
ಮುಂಬೈ, ಮಾರ್ಚ್ 6: ದೇಶದ ಪ್ರಮುಖ ಎಫ್ಎಂಸಿಜಿ ಕಂಪನಿಯಾದ ಪತಂಜಲಿ ಮಹಾರಾಷ್ಟ್ರದ ನಾಗಪುರ್ ಜಿಲ್ಲೆಯಲ್ಲಿ 1,500 ಕೋಟಿ ರೂ ಹೂಡಿಕೆಯಲ್ಲಿ ಆಹಾರ ಸಂಸ್ಕರಣಾ ಘಟಕ ಸ್ಥಾಪಿಸುತ್ತಿದೆ. ಮಲ್ಟಿ ಮೋಡಲ್ ಇಂಟರ್ನ್ಯಾಷನಲ್ ಕಾರ್ಗೋ ಹಬ್ ಮತ್ತು ಏರ್ಪೋರ್ಟ್ನಲ್ಲಿ (MIHAN) ಪತಂಜಲಿ ಮೆಗಾ ಫೂಡ್ ಮತ್ತು ಹರ್ಬಲ್ ಪಾರ್ಕ್ ಮಾರ್ಚ್ 9ರಂದು ಕಾರ್ಯನಿರ್ವಹಿಸಲು ಆರಂಭಿಸಲಾಗುತ್ತಿದೆ. ಈ ಸಂಸ್ಕರಣಾ ಘಟಕದಲ್ಲಿ ಹಣ್ಣು ಮತ್ತು ತರಕಾರಿಗಳಿಂದ ಜ್ಯೂಸ್, ಪಲ್ಪ್, ಪೇಸ್ಟ್ ಇತ್ಯಾದಿ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ.
ನಾಗಪುರ ಆರೆಂಜ್ ಸಿಟಿ ಅಥವಾ ಕಿತ್ತಳೆ ನಗರಿ ಎಂದೇ ಖ್ಯಾತವಾಗಿದೆ. ನಿಂಬೆ ಜಾತಿಗೆ ಸೇರಿದ ಕಿತ್ತಳೆ, ಮೂಸಂಬಿ ಇತ್ಯಾದಿ ಹಣ್ಣುಗಳನ್ನು ನಾಗಪುರದಲ್ಲಿ ಯಥೇಚ್ಛವಾಗಿ ಬೆಳೆಯಲಾಗುತ್ತಿದೆ. ಹೀಗಾಗಿ, ಸಿಟ್ರಸ್ ಸಂಸ್ಕರಣಾ ಘಟಕವನ್ನು ನಾಗಪುರದಲ್ಲಿ ಸ್ಥಾಪಿಸಲಾಗಿದೆ. ಪತಂಜಲಿಯ ಈ ಘಟಕದಲ್ಲಿ ದಿನಕ್ಕೆ 800 ಟನ್ಗಳಷ್ಟು ಸಿಟ್ರಸ್ ಹಣ್ಣುಗಳನ್ನು ಸಂಸ್ಕರಿಸಿ ಜ್ಯೂಸ್ ಕಾನ್ಸಂಟ್ರೇಟ್ ತಯಾರಿಸಲಾಗುತ್ತದೆ. ಈ ರಸಕ್ಕೆ ಯಾವುದೇ ಸಕ್ಕರೆ ಅಥವಾ ಪ್ರಿಸರ್ವೇಟಿವ್ಗಳನ್ನು ಹಾಕಲಾಗುವುದಿಲ್ಲ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಭಾರತದ ಮೇಲೆ ಅಮೆರಿಕದ ಟ್ಯಾರಿಫ್ ಪರಿಣಾಮ ಯಾಕೆ ನಗಣ್ಯ? ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ನಲ್ಲಿ ಕೇಕಿ ಮಿಸ್ತ್ರಿ ಉತ್ತರ
ಇದು ಮಾತ್ರವಲ್ಲ, ನೆಲ್ಲಿಕಾಯಿ, ಮಾವಿನಹಣ್ಣು, ಸೀಬೆ ಹಣ್ಣು, ಪಪ್ಪಾಯ, ಸೇಬು, ದಾಳಿಂಬೆ, ಸ್ಟ್ರಾಬೆರಿ, ಪ್ಲಂ, ಮರಸೇಬು, ಟೊಮೆಟೋ, ಹಾಗಲು ಕಾಯಿ, ಕ್ಯಾರಟ್, ಆಲೂವೆರಾ ಇತ್ಯಾದಿ ಹಣ್ಣುಗಳನ್ನು ಈ ಘಟಕದಲ್ಲಿ ಸಂಸ್ಕರಿಸಲಾಗುತ್ತದೆ. ಇವುಗಳಿಂದಲೂ ವಿವಿಧ ಸಾಂದ್ರತೆಯ ರಸಗಳನ್ನು ಉತ್ಪಾದಿಸಲಾಗುತ್ತದೆ.
ನಾಗಪುರ್ನಲ್ಲಿರುವ ಪತಂಜಲಿ ಫೂಡ್ ಪಾರ್ಕ್ನಲ್ಲಿ ಟೆಟ್ರಾ ಪ್ಯಾಕ್ ಘಟಕವೊಂದನ್ನೂ ತೆರೆಯಲಾಗುತ್ತಿದೆ. ಈ ಪಾರ್ಕ್ನ ಮತ್ತೊಂದು ವೈಶಿಷ್ಟ್ಯವೆಂದರೆ, ತಯಾರಿಕೆಯ ವೇಳೆ ಸಿಗುವ ಯಾವುದೇ ಉಪ ಉತ್ಪನ್ನ ಅಥವಾ ತ್ಯಾಜ್ಯವನ್ನು ವ್ಯರ್ಥವಾಗಲು ಬಿಡಲಾಗುವುದಿಲ್ಲ. ಕಿತ್ತಳೆ ಹಣ್ಣಿನಿಂದ ರಸ ಹೊರತೆಗೆದು ಉಳಿಯುವ ಸಿಪ್ಪೆಯಿಂದ ಎಣ್ಣೆ ಮಾಡಲಾಗುತ್ತದೆ. ಕಿತ್ತಳೆಯ ಸಿಪ್ಪೆಯಲ್ಲಿ ಕೋಲ್ಡ್ ಪ್ರೆಸ್ ಆಯಿಲ್ ಇರುತ್ತದೆ. ಇದಕ್ಕೆ ಬಹಳ ಬೇಡಿಕೆ ಇದೆ. ಹಾಗೆಯೇ, ಸಿಪ್ಪೆಯ ಪುಡಿಯನ್ನು ಸೌಂದರ್ಯವರ್ಧಕಗಳ ತಯಾರಿಕೆಗೆ ಉಪಯೋಗಿಸಲಾಗುತ್ತದೆ. ಪತಂಜಲಿ ಸಂಸ್ಥೆ ಈ ಉಪ ಉತ್ಪನ್ನದಿಂದಲೂ ಬೇರೆ ಉತ್ಪನ್ನ ತಯಾರಿಸುತ್ತದೆ.
ಇದನ್ನೂ ಓದಿ: ಮಹಾರಾಷ್ಟ್ರ ಬಹಳ ಬೇಗ ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಜ್ಯವಾಗಲಿದೆ: ಸಿಎಂ ದೇವೇಂದ್ರ ಫಡ್ನವಿಸ್
ನಾಗಪುರದ ಈ ಮೆಗಾ ಫುಡ್ ಪಾರ್ಕ್ನಲ್ಲಿ ಪತಂಜಲಿ ಸಂಸ್ಥೆ ಒಂದು ಹಿಟ್ಟಿನ ಗಿರಣಿಯನ್ನೂ ಸ್ಥಾಪಿಸಿದೆ. ಪತಂಜಲಿ ಸಂಸ್ಥೆ ಗೋದಿಯನ್ನು ರೈತರಿಂದ ನೇರವಾಗಿ ಖರೀದಿಸುತ್ತದೆ. ಈ ಮಿಲ್ನಲ್ಲಿ ದಿನಕ್ಕೆ ನೂರು ಟನ್ಗಳಷ್ಟು ಗೋದಿಯನ್ನು ಪುಡಿ ಮಾಡಿ, ಜಲ್ನಾ, ಆಂಧ್ರ, ಮತ್ತು ತೆಲಂಗಾಣದಲ್ಲಿರುವ ಪತಂಜಲಿಯ ಬಿಸ್ಕತ್ ಫ್ಯಾಕ್ಟರಿಗಳಿಗೆ ಕಳುಹಿಸಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ