ವೀಕೆಂಡ್ ರಜೆಗಳಿಲ್ಲ, ದಿನಕ್ಕೆ 15 ಗಂಟೆ ಕೆಲಸ; ವರ್ಕ್ ಫ್ರಂ ಕೇಳಲೇಬೇಡಿ: ಇದು ನವಿ ಕಂಪನಿ ಬಾಸ್ ಕಥೆ

|

Updated on: Apr 03, 2024 | 12:14 PM

Sachin Bansal Work culture: ಫ್ಲಿಪ್​ಕಾರ್ಟ್​ನ ಸಹ-ಸಂಸ್ಥಾಪಕರಾಗಿದ್ದ ಸಚಿನ್ ಬನ್ಸಾಲ್ ವಾರಕ್ಕೆ 80-100 ಗಂಟೆ ಕೆಲಸ ಮಾಡುತ್ತಾರಂತೆ. ವಾರಾಂತ್ಯದ ದಿನಗಳಲ್ಲೂ ಕಚೇರಿಗೆ ಬಂದು ಅವರು ಕೆಲಸ ಮಾಡುತ್ತಾರೆ. ನವಿ ಎಂಬ ಫಿನ್​ಟೆಕ್ ಕಂಪನಿಯನ್ನು ಮುನ್ನಡೆಸುತ್ತಿರುವ ಅವರು ದಿನಕ್ಕೆ 12ರಿಂದ 15 ಗಂಟೆ ಕೆಲಸ ಮಾಡುತ್ತಾರೆ. ಆದರೆ, ತಾನು ವೀಕಾಫ್ ಇಲ್ಲದೇ ಇಷ್ಟು ಹೊತ್ತು ಕೆಲಸ ಮಾಡುತ್ತಿದ್ದರೂ ಬೇರೆ ಸಹೋದ್ಯೋಗಿಗಳಿಂದ ಅದನ್ನೇ ನಿರೀಕ್ಷಿಸುವುದಿಲ್ಲ ಎಂದು ಬನ್ಸಾಲ್ ಸ್ಪಷ್ಪಪಡಿಸುತ್ತಾರೆ.

ವೀಕೆಂಡ್ ರಜೆಗಳಿಲ್ಲ, ದಿನಕ್ಕೆ 15 ಗಂಟೆ ಕೆಲಸ; ವರ್ಕ್ ಫ್ರಂ ಕೇಳಲೇಬೇಡಿ: ಇದು ನವಿ ಕಂಪನಿ ಬಾಸ್ ಕಥೆ
ಸಚಿನ್ ಬನ್ಸಾಲ್
Follow us on

ನವದೆಹಲಿ, ಏಪ್ರಿಲ್ 3: ಇವತ್ತು ಕಾರ್ಪೊರೇಟ್ ಜಗತ್ತಿನಲ್ಲಿ ದಿನಕ್ಕೆ ಇಷ್ಟು ಹೊತ್ತು ಕೆಲಸ ಎಂಬ ಮಿತಿ ಇಲ್ಲ. ಐಟಿ ಕಂಪನಿಗಳಲ್ಲಿ ಪ್ರಾಜೆಕ್ಟ್​ಗಳಿದ್ದರಂತೂ ದಿನಕ್ಕೆ ಕನಿಷ್ಠ 14 ಗಂಟೆ ಕೆಲಸ ಮಾಡಬೇಕಾಗುತ್ತದೆ. ಹಿರಿಯ ಹುದ್ದೆಗಳಲ್ಲಿರುವವರಂತೂ ದಿನದ ಹೆಚ್ಚಿನ ಹೊತ್ತು ಕಚೇರಿಯಲ್ಲೇ ಕಳೆಯುತ್ತಾರೆ. ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಈಗಿನ ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದಕ್ಕೆ ಬಹಳಷ್ಟು ಟ್ರೋಲ್ ಆಗಿದ್ದರು. ಅದರೆ, ಫ್ಲಿಪ್​ಕಾರ್ಟ್​ನ ಸಹ-ಸಂಸ್ಥಾಪಕ ಸಚಿನ್ ಬನ್ಸಾಲ್ (Sachin Bansal) ಅವರಂತೂ ವಾರಕ್ಕೆ 80ರಿಂದ 100 ಗಂಟೆ ಕೆಲಸ ಮಾಡುತ್ತಾರಂತೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ.

ಫ್ಲಿಪ್​ಕಾರ್ಟ್ ಅನ್ನು ತೊರೆದು 2018ರಲ್ಲಿ ನವಿ ಎಂಬ ಫಿನ್ಟೆಕ್ ಕಂಪನಿಯನ್ನು ಸ್ಥಾಪಿಸಿರುವ ಸಚಿನ್ ಬನ್ಸಾಲ್ ತಮ್ಮ ಹೊಸ ಬಿಸಿನೆಸ್ ಅನ್ನು ಬೆಳೆಸಲು ಸಾಧ್ಯವಾದಷ್ಟೂ ಸಮಯ ತೊಡಗಿಸುತ್ತಿದ್ದಾರೆ. ಅವರೇ ಹೇಳಿಕೊಂಡಂತೆ ವೀಕೆಂಡ್ ರಜೆ, ವಿಶ್ರಾಂತಿ ಯಾವುದೂ ಇಲ್ಲ. ವಾರಕ್ಕೆ 100 ಗಂಟೆಯವರೆಗೂ ಅವರು ಕೆಲಸ ಮಾಡುತ್ತಾರೆ. ಶನಿವಾರ ಮತ್ತು ಭಾನುವಾರವೂ ಕೆಲಸ ಮಾಡಿದರೆ ವಾರಕ್ಕೆ 100 ಗಂಟೆ ಎಂದರೆ ಬಹಳವಾಯಿತು. ದಿನಕ್ಕೆ 15 ಗಂಟೆಯಂತೆ ವಾರಪೂರ್ತಿ ಕೆಲಸ ಮಾಡಿದರೆ 100 ಗಂಟೆ ಆಗುತ್ತದೆ. ಬೆಳಗ್ಗೆ 8 ಗಂಟೆಗೆ ಆರಂಭಿಸಿದರೆ ರಾತ್ರಿ 11 ಗಂಟೆವರೆಗೂ ಕಚೇರಿಯಲ್ಲೇ ಕೆಲಸ ಮಾಡಬೇಕಾಗುತ್ತದೆ. ಯಾರಿಗಾದರೂ ಇದು ಅಬ್ಬಬ್ಬಾ ಎನಿಸದೇ ಇರದು.

ಇದನ್ನೂ ಓದಿ: ನೂರು ಷೇರು ಖರೀದಿಸಿ ಮರೆತೇಹೋಗಿದ್ದ 85 ವರ್ಷದ ವ್ಯಕ್ತಿಗೆ ಬಂತು 2 ಕೋಟಿ ರೂ ಸಂಪತ್ತು

ನವಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಕಥೆ?

ಸಚಿನ್ ಬನ್ಸಾಲ್ ತಾವು ಕಟ್ಟಿದ ಬಿಸಿನೆಸ್ ಬೆಳೆಸಲು ಸಂಪೂರ್ಣ ಬದ್ಧರಾಗಿದ್ದಾರೆ. ಅವರೇ ಮಾಲೀಕರಾದ್ದರಿಂದ ತಮ್ಮಿಡೀ ಸಮಯವನ್ನು ಆ ಬಿಸಿನೆಸ್​ಗೆ ಮೀಸಲಿಡುವುದರಲ್ಲಿ ಹೆಚ್ಚುಗಾರಿಕೆ ಇಲ್ಲ. ಆದರೆ, ಅವರ ಕಂಪನಿಯಲ್ಲಿ ಕೆಲಸ ಮಾಡುವವರ ಕಥೆ ಏನು?

ಸಚಿನ್ ಬನ್ಸಾಲ್ ಅವರಂತೂ ತಮ್ಮ ಕಂಪನಿಯಲ್ಲಿ ಒಂದು ನಿಯಮವನ್ನಂತೂ ಸ್ಪಷ್ಟಪಡಿಸಿದ್ದಾರೆ. ಅದು ವರ್ಕ್ ಫ್ರಂ ಹೋಂ ಆಫೀಸ್ ಕಡ್ಡಾಯ. ಅಂದರೆ ಮನೆಯಿಂದ ಯಾರೂ ಕೆಲಸ ಮಾಡುವಂತಿಲ್ಲ. ಎಲ್ಲರೂ ಕಚೇರಿಗೆ ಬಂದೇ ಕೆಲಸ ಮಾಡಬೇಕು.

ತಾನು ವಾರಕ್ಕೆ 80ರಿಂದ 100 ಗಂಟೆ ಕೆಲಸ ಮಾಡುತ್ತಿರುವಂತೆ ಸಹೋದ್ಯೋಗಿಗಳಿಂದಲೂ ಅದನ್ನು ನಿರೀಕ್ಷಿಸುವುದಿಲ್ಲ ಎಂದು ಸಚಿನ್ ಬನ್ಸಾಲ್ ಸ್ಪಷ್ಟಪಡಿಸುತ್ತಾರೆ.

ಇದನ್ನೂ ಓದಿ: ಈ ವರ್ಷ ಭಾರತ, ಪಾಕಿಸ್ತಾನ ಆರ್ಥಿಕ ಬೆಳವಣಿಗೆ ಹೇಗಿರುತ್ತೆ?; ವಿಶ್ವಬ್ಯಾಂಕ್​ನಿಂದ ಹೋಲಿಕೆ

‘ನಾನು ಕಚೇರಿಯಲ್ಲೇ ಹೆಚ್ಚು ಸಮಯ ಇರುವುದರಿಂದ ಜನರು ನನ್ನನ್ನು ಬಯ್ದುಕೊಳ್ಳುವುದುಂಟು. ಮೊದಲು ವರ್ಕ್ ಫ್ರಂ ಹೋಂ ತೆಗೆದುಹಾಕಿದೆ. ವೀಕೆಂಡ್​ನಲ್ಲೂ ಬಂದು ಕೆಲಸ ಮಾಡುತ್ತಿದ್ದೇನೆ. ವಾರಕ್ಕೆ 80-100 ಗಂಟೆ ಕಚೇರಿಯಲ್ಲಿ ಸಮಯ ವ್ಯಯಿಸುತ್ತಿದ್ದೆನೆ. ಬೇರೆಯವರಿಂದಲೂ ಇದನ್ನೇ ನಾನು ನಿರೀಕ್ಷಿಸುವುದಿಲ್ಲ. ಇವತ್ತು ಬಿಸಿನೆಸ್ ಬಹಳ ಸ್ಪರ್ಧಾತ್ಮಕವಾಗಿರುವುದರಿಂದ ಸಣ್ಣ ಸಣ್ಣ ವಿವರಗಳಿಗೂ ಗಮನ ಕೊಡಬೇಕಾಗುತ್ತದೆ. ಅದಕ್ಕೆ ನಾನು ಹೆಚ್ಚು ಹೊತ್ತು ಕಚೇರಿಯಲ್ಲಿ ಕೂತು ಕೆಲಸ ಮಾಡುತ್ತೇನೆ’ ಎಂದು ಮಾಜಿ ಫ್ಲಿಪ್​ಕಾರ್ಟ್ ಮುಖ್ಯಸ್ಥರಾದ ಸಚಿನ್ ಬನ್ಸಾಲ್ ಹೇಳುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ