Paytm Listing: ಪೇಟಿಎಂ ಐಪಿಒದಲ್ಲಿ ಸಂಗ್ರಹಿಸಿದ್ದ 18 ಸಾವಿರ ಕೋಟಿಯ ದುಪ್ಪಟ್ಟಿಗೂ ಹೆಚ್ಚು ಹಣ 38 ಸಾವಿರ ಕೋಟಿ ಕಳ್ಕೊಂಡ ಹೂಡಿಕೆದಾರರು

| Updated By: preethi shettigar

Updated on: Nov 19, 2021 | 8:44 AM

ಪೇಟಿಎಂ ಷೇರಿನಲ್ಲಿ ಹೂಡಿಕೆ ಮಾಡಿದ್ದವರು ಲಿಸ್ಟಿಂಗ್​ ದಿನವಾದ ನವೆಂಬರ್​ 18ರಂದು 38,000 ಕೋಟಿ ರೂಪಾಯಿಯಷ್ಟು ಸಂಪತ್ತು ಕಳೆದುಕೊಂಡಿದ್ದಾರೆ.

Paytm Listing: ಪೇಟಿಎಂ ಐಪಿಒದಲ್ಲಿ ಸಂಗ್ರಹಿಸಿದ್ದ 18 ಸಾವಿರ ಕೋಟಿಯ ದುಪ್ಪಟ್ಟಿಗೂ ಹೆಚ್ಚು ಹಣ 38 ಸಾವಿರ ಕೋಟಿ ಕಳ್ಕೊಂಡ ಹೂಡಿಕೆದಾರರು
ಪ್ರಾತಿನಿಧಿಕ ಚಿತ್ರ
Follow us on

ಪೇಟಿಎಂ ಷೇರು ಮಾರುಕಟ್ಟೆಗೆ ಪದಾರ್ಪಣೆ ಮಾಡಿದ ದಿನದಂದು ಹೂಡಿಕೆದಾರರಿಗೆ ಖಾರವಾದ ಅನುಭವ ನೀಡಿದೆ. ಐಪಿಒದಲ್ಲಿ ಈ ಷೇರು ಪಡೆದವರಿಗೆ ಭಾರೀ ನಷ್ಟವನ್ನು ಉಂಟುಮಾಡಿದೆ. ಬೆಲೆ ಕುಸಿತದ ಪರಿಣಾಮವಾಗಿ ಐಪಿಒ ಮೌಲ್ಯಮಾಪನದಲ್ಲಿ 38,000 ಕೋಟಿ ರೂಪಾಯಿ ಕೊಚ್ಚಿಹೋಗಿದೆ. ಪೇಟಿಎಂ ಐಪಿಒ ದರದ ಮೇಲ್​ಸ್ತರದ ಬ್ಯಾಂಡ್​ನಲ್ಲಿ 1.39 ಲಕ್ಷ ಕೋಟಿ ರೂಪಾಯಿ ಮೌಲ್ಯಮಾಪನ ಪಡೆದಿತ್ತು. ನವೆಂಬರ್ 18ರಂದು ಷೇರು ಮಾರುಕಟ್ಟೆಯ ಬಿಎಸ್​ಇ ಸೂಚ್ಯಂಕದಲ್ಲಿ ಲಿಸ್ಟಿಂಗ್ ಆಗಿದ್ದು ಶೇ 9ರಷ್ಟು ರಿಯಾಯಿತಿಯೊಂದಿಗೆ, ಅಂದರೆ 1950 ರೂಪಾಯಿಗೆ. ಷೇರಿನ ವಿತರಣೆ ಬೆಲೆಯು 2,150 ರೂಪಾಯಿ ಆಗಿತ್ತು. ಆ ನಂತರ ಸತತವಾಗಿ ಕುಸಿಯುತ್ತಾ ಸಾಗಿತು. ಹೂಡಿಕೆದಾರರು ಈ ಷೇರಿನ ಬಗ್ಗೆ ಜಾಗೃತರಾದರು. ಅಷ್ಟರೊಳಗೆ ಈ ದಿನದ ವಹಿವಾಟಿನಲ್ಲಿ ವಿತರಣೆ ಬೆಲೆಗಿಂತ ಶೇ 27ರಷ್ಟು ನಷ್ಟ ಅನುಭವಿಸಿತು. ಇನ್ನು ದಿನದ ಕೊನೆ 1564.15 ರೂಪಾಯಿಗೆ ವಹಿವಾಟು ಮುಗಿಸಿತು. 1000 ಕೋಟಿ ಮತ್ತು ಅದಕ್ಕೂ ಹೆಚ್ಚು ಮೌಲ್ಯದ ಐಪಿಒದಲ್ಲಿ ಅತಿ ಕೆಟ್ಟ ಲಿಸ್ಟಿಂಗ್ ಪಡೆದ ಕೆಟ್ಟ ದಾಖಲೆಯು ಪೇಟಿಎಂ ಹೆಸರಿನಲ್ಲಿ ಬರೆಯಲಾಯಿತು.

ಪೇಟಿಎಂ ಪಾವತಿಗಳ ಸೇವೆಯನ್ನು ನಡೆಸುತ್ತಿರುವ ಕಂಪೆನಿಯಾದ ಒನ್​97 ಕಮ್ಯುನಿಕೇಷನ್ಸ್ ಲಿಮಿಟೆಡ್​ನ ನಿರಾಶಾದಾಯಕ ಪದಾರ್ಪಣೆಯ ನೆರಳು ಐಪಿಒ ಮಾರುಕಟ್ಟೆಯ ಮೇಲೆ ಬೀಳುತ್ತದೆ. ಪೇಟಿಎಂ ಷೇರುಗಳನ್ನು ಮಾರಾಟವನ್ನು ಗಮನಿಸಿದರೆ ಹೂಡಿಕೆದಾರರು ಮೌಲ್ಯಮಾಪನದ ಬಗ್ಗೆ ಹಾಗೂ ಹೂಡಿಕೆ ಮಾಡಲು ಆಯ್ಕೆ ಮಾಡುವ ಷೇರುಗಳ ಬಗ್ಗೆ ಹೆಚ್ಚು ವಿವೇಚನಾಶೀಲರಾಗುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ.

ಆದರೆ, ಮೌಲ್ಯಮಾಪನದ ಆತಂಕದ ಹೊರತಾಗಿಯೂ ಟೆಕ್ ಕಂಪೆನಿಗಳು ಇತ್ತೀಚೆಗೆ ಉತ್ತಮವಾದ ಲಿಸ್ಟಿಂಗ್​ ಮಾಡಿವೆ. ಉದಾಹರಣೆಗೆ, ಝೊಮಾಟೊ. ಅದು ಮೊದಲ ದಿನವೇ ಶೇ 65ರಷ್ಟು ಏರಿತು. ಇನ್ನು ಪಾಲಿಸಿಬಜಾರ್ ಶೇ 17ರಷ್ಟು ಹೆಚ್ಚಳವಾಯಿತು. ನೈಕಾ ಶೇ 79ರಷ್ಟು ಪ್ರೀಮಿಯಂನಲ್ಲಿ ಪ್ರಾರಂಭವಾಯಿತು. ಪೇಟಿಎಂನ ಐಪಿಒ 18,300 ಕೋಟಿ ರೂಪಾಯಿಗೆ ಆಗಿತ್ತು. ಆದರೆ ಅದರ ಮೌಲ್ಯವು ಲಿಸ್ಟಿಂಗ್​ ದಿನವೇ ಸಂಗ್ರಹಿಸಿದ ಹಣಕ್ಕಿಂತ ಎರಡು ಪಟ್ಟು ಅಳಿಸಿಹಾಕಿತು. ಅಂದ ಹಾಗೆ ಈ ಮೊತ್ತದ ಐಪಿಒ ಗಾತ್ರ ಭಾರತದಲ್ಲಿ ಇದುವರೆಗಿನ ಅತಿ ದೊಡ್ಡದು ಎಂಬ ದಾಖಲೆ ಮಾಡಿದೆ. ಕಳೆದ ವಾರ ಕೇವಲ 1.89 ಪಟ್ಟು ಹೆಚ್ಚು ಸಬ್‌ಸ್ಕ್ರೈಬ್ ಆದ ನಂತರ ಕೆಲವು ವಿಶ್ಲೇಷಕರು ಪೇಟಿಎಂನ ಲಿಸ್ಟಿಂಗ್ ದಿನದ ರಿಟರ್ನ್ಸ್​ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ಮೊದಲ ದಿನದ ವಹಿವಾಟಿನ ಅಂತ್ಯದಲ್ಲಿ ಪೇಟಿಎಂನ ಮಾರುಕಟ್ಟೆ ಮೌಲ್ಯವು 1 ಲಕ್ಷ ಕೋಟಿಗಿಂತ ಹೆಚ್ಚಿತ್ತು, ಇದು ಹಿಂಡಾಲ್ಕೊ, ಕೋಲ್ ಇಂಡಿಯಾ, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್, ಬ್ರಿಟಾನಿಯಾ, ಇಂಡಸ್‌ಇಂಡ್ ಬ್ಯಾಂಕ್, ಡಾ ರೆಡ್ಡಿಸ್, ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್​, ಸಿಪ್ಲಾ ಮತ್ತು ಹೀರೋ ಮೋಟೋಕಾರ್ಪ್​ ಸ್ಟಾಕ್‌ಗಳಿಗಿಂತ ಹೆಚ್ಚು ಮೌಲ್ಯದ್ದಾಗಿದೆ. ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ ಪ್ರಕಾರ, ಪೇಟಿಎಂಗೆ ಪ್ರಮುಖ ಅವಕಾಶವೆಂದರೆ 333 ಮಿಲಿಯನ್ ಗ್ರಾಹಕರನ್ನು ಮತ್ತು 21 ಮಿಲಿಯನ್ ವ್ಯಾಪಾರಿ ಮೂಲವನ್ನು ಹಣಕಾಸು ಸೇವೆಗಳ ಕ್ರಾಸ್​-ಸೆಲ್ಲಿಂಗ್​ ಮೂಲಕ ಹಣ ಗಳಿಸುವುದು. ಪ್ರಸ್ತುತ, ಪಾವತಿಗಳು ಮತ್ತು ಹಣಕಾಸು ಸೇವೆಗಳು ಒಟ್ಟು ಪ್ರಮುಖ ಆದಾಯಕ್ಕೆ ಶೇ 75ರಷ್ಟು ಕೊಡುಗೆ ನೀಡುತ್ತವೆ. ಆದರೂ ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ ಪಾವತಿ-ಅಲ್ಲದ ವ್ಯವಹಾರಗಳ ಪಾಲನ್ನು ಶೀಘ್ರವಾಗಿ ಹೆಚ್ಚಿಸುವ ನಿರೀಕ್ಷೆ ಇರಿಸಿಕೊಂಡಿದೆ.

ಇದನ್ನೂ ಓದಿ: Closing Bell: ಸೆನ್ಸೆಕ್ಸ್, ನಿಫ್ಟಿ ಇಳಿಕೆ; ಪೇಟಿಎಂ ಲಿಸ್ಟಿಂಗ್​ ದಿನ 589 ರೂ. ಅಥವಾ ಶೇ 27ರಷ್ಟು ಕುಸಿತ