ನೀವು ಯಾವುದೇ ಉತ್ಪನ್ನ ಕೊಳ್ಳುವಾಗ, ಮಾರಾಟಗಾರನ ಶಿಫಾರಸ್ಸನ್ನು ಮಾತ್ರ ಪರಿಗಣಿಸಿ ಖರೀದಿ ಮಾಡುವುದು ತಪ್ಪಾಗುತ್ತದೆ. ಶೋರೂಮ್ಗೆ ಹೋದಾಗ ಅಲ್ಲಿರುವ ಸೇಲ್ಸ್ಮನ್ಗಳು ವಿವಿಧ ಉತ್ಪನ್ನಗಳ ಬಗ್ಗೆ ಪರಿಚಯ ಮಾಡುತ್ತಾರೆ. ಅದರಲ್ಲಿ ಕೆಲವು ಬಗ್ಗೆ ಹೆಚ್ಚು ವಿವರಣೆ ಮತ್ತು ಶಿಫಾರಸು ಮಾಡುತ್ತಾರೆ. ಅದು ನಿಮಗೆ ಹೊಂದಿಕೆಯಾಗುವ ಉತ್ಪನ್ನ ಅಲ್ಲವಾದರೂ ಮಾರಾಟಗಾರನ ಅತಿವರ್ಣನೆಯಿಂದಾಗಿ ಖರೀದಿ ಮಾಡಿ ಆ ಬಳಿಕ ಹಿಡಿಶಾಪ ಹಾಕುತ್ತೀರಿ. ಇದು ಎಲ್ಲಾ ಕ್ಷೇತ್ರಕ್ಕೂ ಅನ್ವಯ ಆಗುವಂಥದ್ದೇ. ಇನ್ಷೂರೆನ್ಸ್ ಕ್ಷೇತ್ರದಲ್ಲಿ ಇದು ಇನ್ನೂ ಹೆಚ್ಚು. ನೀವು ವಿಮೆಯನ್ನು ಖರೀದಿಸುವ ಯೋಚನೆಯಲ್ಲಿದ್ದರೆ, ಬ್ಯಾಂಕ್ ಉದ್ಯೋಗಿಗಳು ಅಥವಾ ವಿಮಾ ಏಜೆಂಟರು ಏನು ಸಲಹೆ ಕೊಡುತ್ತಾರೋ ಅದನ್ನು ಹಾಗೇ ನಂಬಬೇಡಿ. ಅವರಿಗೆ ವಿಮಾ ಪಾಲಿಸಿಯ ಬಗ್ಗೆ ಆಳವಾಗಿ ತಿಳಿದಿರುವುದಿಲ್ಲ. ಬ್ಯಾಂಕಷ್ಯುರೆನ್ಸ್ (Bancassurance) ಅಂದರೆ ಬ್ಯಾಂಕ್ ಮತ್ತು ಇನ್ಷುರೆನ್ಸ್ ಏಜೆಂಟ್ ನಡುವಿನ ಒಪ್ಪಂದದ ಕಾರಣ ಅಂದರೆ ವಿಮಾ ಕಂಪೆನಿಗಳೊಂದಿಗಿನ ಒಡಂಬಡಿಕೆಗನುಗುಣವಾಗಿ ಬ್ಯಾಂಕ್ ಉದ್ಯೋಗಿಗಳು ಈ ಫೈನ್ಯಾನ್ಷಿಯಲ್ ಪ್ರಾಡಕ್ಟ್ಗಳನ್ನು ಮಾರಾಟ ಮಾಡುತ್ತಾರೆ. ಅವರು ಗ್ರಾಹಕರ ಅನುಕೂಲಕ್ಕೆ ಅನುಗುಣವಾಗಿ ಈ ಪಾಲಿಸಿಗಳನ್ನು ಶಿಫಾರಸ್ಸು ಮಾಡುವುದಿಲ್ಲ ಬದಲಿಗೆ ತಮ್ಮ ಗುರಿ ತಲುಪಲಷ್ಟೇ ಗ್ರಾಹಕರನ್ನು ಓಲೈಸುತ್ತಾರೆ. ಹಾಗೆಂದ ಮಾತ್ರಕ್ಕೆ ಬ್ಯಾಂಕಷ್ಯುರೆನ್ಸ್ ಮೂಲಕ ಮಾರಾಟ ಮಾಡಲ್ಪಡುವ ಉತ್ಪನ್ನಗಳು ಉತ್ತಮವಲ್ಲ ಎಂದೇನೂ ಅಲ್ಲ. ಹೇಗೆ ಎಲ್ಲಾ ರೋಗಿಗಳಿಗೂ ಒಂದೇ ಔಷಧ ಪರಿಣಾಮಕಾರಿ ಅಲ್ಲವೋ, ಹಾಗೇ ಎಲ್ಲಾ ಪೈನ್ಯಾನ್ಷಿಯಲ್ ಪ್ರಾಡಕ್ಟ್ಗಳು ಎಲ್ಲರಿಗೂ ಪ್ರಯೋಜನಕ್ಕೆ ಬರುವುದಿಲ್ಲ.
ವಿಮಾ ವಲಯದ ನಿಯಂತ್ರಕ ಸಂಸ್ಥೆ ಐಆರ್ಡಿಎ ಈ ವಲಯದ ಸುಧಾರಣೆಗಾಗಿ ಹೊಸ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಹೊಸ ಪ್ರಾಡಕ್ಟ್ ಅಥವಾ ಪಾಲಿಸಿಗಳನ್ನು ಬಿಡುಗಡೆ ಮಾಡುವ ಸಂಬಂಧ ವಿಮಾ ಕಂಪೆನಿಗಳಿಗೆ ನಿಯಮಗಳಲ್ಲಿ ಸರಳೀಕರಣ ಮಾಡಲಾಗಿದೆ. ಹೊಸ ಮಾಧ್ಯಮಗಳ ಮೂಲಕ ವಿಮಾ ಪಾಲಿಸಿಗಳನ್ನು ಮಾರಾಟ ಮಾಡಲಾಗುತ್ತಿದೆ. ಹೊಸ ಕ್ರಮಗಳ ಮೂಲಕ ಐಆರ್ಡಿಎ ಮುಂದಿನ ಐದು ವರ್ಷಗಳಲ್ಲಿ ವಿಮೆ ವಲಯಕ್ಕೆ ಒಳಹರಿವು ದ್ವಿಗುಣಗೊಳಿಸುವ ಗುರಿ ಹೊಂದಿದೆ. 2020-21 ರಲ್ಲಿ ವಿಮಾ ವಲಯದ ಒಳಹರಿವು ಕೇವಲ ಶೇಕಡ 4.2 ರಷ್ಟಿತ್ತು. ಜೀವ ವಿಮಾ ಪಾಲಿಸಿಗಳ ಪ್ರಮಾಣ ಶೇಕಡ 3.2 ರಷ್ಟಿದ್ದರೆ ಜೀವೇತರ ವಿಮಾ ಪಾಲಿಸಿ (non-life insurance policy) ಪ್ರಮಾಣ ಕೇವಲ ಶೇಕಡ 1 ರಷ್ಟಿತ್ತು. ವಿಮೆ ಒಳಹರಿವು ಎಂದರೆ ದೇಶದ ಒಟ್ಟು ಜಿಡಿಪಿಗೆ ವಿಮಾ ಪ್ರೀಮಿಯಂ ಮೊತ್ತಗಳ ಕೊಡುಗೆ.
ದೇಶದಲ್ಲಿ ವಿಮಾ ವ್ಯಾಪ್ತಿಯನ್ನು ಹೆಚ್ಚಿಸಲು, ಐಆರ್ಡಿಎ ಮಹತ್ವದ ಕ್ರಮಗಳನ್ನು ತೆಗೆದುಕೊಂಡಿದೆ. ಮತ್ತು ವಾಣಿಜ್ಯ ಬ್ಯಾಂಕ್ಗಳು ವಿಮಾ ಪಾಲಿಸಿಗಳನ್ನು ಮಾರಾಟ ಮಾಡಲು ಅನುವು ಮಾಡಿಕೊಟ್ಟಿದೆ. ಬ್ಯಾಂಕ್ಗಳು ಒಂಬತ್ತು ಜೀವ ವಿಮಾ ಕಂಪೆನಿಗಳ ಪಾಲಿಸಿಗಳನ್ನು ಹಾಗೂ ಒಂಬತ್ತು ಸಾಮಾನ್ಯ ಮತ್ತು ಆರೋಗ್ಯ ವಿಮಾ ಕಂಪನಿಗಳ ಪಾಲಿಸಿಗಳನ್ನು ಮಾರಾಟ ಮಾಡುತ್ತಿದೆ. ಈ ಪ್ರಾಡಕ್ಟ್ ಅಥವಾ ಪಾಲಿಸಿ ಬ್ಯಾಂಕಷ್ಯುರೆನ್ಸ್ ಅನ್ವಯ ಮಾರಾಟ ಮಾಡಲಾಗುತ್ತಿದೆ.
ಇದನ್ನೂ ಓದಿ: Car Insurance: ಮಳೆ ನೀರು ತುಂಬಿದಾಗ ಕಾರು ಸ್ಟಾರ್ಟ್ ಮಾಡದಿರಿ; ಎಂಜಿನ್ ಕೆಡುತ್ತೆ, ಇನ್ಷೂರೆನ್ಸ್ ಕ್ಲೈಮ್ ಕೂಡ ಅಸಾಧ್ಯ
ಬ್ಯಾಂಕಷ್ಯುರೆನ್ಸ್ ಉತ್ಪನ್ನಗಳನ್ನು ನೀವು ಖರೀದಿಸುತ್ತಿರುವಿರಾದರೆ, ನೀವು ಅಂತಹ ವಿಮಾ ಉತ್ಪನ್ನಗಳ ಖರೀದಿ ಮತ್ತು ಮಾರಾಟ ಸುಲಭ ಅಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನೀವು ಪ್ರತಿ ವರ್ಷ ಪಾಲಿಸಿಯನ್ನು ಬದಲಿಸಲು ಸಾಧ್ಯವಿಲ್ಲ. ವಿಮಾ ಪಾಲಸಿ ಖರೀದಿಸುವ ಮುನ್ನ ಸ್ವಲ್ಪ ಹೋಂವರ್ಕ್ ಮಾಡಿ ಅಂದರೆ ಅದರ ಬಗ್ಗೆ ಒಂದಿಷ್ಟು ಮಾಹಿತಿ ಕಲೆ ಹಾಕಿ ನೀವು ಖರೀದಿಸುತ್ತಿರುವ ಪಾಲಿಸಿ ಪ್ರತಿ ಹೆಜ್ಜೆಯಲ್ಲೂ ನಿಮಗೆ ಪ್ರಯೋಜನಕ್ಕೆ ಬರಲಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಿ.
ಪ್ರಮಾಣಿತ ಹಣಕಾಸು ಯೋಜಕ (Certified Financial Planner) ಜಿತೇಂದ್ರ ಸೋಲಂಕಿ ಪ್ರಕಾರ, ಬ್ಯಾಂಕಷ್ಯುರೆನ್ಸ್ ಆಧಾರದ ಮೇಲೆ ಪಾಲಿಸಿಗಳನ್ನು ಮಾರಾಟ ಮಾಡುವ ಬ್ಯಾಂಕ್ ಉದ್ಯೋಗಿಗಳು ಮತ್ತು ವಿಮಾ ಏಜೆಂಟರುಗಳಿಗೆ ಅದರ ಬಗ್ಗೆ ಆಳವಾದ ಜ್ಞಾನವಿರುವುದಿಲ್ಲವಂತೆ.
ವಿಮಾ ಪಾಲಿಸಿ ಖರೀದಿಸಲು ಅವಸರ ಬೇಡ. ಇನ್ನೊಬ್ಬರ ಸಲಹೆ ಮೇರೆಗೂ ಕೂಡ ಯಾವುದೇ ಪಾಲಿಸಿ ಖರೀದಿಸಬೇಡಿ. ಆ ಕಂಪೆನಿಯ ಜಾಲತಾಣದಲ್ಲಿ ಅಥವಾ ಅದರ ಶಾಖೆಗೆ ಖುದ್ದು ಭೇಟಿ ನೀಡಿ ಆ ಪಾಲಿಸಿ ಬಗ್ಗೆ ಮಾಹಿತಿ ಪಡೆಯಿರಿ. ಒಂದಕ್ಕಿಂತ ಹೆಚ್ಚು ಪಾಲಿಸಿಗಳನ್ನು ಹೋಲಿಕೆ ಮಾಡಿ ಆಯ್ಕೆ ಮಾಡುವುದು ಹೆಚ್ಚು ಸೂಕ್ತ ಎಂದು ಸೋಲಂಕಿ ಹೇಳುತ್ತಾರೆ.
ಬ್ಯಾಂಕಷ್ಯುರೆನ್ಸ್ ಒಪ್ಪಂದದನ್ವಯ ವ್ಯಾಪಕ ಪ್ರಮಾಣದಲ್ಲಿ ಆರೋಗ್ಯ ವಿಮಾ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಇಂತಹ ಪಾಲಿಸಿಗಳನ್ನು ಗುಂಪು ವಿಮಾ (Group Insurance) ಪಾಲಿಸಿಯಂತೆ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಇದರಡಿಯ ವಿಮಾ ಸೌಲಭ್ಯದ ಮೊತ್ತ ಪ್ರತ್ಯೇಕ ಕಂಪನಿಗಳಿಂದ ಮಾರಾಟವಾಗುವ ಪಾಲಿಸಿಯ ಮೊತ್ತದ ಅರ್ಧದಷ್ಟಿರುತ್ತದೆ. ಒಂದು ವೇಳೆ ನೀವು ಆಸ್ಪತ್ರೆಗೆ ದಾಖಲಾದರೆ, ಬ್ಯಾಂಕ್ನಿಂದ ನಿಮಗೆ ಯಾವುದೇ ಸಹಾಯ ಸಿಗುವುದಿಲ್ಲ. ನೀವೇ ಸ್ವತಃ ಕ್ಲೇಮ್ ಅನ್ನು ಫೈಲ್ ಮಾಡಬೇಕು. ಹೀಗಾಗಿ, ಪಾಲಿಸಿ ಖರೀದಿಸಿದ ನಂತರ ಇನ್ಷುರೆನ್ಸ್ ಕಂಪೆನಿಗಳು ಯಾವ ರೀತಿಯ ಸೇವೆ ನೀಡುತ್ತವೆ ಎಂಬ ಬಗ್ಗೆಯೂ ನೀವು ತಿಳಿದಿರುವುದು ಅತಿ ಮುಖ್ಯ.
ವಾಸ್ತವದಲ್ಲಿ, ವಿಮೆ ಎನ್ನುವುದು ಕೇವಲ ನೀವು ಪಾಲಿಸಿ ಖರೀದಿಸಿ, ನಂತರ ಅದನ್ನು ಮರೆತು ಬಿಡುವುದಲ್ಲ. ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಲು ವಿಮೆ ಕಂಪೆನಿಗಳೊಂದಿಗೆ ಸಂಪರ್ಕದಲ್ಲಿರಬೇಕು. ಕಂಪೆನಿಯ ಜಾಲತಾಣದಲ್ಲಿ ಪಾಲಿಸಿಯ ಷರತ್ತು, ನಿಯಮಗಳನ್ನು ಮತ್ತಿತರ ಮಾಹಿತಿಯನ್ನು ಪರಿಶೋಧಿಸಿ ಅವುಗಳನ್ನು ಹಾಗೂ ಕುಂದುಕೊರತೆ ನಿವಾರಣಾ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಳ್ಳಬೇಕು. ವಿಮಾ ಏಜೆಂಟ್ ಅಥವಾ ಬ್ಯಾಂಕ್ ಉದ್ಯೋಗಿಯನ್ನು ಹಾಗೇ ನಂಬಬೇಡಿ. ನಿಮ್ಮ ಅಗತ್ಯಕ್ಕನುಗುಣವಾಗಿ ಪಾಲಿಸಿಯ ಮೌಲ್ಯಮಾಪನ ಮಾಡಿ. ಈ ಎಲ್ಲಾ ಹೋಂವರ್ಕ್ ನಂತರವಷ್ಟೇ ಅಂತಿಮ ನಿರ್ಧಾರ ತೆಗೆದುಕೊಳ್ಳಿ.
(ಮಾಹಿತಿಕೃಪೆ: ಮನಿ9)
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:21 pm, Sun, 30 July 23