ನವದೆಹಲಿ, ಸೆಪ್ಟೆಂಬರ್ 12: ಡೀಸೆಲ್ ವಾಹನಗಳ ಮೇಲೆ ಹೆಚ್ಚುವರಿ ಶೇ. 10ರಷ್ಟು ಜಿಎಸ್ಟಿ ವಿಧಿಸುವ ಪ್ರಸ್ತಾಪ ಸರ್ಕಾರದ ಮುಂದಿದೆ ಎನ್ನುವಂತಹ ವರದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಆದರೆ, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ಡೀಸೆಲ್ ಎಂಜಿನ್ನ ವಾಹನಗಳ ಮೇಲೆ ಹೆಚ್ಚುವರಿ ತೆರಿಗೆ ಹೇರುವ ಯಾವ ಪ್ರಸ್ತಾಪವೂ ತಮ್ಮ ಮುಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕೆಲ ಹೊತ್ತಿನ ಮೊದಲು ಗಡ್ಕರಿ ಅವರೇ ನೀಡಿದ್ದರೆನ್ನಲಾದ ಹೇಳಿಕೆಗಳನ್ನು ಆಧರಿಸಿ ಬಹುತೇಕ ಎಲ್ಲಾ ಮಾಧ್ಯಮಗಳಲ್ಲೂ ಹೆಚ್ಚುವರಿ ಜಿಎಸ್ಟಿ ಹೇರಿಕೆಯ ಸಾಧ್ಯತೆಯ ಸುದ್ದಿಯನ್ನು ಪ್ರಕಟಿಸಲಾಗಿತ್ತು. ಮಾಲಿನ್ಯ ಕಡಿಮೆ ಮಾಡಲು ಹೆಚ್ಚುವರಿ ತೆರಿಗೆ ವಿಧಿಸುವ ಪ್ರಸ್ತಾಪ ಇರುವ ಪತ್ರವನ್ನು ಇಂದೇ ಹಣಕಾಸು ಸಚಿವರಿಗೆ ಕಳುಹಿಸುತ್ತೇನೆ ಎಂದು ಕಾರ್ಯಕ್ರಮವೊಂದರಲ್ಲಿ ನಿತಿನ್ ಗಡ್ಕರಿ ಹೇಳಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.
ಇದಾದ ಬೆನ್ನಲ್ಲೇ ನಿತಿನ್ ಗಡ್ಕರಿ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ಡೀಸೆಲ್ ವಾಹನಗಳ ಮಾರಾಟದಲ್ಲಿ ಶೇ. 10ರಷ್ಟು ಹೆಚ್ಚುವರಿ ಜಿಎಸ್ಟಿ ವಿಧಿಸುವ ಸಾಧ್ಯತೆ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿ ಬಗ್ಗೆ ತುರ್ತಾಗಿ ಸ್ಪಷ್ಟನೆ ನೀಡಬೇಕಿದೆ. ಸರ್ಕಾರದ ಮುಂದೆ ಇಂಥದ್ದೊಂದು ಯಾವ ಪ್ರಸ್ತಾಪವೂ ಇಲ್ಲ. 2070ರಷ್ಟರಲ್ಲಿ ಕಾರ್ಬನ್ ಮುಕ್ತ ಸ್ಥಿತಿ ನಿರ್ಮಾಣ ಮಾಡುವುದು ಹಾಗೂ ಡೀಸೆಲ್ ಇತ್ಯಾದಿ ಇಂಧನಗಳಿಂದ ಉಂಟಾಗುವ ವಾಯು ವಾಲಿನ್ಯ ಕಡಿಮೆ ಮಾಡಲು ಹಾಗೂ ವಾಹನ ಮಾರಾಟದಲ್ಲಿ ತ್ವರಿತ ಪ್ರಗತಿ ಕಾಣಲು ನಾವು ಬದ್ಧರಾಗಿದ್ದೇವೆ. ಅದಕ್ಕೆ ಪೂರಕವಾಗಿ ನಾವು ಸ್ವಚ್ಛವಾದ, ಪರಿಸರಸ್ನೇಹಿಯಾಗಿರುವ ಪರ್ಯಾಯ ಇಂಧನಗಳನ್ನು ಸಕ್ರಿಯವಾಗಿ ಅಪ್ಪಿಕೊಳ್ಳುವುದು ಅನಿವಾರ್ಯ. ಈ ಇಂಧನಗಳು ಆಮದು ಇಂಧನಗಳಿಗೆ ಪರ್ಯಾಯವಾಗಿರಬೇಕು, ದುಬಾರಿ ಕೂಡ ಇರಬಾರದು, ದೇಶೀಯವಾಗಿ ತಯಾರಾಗಿರಬೇಕು ಮತ್ತು ಮಾಲಿನ್ಯ ಮುಕ್ತವಾಗಿರಬೇಕು’ ಎಂದು ನಿತಿನ್ ಗಡ್ಕರಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಭಾರತೀಯ ಕಂಪನಿಗಳ ಷೇರುಗಳು ಲಂಡನ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ನೇರವಾಗಿ ಲಿಸ್ಟ್ ಆಗುವ ದಿನಗಳು ಸಮೀಪ
There is an urgent need to clarify media reports suggesting an additional 10% GST on the sale of diesel vehicles. It is essential to clarify that there is no such proposal currently under active consideration by the government. In line with our commitments to achieve Carbon Net…
— Nitin Gadkari (@nitin_gadkari) September 12, 2023
ನವದೆಹಲಿಯಲ್ಲಿ ಇಂದು ಸೆಪ್ಟೆಂಬರ್ 12ರಂದು ನಡೆದ 63ನೇ ವಾರ್ಷಿಕ ಎಸ್ಐಎಎಂ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ನಿತಿನ್ ಗಡ್ಕರಿ ಅವರು ಡೀಸೆಲ್ ಅನ್ನು ಅಪಾಯಕಾರಿ ಇಂಧನ ಎಂದು ಬಣ್ಣಿಸಿ, ವಾಹನ ಉದ್ಯಮದವರು ಎಥನಾಲ್, ಹಸಿರು ಹೈಡ್ರೋಜನ್ ಇತ್ಯಾದಿ ಪರಿಸರಸ್ನೇಹಿ ಹಾಗೂ ಪರ್ಯಾಯ ಇಂಧನಗಳತ್ತ ಗಮನ ಕೊಡಬೇಕು ಎಂದು ಕರೆ ನೀಡಿದ್ದಾರೆ.
ಡೀಸೆಲ್ ವಾಹನದ ಮೇಲೆ ಹೆಚ್ಚುವರಿ ಜಿಎಸ್ಟಿ ಹಾಕಲಾಗುವುದು. ನಾವು ಎಷ್ಟು ತೆರಿಗೆ ವಿಧಿಸುತ್ತೇವೆಂದರೆ ನೀವು ಡೀಸೆಲ್ ವಾಹನ ಮಾರಾಟ ಮಾಡಲು ಸಾಧ್ಯವೇ ಆಗುವುದಿಲ್ಲ ಎಂದು ವಾಹನ ತಯಾರಕ ಕಂಪನಿಗಳಿಗೆ ನಿತಿನ್ ಗಡ್ಕರಿ ಎಚ್ಚರಿಕೆ ನೀಡಿದ್ದರು ಎಂಬಂತಹ ಸುದ್ದಿ ಎಲ್ಲೆಡೆ ಬಿತ್ತರವಾಗಿತ್ತು. ಈಗ ಇಂಥ ಹೇಳಿಕೆ ನೀಡಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
2027ರಷ್ಟರಲ್ಲಿ ಡೀಸೆಲ್ ಎಂಜಿನ್ ಚಾಲಿತ ವಾಹನಗಳನ್ನು ನಿಷೇಧಿಸಲು ಸರ್ಕಾರದ ಸಮಿತಿಯೊಂದು ಶಿಫಾರಸು ಮಾಡಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.
ಇದನ್ನೂ ಓದಿ: ಚೀನಾದ ಉಕ್ಕಿನ ಸರಬರಾಜಿಗೆ ಭಾರತದಲ್ಲಿ ನಿರ್ಬಂಧ; ಇನ್ನೂ ಐದು ವರ್ಷ ಸುರಿವಿರೋಧಿ ಸುಂಕ ಹೇರಿಕೆ
‘2030ರಷ್ಟರಲ್ಲಿ ಎಲೆಕ್ಟ್ರಿಕ್ ಅಲ್ಲದ ಯಾವ ಸಿಟಿ ಬಸ್ಸುಗಳನ್ನು ಪಡೆಯುವಂತಿಲ್ಲ. 2024ರ ಬಳಿಕ ನಗರ ಸಾರಿಗೆಗೆ ಡೀಸೆಲ್ ಬಸ್ಸುಗಳನ್ನು ಸೇರಿಸುವಂತಿಲ್ಲ’ ಎಂದು ಸಮಿತಿ ತನ್ನ ವರದಿಯಲ್ಲಿ ಶಿಫಾರಸು ಮಾಡಿತ್ತು.
ಭಾರತದಲ್ಲಿ ಬಹುತೇಕ ಆಟೊಮೊಬೈಲ್ ಕಂಪನಿಗಳು ಡೀಸೆಲ್ ವಾಹನಗಳ ತಯಾರಿಕೆಯನ್ನು ನಿಲ್ಲಿಸಿವೆ. ಭಾರತದ ಅಗ್ರಗಣ್ಯ ಆಟೊಮೊಬೈಲ್ ಕಂಪನಿ ಮಾರುತಿ ಸುಜುಕಿಯಿಂದಲೂ ಡೀಸೆಲ್ ಕಾರುಗಳ ತಯಾರಿಕೆ ನಿಂತಿರುವುದು ಗಮನಾರ್ಹ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ