ಇಂದಿನ ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಎನ್ ಆರ್ ನಾರಾಯಣಮೂರ್ತಿ ನೀಡಿದ ಹೇಳಿಕೆ ಚರ್ಚೆಗೆ ಎಡೆ ಮಾಡಿಕೊಟ್ಟಿದ್ದು ಮಿಶ್ರ ಸ್ಪಂದನೆಗಳನ್ನು ಕಂಡಿದೆ. ವಾರಕ್ಕೆ 70 ಗಂಟೆ ಕೆಲಸ ಮಾಡಿದರೆ ಲೈಫ್ ಮತ್ತು ವರ್ಕ್ ಬ್ಯಾಲನ್ಸ್ (Work and Life Balance) ಹೇಗೆ ಸಾಧ್ಯವಾಗುತ್ತದೆ ಎಂಬುದು ವಿರೋಧಿಗಳ ಒಂದು ಬಲವಾದ ಪ್ರತಿವಾದ. ಆದರೆ ಇನ್ಫೋಸಿಸ್ನಲ್ಲಿದ್ದಾಗ ವಾರಕ್ಕೆ 80-90 ಗಂಟೆ ಕೆಲಸ ಮಾಡುತ್ತಿದ್ದ ನಾರಾಯಣಮೂರ್ತಿ ತಮ್ಮ ಕೌಟುಂಬಿಕ ಜೀವನಕ್ಕೆ ಹೇಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದರು ಎಂಬುದು ಬಹಳ ಕುತೂಹಲ ಮೂಡಿಸುವ ವಿಷಯ. ಇಂಡಿಯಾ ಟುಡೇ ವಾಹಿನಿಯ ಕನ್ಸಲ್ಟಿಂಗ್ ಎಡಿಟರ್ ಆಗಿರುವ ರಾಜದೀಪ್ ಸರ್ದೇಸಾಯಿ ಅವರಿಗೆ ನೀಡಿದ ಸಂದರ್ಶನವೊಂದರಲ್ಲಿ ಎನ್ ಆರ್ ನಾರಾಯಣಮೂರ್ತಿ ಹಾಗೂ ಪತ್ನಿ ಸುಧಾ ಮೂರ್ತಿ ಹಲವು ವಿಚಾರಗಳ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.
ಜೀವನ ಮತ್ತು ಕೆಲಸದ ನಡುವೆ ಸಮತೋಲನ ಹೊಂದಿರುವ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ನಾರಾಯಣಮೂರ್ತಿ ಅವರು, ಕುಟುಂಬದೊಂದಿಗೆ ನೀವು ಎಷ್ಟು ಹೊತ್ತು ಕಳೆಯುತ್ತೀರಿ ಎಂಬುದಕ್ಕಿಂತ, ಹೇಗೆ ಸಮಯ ವ್ಯಯಿಸುತ್ತೀರಿ ಎಂಬುದು ಮುಖ್ಯ ಎಂದು ಹೇಳಿದ್ದಾರೆ.
‘ಸಂಖ್ಯೆಗಿಂತ ಗುಣಮಟ್ಟ ಮುಖ್ಯ ಎಂಬುದು ನನ್ನ ನಂಬಿಕೆ. ಬೆಳಗ್ಗೆ 6 ಗಂಟೆಗೆ ಕಚೇರಿಗೆ ಹೊರಟರೆ ರಾತ್ರಿ 9:15ರ ಸುಮಾರಿಗೆ ಮನೆಗೆ ವಾಪಸ್ ಬರುತ್ತಿದ್ದೆ. ಮನೆಗೆ ಬಂದೊಡನೆಯೇ ಮಕ್ಕಳು ಗೇಟ್ನಲ್ಲಿ ಇರುತ್ತಿದ್ದರು. ಸುಧಾ (ಪತ್ನಿ), ಮಕ್ಕಳು ಮತ್ತು ಮಾವ ಎಲ್ಲರೂ ಕಾರು ಹತ್ತುತ್ತಿದ್ದರು. ಇಷ್ಟವೆನಿಸಿದ ಊಟ ಮಾಡುತ್ತಿದ್ದರು. ಈ ಸಮಯದಲ್ಲಿ ಬಹಳಷ್ಟು ಮೋಜು ಇರುತ್ತಿತ್ತು. ಆ ಒಂದೂವರೆ ಎರಡು ಗಂಟೆ ಅವಧಿ ಮಕ್ಕಳಿಗೆ ಬಹಳ ಉಲ್ಲಾಸ ಎನಿಸುತ್ತಿತ್ತು’ ಎಂದು ಇನ್ಫೋಸಿಸ್ ಸಹ-ಸಂಸ್ಥಾಪಕರು ಸಂದರ್ಶನದ ವೇಳೆ ತಮ್ಮ ವೈಯಕ್ತಿಕ ಜೀವನದ ಕೆಲ ವಿವರ ನೀಡಿದ್ದಾರೆ.
‘ನೋಡಿ, ಎಲ್ಲವೂ ಚೆನ್ನಾಗಿ ನಡೆಯುತ್ತಿದ್ದಾಗ ನಿಮಗೆ ನನ್ನ ಅಗತ್ಯ ಇರುವುದಿಲ್ಲ. ನಿಮಗೆ ಕಷ್ಟ ಎನಿಸಿದಾಗ ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ. ಆ ಕಷ್ಟದಿಂದ ನೀವು ಹೊರಗೆ ಬರುವಂತೆ ನೋಡಿಕೊಳ್ಳುತ್ತೇನೆ. ನಿಮಗೆ ಹುಷಾರಿಲ್ಲದಿದ್ದರೆ ಆಸ್ಪತ್ರೆಗೆ ಕರೆದೊಯ್ಯಲು ನಾನಿರುತ್ತೇನೆ ಎಂದು ನನ್ನ ಸಹೋದರೆಯನ್ನೂ ಸೇರಿದಂತೆ ಕುಟುಂಬದ ಪ್ರತಿಯೊಬ್ಬರಿಗೂ ಹೇಳಿದ್ದೇನೆ. ಅದೇ ಆದರ್ಶವನ್ನು ನಾನು ಸದಾ ಪಾಲನೆ ಮಾಡಿಕೊಂಡು ಬಂದಿದ್ದೇನೆ’ ಎಂದು ಅವರು ಇನ್ನಷ್ಟು ವಿವರಣೆ ನೀಡಿದ್ದಾರೆ.
ಕಠಿಣ ಪರಿಶ್ರಮ ಎಷ್ಟು ಮುಖ್ಯ ಎಂಬುದಕ್ಕೆ ನಾರಾಯಣಮೂರ್ತಿ ಅವರು ಪ್ರಮುಖ ಐತಿಹಾಸಿಕ ವ್ಯಕ್ತಿತ್ವಗಳ ಉದಾಹರಣೆ ನೀಡಿದ್ದಾರೆ.
ಮಹಾತ್ಮ ಗಾಂಧಿ, ವಲ್ಲಭಭಾಯಿ ಪಟೇಲ್, ಜವಾಹರಲಾಲ್ ನೆಹರೂ, ಗೋಪಾಲಕೃಷ್ಣ ಗೋಖಲೆ, ಮೌಲಾನ ಆಜಾದ್, ಸಿ ರಾಜಗೋಪಾಲಚಾರಿಯಂತಹ ನಾಯಕರಿಗೆ ಕುಟುಂಬಕ್ಕೆ ಹೆಚ್ಚು ಸಮಯ ಕೊಡಲು ಆಗುತ್ತಿರಲಿಲ್ಲ. ಈ ಮಹಾನ್ ನಾಯಕರು ಮಾಡಿದ ತ್ಯಾಗಕ್ಕೆ ಹೋಲಿಸಿದರೆ ನಮ್ಮದು ತೃಣಕ್ಕೆ ಸಮಾನ. ಇದೇನೂ ದೊಡ್ಡ ವಿಷಯವಲ್ಲ ಎನ್ನುತ್ತಾರೆ ಇನ್ಫೋಸಿಸ್ ಮಾಜಿ ಛೇರ್ಮನ್.
ಇದನ್ನೂ ಓದಿ: Infosys-InSemi: ಬೆಂಗಳೂರಿನ ಸೆಮಿಕಂಡಕ್ಟರ್ ಡಿಸೈನ್ ಕಂಪನಿ ಇನ್ಸೆಮಿಯನ್ನು ಖರೀದಿಸಲು ಮುಂದಾದ ಇನ್ಫೋಸಿಸ್
ಕಂಪನಿಗೆ ಹೆಚ್ಚು ಸಮಯ ಕೊಟ್ಟು ಕುಟುಂಬಕ್ಕೆ ಕಡಿಮೆ ಸಮಯ ಕೊಡುವ ಪತಿಯ ಧೋರಣೆಯನ್ನು ಸುಧಾ ಮೂರ್ತಿ ಸಮರ್ಥಿಸಿಕೊಳ್ಳುತ್ತಾರೆ. ಇನ್ಫೋಸಿಸ್ನಂತಹ ಕಂಪನಿಯನ್ನು ಕಟ್ಟಲು ಎಷ್ಟು ಶ್ರಮ ಹಾಕಬೇಕು ಎಂಬುದು ತನಗೆ ತಿಳಿದಿದೆ ಎನ್ನುವ ಸುಧಾ ಮೂರ್ತಿ ಅವರು ಹೇಳುವುದು ಇದು:
‘ಯಾವುದೇ ರಾಜಕೀಯ ಹಿನ್ನೆಲೆ, ಹಣ ಆಸ್ತಿ ಇವ್ಯಾವುದೂ ಇಲ್ಲದ ಕುಟುಂಬದಿಂದ ಬಂದವರು ಮೂರ್ತಿ. ನಾವು ಸಾಮಾನ್ಯ ಜನರಾಗಿದ್ದವರು. ಇಂಥ ಹಿನ್ನೆಲೆಯ ಮೂರ್ತಿಯವರು 30-40 ವರ್ಷಗಳಲ್ಲಿ ಇನ್ಫೋಸಿಸ್ನಂತಹ ಶ್ರೇಷ್ಠ ಸಂಸ್ಥೆಯನ್ನು ಕಟ್ಟಲು ಹೇಗೆ ಸಾಧ್ಯ? ಕಠಿಣ ಪರಿಶ್ರಮ, ದೇವರ ದಯೆ, ಒಳ್ಳೆಯ ಸಹೋದ್ಯೋಗಿಗಳು ಹಾಗೂ ಸಾಂಘಿಕ ಕೆಲಸದಿಂದ ಇವೆಲ್ಲಾ ಸಾಧ್ಯವಾಯತು’ ಎಂದು ಸುಧಾ ಮೂರ್ತಿ ಹೇಳುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ