ಭಾರತದ ಚಿಪ್ ತಯಾರಕ ಪಾಲಿಮಾಟೆಕ್ ಸಂಸ್ಥೆಯಿಂದ ಬಹರೇನ್ನಲ್ಲಿ ಹೊಸ ಘಟಕ; 3 ವರ್ಷದಲ್ಲಿ 850 ಕೋಟಿ ರೂ ಹೂಡಿಕೆ
India's Polymatech Electronics to invest in Bahrain: ಚೆನ್ನೈ ಮೂಲದ ಸೆಮಿಕಂಡಕ್ಟರ್ ಚಿಪ್ ಕಂಪನಿಯಾದ ಪಾಲಿಮಾಟೆಕ್ ಎಲೆಕ್ಟ್ರಾನಿಕ್ಸ್ ಈಗ ಬಹರೇನ್ನಲ್ಲಿ ತನ್ನ ಉತ್ಪಾದನಾ ಘಟಕ ವಿಸ್ತರಿಸುತ್ತಿದೆ. ಇತ್ತೀಚೆಗೆ ಅಮೆರಿಕದ ಚಿಪ್ ಕಂಪನಿಯೊಂದನ್ನು ಖರೀದಿಸಿರುವ ಪಾಲಿಮಾಟೆಕ್ ಬಹರೇನ್ನಲ್ಲಿ 16 ಮಿಲಿಯನ್ ಡಾಲರ್ ಹೂಡಿಕೆಯಲ್ಲಿ ಹೊಸ ಘಟಕ ಸ್ಥಾಪಿಸುತ್ತಿದೆ. ಭಾರತದಲ್ಲಿ ತಯಾರಾದ ಚಿಪ್ಗಳನ್ನು ಬಳಸಿ ಬಹರೇನ್ನ ಘಟಕದಲ್ಲಿ ಅಸೆಂಬ್ಲಿಂಗ್ ಮಾಡುವ ಪ್ಲಾನ್ ಇದೆ.
ನವದೆಹಲಿ, ಸೆಪ್ಟೆಂಬರ್ 15: ಮಲ್ಟಿ ವೇಫರ್ ಸೆಮಿಕಂಡಕ್ಟರ್ ಚಿಪ್ಗಳನ್ನು ತಯಾರಿಸುವ ಭಾರತದ ಪಾಲಿಮಾ ಟೆಕ್ ಎಲೆಕ್ಟ್ರಾನಿಕ್ಸ್ ಸಂಸ್ಥೆ ಬಹರೇನ್ನಲ್ಲಿ ತನ್ನ ಉತ್ಪಾದನಾ ಕ್ಷೇತ್ರವನ್ನು ವಿಸ್ತರಿಸುತ್ತಿದೆ. ಬಹರೇನ್ನಲ್ಲಿ ಚಿಪ್ ಮ್ಯಾನುಫ್ಯಾಕ್ಚರಿಂಗ್ ಘಟಕ ನಿರ್ಮಾಣಕ್ಕೆ 16.2 ಮಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿರುವುದಾಗಿ ಸಂಸ್ಥೆ ಪ್ರಕಟಿಸಿದೆ. ಇನ್ನು ಮೂರು ವರ್ಷದಲ್ಲಿ, ಅಂದರೆ 2027ರಷ್ಟರಲ್ಲಿ ಆ ಘಟಕಕ್ಕೆ 100 ಮಿಲಿಯನ್ ಡಾಲರ್ವರೆಗೂ ಹೂಡಿಕೆ ಮಾಡುವ ಪ್ಲಾನ್ ಹೊಂದಿದೆ.
ಪಾಲಿಮಾಟೆಕ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಮುಖ್ಯ ಕಚೇರಿ ಚೆನ್ನೈನಲ್ಲಿದೆ. ಇದು ಆಪ್ಟೋ ಸೆಮಿಕಂಡಕ್ಟರ್ಗಳ ಡಿಸೈನಿಂಗ್, ಮ್ಯಾನುಫ್ಯಾಕ್ಚರಿಂಗ್, ಪ್ಯಾಕೇಜಿಂಗ್ ಮತ್ತು ಅಸೆಂಬ್ಲಿಂಗ್ ಕೆಲಸವನ್ನು ಮಾಡುತ್ತದೆ. ಟೆಲಿಕಮ್ಯೂನಿಕೇಶನ್ಸ್, ವಾಹನ ಮತ್ತು ಮೆಡಿಕಲ್ ಸಾಧನಗಳಲ್ಲಿ ಇದರ ಆಪ್ಟೋ ಸೆಮಿಕಂಡಕ್ಟರ್ ಚಿಪ್ಗಳ ಬಳಕೆ ಆಗುತ್ತದೆ. ಇತ್ತೀಚೆಗೆ ಅಮೆರಿಕದ ಕ್ಯಾಲಿಫೋರ್ನಿಯ ಮೂಲದ ಚಿಪ್ ತಯಾರಕಾ ಕಂಪನಿಯೊಂದನ್ನು ಪಾಲಿಮಾಟೆಕ್ ಖರೀದಿ ಮಾಡಿತ್ತು. ಆ ಬಳಿಕ 5ಜಿ ಮತ್ತು 6ಜಿ ಚಿಪ್ಗಳು ಸೇರಿದಂತೆ ಪವರ್ ಸೆಮಿಕಂಡಕ್ಟರ್ ಮತ್ತು ಡಾಟಾ ಟ್ರಾನ್ಸ್ಮಿಶನ್ನತ್ತ ಹೆಚ್ಚು ಗಮನ ಹರಿಸಲಾಗುತ್ತಿದೆ. ಈ ವಿಚಾರವನ್ನು ಪಾಲಿಮಾಟೆಕ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಸಿಇಒ ಮತ್ತು ಎಂಡಿ ಈಶ್ವರ ರಾವ್ ನಂದಂ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: 6,600 ಮೆ.ವ್ಯಾ. ವಿದ್ಯುತ್ ಪೂರೈಕೆಗೆ ಬಿಡ್ಡಿಂಗ್ ಗೆದ್ದ ಅದಾನಿ ಗ್ರೂಪ್; ಒಂದು ಯೂನಿಟ್ಗೆ ಎಷ್ಟು ದರ ಗೊತ್ತಾ?
ಬಹರೇನ್ನ ಹಿದ್ ನಗರದಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಪಾಲಿಮಾಟೆಕ್ ಎಲೆಕ್ಟ್ರಾನಿಕ್ಸ್ ಸಂಸ್ಥೆ ಫ್ಯಾಕ್ಟರಿ ಸ್ಥಾಪಿಸಲಿದೆ. ಅತ್ರಿ ಬ್ರ್ಯಾಂಡ್ ಹೆಸರಿನಲ್ಲಿ ಈ ಘಟಕ ಇರಲಿದೆ. ಭಾರತದಲ್ಲಿ ತಯಾರಿಕೆಯಾಗಿ ಪ್ಯಾಕೇಜ್ ಆದ ಚಿಪ್ಗಳನ್ನು ಆಮದು ಮಾಡಿಕೊಂಡು ಬಹರೇನ್ ಘಟಕದಲ್ಲಿ ಫೈನಲ್ ಆಗಿ ಅಸೆಂಬ್ಲಿಂಗ್ ಮಾಡಲಾಗುತ್ತದೆ.
ಬಹರೇನ್ನಲ್ಲಿ ಅಸೆಂಬ್ಲಿಂಗ್ ಆದ ಚಿಪ್ಗಳನ್ನು ಪಶ್ಚಿಮ ಏಷ್ಯಾ ಮತ್ತು ಉತ್ತರ ಆಫ್ರಿಕಾದ ವಿವಿಧ ಮಾರುಕಟ್ಟೆಗೆ ಸರಬರಾಜು ಮಾಡುವ ಉದ್ದೇಶ ಇದೆ. ತೋಟಗಾರಿಕೆ ಮತ್ತು ವೈದ್ಯಕೀಯ ಎಲೆಕ್ಟ್ರಾನಿಕ್ಸ್ ಉದ್ಯಮಗಳಿಗೆ ಇದರ ಚಿಪ್ಗಳು ಅಗತ್ಯ ಇವೆ.
ತಮಿಳುನಾಡಿನಲ್ಲಿರುವ ಪಾಲಿಮಾಟೆಕ್ನ ಘಟಕದಲ್ಲಿ ಒಂದು ವರ್ಷಕ್ಕೆ 200 ಕೋಟಿ ಚಿಪ್ಗಳನ್ನು ಸದ್ಯಕ್ಕೆ ತಯಾರಿಸಲಾಗುತ್ತಿದೆ. ಈ ವರ್ಷಾಂತ್ಯದೊಳಗೆ ಉತ್ಪಾದನಾ ಸಾಮರ್ಥ್ಯವನ್ನು 500 ಕೋಟಿಗೆ ಹೆಚ್ಚಿಸುವ ಗುರಿ ಇರುವುದು ತಿಳಿದುಬಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ