AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತಂಜಲಿ ಫುಡ್ಸ್ ಭರ್ಜರಿ ಲಾಭ ಹೆಚ್ಚಳದ ಬೆನ್ನಲ್ಲೇ ಷೇರುದಾರರಿಗೆ ಡಿವಿಡೆಂಡ್ ಘೋಷಣೆ; ರೆಕಾರ್ಡ್ ಡೇಟ್ ನಿಗದಿ

Patanjali Foods announces Rs 1.75 dividend per share: ಪತಂಜಲಿ ಫುಡ್ಸ್ ತನ್ನ ಷೇರುದಾರರಿಗೆ ಲಾಭದ ಬಾಗಿಲು ತೆರೆದಿದೆ. ಕಂಪನಿಯು ಪ್ರತಿ ಷೇರಿಗೆ ₹1.75 ರ ಮಧ್ಯಂತರ ಲಾಭಾಂಶವನ್ನು ಘೋಷಿಸಿದೆ. ಇದರ ರೆಕಾರ್ಡ್ ಡೇಟ್ ಆಗಿ ನವೆಂಬರ್ 13, 2025 ಅನ್ನು ನಿಗದಿ ಮಾಡಲಾಗಿದೆ. ಪತಂಜಲಿ ಫುಡ್ಸ್ ಸಂಸ್ಥೆಯ ಎರಡನೇ ತ್ರೈಮಾಸಿಕ ಲಾಭದ ವರದಿಯೂ ಕೂಡ ಭರ್ಜರಿಯಾಗಿದೆ. 516.69 ಕೋಟಿ ರೂ ನಿವ್ವಳ ಲಾಭವನ್ನು ಇದು ತೋರಿಸಿದೆ.

ಪತಂಜಲಿ ಫುಡ್ಸ್ ಭರ್ಜರಿ ಲಾಭ ಹೆಚ್ಚಳದ ಬೆನ್ನಲ್ಲೇ ಷೇರುದಾರರಿಗೆ ಡಿವಿಡೆಂಡ್ ಘೋಷಣೆ; ರೆಕಾರ್ಡ್ ಡೇಟ್ ನಿಗದಿ
ಪತಂಜಲಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 10, 2025 | 7:05 PM

Share

ನವದೆಹಲಿ, ನವೆಂಬರ್ 10: ದೇಶದ ಪ್ರಮುಖ FMCG ಕಂಪನಿಗಳಲ್ಲಿ ಒಂದಾದ ಪತಂಜಲಿ ಫುಡ್ಸ್ (Patanjali Foods) ತನ್ನ ಹೂಡಿಕೆದಾರರಿಗೆ ಮಹತ್ವದ ಉಡುಗೊರೆಯನ್ನು ನೀಡಿದೆ. ಕಂಪನಿಯ ಬೋರ್ಡ್ 2025-26ರ ಆರ್ಥಿಕ ವರ್ಷಕ್ಕೆ ಮಧ್ಯಂತರ ಲಾಭಾಂಶವನ್ನು (Interim Dividend) ಅನುಮೋದಿಸಿದೆ ಎಂದು ಕಂಪನಿಯು ತನ್ನ ಎಕ್ಸ್​ಚೇಂಜ್ ಫೈಲಿಂಗ್​ನಲ್ಲಿ ತಿಳಿಸಿದೆ. ಇತ್ತೀಚೆಗಷ್ಟೇ ಪತಂಜಲಿ ಸಂಸ್ಥೆಯು ತನ್ನ ತ್ರೈಮಾಸಿಕ ಲಾಭದ ವರದಿಯನ್ನು (Q1 results) ಬಿಡುಗಡೆ ಮಾಡಿತ್ತು. ಅದರ ಲಾಭದಲ್ಲಿ ಗಣನೀಯ ಹೆಚ್ಚಳ ಆಗಿದೆ. ಇದರ ಬೆನ್ನಲ್ಲೇ ಸಂಸ್ಥೆಯು ತನ್ನ ಷೇರುದಾರರಿಗೆ ಇಂಟೆರಿಮ್ ಡಿವಿಡೆಂಡ್ ಘೋಷಣೆ ಮಾಡಿದೆ. ಇದರ ರೆಕಾರ್ಡ್ ಡೇಟ್, ಡಿವಿಡೆಂಡ್ ಹಣ ಕೈಸೇರುವ ದಿನ ಇತ್ಯಾದಿ ವಿವರ ಮುಂದಿದೆ.

ಪ್ರತಿ ಷೇರಿಗೆ 1.75 ರೂ ಲಾಭಾಂಶ

ಪತಂಜಲಿ ಫುಡ್ಸ್ ಒದಗಿಸಿದ ಮಾಹಿತಿಯ ಪ್ರಕಾರ, 2 ರೂ ಮುಖಬೆಲೆಯ ಪ್ರತಿ ಈಕ್ವಿಟಿ ಷೇರಿಗೆ ₹1.75 ಮಧ್ಯಂತರ ಲಾಭಾಂಶವನ್ನು ಪಾವತಿಸಲಾಗುತ್ತದೆ. ಅಂದರೆ, ನಿಮ್ಮ ಬಳಿ ಪತಂಜಲಿ ಫುಡ್ಸ್​ನ 100 ಷೇರು ಇದ್ದರೆ ನಿಮಗೆ 175 ರೂ ಡಿವಿಡೆಂಡ್ ಸಿಗುತ್ತದೆ. ಸದ್ಯಕ್ಕೆ ಪತಂಜಲಿ ಫುಡ್ಸ್​ನ ಷೇರುಬೆಲೆ ಇವತ್ತು 578 ರೂ ಇದೆ.

ನವೆಂಬರ್ 13ಕ್ಕೆ ರೆಕಾರ್ಡ್ ಡೇಟ್; ಹಾಗಂದರೇನು?

ಡಿವಿಡೆಂಡ್ ವಿತರಿಸಲು ಪತಂಜಲಿ ಫುಡ್ಸ್ ರೆಕಾರ್ಡ್ ಡೇಟ್ ಆಗಿ ನವೆಂಬರ್ 13 ಅನ್ನು ನಿಗದಿ ಮಾಡಿದೆ. ಅಂದರೆ ಆ ದಿನದಂದು ಯಾವ ಹೂಡಿಕೆದಾರರ ಡೀಮ್ಯಾಟ್ ಅಕೌಂಟ್​ಗಳಲ್ಲಿ ಪತಂಜಲಿ ಷೇರುಗಳು ಇರುತ್ತವೆಯೋ ಅವರು ಡಿವಿಡೆಂಡ್ ಪಡೆಯಲು ಅರ್ಹರಾಗಿರುತ್ತಾರೆ.

ಇದನ್ನೂ ಓದಿ: ಬಿಡುವಿಲ್ಲದ ಜೀವನದಲ್ಲಿ ಫಿಟ್ ಅಂಡ್ ಫೈನ್ ಆಗಿರುವುದು ಹೇಗೆ? ಈ ಚಟುವಟಿಕೆಗಳಿಗೆ ಬಾಬಾ ರಾಮದೇವ್ ಶಿಫಾರಸು

ಹೂಡಿಕೆದಾರರು ಇಲ್ಲಿ ಬಹಳ ಮುಖ್ಯವಾದ ಅಂಶವನ್ನು ಗಮನಿಸಬೇಕು. ಭಾರತ ಈಗ T+1 ಸೆಟಲ್ಮೆಂಟ್ ಸೈಕಲ್ ಅನುಸರಿಸುತ್ತದೆ. ಅಂದರೆ, ಇವತ್ತು ನೀವು ಷೇರು ಖರೀದಿಸಿದರೆ ಒಂದು ಬ್ಯುಸಿನೆಸ್ ಡೇ ನಂತರ ಆ ಷೇರು ಡೀಮ್ಯಾಟ್ ಅಕೌಂಟ್​ಗೆ ಸೇರುತ್ತದೆ. ಹೀಗಾಗಿ, ನೀವು ನವೆಂಬರ್ 13ರಂದು ಪತಂಜಲಿ ಫುಡ್ಸ್ ಷೇರು ಖರೀದಿಸಿದರೆ ಆ ದಿನವೇ ಡಿಮ್ಯಾಟ್ ಅಕೌಂಟ್​ಗೆ ಷೇರು ಜಮೆ ಆಗದೇ ಇರಬಹುದು. ಹೀಗಾಗಿ ಡಿವಿಡೆಂಡ್​ಗೆ ಅರ್ಹರಾಗದೇ ಹೋಗಬಹುದು. ಹೀಗಾಗಿ, ಪತಂಜಲಿ ಷೇರುಗಳ ಡಿವಿಡೆಂಡ್ ಗಳಿಸಬೇಕೆಂದಿದ್ದರೆ ನ. 12, ಬುಧವಾರದೊಳಗೆ ಷೇರು ಖರೀದಿಸಬೇಕಾಗುತ್ತದೆ.

ಡಿಸೆಂಬರ್ 7ರೊಳಗೆ ಡಿವಿಡೆಂಡ್ ಹಣ ನಿಮ್ಮ ಖಾತೆಗೆ

ಪತಂಜಲಿ ಫೂಡ್ಸ್​ನ ಡಿವಿಡೆಂಡ್​ಗೆ ರೆಕಾರ್ಡ್ ಡೇಟ್ ಆಗಿ ನ. 13, ಗುರುವಾರ ನಿಗದಿಯಾಗಿದೆಯಾದರೂ, ಆ ದಿನವೇ ಡಿವಿಡೆಂಡ್ ಹಣ ನಿಮ್ಮ ಕೈಸೇರುವುದಿಲ್ಲ. ಕಂಪನಿ ನೀಡಿದ ಮಾಹಿತಿ ಪ್ರಕಾರ, ಷೇರು ಲಾಭಾಂಶವನ್ನು ಷೇರುದಾರರಿಗೆ 2025ರ ಡಿಸೆಂಬರ್ 7ಕ್ಕೆ ನೀಡಲಾಗುತ್ತದೆ. ಒಟ್ಟು 59.36 ಕೋಟಿ ರೂ ಡಿವಿಡೆಂಡ್ ಅನ್ನು ಪತಂಜಲಿ ಸಂಸ್ಥೆ ನೀಡುತ್ತಿದೆ.

ಪತಂಜಲಿ ಲಾಭದಲ್ಲಿ ಶೇ.67 ರಷ್ಟು ಬಲವಾದ ಏರಿಕೆ

ಪತಂಜಲಿ ಫುಡ್ಸ್ ಸಂಸ್ಥೆ ಎರಡನೇ ತ್ರೈಮಾಸಿಕದಲ್ಲಿ (ಜುಲೈನಿಂದ ಸೆಪ್ಟೆಂಬರ್) ಉತ್ತಮ ಲಾಭ ತೋರಿಸಿದೆ. ಅದರ ನಿವ್ವಳ ಲಾಭ 516.69 ಕೋಟಿ ರೂ ಆಗಿದೆ. ಹಿಂದಿನ ವರ್ಷದ ಇದೇ ಕ್ವಾರ್ಟರ್​ಗೆ ಹೋಲಿಸಿದರೆ ನಿವ್ವಳ ಲಾಭದಲ್ಲಿ ಬರೋಬ್ಬರಿ ಶೇ. 67ರಷ್ಟು ಹೆಚ್ಚಾಗಿದೆ. 2024ರ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಅದು ಗಳಿಸಿದ ನಿವ್ವಳ ಲಾಭ 308.58 ಕೋಟಿ ಇತ್ತು.

ಇದನ್ನೂ ಓದಿ: ಚಳಿಗಾಲದಲ್ಲಿ ಮೂಲಂಗಿ ಹೇಗೆ ತಿನ್ನಬೇಕು, ಇದರ ಪ್ರಯೋಜನಗಳೇನು? ಬಾಬಾ ರಾಮದೇವ್​ರಿಂದ ಮಾಹಿತಿ

ಈ ಬಾರಿ ಲಾಭ ಮಾತ್ರವಲ್ಲದೆ, ಕಂಪನಿಯ ಒಟ್ಟು ಆದಾಯವೂ ಗಮನಾರ್ಹ ಏರಿಕೆ ಕಂಡಿದೆ. ಪತಂಜಲಿ ಫುಡ್ಸ್ ಪಡೆದ ಆದಾಯ 9,798.80 ಕೋಟಿ ರೂ ಇದೆ ಎನ್ನಲಾಗಿದೆ. ಹಿಂದಿನ ವರ್ಷದಕ್ಕೆ ಹೋಲಿಸಿದರೆ ಆದಾಯದಲ್ಲಿ ಶೇ. 20.9ರಷ್ಟು ಏರಿಕೆ ಆಗಿದೆ.

ಷೇರು ಮಾರುಕಟ್ಟೆಯಲ್ಲಿ ಉತ್ತಮ ಪ್ರತಿ ಕಂಡ ಪತಂಜಲಿ ಷೇರು

ಪತಂಜಲಿ ಫುಡ್ಸ್ ಷೇರುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಕಳೆದ ಐದು ದಿನದಲ್ಲಿ 1.30 ರೂಗಳಷ್ಟು ಏರಿಕೆ ಆಗಿದೆ. ಇವತ್ತು ಸೋಮವಾರ ಇದರ ಷೇರುಬೆಲೆ 583 ರೂಗಳ ಗರಿಷ್ಠ ಮಟ್ಟಕ್ಕೆ ಏರಿ, ಕೊನೆಯಲ್ಲಿ 578.70 ರೂನಲ್ಲಿ ಅಂತ್ಯಗೊಂಡಿದೆ. ಕಳೆದ ಒಂದು ವರ್ಷದಲ್ಲಿ ಇತರ ಹೆಚ್ಚಿನ ಕಂಪನಿಗಳ ಷೇರುಗಳಂತೆ ಪತಂಜಲಿ ಷೇರು ಕೂಡ ಹಿನ್ನಡೆ ಅನುಭವಿಸಿದರೆ. ಆದರೆ, ಮೂರ್ನಾಲ್ಕು ವರ್ಷದಲ್ಲಿ ಇದು ಹೂಡಿಕೆದಾರರಿಗೆ ಶೇ. 67ರಷ್ಟು ಲಾಭ ತಂದುಕೊಟ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ