ಹೊಸ ಯುಪಿಐ ಬಳಕೆದಾರರನ್ನು ಹೊಂದಲು ಪೇಟಿಎಂಗೆ ಎನ್​ಪಿಸಿಐ ಅನುಮತಿ; ಷರತ್ತುಗಳು ಅನ್ವಯ

NCPCI gives approval to onboard new UPI users: ಹೊಸ ಯುಪಿಐ ಬಳಕೆದಾರರನ್ನು ಸೇರಿಸಿಕೊಳ್ಳಲು ಪೇಟಿಎಂಗೆ ಎನ್​ಪಿಸಿಐ ಅನುಮತಿ ನೀಡಿದೆ. ಆದರೆ, ಎನ್​ಪಿಸಿಐ ರೂಪಿಸಿರುವ ಎಲ್ಲಾ ನಿಯಮಗಳನ್ನು ಮತ್ತು ಕಾಲಕಾಲಕ್ಕೆ ಹೊರಡಿಸುವ ಸುತ್ತೋಲೆಗಳಿಗೆ ಬದ್ಧವಾಗಿರಬೇಕು ಎಂಬುದು ಪೇಟಿಎಂಗೆ ನೀಡಿರುವ ಷರತ್ತಾಗಿದೆ.

ಹೊಸ ಯುಪಿಐ ಬಳಕೆದಾರರನ್ನು ಹೊಂದಲು ಪೇಟಿಎಂಗೆ ಎನ್​ಪಿಸಿಐ ಅನುಮತಿ; ಷರತ್ತುಗಳು ಅನ್ವಯ
ಪೇಟಿಎಂ

Updated on: Oct 23, 2024 | 11:21 AM

ನವದೆಹಲಿ, ಅಕ್ಟೋಬರ್ 23: ಭಾರತದಲ್ಲಿ ಪ್ರಮುಖ ಯುಪಿಐ ಆ್ಯಪ್​ಗಳಲ್ಲಿ ಒಂದಾದ ಪೇಟಿಎಂ ಇನ್ಮುಂದೆ ಹೊಸ ಯುಪಿಐ ಬಳಕೆದಾರರನ್ನು ಹೊಂದುವ ಅವಕಾಶ ಪಡೆದಿದೆ. ರಾಷ್ಟ್ರೀಯ ಪೇಮೆಂಟ್ ಕಾರ್ಪೊರೇಶನ್ ಸಂಸ್ಥೆ (ಎನ್​ಪಿಸಿಐ) ಪೇಟಿಎಂಗೆ ಈ ಅನುಮತಿ ದಯಪಾಲಿಸಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ಆರ್​ಬಿಐ ವಿಧಿಸಿದ್ದ ನಿರ್ಬಂಧದಿಂದಾಗಿ ಪೇಟಿಎಂ ಸಂಸ್ಥೆ ಹೊಸ ಯುಪಿಐ ಗ್ರಾಹಕರನ್ನು ಹೊಂದಲು ಅಸಾಧ್ಯವಾಗಿತ್ತು. ಈಗ ಎನ್​ಪಿಸಿಐ ನಿರ್ಧಾರದಿಂದ ಪೇಟಿಎಂ ತುಸು ನಿರಾಳಗೊಂಡಿದೆ.

ಆದರೆ, ಎನ್​ಪಿಸಿಐ ಪೇಟಿಎಂಗೆ ನೀಡಿರುವ ಅನುಮತಿಯಲ್ಲಿ ಹಲವು ಷರತ್ತುಗಳಿವೆ. ಕಾಲಕಾಲಕ್ಕೆ ಹೊರಡಿಸಲಾಗುವ ಎಲ್ಲಾ ನಿಯಮಾವಳಿಗಳಿಗೂ ಪೇಟಿಎಂ ಬದ್ಧವಾಗಿರಬೇಕು ಎಂಬುದು ಎನ್​ಪಿಸಿಐ ವಿಧಿಸಿರುವ ಪ್ರಮುಖ ಷರತ್ತಾಗಿದೆ.

‘ಕಂಪನಿಗೆ ಹೊಸ ಯುಪಿಐ ಬಳಕೆದಾರರನ್ನು ಪಡೆಯಲು ಎನ್​ಪಿಸಿಐ ಅನುಮೋದನೆ ನೀಡಿ ಪತ್ರ ಬರೆದಿದೆ. ಎನ್​ಪಿಸಿಐನ ಎಲ್ಲಾ ವೈಧಾನಿಕ ಮಾರ್ಗಸೂಚಿ ಮತ್ತು ಸುತ್ತೋಲೆಗಳಿಗೆ ಬದ್ಧವಾಗಿರಬೇಕೆಂದು ಸೂಚಿಸಿದೆ,’ ಎಂದು ಪೇಟಿಎಂ ಸಂಸ್ಥೆ ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿದ ಫೈಲಿಂಗ್​ನಲ್ಲಿ ತಿಳಿಸಿದೆ.

ಇದನ್ನೂ ಓದಿ: ನೇಪಾಳದ ಏಕೈಕ ಬಿಲಿಯನೇರ್ ಬಿನೋದ್ ಚೌಧರಿ; ನೂಡಲ್ ಕಂಪನಿ ಕಟ್ಟಿ ಗೆದ್ದ ನೇಪಾಳೀ

ಆಗಸ್ಟ್ 1ರಂದು ಪೇಟಿಎಂ ಸಂಸ್ಥೆ ತನಗೆ ಹೊಸ ಯುಪಿಐ ಯೂಸರ್​ಗಳನ್ನು ಪಡೆಯಲು ಅನುಮತಿ ನೀಡುವಂತೆ ಎನ್​ಪಿಸಿಐಗೆ ಮನವಿ ಮಾಡಿತ್ತು ಎನ್ನಲಾಗಿದೆ.

2023ರ ಜನವರಿ 31ರಂದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ಆರ್​ಬಿಐ ನಿರ್ಬಂಧ ವಿಧಿಸಿತ್ತು. ಸರಿಯಾದ ರೀತಿಯಲ್ಲಿ ಕೆವೈಸಿ ನಿಯಮಗಳನ್ನು ಪಾಲಿಸಿಲ್ಲ ಎಂಬುದು ಆರ್​ಬಿಐನ ಪ್ರಮುಖ ಆಕ್ಷೇಪಣೆ. ಯಾವುದೇ ಹೊಸ ಠೇವಣಿ ಪಡೆಯಬಾರದು, ಹೊಸ ಗ್ರಾಹಕರನ್ನು ಪಡೆಯಬಾರದು ಎಂದು ಪೇಮೆಂಟ್ಸ್ ಬ್ಯಾಂಕ್​ಗೆ ನಿರ್ದೇಶನ ನೀಡಿತು. ವ್ಯಾಲಟ್​, ಫಾಸ್​ಟ್ಯಾಗ್ ಇತ್ಯಾದಿ ಸೇವೆಗಳೆಲ್ಲವೂ ನಿಂತವು.

ಇದನ್ನೂ ಓದಿ: ಎಲೆಕ್ಟ್ರಿಕ್ ಬಸ್, ಸೈಕ್ಲಿಂಗ್ ಟ್ರ್ಯಾಕ್, ವಾಕಿಂಗ್… ಹೇಗಿದೆ ನೋಡಿ ಕೇಂದ್ರದ ಅರ್ಬನ್ ಮೊಬಿಲಿಟಿ ಮಿಷನ್

ಪೇಮೆಂಟ್ ಆ್ಯಪ್ ಆದ ಪೇಟಿಎಂ ಕೂಡ ಹೊಸ ಗ್ರಾಹಕರನ್ನು ಹೊಂದುವಂತಿಲ್ಲ. ಪೇಮೆಂಟ್ಸ್ ಬ್ಯಾಂಕ್ (ಪಿಪಿಬಿಎಲ್) ಬದಲು ಬೇರೆ ಬ್ಯಾಂಕ್​ಗಳನ್ನು ಪಾವತಿ ಭಾಗಿದಾರರನ್ನಾಗಿ ಮಾಡಿಕೊಳ್ಳಬೇಕು. ಪೇಟಿಎಂ ಕೇವಲ ಥರ್ಡ್ ಪಾರ್ಟಿ ಅಪ್ಲಿಕೇಶನ್ ಪ್ರೊವೈಡರ್ ಆಗಿ ಮಾತ್ರವೇ ಕಾರ್ಯನಿರ್ವಹಿಸಬೇಕು ಎಂದು ಎನ್​ಪಿಸಿಐ ಸೂಚಿಸಿತು. ಅದರಂತೆ, ಪೇಟಿಎಂ ಸಂಸ್ಥೆ ಎಸ್​ಬಿಐ, ಎಕ್ಸಿಸ್ ಬ್ಯಾಂಕ್, ಎಚ್​ಡಿಎಫ್​ಸಿ ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್ ಈ ನಾಲ್ಕು ಬ್ಯಾಂಕ್​ಗಳ ಮೂಲಕ ಯುಪಿಐ ವಹಿವಾಟು ಸೇವೆ ನೀಡುತ್ತಾ ಬರುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us