ಭಾರತದಲ್ಲಿ ನೂರು ಕೋಟಿ ರೂ ಕುಬೇರರ ಸಂಖ್ಯೆ 4 ವರ್ಷದಲ್ಲಿ 4 ಪಟ್ಟು ಹೆಚ್ಚಳ: ಸರ್ಕಾರದಿಂದ ಮಾಹಿತಿ

Rs 100 crore wealthy Indians: ಭಾರತದಲ್ಲಿ 100 ಕೋಟಿ ರೂಗೂ ಅಧಿಕ ಘೋಷಿತ ಆದಾಯ ಇರುವ ವ್ಯಕ್ತಿಗಳ ಸಂಖ್ಯೆ 2026ರ ಮಾರ್ಚ್ 31ರವರೆಗೆ 576 ಇದೆ. 2021-22ರ ವರ್ಷದಲ್ಲಿದ್ದವರಿಗೆ ಹೋಲಿಸಿದರೆ ಸಂಖ್ಯೆ 4 ಪಟ್ಟು ಹೆಚ್ಚಳವಾಗಿದೆ. ಈ ಮೇಲಿನದು ಐಟಿ ರಿಟರ್ನ್ಸ್​ನಲ್ಲಿ ಅಧಿಕೃತವಾಗಿ ಘೋಷಿಸಲಾದ ಆಸ್ತಿಯ ವಿವರವಾಗಿದೆ. ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವರು ಲೋಕಸಭೆಗೆ ಈ ಮಾಹಿತಿ ನೀಡಿದ್ದಾರೆ.

ಭಾರತದಲ್ಲಿ ನೂರು ಕೋಟಿ ರೂ ಕುಬೇರರ ಸಂಖ್ಯೆ 4 ವರ್ಷದಲ್ಲಿ 4 ಪಟ್ಟು ಹೆಚ್ಚಳ: ಸರ್ಕಾರದಿಂದ ಮಾಹಿತಿ
ಹಣ
Image Credit source: Getty Images

Updated on: Jul 27, 2026 | 6:55 PM

ಮುಖ್ಯಾಂಶಗಳು

  • ಭಾರತದಲ್ಲಿ 100 ಕೋಟಿ ರೂಗೂ ಅಧಿಕ ಘೋಷಿತ ಆದಾಯ ಇರುವ ವ್ಯಕ್ತಿಗಳ ಸಂಖ್ಯೆ 576 ಇದೆ.
  • 2021-22ರ ವರ್ಷದಲ್ಲಿದ್ದವರಿಗೆ ಹೋಲಿಸಿದರೆ ಸಂಖ್ಯೆ 4 ಪಟ್ಟು ಹೆಚ್ಚಳವಾಗಿದೆ.
  • ಈ ಮೇಲಿನದು ಐಟಿ ರಿಟರ್ನ್ಸ್​ನಲ್ಲಿ ಅಧಿಕೃತವಾಗಿ ಘೋಷಿಸಲಾದ ಆಸ್ತಿಯ ವಿವರವಾಗಿದೆ.

ನವದೆಹಲಿ, ಜುಲೈ 27: ಭಾರತದಲ್ಲಿ ಕೋಟ್ಯಾಧೀಶರರ ಸಂಖ್ಯೆ ಸಿಕ್ಕಾಪಟ್ಟೆ ಏರುತ್ತಿದೆ. ನೂರು ಕೋಟಿ ರೂಗೂ ಹೆಚ್ಚಿನ ಹಣವಂತರ ಸಂಖ್ಯೆ ಕಳೆದ ಐದು ವರ್ಷದಲ್ಲಿ ನಾಲ್ಕು ಪಟ್ಟು ಹೆಚ್ಚಿದೆಯಂತೆ. ಅದೂ ನೂರು ಕೋಟಿ ರೂ ಎನ್ನುವುದು ಘೋಷಿತ ಆದಾಯ. ಅಂದರೆ, ಐಟಿಆರ್​ನಲ್ಲಿ (ITR) ತಮ್ಮ ಆದಾಯವನ್ನು ತೋರ್ಪಡಿಸಿರುವ ವ್ಯಕ್ತಿಗಳು ಇವರು. ಕೇಂದ್ರ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಈ ಅಂಕಿ-ಅಂಶಗಳನ್ನು ಹಂಚಿಕೊಂಡಿದ್ದಾರೆ.

ಅಸೆಸ್‌ಮೆಂಟ್ ವರ್ಷ (AY) 2021-22 ರಲ್ಲಿ ₹100 ಕೋಟಿಗಿಂತ ಹೆಚ್ಚು ಆದಾಯ ಘೋಷಿಸಿದವರ ಸಂಖ್ಯೆ 142 ಇತ್ತು. ಅದು AY 2025-26 ರ ವೇಳೆಗೆ 576 ಕ್ಕೆ ಏರಿಕೆಯಾಗಿದೆ. ಅಂದರೆ, ಕೇವಲ 4 ವರ್ಷಗಳಲ್ಲಿ 434 ಹೊಸ ತೆರಿಗೆದಾರರು ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಇದನ್ನೂ ಓದಿ: ಐಟಿ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31 ಡೆಡ್​​ಲೈನ್; ಐಟಿಆರ್ ಸಬ್ಮಿಟ್ ಮಾಡುವ ಮುನ್ನ ಈ ಚೆಕ್​ಲಿಸ್ಟ್ ಪರಿಶೀಲಿಸಿ

ವರ್ಷಾವಾರು ₹100 ಕೋಟಿ ಹಣವಂತ ತೆರಿಗೆದಾರರ ಸಂಖ್ಯೆ

  • 2021-22: 142
  • 2022-23: 301
  • 2023-24: 284
  • 2024-25: 415
  • 2025-26: 576

‘ಬಿಲಿಯನೇರ್’ ಪದಕ್ಕೆ ಕಾನೂನು ವ್ಯಾಖ್ಯಾನವಿಲ್ಲ

ದೇಶದಲ್ಲಿ ಬಿಲಿಯನೇರ್‌ಗಳ (ಶತಕೋಟ್ಯಧಿಪತಿಗಳ) ಸಂಖ್ಯೆ ಹೆಚ್ಚಾಗುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಆದಾಯ ತೆರಿಗೆ ಕಾಯ್ದೆಯಡಿ ‘ಬಿಲಿಯನೇರ್’ ಎಂಬ ಪದಕ್ಕೆ ಯಾವುದೇ ಶಾಸನಬದ್ಧ ವ್ಯಾಖ್ಯಾನವಿಲ್ಲ. ಸರ್ಕಾರವು ವಾರ್ಷಿಕ ₹100 ಕೋಟಿಗಿಂತ ಹೆಚ್ಚಿನ ಒಟ್ಟು ಆದಾಯವನ್ನು ಸಲ್ಲಿಸುವ ವ್ಯಕ್ತಿಗಳ ಅಂಕಿ-ಅಂಶಗಳನ್ನು ಮಾತ್ರ ನಿರ್ವಹಿಸುತ್ತದೆ” ಎಂದಿದ್ದಾರೆ.

ಬಿಲಿಯನ್ ಎಂದರೆ 100 ಕೋಟಿ. ಇದು ಪಾಶ್ಚಿಮಾತ್ಯದ ನಂಬರ್ ಸಿಸ್ಟಂನಲ್ಲಿ ಇರುವ ಸಂಖ್ಯೆ. ಅಲ್ಲಿ ಮಿಲಿಯನ್, ಬಿಲಿಯನ್, ಟ್ರಿಲಿಯನ್ ಪದಗಳಿವೆ. ಭಾರತದಲ್ಲೂ ಅಂಕಿ ಸಂಖ್ಯೆಗಳಲ್ಲಿ ಕೆಲವೊಮ್ಮೆ ಇವನ್ನು ಬಳಸಲಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದ ರಿಪೋರ್ಟ್​ಗಳಲ್ಲಿ ಇವನ್ನು ಬಳಸಲಾಗುತ್ತದೆ. ಅದು ಬಿಟ್ಟರೆ ಇಲ್ಲಿ ಲಕ್ಷ, ಕೋಟಿ, ಶತಕೋಟಿ ಇತ್ಯಾದಿ ಎಣಿಕೆ ಸಂಖ್ಯೆಗಳಿವೆ.

ಇದನ್ನೂ ಓದಿ: ಚೀನಾದ ಉತ್ಪನ್ನಗಳು ಇಷ್ಟು ಕಡಿಮೆ ಬೆಲೆಗೆ ಸಿಗುವುದು ಹೇಗೆ? ಚೀನೀ ಸಿಇಒವೊಬ್ಬರು ಬಿಚ್ಚಿಟ್ಟ ವಾಸ್ತವ ಇದು

ಸಂಪತ್ತಿನ ಆಧಾರದ ಮೇಲಿನ ತೆರಿಗೆ ರದ್ದು

ತೆರಿಗೆದಾರರ ಒಟ್ಟು ಆಸ್ತಿ/ಸಂಪತ್ತಿನ (Wealth) ಮಾಹಿತಿಯನ್ನು ಸರ್ಕಾರ ನಿರ್ವಹಿಸುತ್ತದೆಯೇ ಎಂಬ ಪ್ರಶ್ನೆಗೆ, 1957ರ ‘ಸಂಪತ್ತು ತೆರಿಗೆ ಕಾಯ್ದೆ’ಯನ್ನು (Wealth-tax Act) ಏಪ್ರಿಲ್ 1, 2016 ರಿಂದ ರದ್ದುಗೊಳಿಸಲಾಗಿದ್ದು, ಸದ್ಯ ಸರ್ಕಾರದ ಬಳಿ ವೈಯಕ್ತಿಕ ಆಸ್ತಿಯ ಒಟ್ಟು ಮೊತ್ತದ ದತ್ತಾಂಶವಿಲ್ಲ ಎಂದು ಹಣಕಾಸು ರಾಜ್ಯ ಸಚಿವರು ತಿಳಿಸಿದ್ದಾರೆ.

ಹೆಚ್ಚು ಆದಾಯ ಗಳಿಸುವ ವ್ಯಕ್ತಿಗಳಿಂದ ಸರ್ಚಾರ್ಜ್ (Surcharge) ಒಳಗೊಂಡಂತೆ ಹೆಚ್ಚಿನ ತೆರಿಗೆಯನ್ನು ಸಂಗ್ರಹಿಸುವ ಪ್ರೋಗ್ರೆಸಿವ್ ಟ್ಯಾಕ್ಸ್ ಸಿಸ್ಟಂ ಅನ್ನು ಭಾರತ ಅನುಸರಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us