ನವದೆಹಲಿ, ಮೇ 9: ಯುಪಿಐ ಪೇಮೆಂಟ್ನಿಂದ ಆರಂಭವಾಗಿ ಈಗ ವಿವಿಧ ಸೇವೆಗಳನ್ನು ಒದಗಿಸುವ ಪ್ಲಾಟ್ಫಾರ್ಮ್ ಆಗಿ ವಿಸ್ತಾರಗೊಂಡಿರುವ ಪೇಟಿಎಂ ಈಗ ಓಲಾ, ಊಬರ್, ನಮ್ಮ ಯಾತ್ರಿ ರೀತಿಯಲ್ಲಿ ರಿಕ್ಷಾ ಸೇವೆ (rickshaw service) ಕೊಡಲಿದೆ. ಮನಿ ಕಂಟ್ರೋಲ್ನಲ್ಲಿ ಬಂದಿರುವ ವರದಿ ಪ್ರಕಾರ ನಮ್ಮ ಯಾತ್ರಿ ರೀತಿಯಲ್ಲಿ ಒಎನ್ಡಿಸಿ ಪ್ಲಾಟ್ಫಾರ್ಮ್ ಬಳಸಿ ಆಟೊರಿಕ್ಷಾ ರೇಡ್ ಬುಕಿಂಗ್ ಸರ್ವಿಸ್ ಆರಂಭಿಸಲಿದೆ. ಸದ್ಯಕ್ಕೆ ಆರಂಭದಲ್ಲಿ ಬೆಂಗಳೂರು, ಚೆನ್ನೈ ಮತ್ತು ದೆಹಲಿ ಮೊದಲಾದ ನಗರಗಳಲ್ಲಿ ಪೇಟಿಎಂ ಈ ಸೇವೆ ಶುರು ಮಾಡಲಿದೆ. ಪೇಟಿಎಂ ಈಗಾಗಲೇ ಒಎನ್ಡಿಸಿ ನೆಟ್ವರ್ಕ್ ಅನ್ನು ಬಳಸಿಕೊಂಡು ಸಿನಿಮಾ ಟಿಕೆಟ್, ಊಟದ ಆರ್ಡರ್ ಸೆವೆ ಒದಗಿಸುತ್ತಿದೆ. ಹಾಗೆಯೇ, ದಿನಸಿ ಸರಬರಾಜು ಇತ್ಯಾದಿ ಇಕಾಮರ್ಸ್ ಕೂಡ ಒಎನ್ಡಿಸಿ ಮೂಲಕ ನೀಡುತ್ತಿದೆ. ಈಗ ಆಟೊ ಸೇವೆ ಹೊಸ ಸೇರ್ಪಡೆಯಾಗಿದೆ.
ಕೆಲ ಪೇಟಿಎಂ ಬಳಕೆದಾರರಿಗೆ ಈಗಾಗಲೇ ಈ ಫೀಚರ್ ಕಾಣಿಸುತ್ತಿರಬಹುದು. ಆದರೆ ಇದಿನ್ನೂ ಪ್ರಾಯೋಗಿಕ ಹಂತದಲ್ಲಿದ್ದು, ಶೀಘ್ರದಲ್ಲೇ ಎಲ್ಲಾ ಪೇಟಿಎಂ ಬಳಕೆದಾರರಿಗೂ ಲಭ್ಯ ಇರಲಿದೆ. ಇಲ್ಲಿ ನಮ್ಮ ಯಾತ್ರಿ ಜೊತೆ ಪೇಟಿಎಂ ಸಹಭಾಗಿತ್ವ ಹೊಂದಿದೆ.
ಇದನ್ನೂ ಓದಿ: ಬಿಜೆಪಿಗೆ ಹೆಚ್ಚು ಸ್ಥಾನ ಬರೊಲ್ಲವೆಂದು ನಲುಗುತ್ತಿದೆಯಾ ಷೇರುಪೇಟೆ? ಸತತ ಕುಸಿತಕ್ಕೆ ಇಲ್ಲಿವೆ ಐದು ಕಾರಣಗಳು
ಒಎನ್ಡಿಸಿ ಎಂಬುದು ಸರ್ಕಾರೀ ಸಂಸ್ಥೆ ರೂಪಿಸಿರುವ ಮುಕ್ತ ನೆಟ್ವರ್ಕ್ ವ್ಯವಸ್ಥೆ. ತಮ್ಮದೇ ಪ್ರತ್ಯೇಕ ಇಕಾಮರ್ಸ್ ಸೈಟ್ ಹೊಂದಲು ಸಾಧ್ಯವಾಗದವರು ಒಎನ್ಡಿಸಿಯನ್ನು ಬಳಸಬಹುದು. ಊಬರ್, ಓಲಾ, ಸ್ವಿಗ್ಗಿ, ಜೊಮಾಟೊ ಮೊದಲಾದ ಸಂಸ್ಥೆಗಳು ತಮ್ಮವೇ ಪ್ರತ್ಯೇಕ ಪ್ಲಾಟ್ಫಾರ್ಮ್ ರೂಪಿಸಿವೆ. ಆದರೆ ಒಎನ್ಡಿಸಿ ಬೇರೆ ಸಂಸ್ಥೆಗಳಿಗೂ ಒಂದು ವೇದಿಕೆ ಸೃಷ್ಟಿ ಮಾಡಿಕೊಡುತ್ತದೆ.
ಒಎನ್ಡಿಸಿ ಪ್ಲಾಟ್ಫಾರ್ಮ್ನಲ್ಲಿ ಮಾರಾಟ ಮಾಡುವವರ ವಿಭಾಗ ಇರುತ್ತದೆ. ಖರೀದಿದಾರರ ವಿಭಾಗ ಇರುತ್ತದೆ. ನಮ್ಮ ಯಾತ್ರಿ ಎಂಬುದು ಮಾರಾಟ ಮಾಡುವ ಆ್ಯಪ್ ಎನ್ನಬಹುದು. ಪೇಟಿಎಂ ಇಲ್ಲಿ ಖರೀದಿದಾರರಿಗೆ ಪ್ಲಾಟ್ಫಾರ್ಮ್ ಆಗಿರುತ್ತದೆ. ಅಂದರೆ ಗ್ರಾಹಕರಿಗೆ ಪ್ಲಾಟ್ಫಾರ್ಮ್ ಆಗಿರುತ್ತದೆ.
ಬೆಂಗಳೂರಿನಲ್ಲಿ ಆರಂಭವಾದ ನಮ್ಮ ಯಾತ್ರಿ ಆ್ಯಪ್ ಅದ್ವಿತೀಯವಾಗಿ ಬೆಳೆಯುತ್ತಿದ್ದು ಏಳು ನಗರಗಳಲ್ಲಿ ರೇಡಿಂಗ್ ಲಭ್ಯ ಇದೆ. ಕಳೆದ ಎರಡು ವರ್ಷದಲ್ಲಿ 4 ಕೋಟಿ ಸಮೀಪದಷ್ಟು ರೇಡ್ಗಳನ್ನು ನಮ್ಮ ಯಾತ್ರಿ ಪೂರ್ಣಗೊಳಿಸಿದೆ. ಆಟೊರಿಕ್ಷಾ ಮಾತ್ರವಲ್ಲದೇ ಕ್ಯಾಬ್ ಬುಕಿಂಗ್ ಸೇವೆ ಕೂಡ ಆರಂಭವಾಗಿದೆ. ಒಎನ್ಡಿಸಿ ಬೆಳೆಯುತ್ತಿದ್ದರೂ ಸ್ವಿಗ್ಗಿ, ಒಲಾ, ಊಬರ್ ಇತ್ಯಾದಿ ಸ್ವತಂತ್ರ ವ್ಯವಸ್ಥೆಯ ಸಂಸ್ಥೆಗಳ ಅಸ್ತಿತ್ವಕ್ಕೆ ಸಂಚಕಾರ ಬಂದಿಲ್ಲ ಎನ್ನುವುದ ಗಮನಿಸಬೇಕಾದ ಸಂಗತಿ.
ಇದನ್ನೂ ಓದಿ: ಇಂದು ಏರ್ ಇಂಡಿಯಾ ಎಕ್ಸ್ಪ್ರೆಸ್ನ 85 ವಿಮಾನ ಹಾರಾಟ ರದ್ದು; ನಿಮ್ಮ ಫ್ಲೈಟ್ ರದ್ದಾಗಿದ್ದರೆ ಸಿಗುತ್ತೆ ರೀಫಂಡ್
ಕ್ಯಾಬ್ ಅಗ್ರಿಗೇಟರ್ಸ್ ಆಗಿರುವ ಓಲಾ ಮತ್ತು ಊಬರ್ ಸಂಸ್ಥೆಗಳು ಚಾಲಕರಿಂದ ಪ್ರತೀ ರೇಡ್ಗೆ ಕಮಿಷನ್ ಪಡೆಯುತ್ತವೆ. ಅತಿಯಾದ ಕಮಿಷನ್ ಕೊಡಬೇಕಾಗುತ್ತದೆ ಎಂದು ಓಲಾ, ಊಬರ್ ಡ್ರೈವರ್ಗಳು ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಈ ಕಾರಣಕ್ಕೆ ನಮ್ಮ ಯಾತ್ರಿ ಪರ್ಯಾಯ ವ್ಯವಸ್ಥೆಯಾಗಿ ರೂಪುಗೊಂಡು ಈಗ ಹಿಟ್ ಆಗಿದೆ. ನಮ್ಮ ಯಾತ್ರಿ ಆ್ಯಪ್ ಆಟೊಚಾಲಕರಿಂದ ರೇಡ್ಗೆ ಕಮಿಷನ್ ಪಡೆಯುವುದಿಲ್ಲ. ಆದರೆ, ಆ್ಯಪ್ಗೆ ನಿರ್ದಿಷ್ಟ ಅವಧಿಗೆ ಶುಲ್ಕ ನೀಡಬೇಕಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ