ಭಾರತದಲ್ಲಿ ಮುಂದಿನ ಸಾವಿರ ವರ್ಷದ ಬೆಳವಣಿಗೆಗೆ ಈಗ ತಳಹದಿ ನಿರ್ಮಾಣ: ರೀ ಇನ್ವೆಸ್ಟ್ ಸಭೆಯಲ್ಲಿ ಪ್ರಧಾನಿ ಮೋದಿ

PM Narendra Modi at re-invest meet: ಗುಜರಾತ್​ನ ಗಾಂಧಿನಗರ್​ನಲ್ಲಿ ಪ್ರಧಾನಿ ಮೋದಿ ಇಂದು ಸೆ. 16ರಂದು ನಾಲ್ಕನೇ ರೀ ಇನ್ವೆಸ್ಟ್ ಸಮಾವೇಶವನ್ನು ಉದ್ಘಾಟನೆ ಮಾಡಿದರು. ಭಾಷಣದಲ್ಲಿ ಅವರು 21ನೇ ಶತಮಾನದಲ್ಲಿ ಭಾರತವೇ ಪ್ರಧಾನ ಎನ್ನುವ ಅಂಶವನ್ನು ತಿಳಿಸಿದರು. ಮುಂದಿನ 1,000 ವರ್ಷಗಳ ಬೆಳವಣಿಗೆಗೆ ಭಾರತದಲ್ಲಿ ಈಗ ತಳಹದಿ ನಿರ್ಮಿಸಲಾಗುತ್ತಿದೆ. ಭಾರತ ಅಗ್ರಸ್ಥಾನ ಏರುವುದಷ್ಟೇ ಅಲ್ಲ ಆ ಸ್ಥಾನ ಕಾಯ್ದುಕೊಳ್ಳುವುದೂ ಗುರಿ ಎಂದು ಮೋದಿ ಹೇಳಿದರು.

ಭಾರತದಲ್ಲಿ ಮುಂದಿನ ಸಾವಿರ ವರ್ಷದ ಬೆಳವಣಿಗೆಗೆ ಈಗ ತಳಹದಿ ನಿರ್ಮಾಣ: ರೀ ಇನ್ವೆಸ್ಟ್ ಸಭೆಯಲ್ಲಿ ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 16, 2024 | 1:10 PM

ಗಾಂಧಿನಗರ್, ಸೆಪ್ಟೆಂಬರ್ 16: ಇಪ್ಪತ್ತೊಂದನೇ ಶತಮಾನದಲ್ಲಿ ಭಾರತವೇ ಪ್ರಧಾನ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಸೋಮವಾರ ಹೇಳಿದ್ದಾರೆ. ನಾಲ್ಕನೇ ಜಾಗತಿಕ ಮರುಬಳಕೆ ಇಂಧನ ಹೂಡಿಕೆದಾರರ ಸಭೆಯನ್ನು (ರೀ ಇನ್ವೆಸ್ಟ್) ಉದ್ಘಾಟಿಸಿದ ಬಳಿಕ ಭಾಷಣ ಮಾಡಿದ ಮೋದಿ, ಭಾರತ ಅಗ್ರಸ್ಥಾನಕ್ಕೆ ಏರುವುದಷ್ಟೇ ಅಲ್ಲ, ಆ ಸ್ಥಾನ ಉಳಿಸಿಕೊಳ್ಳುವುದು ಹೇಗೆ ಎನ್ನುವ ಅಂಶಗಳತ್ತ ಗಮನಿಸಲಾಗುತ್ತಿದೆ ಎಂದಿದ್ದಾರೆ. ಮುಂದಿನ ಸಹಸ್ರ ವರ್ಷಗಳಿಗೆ ಭಾರತದಲ್ಲಿ ಈಗ ತಳಹದಿ ನಿರ್ಮಿಸಲಾಗುತ್ತಿದೆ ಎಂದೂ ಪ್ರಧಾನಿಗಳು ವಿವರಿಸಿದ್ದಾರೆ.

‘ಭಾರತವನ್ನು ವಿಶ್ವದ ಅತಿದೊಡ್ಡ ಆರ್ಥಿಕತೆಯ ದೇಶವನ್ನಾಗಿ ಮಾಡಲು 140 ಕೋಟಿ ಜನರು ಪಣತೊಟ್ಟಿದ್ದಾರೆ. ನಮ್ಮ ಮೂರನೇ ಅವಧಿಯ ಮೊದಲ 100 ದಿನಗಳಲ್ಲಿ ನಾವು ಈ ದೇಶದ ಕ್ಷಿಪ್ರ ಬೆಳವಣಿಗೆಗೆ ಪ್ರತಿಯೊಂದು ವಲಯ ಮತ್ತು ಅಂಶಗಳಲ್ಲೂ ಪ್ರಯತ್ನ ಮಾಡಿದ್ದೇವೆ’ ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ.

ಇದನ್ನೂ ಓದಿ: ಇನ್ಷೂರೆನ್ಸ್ ಮೇಲೆ ಜಿಎಸ್​ಟಿ ಎಷ್ಟಿರಬೇಕು? 13 ಸಚಿವರ ಸಮಿತಿ ರಚನೆ; ಅ. 30ಕ್ಕೆ ವರದಿ ಸಲ್ಲಿಕೆ

ಮರುಬಳಕೆ ಇಂಧನದ ಬಗ್ಗೆ ಮಾತನಾಡಿದ ಪ್ರಧಾನಿ, ಅಯೋಧ್ಯೆ ಸೇರಿದಂತೆ 17 ಪ್ರದೇಶಗಳನ್ನು ಮಾದರಿ ಸೌರ ನಗರಗಳನ್ನಾಗಿ ಮಾಡಲು ತಮ್ಮ ಸರ್ಕಾರ ಪ್ರಯತ್ನಿಸುತ್ತಿರುವುದನ್ನು ಹೇಳಿದ್ದಾರೆ.

ಮನೆ ಮಾಳಿಗೆ ಮೇಲೆ ಸೌರ ಫಲಕ ಮೂಲಕ ಸೌರ ವಿದ್ಯುತ್ ನೀಡುವ ಪಿಎಂ ಸೂರ್ಯಘರ್ ಯೋಜನೆ ಯಶಸ್ವಿಯಾಗಿರುವ ಸಂಗತಿಯನ್ನು ಅವರು ಹಂಚಿಕೊಂಡಿದ್ದಾರೆ.

1.30 ಕೋಟಿ ಕುಟುಂಬಗಳು ಪಿಎಂ ಸೂರ್ಯಘರ್ ಯೋಜನೆಗೆ ನೊಂದಾಯಿಸಿಕೊಂಡಿವೆ. ಇವುಗಳ ಪೈಕಿ 3.75 ಲಕ್ಷ ಕುಟುಂಬಗಳಿಗೆ ಸೋಲಾರ್ ರೂಫ್​ಟಾಪ್ ಸ್ಥಾಪನೆ ಮಾಡಲಾಗಿದೆ. ಈ ಯೋಜನೆಯು ಕುಟುಂಬಕ್ಕೆ ವಿದ್ಯುತ್ ತಂದುಕೊಡುವುದಲ್ಲದೇ ಹೆಚ್ಚುವರಿ ವಿದ್ಯುತ್ ಅನ್ನು ಮಾರುವ ಮೂಲಕ ಹೆಚ್ಚುವರಿ ಆದಾಯವನ್ನೂ ಕುಟುಂಬ ಪಡೆಯಬಹುದು ಎಂದಿದ್ದಾರೆ ಮೋದಿ.

ಇದನ್ನೂ ಓದಿ: ಗಾಂಧಿನಗರದಲ್ಲಿ ಜಾಗತಿಕ ಮರುಬಳಕೆ ಇಂಧನ ಸಭೆ ಮತ್ತು ಎಕ್ಸ್​ಪೋ ಕಾರ್ಯಕ್ರಮ ಇಂದು ಆರಂಭ

ಮಿಷನ್ 500 ಗಿಗಾ ವ್ಯಾಟ್

ನಾಲ್ಕನೇ ಜಾಗತಿಕ ಇಂಧನ ಸಮಾವೇಶ ಗಾಂಧಿನಗರದಲ್ಲಿ ಮೂರು ದಿನಗಳ ಕಾಲ ನಡೆಯಲಿದೆ. 140ಕ್ಕೂ ಹೆಚ್ಚು ದೇಶಗಳಿಂದ 10,000ಕ್ಕೂ ಹೆಚ್ಚು ನಿಯೋಗಗಳು, ತಜ್ಞರು, ಉದ್ಯಮಿಗಳು ಮೊದಲಾದವರು ಈ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ದೆಹಲಿಯಿಂದ ಆಚೆ ಮೊದಲ ಬಾರಿಗೆ ನಡೆಯುತ್ತಿರುವ ಸಮಾವೇಶದಲ್ಲಿ ಈ ಬಾರಿ ಮಿಷನ್ 500 ಗಿಗಾ ವ್ಯಾಟ್ ಎಂಬುದು ಸೆಂಟ್ರಲ್ ಥೀಮ್ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ