Fraud: 9ಲಕ್ಷಕ್ಕೂ ಹೆಚ್ಚು ಹಣದ ಸಿಗುತ್ತೆ ಅಂತ ನಂಬಿದ ಅಜ್ಜಿ ಪಾಲಿಗೆ ಬಂದಿದ್ದು 32,000 ರೂ; ಇನ್ಷೂರೆನ್ಸ್ ಕಂಪನಿಯಿಂದ ಹಣ ಕಕ್ಕಿಸಿದ ಗ್ರಾಹಕ ವೇದಿಕೆ
Insurance Company Fined By Consumer Commission: ಈ ಸ್ಕೀಮ್ ಮೇಲೆ ಹಣ ಹೂಡಿಕೆ ಮಾಡಿದರೆ ಡಬಲ್ ಆಗುತ್ತೆ ಅಂತ ಇನ್ಷೂರೆನ್ಸ್ ಏಜೆಂಟ್ ಹೇಳಿದ ಮಾತು ನಂಬಿ ಮಹಿಳೆಯೊಬ್ಬರು 4.6 ಲಕ್ಷ ರೂ ಹೂಡಿಕೆ ಮಾಡಿ 3 ವರ್ಷದಲ್ಲಿ ಕೇವಲ 32,000 ರೂ ಪಡೆದ ಘಟನೆ ನಡೆದಿದೆ.
ನವದೆಹಲಿ: ಇನ್ಷೂರೆನ್ಸ್ ಪಾಲಿಸಿ (Insurance Policy) ಖರೀದಿಸುವಾಗ ಎಚ್ಚರದಿಂದ ಇರುವುದು ಬಹಳ ಅವಶ್ಯ. ಅದು ಎಲ್ಐಸಿಯೇ ಆಗಲೀ ಅಥವಾ ಬೇರೆ ಖಾಸಗಿ ಕಂಪನಿಯದ್ದೇ ಆಗಲೀ, ಎಲ್ಐಸಿ ಪಾಲಿಸಿಯ ವಿವಿಧ ಅಂಶಗಳನ್ನು ಅವಲೋಕಿಸಿ ತಿಳಿದಿರುವುದು ಒಳ್ಳೆಯದು. ಕೇವಲ ಏಜೆಂಟ್ ಹೇಳಿದ ಭರವಸೆಯ ಮಾತುಗಳನ್ನು ನಂಬಿ ಪಾಲಿಸಿ ಪಡೆಯುವುದು ಅಪಾಯಕಾರಿ. ಇನ್ಷೂರೆನ್ಸ್ ಏಜೆಂಟ್ಗೆ ತನ್ನ ಕಂಪನಿಯಿಂದ ವರ್ಷಕ್ಕೆ ಕನಿಷ್ಠ ಸಂಖ್ಯೆಯಲ್ಲಿ ಪಾಲಿಸಿ ಮಾಡಿಸಬೇಕೆನ್ನುವ ಟಾರ್ಗೆಟ್ ಇರುತ್ತದೆ. ಅಥವಾ ಪಾಲಿಸಿ ಮಾಡಿಸಿದಾಗ ಆತನಿಗೆ ಕಮಿಷನ್ ಸಿಗುತ್ತದೆ. ಹೀಗಾಗಿ, ಅದೆಷ್ಟೋ ಇನ್ಷೂರೆನ್ಸ್ ಏಜೆಂಟ್ಗಳು ಸುಳ್ಳು ಭರವಸೆಗಳನ್ನು ನೀಡಿಯೋ (Fraud) ಅಥವಾ ಅರ್ಧಸತ್ಯ ಮಾತ್ರ ತಿಳಿಸಿಯೋ ಪಾಲಿಸಿ ಮಾರುವ ಪ್ರಯತ್ನ ಮಾಡುತ್ತಿರುತ್ತಾರೆ. ಹಿಂದೆಲ್ಲಾ ಮಾರ್ಕೆಟ್ ಲಿಂಕ್ಡ್ ಸ್ಕೀಮ್ಗಳು ಬಂದಾಗ ಅನೇಕ ಇನ್ಷೂರೆನ್ಸ್ ಏಜೆಂಟ್ಗಳು ಹಣ ಕೆಲವೇ ವರ್ಷದಲ್ಲಿ ಹಲವುಪಟ್ಟು ಹೆಚ್ಚಾಗುತ್ತದೆ ಎಂದೆಲ್ಲಾ ಗ್ರಾಹಕರನ್ನು ನಂಬಿಸಿ ಠೇವಣಿ ಇರಿಸಿದ್ದರು. ಈಗ ಅಂಥಹುದೇ ಒಂದು ಘಟನೆ ಪಂಜಾಬ್ನ ಮೊಹಾಲಿಯಲ್ಲಿ ನಡೆದಿದೆ.
ಅಮರ್ಜೀತ್ ಕೌರ್ ಎಂಬ ಪಂಜಾಬೀ ಮಹಿಳೆ 2009ರಲ್ಲಿ ಕೋಟಕ್ ಮಹೀಂದ್ರ ಓಲ್ಡ್ ಮ್ಯೂಚುವಲ್ ಲೈಫ್ ಇನ್ಷೂರೆನ್ಸ್ ಸಂಸ್ಥೆಯಿಂದ ಇನ್ಷೂರೆನ್ಸ್ ಪಾಲಿಸಿಯೊಂದರ ಮೇಲೆ 4.6 ಲಕ್ಷ ರೂನಷ್ಟು ಹಣ ಹೂಡಿಕೆ ಮಾಡಿದ್ದರು. ಆಗ 56 ವರ್ಷ ವಯಸ್ಸಾಗಿದ್ದ ಈ ಮಹಿಳೆ ಅನಕ್ಷರಸ್ಥೆಯಾಗಿದ್ದು ಇನ್ಷೂರೆನ್ಸ್ ಏಜೆಂಟ್ ಹೇಳಿದ ಬಾಯಿಮಾತಿನ ಭರವಸೆ ನಂಬಿ ತನ್ನ ಬಳಿ ಇದ್ದಬದ್ದ ಹಣವನ್ನೆಲ್ಲಾ ಇನ್ಷೂರೆನ್ಸ್ ಪಾಲಿಸಿ ಮೇಲೆ ಹಾಕಿದ್ದರು. 3 ವರ್ಷದಲ್ಲಿ ಹಣ ಡಬಲ್ ಆಗುತ್ತದೆ ಎಂದು ಆ ಏಜೆಂಟ್ ಆಸಾಮಿ ಹೇಳಿಬಿಟ್ಟಿದ್ದ. ಅದು ಬಾಯಿಮಾತಿನ ಭರವಸೆಯಾಗಿತ್ತು. ಪಾಲಿಸಿ ದಾಖಲೆಯಲ್ಲಿ ಅದು ಇರಲಿಲ್ಲ. ಈ ವಿಚಾರವನ್ನು ಆ ಮಹಿಳೆಗೆ ಆತ ತಿಳಿಸಲಿಲ್ಲ. ಪಾಲಿಸಿ ಸರ್ಟಿಫಿಕೇಟ್ ಇಂಗ್ಲೀಷ್ನಲ್ಲಿ ಇದ್ದದ್ದರಿಂದ ಮಹಿಳೆಯೂ ಓದದೇ ಹೆಬ್ಬೆಟ್ಟು ಒತ್ತಿದ್ದರು.
3 ವರ್ಷದ ಬಳಿಕ 10 ಲಕ್ಷ ರೂ ಪಡೆಯುವ ನಿರೀಕ್ಷೆಯಲ್ಲಿದ್ದ ಅಮರಜೀತ್ ಕೌರ್ ಅವರಿಗೆ ಸಿಕ್ಕಿದ್ದು ಕೇವಲ 32,000 ರೂ ಮಾತ್ರ. ಆಗ ಇತರ ಕೆಲವರ ಸಲಹೆ ಮೇರೆಗೆ ಈ ಮಹಿಳೆ ಮೊಹಾಲಿ ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ ಇನ್ಷೂರೆನ್ಸ್ ಕಂಪನಿ ವಿರುದ್ಧ ದೂರು ದಾಖಲಿಸಿದರು. ಗ್ರಾಹಕರಿಗೆ ಸರಿಯಾದ ಮಾಹಿತಿ ನೀಡದ್ದಕ್ಕೆ ಇನ್ಷೂರೆನ್ಸ್ ಕಂಪನಿಗೆ ಛೀಮಾರಿ ಬಿದ್ದಿತು. 4.6 ಲಕ್ಷ ರೂ ದಂಡ ಹಾಕಲಾಯಿತು. 4 ವಾರದಲ್ಲಿ ಮಹಿಳೆಗೆ ಹಣ ಮರಳಿಸಬೇಕೆಂದು ಆದೇಶಿಸಿತು.
ನಿಮಗೂ ಇಂಥ ವಂಚನೆಗಳು ಆಗಿದ್ದಲ್ಲಿ ಗ್ರಾಹಕರ ಕೋರ್ಟ್, ಅಥವಾ ವೇದಿಕೆಗಳಿಗೆ ಹೋಗಿ ದೂರು ದಾಖಲಿಸಲು ಅವಕಾಶ ಇದೆ. ಇದನ್ನು ತಪ್ಪದೇ ಉಪಯೋಗಿಸಿ ವಂಚನೆಯಿಂದ ದೂರ ಇರಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ