ಗಾಂಧಿನಗರದಲ್ಲಿ ಜಾಗತಿಕ ಮರುಬಳಕೆ ಇಂಧನ ಸಭೆ ಮತ್ತು ಎಕ್ಸ್​ಪೋ ಕಾರ್ಯಕ್ರಮ ಇಂದು ಆರಂಭ

PM Inaugurates 4th Re-Invest Global Renewable Energy investors Meet and Expo: ಗುಜರಾತ್​ನ ಗಾಂಧಿನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು 4ನೇ ರೀ ಇನ್ವೆಸ್ಟ್ ಗ್ಲೋಬಲ್ ಎನರ್ಜಿ ಮೀಟ್ ಅಂಡ್ ಎಕ್ಸ್​ಕೋ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದಾರೆ. ಸೆಪ್ಟೆಂಬರ್ 16ರಿಂದ 18ರವರೆಗೆ ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ 140ಕ್ಕೂ ಹೆಚ್ಚು ದೇಶಗಳಿಂದ ಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ಧಾರೆ. 2015, 2018, 2020ರಲ್ಲಿ ಹಿಂದಿನ ಮೂರು ಶೃಂಗಸಭೆಗಳು ನಡೆದಿದ್ದವು.

ಗಾಂಧಿನಗರದಲ್ಲಿ ಜಾಗತಿಕ ಮರುಬಳಕೆ ಇಂಧನ ಸಭೆ ಮತ್ತು ಎಕ್ಸ್​ಪೋ ಕಾರ್ಯಕ್ರಮ ಇಂದು ಆರಂಭ
ನರೇಂದ್ರ ಮೋದಿ
Follow us
|

Updated on: Sep 16, 2024 | 11:19 AM

ಗಾಂಧಿನಗರ್, ಸೆಪ್ಟೆಂಬರ್ 16: ಗುಜರಾತ್ ರಾಜಧಾನಿ ಗಾಂಧಿನಗರ್​ನಲ್ಲಿ ಇಂದು ನಾಲ್ಕನೇ ರೀ ಇನ್ವೆಸ್ಟ್ ಗ್ಲೋಬಲ್ ಎನರ್ಜಿ ಮೀಟ್ ಅಂಡ್ ಎಕ್ಸ್​ಪೋ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ. ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಉದ್ಘಾಟನೆ ಮಾಡಿದ್ದಾರೆ. ಕೇಂದ್ರ ಹೊಸ ಮತ್ತು ಮರುಬಳಕೆ ಇಂಧನ ಸಚಿವಾಲಯ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದು ಸೆಪ್ಟೆಂಬರ್ 16ರಿಂದ 18ರವರೆಗೆ ಗಾಂಧಿನಗರದ ಮಹಾತ್ಮ ಮಂದಿರ್​ನಲ್ಲಿ ನಡೆಯಲಿದೆ. ಇಂದಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಹೊಸ ಮತ್ತು ಮರುಬಳಕೆ ಇಂಧನ ಸಚಿವ ಪ್ರಹ್ಲಾದ್ ಜೋಷಿ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಗುಜರಾತ್​ನ ಹಣಕಾಸು, ಇಂಧನ ಮತ್ತು ಪೆಟ್ರೋಕೆಮಿಕಲ್ಸ್ ಸಚಿವ ಕಾನುಭಾಯ್ ದೇಸಾಯಿ ಮೊದಲಾದವರು ಉಪಸ್ಥಿತರಿದ್ದರು.

ಈ ನಾಲ್ಕನೇ ಜಾಗತಿಕ ಮರುಬಳಕೆ ಇಂಧನ ಹೂಡಿಕೆ ಮತ್ತು ಪ್ರದರ್ಶನ ಮೇಳದಲ್ಲಿ 140 ದೇಶಗಳಿಂದ 25,000 ನಿಯೋಗಗಳು, 200 ಮಂದಿ ಭಾಷಣಕಾರರು ಪಾಲ್ಗೊಳ್ಳುತ್ತಿದ್ದಾರೆ. ಮೂರು ದಿನಗಳ ಕಾಲ ಒಟ್ಟು 40 ಸೆಷನ್ಸ್, 5 ಅಮೂಲಾಗ್ರ ಚರ್ಚೆ (Plenary discussion), 115ಕ್ಕೂ ಹೆಚ್ಚು ಬಿ2ಬಿ ಸಭೆಗಳು ನಡೆಯಲಿವೆ. ಬಿ2ಬಿ ಎಂದರೆ ವಿವಿಧ ಉದ್ದಿಮೆಗಳ ನಡುವಿನ ಸಭೆ. ಈ ಕಾರ್ಯಕ್ರಮದಲ್ಲಿ ಭಾರತ ಹಾಗೂ ವಿಶ್ವಾದ್ಯಂತ ದೊಡ್ಡ ಸಂಖ್ಯೆಯಲ್ಲಿ ರಿನಿವಬಲ್ ಎನರ್ಜಿ ಕ್ಷೇತ್ರದ ಹೂಡಿಕೆದಾರರು, ಸ್ಟಾರ್ಟಪ್​ಗಳು ಮತ್ತು ತಜ್ಞರು ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ಬಿ2ಬಿ ಮೀಟಿಂಗ್ ಚುರುಕಾಗಿ ನಡೆಯುವ ಸಂಭವ ಇದೆ.

ಆಸ್ಟ್ರೇಲಿಯಾ, ಡೆನ್ಮಾರ್ಕ್, ಜರ್ಮನಿ ಮತ್ತು ನಾರ್ವೆ ಈ ಕಾರ್ಯಕ್ರಮದ ಪಾಲುದಾರ ದೇಶಗಳಾಗಿವೆ. ಅಮೆರಿಕ, ಯುಕೆ, ಬೆಲ್ಜಿಯಂ, ಯೂರೋಪಿಯನ್ ಯೂನಿಯನ್, ಓಮನ್, ಯುಎಇ, ಸಿಂಗಾಪುರ್ ಮತ್ತು ಹಾಂಕಾಂಗ್ ದೇಶಗಳಿಂದ ಉನ್ನತ ಮಟ್ಟದ ನಿಯೋಗಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿವೆ. ಕರ್ನಾಟಕ, ಮಧ್ಯಪ್ರದೇಶ, ಆಂಧ್ರಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರಪ್ರದೇಶ ಮತ್ತು ತೆಲಂಗಾಣ ಈ ಕಾರ್ಯಕ್ರಮದಲ್ಲಿ ಪಾರ್ಟ್ನರ್ ರಾಜ್ಯಗಳಾಗಿವೆ.

ಇದನ್ನೂ ಓದಿ: ಭಾರತದ ಚಿಪ್ ತಯಾರಕ ಪಾಲಿಮಾಟೆಕ್ ಸಂಸ್ಥೆಯಿಂದ ಬಹರೇನ್​ನಲ್ಲಿ ಹೊಸ ಘಟಕ; 3 ವರ್ಷದಲ್ಲಿ 850 ಕೋಟಿ ರೂ ಹೂಡಿಕೆ

ರೀ ಇನ್ವೆಸ್ಟ್ ಶೃಂಗಸಭೆ ನಡೆಯುತ್ತಿರುವುದು ಇದು ನಾಲ್ಕನೇ ವರ್ಷ. ಹಿಂದಿನ ಮೂರು ಸಭೆಗಳು ದೆಹಲಿಯಲ್ಲಿ ನಡೆದಿದ್ದವು. ಇದೇ ಮೊದಲ ಬಾರಿಗೆ ದೆಹಲಿ ಆಚೆಗೆ ರೀ ಇನ್ವೆಸ್ಟ್ ಸಮಿಟ್ ನಡೆಯುತ್ತಿರುವುದು. ಮೊದಲ ಸಮಿಟ್ 2015ರ ಫೆಬ್ರುವರಿಯಲ್ಲಿ ನಡೆದಿತ್ತು. 2018ರ ಅಕ್ಟೋರ್​ನಲ್ಲಿ ಎರಡನೇ ಸಭೆ ನಡೆದಿತ್ತು. 2020ರಲ್ಲಿ ಮೂರನೇ ಸಭೆಯು ಕೋವಿಡ್ ಕಾರಣಕ್ಕೆ ಆನ್​ಲೈನ್​ನಲ್ಲಿ ಆಯೋಜನೆಯಾಗಿತ್ತು. ಕೋವಿಡ್ ನಂತರ ಮೊದಲ ಬಾರಿಗೆ ರೀ ಇನ್ವೆಸ್ಟ್ ಸಮಿಟ್ ನಡೆಯುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ