New Rent Agreement Rules 2025: ಎರಡೇ ತಿಂಗಳು ಅಡ್ವಾನ್ಸ್; ಮುಂಚಿತ ನೋಟೀಸ್; ಗಮನಿಸಿ, ಹೊಸ ಬಾಡಿಗೆ ನಿಯಮಗಳು
New home rental rules in Bengaluru:ಬೆಂಗಳೂರು ಮುಂತಾದ ಕಡೆ ಮನೆ ಮಾಲೀಕರು ಬಾಡಿಗೆದಾರರಿಂದ 10 ತಿಂಗಳ ಅಡ್ವಾನ್ಸ್ ಪಡೆಯುವ ಕ್ರಮಕ್ಕೆ ಅವಕಾಶ ಇನ್ಮುಂದೆ ಇಲ್ಲ. ಹೊಸ ಗೃಹ ಬಾಡಿಗೆ ನಿಯಮಗಳು ಚಾಲನೆಗೆ ಬಂದಿದ್ದು, ಬಾಡಿಗೆದಾರರು ಕೇವಲ 2 ತಿಂಗಳು ಅಡ್ವಾನ್ಸ್ ಕೊಟ್ಟರೆ ಸಾಕು. ಮನೆ ಬಾಡಿಗೆಯನ್ನು ವರ್ಷಕ್ಕೆ ಒಮ್ಮೆ ಮಾತ್ರ ಏರಿಸಬೇಕು. ಏರಿಸುವ ಮುನ್ನ 3 ತಿಂಗಳು ಮುಂಚಿತವಾಗಿ ತಿಳಿಸಬೇಕು ಎನ್ನುವ ನಿಯಮ ಇದೆ.

ಬೆಂಗಳೂರು, ಡಿಸೆಂಬರ್ 3: ಬಾಡಿಗೆಗೆ ಮನೆ ಕೊಡುವಾಗ ಸೇಫ್ಟಿ ಡೆಪಾಸಿಟ್ (Home rental advance) ಆಗಿ 10 ತಿಂಗಳ ಬಾಡಿಗೆ ಮೊತ್ತವನ್ನು ಅಡ್ವಾನ್ಸ್ ಆಗಿ ಪಡೆಯುವುದು ಬಹುತೇಕ ವಾಡಿಕೆಯಾಗಿ ಹೋಗಿದೆ. ಮಾಲೀಕರ ಇಚ್ಛೆಗೆ ತಕ್ಕಂತೆ ದಿಢೀರನೇ ಬಾಡಿಗೆ ಹೆಚ್ಚಿಸುವುದು ಇತ್ಯಾದಿ ಆಗುತ್ತಲೇ ಇರುತ್ತದೆ. ಅಡ್ವಾನ್ಸ್ ಅತಿಯಾಯಿತು, ಮಾಲೀಕರ ಕಿರಿಕಿರಿ ಹೆಚ್ಚಾಯಿತು ಎಂದು ಬಹಳಷ್ಟು ಬಾಡಿಗೆದಾರರು ಅಲವತ್ತುಕೊಳ್ಳುವುದುಂಟು. ಇದೀಗ ಹೊಸ ಗೃಹ ಬಾಡಿಗೆ ನಿಯಮಗಳು (New home rent rules) ಚಾಲನೆಗೆ ಬಂದಿವೆ. ಬಾಡಿಗೆ ಕರಾರು ಹೇಗಿರಬೇಕು, ಮಾಲೀಕರ ಕರ್ತವ್ಯವೇನು, ಬಾಡಿಗೆದಾರರ ಜವಾಬ್ದಾರಿ ಏನು ಎಂಬುದನ್ನು ಈ ಹೋಮ್ ರೆಂಟ್ ರೂಲ್ಗಳು ನಿರ್ದಿಷ್ಟಪಡಿಸುತ್ತವೆ.
ಸೆಕ್ಯೂರಿಟಿ ಡೆಪಾಸಿಟ್ಗಳು ಎರಡು ತಿಂಗಳ ಬಾಡಿಗೆ ಮೊತ್ತಕ್ಕೆ ಸೀಮಿತವಾಗಿರಲಿ
ಬಾಡಿಗೆಗೆ ಸೆಕ್ಯೂರಿಟಿ ಡೆಪಾಸಿಟ್ ಆಗಿ 10 ತಿಂಗಳ ಬಾಡಿಗೆ ಹಣವನ್ನು ಅಡ್ವಾನ್ಸ್ ಆಗಿ ಪಡೆಯುವಂತಿಲ್ಲ. ಎರಡು ತಿಂಗಳ ಬಾಡಿಗೆಯ ಹಣವನ್ನು ಮಾತ್ರ ಮುಂಗಡವಾಗಿ ಪಡೆಯಬಹುದು ಎಂದು ಹೊಸ ನಿಯಮಗಳು ಹೇಳುತ್ತವೆ.
ಇದನ್ನೂ ಓದಿ: ಸಣ್ಣ ಕಂಪನಿ ಎನಿಸಿಕೊಳ್ಳಲು ಟರ್ನೋವರ್ ಮಿತಿ 100 ಕೋಟಿ ರೂಗೆ ಹೆಚ್ಚಳ; ಉದ್ದಿಮೆಗಳಿಗೆ ಏನು ಉಪಯೋಗ?
ಎಲ್ಲಾ ಬಾಡಿಗೆ ಕರಾರುಗಳು ನೊಂದಣಿಗೊಂಡಿರಬೇಕು
ಬಾಡಿಗೆಗೆ ಮನೆ ಕೊಟ್ಟಾಗ ಕರಾರು ಮಾಡಿಕೊಳ್ಳಬೇಕು. ಈ ರೆಂಟಲ್ ಅಗ್ರೀಮೆಂಟ್ ಅನ್ನು ಅಧಿಕೃತವಾಗಿ ನೊಂದಾಯಿಸಬೇಕು. ನೊಂದಣಿ ಕಚೇರಿಯಲ್ಲಿ ಬೇಕಾದರೆ ಮಾಡಬಹದು, ಆನ್ಲೈನ್ನಲ್ಲೇ ಮಾಡಬಹುದು. ಅಗ್ರೀಮೆಂಟ್ ಅನ್ನು ರಿಜಿಸ್ಟರ್ ಮಾಡದಿದ್ದರೆ 5,000 ರೂ ದಂಡ ತೆರಬೇಕಾಗುತ್ತದೆ.
ರೆಂಟಲ್ ಅಗ್ರೀಮೆಂಟ್ನಲ್ಲಿ ಏನಿರಬೇಕು, ಏನಿರಬಾರದು ಎಂಬುದನ್ನು ಸರ್ಕಾರವೇ ತಿಳಿಸಿದೆ. ಒಂದು ಸ್ಟ್ಯಾಂಡರ್ಡ್ ಟೆಂಪ್ಲೇಟ್ ಕೊಟ್ಟಿದೆ. ಅದರ ಪ್ರಕಾರ ಅಗ್ರೀಮೆಂಟ್ ಇರಬೇಕು. ಹೊಸದನ್ನು ಸೇರಿಸುವುದಾಗಲೀ, ಅಲ್ಲಿರುವುದನ್ನು ತೆಗೆಯುವುದಾಗಲೀ ಆಗಬಾರದು.
ಬಾಡಿಗೆ ದರ ಹೆಚ್ಚಳಕ್ಕೆ ಮುಂಚಿತವಾಗಿಯೇ ನೋಟೀಸ್
ಮಾಲೀಕರು ಬಾಡಿಗೆಯ ಹಣವನ್ನು ದಿಢೀರನೇ ಹೆಚ್ಚಿಸುವಂತಿಲ್ಲ. ಮುಂದಿನ ತಿಂಗಳಿಂದಲೇ ಹೆಚ್ಚು ಬಾಡಿಗೆ ಕೊಡಿ ಎಂದು ಡಿಮ್ಯಾಂಡ್ ಮಾಡುವಂತಿಲ್ಲ. ಬಾಡಿಗೆ ಹೆಚ್ಚಿಸುವುದಿದ್ದರೆ 3 ತಿಂಗಳು ಮುಂಚಿತವಾಗಿ ತಿಳಿಸಬೇಕು ಎಂದು ಹೊಸ ರೆಂಟ್ ರೂಲ್ಸ್ ಹೇಳುತ್ತವೆ. ಒಂದು ವರ್ಷದಲ್ಲಿ ಒಮ್ಮೆ ಮಾತ್ರವೇ ಬಾಡಿಗೆ ಹೆಚ್ಚಿಸಲು ಅವಕಾಶ ಇರುತ್ತದೆ.
ಇದನ್ನೂ ಓದಿ: 22 ವರ್ಷದ ಕನ್ನಡಿಗ ಆದರ್ಶ್ ಹಿರೇಮಠ ವಿಶ್ವದ ಅತೀ ಕಿರಿಯ ವಯಸ್ಸಿನ ಸೆಲ್ಫ್ ಮೇಡ್ ಬಿಲಿಯನೇರ್
ಆನ್ಲೈನ್ನಲ್ಲಿ ಬಾಡಿಗೆ ಪಾವತಿಯಾಗಬೇಕು
ಮನೆ ಬಾಡಿಗೆ ತಿಂಗಳಿಗೆ 5,000 ರೂಗಿಂತ ಹೆಚ್ಚಿದ್ದರೆ ಅದನ್ನು ಕ್ಯಾಷ್ ಬದಲು ಯುಪಿಐ ಇತ್ಯಾದಿ ಆನ್ಲೈನ್ ಪ್ಲಾಟ್ಫಾರ್ಮ್ನಲ್ಲಿ ಪಾವತಿಸಬೇಕು. ತಿಂಗಳಿಗೆ ಮನೆ ಬಾಡಿಗೆ 50,000 ರೂಗಿಂತ ಹೆಚ್ಚಿದ್ದರೆ ಟಿಡಿಎಸ್ ಕಡಿತ ಆಗುತ್ತದೆ.
ಈ ವಿಡಿಯೋ ನೋಡಿ
ಬಾಡಿಗೆ ವ್ಯಾಜ್ಯಕ್ಕೆ ಈಗ ಬೇಗ ಪರಿಹಾರ
ಮನೆ ಬಾಡಿಗೆ ಸಂಬಂಧಿಸಿದ ವ್ಯಾಜ್ಯವನ್ನು ಶೀಘ್ರ ಇತ್ಯರ್ಥಪಡಿಸಲು ಸರ್ಕಾರ ವ್ಯವಸ್ಥೆ ಮಾಡಿದೆ. ಅದಕ್ಕೆಂದು ವಿಶೇಷ ರೆಂಟ್ ಕೋರ್ಟ್ಗಳು ಹಾಗೂ ಟ್ರಿಬ್ಯುನಲ್ಗಳನ್ನು ನಿಯೋಜಿಸಿದೆ. ಇಲ್ಲಿ ಬಾಡಿಗೆ ವ್ಯಾಜ್ಯ ಪ್ರಕರಣವನ್ನು 60 ದಿನದೊಳಗೆ ಇತ್ಯರ್ಥಪಡಿಸಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:50 pm, Wed, 3 December 25




