ರಫ್ತು ಸುಂಕ ಇಳಿಕೆ, ಕನಿಷ್ಠ ರಫ್ತು ಬೆಲೆ ರದ್ದು ಬಳಿಕ ಈರುಳ್ಳಿ ಬೆಲೆ ಏರಿಕೆ ಆಗುತ್ತಿದೆಯಾ? ಲಾಸಲ್​ಗಾವ್​ನಲ್ಲಿ ಹೆಚ್ಚಿದ ಹೋಲ್​ಸೇಲ್ ದರ

Lasalgaon APMC see increase in onion wholesale rates: ಈರುಳ್ಳಿ ರಫ್ತು ಸುಂಕವನ್ನು ಸರ್ಕಾರ ಶೇ. 40ರಿಂದ ಶೇ. 20ಕ್ಕೆ ಇಳಿಸಿದೆ. ಹಾಗೆಯೇ, ಈರುಳ್ಳಿಯ ಕನಿಷ್ಠ ರಫ್ತು ದರವನ್ನೂ ಸರ್ಕಾರ ಹಿಂಪಡೆದುಕೊಂಡಿದೆ. ಜೊತೆಗೆ, ಸಬ್ಸಿಡಿ ದರದಲ್ಲಿ ದೇಶದ ವಿವಿಧೆಡೆ ಈರುಳ್ಳಿ ಮಾರಾಟ ಮಾಡುತ್ತಿದೆ. ಈ ಮಧ್ಯೆ ಲಾಸಲ್​ಗಾವ್ ಹೋಲ್​ಸೇಲ್ ಮಂಡಿಯಲ್ಲಿ ಈರುಳ್ಳಿ ಬೆಲೆ ಹೆಚ್ಚಳ ಆಗುತ್ತಿರುವುದು ತಿಳಿದುಬಂದಿದೆ.

ರಫ್ತು ಸುಂಕ ಇಳಿಕೆ, ಕನಿಷ್ಠ ರಫ್ತು ಬೆಲೆ ರದ್ದು ಬಳಿಕ ಈರುಳ್ಳಿ ಬೆಲೆ ಏರಿಕೆ ಆಗುತ್ತಿದೆಯಾ? ಲಾಸಲ್​ಗಾವ್​ನಲ್ಲಿ ಹೆಚ್ಚಿದ ಹೋಲ್​ಸೇಲ್ ದರ
ಈರುಳ್ಳಿ
Follow us
|

Updated on: Sep 15, 2024 | 1:15 PM

ಮುಂಬೈ, ಸೆಪ್ಟೆಂಬರ್ 15: ಈರುಳ್ಳಿ ಬೆಲೆ ಏರಿಕೆಗೆ ಕಡಿವಾಣ ಹಾಕಲು ಸರ್ಕಾರ ಸಬ್ಸಿಡಿ ದರದಲ್ಲಿ ಎಲ್ಲೆಡೆ ಈರುಳ್ಳಿ ಮಾರಾಟ ಮಾಡುತ್ತಿದೆ. ಈ ಮಧ್ಯೆ ಈರುಳ್ಳಿ ಮೇಲಿನ ರಫ್ತು ಸುಂಕವನ್ನು ಸರ್ಕಾರ ಕಡಿಮೆಗೊಳಿಸಿದೆ. ಈರುಳ್ಳಿಯ ಕನಿಷ್ಠ ಮಾರಾಟ ಬೆಲೆಯನ್ನೂ (ಎಂಇಪಿ) ರದ್ದುಗೊಳಿಸಿದೆ. ಇವೆರಡು ಕ್ರಮಗಳು ಗ್ರಾಹಕರು ಹಾಗೂ ಈರುಳ್ಳಿ ವರ್ತಕರಿಗೆ ರಿಲೀಫ್ ಕೊಟ್ಟಿದೆ. ಈ ಮಧ್ಯೆ ದೇಶದ ಪ್ರಮುಖ ಈರುಳ್ಳಿ ಮಾರುಕಟ್ಟೆಯಾದ ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯಲ್ಲಿನ ಲಾಸಲ್​ಗಾವ್​ನಲ್ಲಿ ಈರುಳ್ಳಿ ಬೆಲೆ ಹೆಚ್ಚಳವಾಗಿದೆ. ಲಾಸಲಗಾವ್ ಎಪಿಎಂಸಿಯಲ್ಲಿ ಈರುಳ್ಳಿ ಬೆಲೆ ಕ್ವಿಂಟಾಲ್​ಗೆ 433 ರೂ ಸರಾಸರಿ ಬೆಲೆ ಪಡೆದುಕೊಂಡಿದೆ ಎನ್ನುವ ಮಾಹಿತಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.

ಬೆಲೆ ಏರಿಕೆ ನಿಯಂತ್ರಿಸಲು ಈರುಳ್ಳಿ ರಫ್ತಿಗೆ ಮೇ 4ರಿಂದ ಶೇ. 40ರಷ್ಟು ಸುಂಕ ವಿಧಿಸಲಾಗುತ್ತಿತ್ತು. ಅದನ್ನು ಶೇ. 20ಕ್ಕೆ ಇಳಿಸಲಾಗಿದೆ. ಸೆಪ್ಟೆಂಬರ್ 14ರಿಂದ ಈ ಹೊಸ ಸುಂಕ ದರಗಳು ಜಾರಿಗೆ ಬರಲಿವೆ. ಇದರ ಜೊತೆಗೆ ಈರುಳ್ಳಿ ಮತ್ತು ಬಾಸ್ಮತಿ ಅಕ್ಕಿಯ ಕನಿಷ್ಠ ರಫ್ತು ದರವನ್ನೂ ಸರ್ಕಾರ ತೆಗೆದುಹಾಕಿದೆ. ಈ ಮುಂಚೆ ಒಂದು ಟನ್ ಈರುಳ್ಳಿ ರಫ್ತಿಗೆ 550 ಡಾಲರ್ (46,100 ರೂ) ಕನಿಷ್ಠ ರಫ್ತು ದರ ನಿಗದಿ ಮಾಡಲಾಗಿತ್ತು. ಅಂದರೆ, ಇದಕ್ಕಿಂತ ಕಡಿಮೆ ಬೆಲೆಗೆ ವರ್ತಕರು ಈರುಳ್ಳಿ ರಫ್ತು ಮಾಡುವಂತಿರಲಿಲ್ಲ.

ಇದನ್ನೂ ಓದಿ: ಆಧಾರ್ ಕಾರ್ಡ್ ಉಚಿತವಾಗಿ ಅಪ್​ಡೇಟ್ ಮಾಡುವ ಡೆಡ್​ಲೈನ್, ಸೆ. 14ರಿಂದ ಡಿ. 14ಕ್ಕೆ ವಿಸ್ತರಣೆ

ಈರುಳ್ಳಿ ಹೆಚ್ಚು ಪ್ರಮಾಣದಲ್ಲಿ ರಫ್ತಾದರೆ ದೇಶೀಯ ಮಾರುಕಟ್ಟೆಯಲ್ಲಿ ಸರಕು ಕೊರತೆ ಸೃಷ್ಟಿಯಾಗಿ ಬೆಲೆ ಹೆಚ್ಚಳ ಆಗುತ್ತದೆ. ಇದನ್ನು ತಪ್ಪಿಸಲು ಸರ್ಕಾರ ಕನಿಷ್ಠ ರಫ್ತು ಬೆಲೆ ಮತ್ತು ರಫ್ತು ಸುಂಕ ನಿಗದಿ ಮಾಡಿತ್ತು. ಕನಿಷ್ಠ ರಫ್ತು ಬೆಲೆಯಲ್ಲಿ ನಿಗದಿತ ದರಕ್ಕಿಂತ ಕಡಿಮೆ ಬೆಲೆಗೆ ಯಾರೂ ಕೂಡ ರಫ್ತು ಮಾಡುವಂತಿಲ್ಲ. ಇದೀಗ ಈ ಎಂಇಪಿ ಕ್ರಮವನ್ನು ಸರ್ಕಾರ ಹಿಂಪಡೆದುಕೊಂಡಿದೆ. ಈರುಳ್ಳಿ ಬೆಲೆಗಾರರು ಮತ್ತು ವರ್ತಕರು ಹೆಚ್ಚಿನ ಬೆಲೆಗೆ ಈರುಳ್ಳಿ ರಫ್ತು ಮಾಡಬಹುದಾಗಿದೆ.

ಆದರೆ, ಈ ಸಂದರ್ಭದಲ್ಲಿ ಈರುಳ್ಳಿ ದಾಸ್ತಾನು ಕಡಿಮೆ ಆಗುತ್ತಿದ್ದು, ರಫ್ತು ಮಾಡಲು ಈರುಳ್ಳಿ ಕೊರತೆ ಇದೆ ಎನ್ನುತ್ತಿದ್ದಾರೆ ವರ್ತಕರು. ಹಾಗೆಯೇ, ಈರುಳ್ಳಿ ರಫ್ತು ಸುಂಕವನ್ನು ಶೇ. 20ಕ್ಕೆ ಇಳಿಸಿರುವ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ ಎಂದು ಲಾಸಲಗಾವ್ ಎಪಿಎಂಸಿ ಛೇರ್ಮನ್ ಬಾಲಸಾಹೇಬ್ ಕ್ಷೀರಸಾಗರ್ ಹೇಳಿದ್ದಾರೆಂದು ಬಿಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ.

ಇದನ್ನೂ ಓದಿ: ಶೇ. 19ಕ್ಕೆ ಬಡ್ಡಿದರ ಹೆಚ್ಚಿಸಿದ ರಷ್ಯಾ ಸೆಂಟ್ರಲ್ ಬ್ಯಾಂಕ್; ಹಣದುಬ್ಬರ ನಿಯಂತ್ರಣಕ್ಕೆ ಕ್ರಮ

ಸೆಪ್ಟೆಂಬರ್ 5ರಿಂದ ಸರ್ಕಾರ ಸಬ್ಸಿಡಿ ದರದಲ್ಲಿ ಈರುಳ್ಳಿಯ ರೀಟೇಲ್ ಮಾರಾಟ ಮಾಡುತ್ತಿದೆ. ದೆಹಲಿ, ಮುಂಬೈ, ಕೋಲ್ಕತಾ, ಚೆನನ್ಐ ಮೊದಲಾದ ನಗರಗಳಲ್ಲಿ ಮೊಬೈಲ್ ವ್ಯಾನ್​ಗಳ ಮೂಲಕ ಮತ್ತು ಎನ್​​ಸಿಸಿಎಫ್ ಇತ್ಯಾದಿ ಮಳಿಗೆಗಳ ಮೂಲಕ ಈರುಳ್ಳಿಯನ್ನು ಕಿಲೋಗೆ 35 ರೂ ದರದಲ್ಲಿ ಮಾರಲಾಗುತ್ತಿದೆ. ಇದರಿಂದ ಈರುಳ್ಳಿ ಬೆಲೆ ದೇಶದ ಬಹುತೇಕ ಕಡೆ ಹತೋಟಿಗೆ ಬಂದಿರುವುದು ತಿಳಿದುಬಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ