REPO Rate: ಬಡ್ಡಿ ದರ ಏರಿಕೆ ಸಾಕು, ನಿಲ್ಲಿಸಿ ಎನ್ನುತ್ತಿರುವ ತಜ್ಞರು; ಏ. 6ರ ಎಂಪಿಸಿ ಸಭೆಯಲ್ಲಿ ಏನಾಗಬಹುದು?
RBI MPC Meeting: ಆರ್ಬಿಐನ 3 ದಿನಗಳ ಎಂಪಿಸಿ ಸಭೆಯ ಬಳಿಕ ಏಪ್ರಿಲ್ 6, ಗುರುವಾರ ರೆಪೋ ದರ ಏರಿಕೆಯನ್ನು ಘೋಷಿಸುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ರೆಪೋ ದರ 25 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಾಗಬಹುದು. ಇದಾದ ಬಳಿಕ ಈ ವರ್ಷ ಪೂರ್ತಿ ರೆಪೋ ದರದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ನ ಹಣಕಾಸು ನೀತಿ ಸಮಿತಿ (MPC- Monetary Policy Committee) ಸಭೆ ಏಪ್ರಿಲ್ 6, ಗುರುವಾರ ಮುಕ್ತಾಯಗೊಳ್ಳಲಿದೆ. ಈ 3 ದಿನಗಳ ಸಭೆ ಬಳಿಕ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದಾರೆ. ಆದರೆ ಎಲ್ಲರ ಕುತೂಹಲ ಇರುವುದು ಆರ್ಬಿಐನಿಂದ ಈ ಬಾರಿಯೂ ಬಡ್ಡಿ ದರ ಏರಿಕೆ ಆಗುವ ನಿರ್ಧಾರ ಬರುತ್ತದಾ ಎಂಬ ವಿಚಾರದ ಬಗ್ಗೆ. ರೀಟೇಲ್ ಹಣದುಬ್ಬರ (Retail Inflation) ಆರ್ಬಿಐ ಹಾಕಿದ ಶೇ. 6ರ ಚೌಕಟ್ಟಿನಿಂದ ಹೊರಗೆ ಇರುವುದರಿಂದ ಬಡ್ಡಿ ದರ 25 ಬಿಪಿಎಸ್ನಷ್ಟು (ಮೂಲಾಂಕ– Basis Points)) ಎರಿಕೆ ಕಾಣಬಹುದು ಎಂಬ ನಿರೀಕ್ಷೆ ಇದೆ. ಸದ್ಯ ಆರ್ಬಿಐನ ರೆಪೋ ದರ (REPO rate) ಶೇ. 6.50ಯಷ್ಟಿದೆ. ಒಂದು ವೇಳೆ 25 ಮೂಲಾಂಕಗಳಷ್ಟು ಏರಿಕೆಯಾದರೆ ರೆಪೋ ದರ ಶೇ. 6.75ಕ್ಕೆ ಹೆಚ್ಚಾಗುತ್ತದೆ.
ರೆಪೋ ದರ ಎರಿಕೆ ಸಾಕು ಎನ್ನುತ್ತಿರುವ ಆರ್ಥಿಕ ತಜ್ಞರು
ಆರ್ಬಿಐ ಗುರಿ ಇಟ್ಟಿರುವ ಗರಿಷ್ಠ ಮಿತಿ ಶೇ. 6ಕ್ಕಿಂತ ಹೆಚ್ಚು ಮಟ್ಟದಲ್ಲೆ ಹಣದುಬ್ಬರ ಇರುವುದರಿಂದ ಸತತವಾಗಿ ರೆಪೋ ದರವನ್ನು ಹೆಚ್ಚಿಸುತ್ತಲೇ ಬರಲಾಗುತ್ತಿದೆ. ಹಣದುಬ್ಬರ ಏರಿಕೆಯನ್ನು ನಿಯಂತ್ರಣಕ್ಕೆ ತರಲು ಯಾವುದೇ ಸೆಂಟ್ರಲ್ ಬ್ಯಾಂಕಿಗೆ ಇರುವ ಪ್ರಮುಖ ಅಸ್ತ್ರ ಎಂದರೆ ಬಡ್ಡಿ ದರ ಏರಿಕೆಯೇ. ಆರ್ಬಿಐ ಕೂಡ ಇದೇ ಅಸ್ತ್ರವನ್ನು ಉಪಯೋಗಿಸಿ ಒಂದಷ್ಟು ಮಟ್ಟಿಗೆ ಹಣದುಬ್ಬರವನ್ನು ತಹಬದಿಗೆ ತಂದಿದೆ. ಈಗಿರುವ ಬಡ್ಡಿ ದರವೇ ಹಣದುಬ್ಬರವನ್ನು ಇನ್ನಷ್ಟು ಇಳಿಸಲು ಸಾಕು. ಇನ್ನಷ್ಟು ಬಡ್ಡಿ ದರ ಏರಿಕೆ ಬೇಡ ಎಂದು ಭಾರತದ ಹಲವು ಆರ್ಥಿಕ ಮತ್ತು ಹಣಕಾಸು ತಜ್ಞರು ಸಲಹೆ ನೀಡುತ್ತಿದ್ದಾರೆ.
ಇದನ್ನೂ ಓದಿ: Direct Tax: 2022-23 ರಲ್ಲಿ ನೇರ ತೆರಿಗೆ ಸಂಗ್ರಹ 19.68 ಲಕ್ಷ ಕೋಟಿ ರೂ; ಹೊಸ ದಾಖಲೆ
ರೆಪೋ ದರ ಏರಿಕೆಯಿಂದ ಆರ್ಥಿಕತೆಗೆ ಹೊಡೆತ ಬೀಳುತ್ತದೆ. ಆರ್ಥಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಜಿಡಿಪಿ ವೃದ್ಧಿ ದರ ಕಡಿಮೆ ಆಗುತ್ತದೆ. ಹೀಗಾಗಿ ರೆಪೋ ದರ ಏರಿಕೆ ವಿಚಾರದಲ್ಲಿ ಆರ್ಬಿಐ ಬಹಳ ಸೂಕ್ಷ್ಮವಾಗಿ ಹೆಜ್ಜೆ ಇಡಬೇಕು ಎಂಬುದು ಬಹುತೇಕ ತಜ್ಞರ ಅಭಿಮತ ಎಂದು ವಿವಿಧ ಪೋಲಿಂಗ್ಗಳಲ್ಲಿ ವ್ಯಕ್ತವಾಗಿದೆ.
ಆರ್ಬಿಐ ಬಡ್ಡಿ ದರ ಏರಿಕೆ ಮಾಡುತ್ತಾ?
ಮೂಲಗಳ ಪ್ರಕಾರ ಭಾರತೀಯ ರಿಸರ್ವ್ ಬ್ಯಾಂಕ್ ನಿನ್ನೆಯಿಂದ (ಏಪ್ರಿಲ್ 4) ನಡೆಯುತ್ತಿರುವ ಎಂಪಿಸಿ ಸಭೆಯಲ್ಲಿ ರೆಪೋ ದರವನ್ನು 25 ಮೂಲಾಂಕಗಳಷ್ಟು ಏರಿಕೆ ಮಾಡುವ ನಿರ್ಧಾರ ಕೈಗೊಳ್ಳಬಹುದು. ಆದರೆ, ಅದಾದ ಬಳಿಕ ಒಂದಷ್ಟು ಕಾಲ ರೆಪೋ ದರ ಏರಿಕೆಯನ್ನು ಆರ್ಬಿಐ ನಿಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಬಾರಿ ಆರ್ಬಿಐ ರೆಪೋ ದರ ಏರಿಕೆಗೆ ನಿರ್ಧಾರ ಕೈಗೊಳ್ಳಲು ಬಲವಾದ ಕಾರಣ ಹೊಂದಿದೆ. ಅಮೆರಿಕ, ಯೂರೋಪ್, ಇಂಗ್ಲೆಂಡ್, ಸ್ವಿಟ್ಜರ್ಲೆಂಡ್ ಮೊದಲಾದೆಡೆಯ ಸೆಂಟ್ರಲ್ ಬ್ಯಾಂಕುಗಳು ಸತತವಾಗಿ ರೆಪೋ ದರಗಳನ್ನು ಹೆಚ್ಚಿಸುತ್ತಾ ಬರುತ್ತಿವೆ. ಹೀಗಾಗಿ, ಆರ್ಬಿಐ ಕೂಡ ರೆಪೋ ದರ ಹೆಚ್ಚಿಸುವುದು ಅನಿವಾರ್ಯ.
ಮೇಲಾಗಿ ಆರ್ಬಿಐ ಸತತವಾಗಿ ರೆಪೋ ದರಗಳನ್ನು ಏರಿಕೆ ಮಾಡುತ್ತಾ ಬಂದಿದೆ. ಒಟ್ಟು 250 ಬೇಸಿಸ್ ಪಾಯಿಂಟ್ಗಳಷ್ಟು ರೆಪೋ ದರ ಏರಿಕೆ ಮಾಡಿದೆ. ಇಷ್ಟಾದರೂ ಆರ್ಥಿಕತೆಗೆ ಹೆಚ್ಚಿನ ಬಿಸಿ ತಾಕಿಲ್ಲ. ಹೀಗಾಗಿ, ಮತ್ತಷ್ಟು 25 ಬಿಪಿಎಸ್ ಏರಿಕೆ ಮಾಡಿದರೆ ಆರ್ಥಿಕತೆಗೆ ಅನಾಹುತ ಆಗೊಲ್ಲ ಎಂಬುದು ಆರ್ಬಿಐ ಅಧಿಕಾರಿಗಳ ಅನಿಸಿಕೆ. ಹೀಗಾಗಿ, ಈ ಬಾರಿ ರೆಪೋ ದರ ಏರಿಕೆ ಮಾಡಿ, ನಂತರ ಒಂದಷ್ಟು ಕಾಲ ದರ ಏರಿಕೆಗೆ ವಿರಾಮ ಹಾಕುವುದು ಉತ್ತಮ ಎನ್ನುವ ಬಗ್ಗೆ ಆರ್ಬಿಐನ ಮಾನಿಟರಿ ಪಾಲಿಸಿ ಕಮಿಟಿ ಸಭೆಯಲ್ಲಿ ಚರ್ಚೆಯಾಗಿರುವುದು ತಿಳಿದುಬಂದಿದೆ. ನಾಳೆಯ ದರ ಹೆಚ್ಚಳದ ಬಳಿಕ ಈ ವರ್ಷ ಪೂರ್ತಿ ರೆಪೋ ದರ ಏರಿಕೆ ಸಾಧ್ಯತೆ ಇರುವುದಿಲ್ಲ ಎನ್ನುತ್ತಿವೆ ಮೂಲಗಳು.
ರೆಪೋ ದರ ಎಂದರೇನು?
REPO ಎಂದರೆ ರೀಪರ್ಚೇಸಿಂಗ್ ಆಪ್ಷನ್. ಅಥವಾ ಮರುಖರೀದಿ ಒಪ್ಪಂದ. ಆರ್ಬಿಐನ ರೆಪೋ ದರ ಎಂದರೆ ಕಮರ್ಷಿಯಲ್ ಬ್ಯಾಂಕುಗಳು ಆರ್ಬಿಐನಿಂದ ಪಡೆಯುವ ಸಾಲಕ್ಕೆ ನೀಡಬೇಕಾದ ಬಡ್ಡಿ ದರ ಇದು. ಯಾವುದೇ ಕಮರ್ಷಿಯಲ್ ಬ್ಯಾಂಕುಗಳಾದರೂ ಹಣಕಾಸು ಸಂಗ್ರಹದಲ್ಲಿ ಕೊರತೆಯಾಗುವ ಸಂದರ್ಭಗಳು ಬರುವುದುಂಟು. ಅಗ ವಾಣಿಜ್ಯ ಬ್ಯಾಂಕುಗಳು ಆರ್ಬಿಐನಿಂದ ಸಾಲ ಪಡೆದುಕೊಳ್ಳುತ್ತವೆ. ಈ ಸಾಲಕ್ಕೆ ಇರುವ ಬಡ್ಡಿ ದರವೇ ರೆಪೋ ದರ. ಸದ್ಯ ರೆಪೋ ದರ ಶೇ. 6.50ರಷ್ಟು ಇದೆ. ಅಂದರೆ, ವಾಣಿಜ್ಯ ಬ್ಯಾಂಕುಗಳು ಶೇ. 6.50ರ ಬಡ್ಡಿ ದರದಲ್ಲಿ ಅರ್ಬಿಐನಿಂದ ಸಾಲ ಪಡೆಯಬಹುದು. ಈ ದರ ಏರಿಕೆ ಆದರೆ ವಾಣಿಜ್ಯ ಬ್ಯಾಂಕುಗಳು ಈ ಹೊರೆಯನ್ನು ಗ್ರಾಹಕರ ಮೇಲೆ ವರ್ಗಾಯಿಸುತ್ತವೆ. ಆಗ ವಾಣಿಜ್ಯ ಬ್ಯಾಂಕುಗಳಲ್ಲಿ ಸಾಲ ಪಡೆಯುವ ಗ್ರಾಹಕರು ಹೆಚ್ಚಿನ ಬಡ್ಡಿ ಕಟ್ಟಬೇಕಾಗುತ್ತದೆ.
ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:59 am, Wed, 5 April 23