10 ಲಕ್ಷ ಬಳಕೆದಾರರು ನೆಟ್ ಫ್ಲಿಕ್ಸ್ ಅನ್ನು ತೊರೆದಿದ್ದಾರೆ. ಇದಾಗ್ಯೂ ನೆಟ್‌ಫ್ಲಿಕ್ಸ್ ಇನ್ನೂ 221 ಮಿಲಿಯನ್ ಚಂದಾದಾರರನ್ನು ಹೊಂದಿದ್ದು, ಆದರೆ ದಿಢೀರಣೆ ಸಬ್ಸ್ ಕ್ರೈಬ್ ಕಳೆದುಕೊಳ್ಳುವಿಕೆಯ ಕಂಪೆನಿಯ ಚಿಂತೆಯನ್ನು ಹೆಚ್ಚಿಸಿದೆ. ಮುಂಬರುವ ದಿನಗಳಲ್ಲಿ ಆದಾಯ, ಸದಸ್ಯತ್ವ ಬೆಳವಣಿಗೆ ಎರಡನ್ನೂ ಹೆಚ್ಚಿಸುವ ಸವಾಲು ನಮ್ಮ ಮುಂದಿದೆ ಎಂದು ನೆಟ್ ಫ್ಲಿಕ್ಸ್ ಕಂಪನಿ ತನ್ನ ಆದಾಯ ವರದಿಯಲ್ಲಿ ಹೇಳಿದೆ.
2021 ನೇ ವರ್ಷಕ್ಕೆ ಹೋಲಿಸಿದರೆ, ನೆಟ್‌ಫ್ಲಿಕ್ಸ್ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ 2 ಲಕ್ಷ ಚಂದಾದಾರರ ಕಳೆದುಕೊಂಡಿತ್ತು. ಇದರಿಂದಾಗಿ ಕಂಪೆನಿಯ ಷೇರುಗಳು ಸಹ ಕಡಿಮೆಯಾಗಿದೆ. ಹೀಗಾಗಿಯೇ ದೈತ್ಯ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ವ್ಯವಹಾರದಲ್ಲಿ ತನ್ನ ಹೂಡಿಕೆಗಳಿಗೆ ನಿಧಿಯನ್ನು ನೀಡಲು ಮತ್ತು ಮಾರುಕಟ್ಟೆ ಪ್ರಾಬಲ್ಯವನ್ನು ನಿರ್ವಹಿಸಲು ಜಾಹೀರಾತುಗಳ ಮೊರೆ ಹೋಗುವುದಾಗಿ ಘೋಷಿಸಿದೆ.
ಈಗಾಗಲೇ ಒಟಿಟಿ ಫ್ಲಾಟ್ ಫಾರ್ಮ್ ನಲ್ಲಿ ದೈತ್ಯ ಕಂಪೆನಿ ಎನಿಸಿಕೊಂಡಿರುವ ನೆಟ್ ಫ್ಲಿಕ್ಸ್ ಅಮೆಜಾನ್ ಪ್ರೈಮ್, ಝೀ5, ಡಿಸ್ನಿ ಹಾಟ್ ಸ್ಟಾರ್ ಕಡೆಯಿಂದ ತೀವ್ರ ಪೈಪೋಟಿಯನ್ನು ಎದುರಿಸುತ್ತಿದೆ. ಪ್ರತಿಸ್ಫರ್ಧಿಗಳು ಹೆಚ್ಚಾಗುತ್ತಿದ್ದಂತೆ ನೆಟ್ ಫ್ಲಿಕ್ಸ್ ತನ್ನ ಚಂದಾದಾರರನ್ನು ಕಳೆದುಕೊಳ್ಳುತ್ತಿದೆ ಎಂದು ವಿಶ್ಲೇಷಿಸಲಾಗಿದೆ.
ಕನಿಟ್ಟಿನ ನಿಯಮ:
ಪಾಸ್‌ವರ್ಡ್ ಮತ್ತು ಲಾಗಿನ್ ಹಂಚಿಕೆಗೆ ಸಂಬಂಧಿಸಿದಂತೆ ಕಂಪನಿಯು ಹೆಚ್ಚು ಕಟ್ಟುನಿಟ್ಟಾಗಿರುತ್ತದೆ ಎಂದು ನೆಟ್‌ಫ್ಲಿಕ್ಸ್ ಸ್ಪಷ್ಟಪಡಿಸಿದೆ. “ನಮ್ಮ ಗ್ರಾಹಕರು ನೆಟ್‌ಫ್ಲಿಕ್ಸ್ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳನ್ನು ತುಂಬಾ ಇಷ್ಟಪಡುತ್ತಾರೆ. ಅದನ್ನು ಮತ್ತಷ್ಟು ಜನರಿಗೆ ಹಂಚಿಕೊಳ್ಳಲು ಬಯಸುತ್ತಾರೆ ಎಂಬುದು ನಮಗೆ ಸಂತೋಷಕರವಾಗಿದೆ.” ಆದರೆ ಜನರ ನಡುವೆ ಖಾತೆ ಹಂಚಿಕೆಯಿಂದಾಗಿ, ಹೂಡಿಕೆ ಮಾಡುವ ಮತ್ತು ಸೇವೆಯನ್ನು ಸುಧಾರಿಸುವ ನಮ್ಮ ಸಾಮರ್ಥ್ಯ ಕುಸಿಯುತ್ತದೆ. ಹೀಗಾಗಿ ಪಾಸ್ ವರ್ಡ್ ಮತ್ತು ಲಾಗಿನ್ ಹಂಚಿಕೆಯನ್ನು ಕಟ್ಟುನಿಟ್ಟಿನ ನಿಯಮದೊಂದಿಗೆ ಮುಂದುವರೆಸುವುದಾಗಿ ನೆಟ್‌ಫ್ಲಿಕ್ಸ್ ಪ್ರೊಡಕ್ಟ್ ಇನ್ನೋವೇಶನ್‌ನ ನಿರ್ದೇಶಕ ಚೆಂಗಿ ಲಾಂಗ್ ಹೇಳಿದ್ದಾರೆ.
ಆಡ್ ಹೋಮ್‌ನಂತಹ ಫೀಚರ್ಗಳನ್ನು ಮಾರ್ಚ್‌ನಲ್ಲಿ ಚಿಲಿ, ಕೋಸ್ಟರಿಕಾ ಮತ್ತು ಪೆರುವಿನಲ್ಲಿ ನೆಟ್‌ಫ್ಲಿಕ್ಸ್ ಪರೀಕ್ಷಿಸಲಾಗಿದೆ. ಇನ್ನು ಅರ್ಜೆಂಟೀನಾ, ಡೊಮಿನಿಕನ್ ರಿಪಬ್ಲಿಕ್, ಹೊಂಡುರಾಸ್, ಎಲ್ ಸಾಲ್ವಡಾರ್ ಮತ್ತು ಗ್ವಾಟೆಮಾಲಾಗೆ ವಿಸ್ತರಿಸಲಾಗಿದೆ. ಈ ಮೂಲಕ ತನ್ನದೇ ಆದ ಹೊಸ ಗ್ರಾಹಕರನ್ನು ಆಕರ್ಷಿಸಲು, ಜಾಹೀರಾತುಗಳನ್ನು ಹೊಂದಿರುವ ಕೈಗೆಟುಕುವ ಚಂದಾದಾರಿಕೆ ಯೋಜನೆಗಳನ್ನು ಹೊರತರಲು ನೆಟ್‌ಫ್ಲಿಕ್ಸ್ ಮೈಕ್ರೋಸಾಫ್ಟ್‌ನೊಂದಿಗೆ ಕೆಲಸ ಮಾಡುತ್ತಿದೆ.
ಈ ಮೂಲಕ ಮುಂಬರುವ ದಿನಗಳಲ್ಲಿ ನೆಟ್‌ಫ್ಲಿಕ್ಸ್ ಸ್ಟ್ರೀಮಿಂಗ್ ವೇಳೆ ಜಾಹೀರಾತನ್ನು ಪ್ರದರ್ಶಿಸಲಿದೆ. ಇಲ್ಲಿ ವಿಶೇಷ ಎಂದರೆ ನೆಟ್‌ಫ್ಲಿಕ್ಸ್ ಜಾಹೀರಾತು ಪ್ರದರ್ಶಿಸುವ ಪ್ಯಾಕ್ಗಳು ಕಡಿಮೆ ಮೊತ್ತದ್ದಾಗಿರಲಿದೆ. ಅಂದರೆ ನೆಟ್‌ಫ್ಲಿಕ್ಸ್ ಆ್ಯಡ್ ಸಬ್ಸ್ಕ್ರೈಬ್ ಪ್ಲ್ಯಾನ್ಗಳನ್ನು ಕಡಿಮೆ ಮೊತ್ತಕ್ಕೆ ಸಿಗಲಿದ್ದು, ಆ್ಯಡ್ ಓನ್ ಪ್ಯಾಕ್ ಆಫರ್ ಮೂಲಕ ಹೆಚ್ಚಿನ ಗ್ರಾಹಕರನ್ನು ಆರ್ಕಷಿಸಲು ಕಂಪೆನಿಯು ಪ್ಲ್ಯಾನ್ ರೂಪಿಸಿದೆ.