ನವದೆಹಲಿ: ಮೈಕ್ರೋ ಬ್ಲಾಗಿಂಗ್ ಕಂಪನಿ ಟ್ವಿಟರ್ (Twitter) ಅನ್ನು ಉದ್ಯಮಿ ಎಲಾನ್ ಮಸ್ಕ್ (Elon Musk) ಸಂಪೂರ್ಣವಾಗಿ ತಮ್ಮ ಸುಪರ್ದಿಗೆ ತೆಗೆದುಕೊಂಡ ಬೆನ್ನಲ್ಲೇ, ಸಿಇಒ ಪರಾಗ್ ಅಗರ್ವಾಲ್ (Parag Agrawal) ಸೇರಿದಂತೆ ಹಲವರನ್ನು ವಜಾ ಮಾಡಿದ್ದಾರೆ. ಆದರೆ, ಉನ್ನತ ಹುದ್ದೆಯಲ್ಲಿರುವ ಪರಾಗ್ ಅಗರ್ವಾಲ್ ಅವರನ್ನು ಹಾಗೆಯೇ ಕಳುಹಿಸಿಕೊಡುವಂತಿಲ್ಲ. ಒಪ್ಪಂದದ ಪ್ರಕಾರ ನೀಡಬೇಕಿರುವ ಪರಿಹಾರದ ಮೊತ್ತವನ್ನು ನಿಡಬೇಕಿದೆ ಎಂದು ವರದಿಯೊಂದರಲ್ಲಿ ಉಲ್ಲೇಖವಾಗಿದೆ. ಇದರ ಪ್ರಕಾರ ಅಂದಾಜು 42 ದಶಲಕ್ಷ ಡಾಲರ್, ಅಂದರೆ ಸುಮಾರು 346 ಕೋಟಿ ರೂ. ಪರಿಹಾರವಾಗಿ ಪರಾಗ್ ಅಗರ್ವಾಲ್ ಪಡೆಯಲಿದ್ದಾರೆ. ಇದರಲ್ಲಿ ವರ್ಷದ ಮೂಲ ವೇತನ, ಎಲ್ಲ ಈಕ್ವಿಟಿ ಅವಾರ್ಡ್ಗಳು ಸೇರಿರಲಿವೆ ಎಂದು ‘ರಾಯಿಟರ್ಸ್’ ಸುದ್ದಿಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ: Twitter: ಟ್ವಿಟರ್ನಲ್ಲಿ ಎಲಾನ್ ಮಸ್ಕ್ ಕಾರುಬಾರು ಶುರು: ಸಿಇಒ ಪರಾಗ್ ಅಗರ್ವಾಲ್ ಸೇರಿ ಹಲವು ಉನ್ನತ ಸಿಬ್ಬಂದಿ ವಜಾ
ಟ್ವಿಟರ್ನ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿದ್ದ ಅಗರ್ವಾಲ್ ಅವರಿಗೆ 2021ರ ಪರಿಹಾರವಾಗಿ 30.4 ದಶಲಕ್ಷ ಡಾಲರ್ (ಅಂದಾಜು 250 ಕೋಟಿ ರೂ.) ನೀಡಬೇಕಿದೆ. ಸಿಇಒ ಆಗಿ ಅಗರ್ವಾಲ್ ವೇತನ ವಾರ್ಷಿಕ 1 ದಶಲಕ್ಷ ಡಾಲರ್ (ಸುಮಾರು 8.24 ಕೋಟಿ ರೂ.) ಇದೆ ಎಂದು ವರದಿ ಉಲ್ಲೇಖಿಸಿದೆ.
ಕಳೆದ ವರ್ಷ ಅಧಿಕಾರ ಸ್ವೀಕರಿಸಿದ್ದ ಅಗರ್ವಾಲ್
ಕಳೆದ ವರ್ಷ ನವೆಂಬರ್ನಲ್ಲಿ ಪರಾಗ್ ಅಗರ್ವಾಲ್ ಟ್ವಿಟರ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (ಸಿಇಒ) ಅಧಿಕಾರ ಸ್ವೀಕರಿಸಿದ್ದರು. ಆದರೆ, ಮಸ್ಕ್ ಅವರು ಕಂಪನಿಯನ್ನು ಖರೀದಿಸುತ್ತಿದ್ದಂತೆಯೇ ಅಗರವಾಲ್ ಸ್ಥಾನಕ್ಕೆ ಕುತ್ತುಬಂದಿದೆ. ಆದರೆ, ಅಗರವಾಲ್ ಅವರು ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಟ್ವಿಟರ್ ಜತೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ, ಪರಿಹಾರ ಪಡೆಯಲು ಅವರು ಅರ್ಹರಾಗಿರುತ್ತಾರೆ. ಇದರಂತೆ, ಟ್ವಿಟರ್ನಿಂದ ಅವರಿಗೆ ಅಂದಾಜು 346 ಕೋಟಿ ರೂ. ಪರಿಹಾರ ದೊರೆಯಬೇಕಿದೆ.
ಉದ್ಯಮಿ ಎಲಾನ್ ಮಸ್ಕ್ ಅವರು ಸುಮಾರು 44 ಶತಕೋಟಿ ಡಾಲರ್ಗೆ ಟ್ವಿಟರ್ ಅನ್ನು ಖರೀದಿ ಮಾಡಿದ್ದಾರೆ. ಈ ಕುರಿತು ಶುಕ್ರವಾರ ಬೆಳಿಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿತ್ತು. ಇದರ ಬೆನ್ನಲ್ಲೇ, ಸಿಇಒ ಪರಾಗ್ ಅಗರ್ವಾಲ್, ಟ್ವಿಟರ್ನ ಸಿಎಫ್ಒ ನೆಡ್ ಸೆಗಲ್ ಹಾಗೂ ನೀತಿ ನಿರೂಪಣೆ-ವಿಶ್ವಾಸಾರ್ಹತೆ ಮತ್ತು ಸುರಕ್ಷಾ ವಿಭಾಗದ ಮುಖ್ಯಸ್ಥರಾದ ವಿಜಯಾ ಗಡ್ಡೆ ಅವರನ್ನು ಮಸ್ಕ್ ವಜಾ ಮಾಡಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ