ನವದೆಹಲಿ, ಸೆಪ್ಟೆಂಬರ್ 17: ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ವಿಪರೀತ ಆಗುತ್ತಿದೆ ಎಂಬುದು ಹೆಚ್ಚಿನ ಜನರ ಆಕ್ಷೇಪ. ರಸ್ತೆ ನಿರ್ಮಾಣಕ್ಕೆ ಆಗಿರುವ ವೆಚ್ಚ ಮತ್ತು ರಸ್ತೆ ಪಾಲನೆಗೆ ಆಗುವ ವೆಚ್ಚಕ್ಕಿಂತ ಬಹಳ ಹೆಚ್ಚೇ ಟೋಲ್ ಕಲೆಕ್ಟ್ ಮಾಡಲಾಗುತ್ತದೆ ಎಂಬುದು ಬಹಳ ಜನರ ತಗಾದೆ. ಟೋಲ್ ಎಂಬುದು ಸರ್ಕಾರದಿಂದ ನಡೆಯುತ್ತಿರುವ ಹಗಲುದರೋಡೆ ಎಂದು ಬಹಳ ಜನರು ಟ್ರೋಲ್ ಮಾಡುವುದುಂಟು. ಹೆದ್ದಾರಿ ಟೋಲ್ ವಿಷಯದಲ್ಲಿ ಬಹಳ ಕಟ್ಟುನಿಟ್ಟಾಗಿರುವ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೆದುರು ಈ ಅತಿಯಾದ ಟೋಲ್ ಸಂಗ್ರಹದ ಬಗ್ಗೆ ಪ್ರಶ್ನೆ ಬಂದಿತು. ಇದಕ್ಕೆ ಅವರು ಕೆಲ ಉದಾಹರಣೆಗಳ ಮೂಲಕ ಉತ್ತರ ಕೊಟ್ಟಿದ್ದಾರೆ.
ನ್ಯೂಸ್18 ವಾಹಿನಿಯ ಚರ್ಚಾ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ನಿತಿನ್ ಗಡ್ಕರಿ, ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಯಾಕಿಷ್ಟು ಜಾಸ್ತಿ ಮಾಡಲಾಗುತ್ತಿದೆ ಎಂಬುದಕ್ಕೆ ಕಾರಣ ಬಿಚ್ಚಿಟ್ಟಿದ್ದಾರೆ. ದೆಹಲಿ ಮತ್ತು ಜೈಪುರ್ ಹೆದ್ದಾರಿಯ ನಿರ್ಮಾಣಕ್ಕೆ 1,900 ಕೋಟಿ ರೂ ವೆಚ್ಚವಾಗಿತ್ತು. ಅಲ್ಲಿರುವ ಟೋಲ್ಗಳಲ್ಲಿ 8,000 ಕೋಟಿ ರೂ ಸಂಗ್ರಹ ಆಗಿರುವುದು ಬೆಳಕಿಗೆ ಬಂದಿದೆ. ಇಷ್ಟು ಹೆಚ್ಚು ಟೋಲ್ ಸಂಗ್ರಹ ಯಾಕಾಗಿ ಮಾಡಲಾಗುತ್ತಿದೆ ಎನ್ನುವ ಪ್ರಶ್ನೆ ನಿತಿನ್ ಗಡ್ಕರಿಗೆ ಹಾಕಲಾಗಿತ್ತು. ಅವರ ಉತ್ತರ ಇದು:
ಇದನ್ನೂ ಓದಿ: ಭಾರತದಲ್ಲಿ ಮುಂದಿನ ಸಾವಿರ ವರ್ಷದ ಬೆಳವಣಿಗೆಗೆ ಈಗ ತಳಹದಿ ನಿರ್ಮಾಣ: ರೀ ಇನ್ವೆಸ್ಟ್ ಸಭೆಯಲ್ಲಿ ಪ್ರಧಾನಿ ಮೋದಿ
‘ಟೋಲ್ ತೆರಿಗೆಯನ್ನು ಒಂದೇ ದಿನ ಸಂಗ್ರಹ ಮಾಡಲಾಗುವುದಿಲ್ಲ. ಟೋಲ್ ಸಂಗ್ರಹಕ್ಕೆ ಮುಂಚೆ ಮತ್ತು ಆನಂತರ ಸರ್ಕಾರಕ್ಕೆ ಹಲವಾರು ವೆಚ್ಚಗಳು ಬೀಳುತ್ತವೆ. ಉದಾಹರಣೆಗೆ, ನೀವು ಒಂದು ಕಾರನ್ನು ಕ್ಯಾಷ್ನಲ್ಲಿ ಖರೀದಿಸಿದಾಗ ಎರಡೂವರೆ ಲಕ್ಷ ರೂ ಆಗುತ್ತದೆ ಎಂದಿಟ್ಟುಕೊಳ್ಳಿ. ಅದನ್ನೇ ನೀವು 10 ವರ್ಷದ ಸಾಲದಲ್ಲಿ ತೆಗೆದುಕೊಂಡಿದ್ದೇ ಆದಲ್ಲಿ ಅಂತಿಮ ವೆಚ್ಚ 5.5ರಿಂದ 6 ಲಕ್ಷ ರೂ ಆಗುತ್ತದೆ. ಪ್ರತೀ ತಿಂಗಳೂ ಬಡ್ಡಿ ಕಟ್ಟಬೇಕಾಗುತ್ತದೆ. ಬಹಳಷ್ಟು ಸಲ ಸಾಲ ತೆಗೆದುಕೊಂಡು ಕಾಮಗಾರಿ ನಡೆಸಲಾಗುತ್ತದೆ,’ ಎಂದು ನಿತಿನ್ ಗಡ್ಕರಿ ವಿವರಣೆ ನೀಡಿದ್ದಾರೆ.
ದೆಹಲಿ-ಜೈಪುರ್ ಹೆದ್ದಾರಿ ವಿಚಾರದ ಬಗ್ಗೆ ಮಾತನಾಡಿದ ಸಚಿವರು, ‘2009ರಲ್ಲಿ ಯುಪಿಎ ಸರ್ಕಾರ ಇದ್ದಾಗ ಆ ರಸ್ತೆ ನಿರ್ಮಾಣ ಯೋಜನೆ ಚಾಲನೆ ಪಡೆಯಿತು. 9 ಬ್ಯಾಂಕುಗಳು ಈ ಯೋಜನೆಯಲ್ಲಿ ಭಾಗಿಯಾಗಿದ್ದವು. ಸಾಕಷ್ಟು ಸಮಸ್ಯೆಗಳು ಎದುರಾದವು. ಗುತ್ತಿಗೆದಾರರು ಪರಾರಿಯಾದರು. ಬ್ಯಾಂಕುಗಳು ಕೋರ್ಟ್ಗಳಲ್ಲಿ ಕೇಸ್ ಹಾಕಿದವು. ಹೊಸ ಗುತ್ತಿಗೆದಾರರು ಬಂದರು. ನಾವು ಹೊಸ ಗುತ್ತಿಗೆದಾರರನ್ನು ವಾಪಸ್ ಕಳುಹಿಸಿದೆವು. ದೆಹಲಿ ಹೈಕೋರ್ಟ್ ಸ್ಟೇ ಕೊಟ್ಟಿತು. ಈ ರಸ್ತೆಗೆ ನಾವು ಹೊಸ ಡಿಪಿಆರ್ ರೂಪಿಸಿದೆವು. ರಸ್ತೆಯ ಎರಡೂ ಬದಿಗಳಲ್ಲಿ ಒತ್ತುವರಿಯಾಗಿದ್ದವು. ಷಟ್ಪಥದ ರಸ್ತೆ ನಿರ್ಮಿಸಬೇಕಾದರೆ ಒತ್ತುವರಿ ಜಾಗಗಳನ್ನು ತೆರವುಗೊಳಿಸುವುದು ಅನಿವಾರ್ಯವಾಗಿತ್ತು. ಈ ಬಾರಿ ಮಳೆಯಿಂದಾಗಿ ಹೆಚ್ಚು ಸಮಸ್ಯೆ ಸೃಷ್ಟಿಯಾಯಿತು’ ಎಂದು ನಿತಿನ್ ಗಡ್ಕರಿ ಒಂದು ಹೆದ್ದಾರಿ ನಿರ್ಮಾಣದಲ್ಲಿ ಆಗುವ ಸಂಭಾವ್ಯ ಅಡೆತಡೆಗಳ ಬಗ್ಗೆ ಉದಾಹರಣೆ ಸಮೇತ ವಿವರ ನೀಡಿದ್ದಾರೆ.
ಇದನ್ನೂ ಓದಿ: ರಾಧಿಕಾ ಗುಪ್ತಾ ಶ್ರೀಮಂತ ಉದ್ಯಮಿಯಾದರೂ ಲಕ್ಷುರಿ ಕಾರು ಒಲ್ಲೆ ಎನ್ನುವುದು ಯಾಕೆ? ಇಲ್ಲಿದೆ ಇಂಟರೆಸ್ಟಿಂಗ್ ಕಾರಣ
ನರೇಂದ್ರ ಮೋದಿ ನೇತೃತ್ವದ ಮೂರನೇ ಸರ್ಕಾರ ನೂರು ದಿನ ಪೂರ್ಣಗೊಳಿಸಿದ ಸಂದರ್ಭದಲ್ಲಿ ತಮ್ಮ ಇಲಾಖೆಯಿಂದ ಆಗಿರುವ ಸಾಧನೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಮೊದಲ 100 ದಿನದಲ್ಲಿ 51,000 ಕೋಟಿ ರೂ ಮೊತ್ತದ ಎಂಟು ರಸ್ತೆ ಯೋಜನೆಗಳಿಗೆ ಸಂಪುಟ ಅನುಮೋದನೆ ನೀಡಿದೆ. ಮಾರ್ಚ್ ತಿಂಗಳಷ್ಟರಲ್ಲಿ 3 ಲಕ್ಷ ಕೋಟಿ ರೂ ಮೌಲ್ಯದ ಯೋಜನೆಗಳನ್ನು ಪೂರ್ಣಗೊಳಿಸುವ ಗುರಿ ತಮ್ಮ ಇಲಾಖೆಯದ್ದು ಎಂದು ಗಡ್ಕರಿ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ