ಹಾಸ್ಪಿಟಾಲಿಟಿ (ಆತಿಥ್ಯ) ಕಂಪೆನಿಯಾದ ಓಯೋ ಬುಧವಾರದಂದು ತನ್ನ ಸಿಬ್ಬಂದಿಗಾಗಿ ಹಲವು ಕ್ರಮಗಳನ್ನು ಜಾರಿಗೆ ತಂದಿದೆ. ಕೊರೊನಾ ಬಿಕ್ಕಟ್ಟಿನ ಮಧ್ಯೆ ಸಿಬ್ಬಂದಿಯ ಒತ್ತಡವನ್ನು ಕಡಿಮೆ ಮಾಡಬೇಕು ಎಂಬ ಗುರಿಯೊಂದಿಗೆ ಈ ಕ್ರಮಗಳನ್ನು ಘೋಷಿಸಲಾಗಿದೆ. ಸ್ಟಾರ್ಟ್ ಅಪ್ ಕಂಪೆನಿಯಾದ ಓಯೋದಿಂದ ವಾರಕ್ಕೆ ನಾಲ್ಕು ದಿನ ಕೆಲಸ ಮತ್ತು ಬೇಕೆನಿಸಿದಾಗ ಅನಿರ್ದಿಷ್ಟಾವಧಿಯ ಸಂಬಳಸಹಿತ ರಜಾವನ್ನು ನೀಡುವುದಕ್ಕೆ ನಿರ್ಧರಿಸಲಾಗಿದೆ. OYO ಸಿಇಒ ರಿತೇಶ್ ಅಗರ್ವಾಲ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿರುವಂತೆ, ಇಂದಿನಿಂದ ಆರಂಭವಾಗಿ ನಾವು ವಾರದಲ್ಲಿ ನಾಲ್ಕು ದಿನ ಕೆಲಸವನ್ನು ಜಾರಿಗೆ ತರುತ್ತಿದ್ದೇವೆ. ಆದರೆ ಇದನ್ನು ಸ್ವಲ್ಪ ಭಿನ್ನವಾಗಿ ಜಾರಿಗೆ ತರುತ್ತೇವೆ. ಬುಧವಾರವನ್ನು ರಜಾ ಎಂದು ತಂದು, ವಾರದ ಮಧ್ಯ ಭಾಗದಲ್ಲಿ ನಿರಾಳವಾಗುವುದಕ್ಕೆ ಅವಕಾಶ ಮಾಡಿಕೊಡುತ್ತೇವೆ ಎಂದಿದ್ದಾರೆ.
ಇದೇ ವೇಳೆ, No Questions Asked Flexible Infinite Paid Leaves- ಯಾವುದೇ ಪ್ರಶ್ನೆ ಕೇಳದೆ ಆರಾಮದಾಯಕ ಅನಿರ್ದಿಷ್ಟಾವಧಿ ಸಂಬಳಸಹಿತ ರಜಾವನ್ನು ಜಾರಿಗೆ ತರಲಿದ್ದೇವೆ ಎಂದು ಕೂಡ ಹೇಳಿದ್ದಾರೆ. ಕೊರೊನಾ ವೈರಸ್ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಮುಂದುವರಿಸಿದೆ. ಒಂದು ವಿಷಯ ಬಹಳ ಮುಖ್ಯ ಏನೆಂದರೆ, ನಮಗೆ ಹಾಗೂ ನಮ್ಮ ಪ್ರೀತಿಪಾತ್ರರಿಗೆ ಹೆಚ್ಚಿನ ಸಮಯವನ್ನು ನೀಡಬೇಕು ಎಂದಿದ್ದಾರೆ. ಯಾವಾಗ ರಜಾ ಬೇಕು ಆಗ ತೆಗೆದುಕೊಳ್ಳಿ ಎಂದು ಓಯೋದಿಂದ ಸಿಬ್ಬಂದಿಗೆ ಹೇಳಲಾಗಿದೆ. ಅದನ್ನು ದಾಖಲಿಸಬೇಕು ಅಂತೇನಿಲ್ಲ. ನಿಮ್ಮ ಮ್ಯಾನೇಜರ್ಗೆ ತಿಳಿಸಿ, ಕಾರಣ ಬೇಕಾಗಿಲ್ಲ, ಯಾರೂ ಕೇಳುವುದಿಲ್ಲ ಎಂದು ತಿಳಿಸಲಾಗಿದೆ.
ಇನ್ನೂ ಮುಂದುವರಿದು ಅಗರ್ವಾಲ್, ವೈಯಕ್ತಿಕವಾಗಿ ನಾನು ಈ ದಿನ ಕೆಲಸ ಮಾಡಬಾರದು ಅಂದುಕೊಂಡಿದ್ದೀನಿ. ನನ್ನ ಕುಟುಂಬದ ಜತೆಗೆ ಹೆಚ್ಚು ಸಮಯ ಕಳೆಯಬೇಕು ಅಂದುಕೊಂಡಿದ್ದೀನಿ. ಓಯೋ ಕೋವಿಡ್ ವಾರ್ ರೂಮ್ನಲ್ಲಿ ಭಾಗವಹಿಸಿ, ಯಾವ ಸ್ನೇಹಿತರು, ಸಹೋದ್ಯೋಗಿಗಳ ಕುಟುಂಬಗಳು ಕೋವಿಡ್ನಿಂದಾಗಿ ಕಳೆದ ಕೆಲವು ವಾರಗಳಲ್ಲಿ ಗಂಭೀರವಾದ ಪರಿಣಾಮಗಳನ್ನು ಎದುರಿಸಿವೆಯೋ ಅವರೊಂದಿಗೆ ಮಾತನಾಡಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: Bank holidays in May 2021: ಮೇ ತಿಂಗಳಲ್ಲಿ ಬ್ಯಾಂಕ್ಗಳಿಗೆ 12 ದಿನದ ತನಕ ರಜಾ
(OYO announced 4 days work, flexible indefinite paid leave announced on Wednesday)