Amazon Layoffs: ಅಮೇಜಾನ್​ನಲ್ಲಿ ಮತ್ತೆ ಉದ್ಯೋಗಕಡಿತ; ಗೇಮಿಂಗ್ ವಿಭಾಗಗಳಿಂದ ಹಲವು ಮಂದಿ ಮನೆಗೆ

|

Updated on: Apr 05, 2023 | 12:21 PM

Amazon Game: ಅಮೇಜಾನ್​ನ ಸ್ಯಾನ್ ಡಿಯೇಗೋ ಸ್ಟುಡಿಯೋ, ಪ್ರೇಮ್ ಗೇಮಿಂಗ್, ಗೇಮ್ ಗ್ರೋತ್ ಡಿವಿಶನ್​ಗಳಲ್ಲಿ 100 ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಗೇಮಿಂಗ್ ವಿಭಾಗವನ್ನು ಇನ್ನಷ್ಟು ಗಟ್ಟಿಗೊಳಿಸಲು ಅಮೇಜಾನ್ ಈ ನಿರ್ಧಾರ ಕೈಗೊಂಡಿದೆ.

Amazon Layoffs: ಅಮೇಜಾನ್​ನಲ್ಲಿ ಮತ್ತೆ ಉದ್ಯೋಗಕಡಿತ; ಗೇಮಿಂಗ್ ವಿಭಾಗಗಳಿಂದ ಹಲವು ಮಂದಿ ಮನೆಗೆ
ಅಮೇಜಾನ್ ಗೇಮಿಂಗ್
Follow us on

ನವದೆಹಲಿ: ಈಗಾಗಲೇ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿರುವ ಅಮೇಜಾನ್ ಸಂಸ್ಥೆ (Amazon Inc) ಇದೀಗ ತನ್ನ ವಿವಿಧ ವಿಡಿಯೋ ಗೇಮ್ ವಿಭಾಗಗಳಿಂದ ನೂರು ಮಂದಿ ಉದ್ಯೋಗಿಗಳನ್ನು ಮನೆಗೆ ಕಳುಹಿಸಿರುವುದು ವರದಿಯಾಗಿದೆ. ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ ಡಿಯೆಗೋ (San Diego) ನಗರದಲ್ಲಿರುವ ಅದರ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದವರು, ಪ್ರೈಮ್ ಗೇಮಿಂಗ್ ಮತ್ತು ಗೇಮ್ ಗ್ರೋತ್ ಎಂಬ ವಿಡಿಯೋ ಗೇಮಿಂಗ್ ಡಿವಿಶನ್​ನಲ್ಲಿ ಕೆಲಸ ಮಾಡುತ್ತಿದ್ದವರಲ್ಲಿ ಸುಮಾರು 100 ಮಂದಿಯಷ್ಟು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಅಮೇಜಾನ್​ನ ಗೇಮಿಂಗ್ ವಿಭಾಗ ಬಹಳಷ್ಟು ಸಂಕಷ್ಟದ ಪರಿಸ್ಥಿತಿಯಲ್ಲಿದೆ. 2014ರಲ್ಲಿ ಅದು ಟ್ವಿಚ್ ಸ್ಟ್ರೀಮಿಂಗ್ ಸರ್ವಿಸ್ ಖರೀದಿಸಿದರೂ ಪ್ರಯೋಜನಕ್ಕೆ ಬಂದಿಲ್ಲ. ಟ್ವಿಚ್ ಇತ್ತೀಚೆಗೆ ಸುಮಾರು 400 ಮಂದಿಯನ್ನು ಕೆಲಸದಿಂದ ವಜಾಗೊಳಿಸಿತ್ತು.

ಅಮೇಜಾನ್ 2021ರಲ್ಲಿ ನ್ಯೂ ವರ್ಲ್ಡ್ ಎಂಬ ಆನ್​ಲೈನ್ ಗೇಮ್ ಅನ್ನು ಬಿಡುಗಡೆ ಮಾಡಿ, ಬಹಳ ನಿರೀಕ್ಷೆ ಇಟ್ಟುಕೊಂಡಿತ್ತು. ಇದು ಅಮೇಜಾನ್ ಆಂತರಿಕವಾಗಿ ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿರುವ ಏಕೈಕ ಗೇಮ್ ಎನಿಸಿದೆ. ಆದರೆ, ಕೆಲ ತಿಂಗಳ ಬಳಿಕ ನ್ಯೂ ವರ್ಲ್ಡ್ ಗೇಮ್​ನ ಆಟಗಾರರ ಸಂಖ್ಯೆ ಬಹಳ ಇಳಿಮುಖವಾಗಿದೆ. ಕ್ಯಾಲಿಫೋರ್ನಿಯಾದ ಇರ್ವಿನ್ ನಗರದಲ್ಲಿರುವ ನ್ಯೂ ವರ್ಲ್ಡ್ ಗೇಮ್ ಟೀಮ್ ಮತ್ತೆ ಪುಟಿದೇಳುವ ವಿಶ್ವಾಸದಲ್ಲಿದೆ.

ಇದನ್ನೂ ಓದಿREPO Rate: ಬಡ್ಡಿ ದರ ಏರಿಕೆ ಸಾಕು, ನಿಲ್ಲಿಸಿ ಎನ್ನುತ್ತಿರುವ ತಜ್ಞರು; ಏ. 6ರ ಎಂಪಿಸಿ ಸಭೆಯಲ್ಲಿ ಏನಾಗಬಹುದು?

ಇನ್ನು ಸ್ಯಾನ್ ಡಿಯೆಗೋ ಸ್ಟುಡಿಯೋದಲ್ಲಿ ಹೊಸ ಗೇಮ್ ಪ್ರಾಜೆಕ್ಟ್​ನ ಕೆಲಸಗಳು ನಡೆಯುತ್ತಿವೆ. ಕೆನಡಾದ ಮಾಂಟ್ರಿಯಲ್ ನಗರದಲ್ಲಿರುವ ಅದರ ಮತ್ತೊಂದು ಗೇಮ್ ಸ್ಟುಡಿಯೋದಲ್ಲೂ ಇನ್ನೊಂದು ಹೊಸ ಗೇಮ್​ನ ಅಭಿವೃದ್ಧಿ ಆಗುತ್ತಿದೆ. ವಿವಿಧ ಗೇಮ್ ಡಿವಿಶನ್​ಗಳಿಂದ 100 ಮಂದಿಯನ್ನು ಕೆಲಸದಿಂದ ತೆಗೆದುಹಾಕಲಾಗಿದ್ದರೂ ಈಗಿರುವ ಮಾನವ ಸಂಪನ್ಮೂಲಗಳನ್ನು ಇನ್ನಷ್ಟ ಸಮರ್ಪಕವಾಗಿ ಬಳಸಿಕೊಂಡು ಹೊಸ ಪ್ರಾಜೆಕ್ಟ್​​ಗಳನ್ನು ಪೂರ್ಣಗೊಳಿಸುವತ್ತ ಅಮೇಜಾನ್ ಗಮನ ಹರಿಸಿದೆ.

ಅಮೇಜಾನ್ ಥರ್ಡ್ ಪಾರ್ಟಿ ಗೇಮಿಂಗ್ ವ್ಯವಹಾರದಲ್ಲಿ ಒಂದಷ್ಟು ಯಶಸ್ಸು ಕಂಡಿದೆ. ಸೌತ್ ಕೊರಿಯಾದ ಲಾಸ್ಟ್ ಆರ್ಕ್ ಗೇಮ್ ಅಮೇಜಾನ್​ನ ಕೈಹಿಡಿದಿದೆ. ಇತ್ತೀಚೆಗಷ್ಟೇ ಅಮೇಜಾನ್ ಸಂಸ್ಥೆ ಎನ್​ಸಿಸಾಫ್ಟ್ ಕಾರ್ಪ್ ಕಂಪನಿ ಜೊತೆಗಿನ ಒಪ್ಪಂದ ಸೇರಿದಂತೆ ಹಲವು ಥರ್ಡ್ ಪಾರ್ಟಿ ಗೇಮ್ ಪಬ್ಲಿಶಿಂಗ್ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ.

ಇದನ್ನೂ ಓದಿDirect Tax: 2022-23 ರಲ್ಲಿ ನೇರ ತೆರಿಗೆ ಸಂಗ್ರಹ 19.68 ಲಕ್ಷ ಕೋಟಿ ರೂ; ಹೊಸ ದಾಖಲೆ

ಅಮೇಜಾನ್​ನಲ್ಲಿ ಕೆಲಸ ಕಳೆದುಕೊಂಡ 27 ಸಾವಿರ ಮಂದಿ

ಈ ವರ್ಷ ಅಮೇಜಾನ್ ಸಂಸ್ಥೆ ತನ್ನ ವಿವಿಧ ವಿಭಾಗಗಳಿಂದ 27,000 ಮಂದಿಯನ್ನು ಕೆಲಸದಿಂದ ತೆಗೆದುಹಾಕಿದೆ. ಜನವರಿಯಲ್ಲಿ 18 ಸಾವಿರ ಮಂದಿಯ ಲೇ ಆಫ್ ನಿರ್ಧಾರ ಪ್ರಕಟವಾಗಿತ್ತು. ಅಮೇಜಾನ್ ಸ್ಟೋರ್ಸ್ ಮತ್ತು ಪಿಎಕ್ಸ್​ಟಿ ವಿಭಾಗಗಳಲ್ಲಿ ಇಷ್ಟು ದೊಡ್ಡ ಸಂಖ್ಯೆಯ ನೌಕರವರ್ಗದವರು ಕೆಲಸ ಕಳೆದುಕೊಂಡಿದ್ದರು. ಮಾರ್ಚ್ ತಿಂಗಳಲ್ಲಿ ಅಮೇಜಾನ್​ನ ಕ್ಲೌಡ್ ಕಂಪ್ಯೂಟಿಂಗ್, ಟ್ವಿಚ್ ಲೈವ್​ಸ್ಟ್ರೀಮ್ ಮತ್ತು ಜಾಹೀರಾತು ವಿಭಾಗಗಳಿಂದ 9 ಸಾವಿರ ಮಂದಿಯನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು.

ಅಮೇಜಾನ್ ಮಾತ್ರವಲ್ಲ ವಿಶ್ವದ ಪ್ರಮುಖ ಟೆಕ್ ಕಂಪನಿಗಳು ಈ ವರ್ಷ ತಮ್ಮಲ್ಲಿನ ಬಹಳಷ್ಟು ಮಂದಿ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿವೆ. ಜಾಗತಿಕ ದೈತ್ಯ ಕಂಪನಿಗಳಿಂದ ಈ ವರ್ಷ 5 ಲಕ್ಷದಷ್ಟು ಮಂದಿ ಕೆಲಸ ಕಳೆದುಕೊಂಡಿರುವುದು ತಿಳಿದುಬಂದಿದೆ. ಈಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಬೆಳೆದಂತೆಲ್ಲಾ ಉದ್ಯೋಗಕಡಿತ ಸಂಖ್ಯೆ ಹೆಚ್ಚುತ್ತಾ ಹೋಗುವ ಅಪಾಯ ಇದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:21 pm, Wed, 5 April 23