ನವದೆಹಲಿ: ಯುಪಿಐ ಆ್ಯಪ್ಗಳಿಗೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡಿ ಹಣ ಪಾವತಿಸುವ ಪ್ರಕ್ರಿಯೆ ಹಲವರಿಗೆ ಗೊತ್ತಿರಬಹುದು. ಕ್ರೆಡಿಟ್ ಕಾರ್ಡ್ ಮೂಲಕ ಯುಪಿಐ ಹಣ ಪಾವತಿ (UPI Payment) ಸಾಧ್ಯವಾಗುತ್ತದೆ. ರುಪೇ ಕ್ರೆಡಿಟ್ ಕಾರ್ಡ್ನಿಂದಲೂ (RuPay Credit Card) ನೀವು ಯುಪಿಐ ಪಾವತಿ ಮಾಡುವ ಅವಕಾಶ ಇದೆ. ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ ಈಗ ರುಪೇ ಕ್ರೆಡಿಟ್ ಕಾರ್ಡನ್ನು ಯುಪಿಐ ಪಾವತಿಗೆ ಬಳಸಲು ಅವಕಾಶ ಕೊಟ್ಟಿದೆ. ಸರ್ಕಾರಿ ಬ್ಯಾಂಕುಗಳ ಪೈಕಿ ಈ ಸೌಲಭ್ಯ ಕೊಟ್ಟಿರುವುದರಲ್ಲಿ ಕೆನರಾ ಬ್ಯಾಂಕ್ ಪ್ರಥಮ ಎನಿಸಿದೆ. ಕೆನರಾ ಬ್ಯಾಂಕ್ನ ಬ್ಯಾಂಕಿಂಗ್ ಆ್ಯಪ್ನಲ್ಲಿ ಇದು ಲಭ್ಯ ಇದೆ. ಆದರೆ, ಅಂಗಡಿ ಮುಂಗಟ್ಟುಗಳಲ್ಲಿ ಶಾಪಿಂಗ್ ಮಾಡಿದಾಗ ಹಣ ಪಾವತಿಸಲು ಮಾತ್ರ ಈ ಸೌಲಭ್ಯ ಇರುವುದು.
‘ರುಪೇ ಕ್ರೆಡಿಟ್ ಕಾರ್ಡ್ ಮೂಲಕ ವರ್ತಕರಿಗೆ ಯುಪಿಐ ಪೇಮೆಂಟ್ ಮಾಡುವ ಸೌಲಭ್ಯವನ್ನು ಕೆನರಾ ಬ್ಯಾಂಕ್ ಒದಗಿಸಿದೆ. ಇದು ಕೆನರಾ ಎಐ1 ಬ್ಯಾಂಕಿಂಗ್ ಸೂಪರ್ ಆ್ಯಪ್ನಲ್ಲಿ (Canara ai1 Super App) ಲಭ್ಯ ಇರುತ್ತದೆ. ಎನ್ಪಿಸಿಐ ಸಹಭಾಗಿತ್ವದಲ್ಲಿ ಈ ಸೌಲಭ್ಯ ಕೊಟ್ಟ ಮೊದಲ ಪಬ್ಲಿಕ್ ಸೆಕ್ಟರ್ ಬ್ಯಾಂಕ್ ಕೆನರಾ ಬ್ಯಾಂಕ್’ ಎಂದು ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: SBI: ವಾಟ್ಸಾಪ್ನಲ್ಲಿ ನಿಮ್ಮ ಎಸ್ಬಿಐ ಬ್ಯಾಂಕ್ ಸ್ಟೇಟ್ಮೆಂಟ್ ಪಡೆಯುವುದು ಹೇಗೆ? ಇಲ್ಲಿದೆ ಸಿಂಪಲ್ ವಿಧಾನ
ಸದ್ಯ, ಕೆನರಾ ಬ್ಯಾಂಕ್ನ ಆ್ಯಪ್ನಲ್ಲಿ ಯುಪಿಐ ಐಡಿಗೆ ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡುವುದರ ಜೊತೆಗೆ ಕೆನರಾ ಬ್ಯಾಂಕ್ ರುಪೇ ಕ್ರೆಡಿಟ್ ಕಾರ್ಡ್ ಅನ್ನೂ ಲಿಂಕ್ ಮಾಡಬಹುದು. ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವ ಪ್ರಕ್ರಿಯೆಯೂ ಅದೇ ರೀತಿಯದ್ದಾಗಿರುತ್ತದೆ. ಲಿಂಕ್ ಮಾಡುವಾಗ ಅಕೌಂಟ್ ಲಿಸ್ಟಿಂಗ್ನಲ್ಲಿ ಕೆನರಾ ಕ್ರೆಡಿಟ್ ಕಾರ್ಡ್ಗಳಿದ್ದರೆ ಅದರ ಪಟ್ಟಿ ಸಿಗುತ್ತದೆ. ಇದರಲ್ಲಿ ರುಪೇ ಕ್ರೆಡಿಟ್ ಕಾರ್ಡ್ ಕೂಡ ಇರುತ್ತದೆ. ಅದನ್ನು ಆಯ್ದುಕೊಂಡು ಯುಪಿಐ ಐಡಿ ರಚಿಸಬಹುದು.
ಯುಪಿಐ ಪಾವತಿಗೆ ಕ್ರೆಡಿಟ್ ಕಾರ್ಡ್ ಬಳಕೆ ಮಾಡುವುದರಿಂದ ಹಣ ಪಾವತಿ ಕಾರ್ಯ ಇನ್ನಷ್ಟು ಸುಗಮಗೊಳ್ಳುತ್ತದೆ. ನಿಮ್ಮ ಖಾತೆಯಲ್ಲಿ ಹಣದ ಕೊರತೆ ಇದ್ದಾಗ ಇದು ನೆರವಿಗೆ ಬರುತ್ತದೆ. ನೀವು ಪ್ರತ್ಯೇಕವಾಗಿ ಕ್ರೆಡಿಟ್ ಕಾರ್ಡ್ ತೆಗೆದುಕೊಂಡು ಹೋಗುವ ಅಗತ್ಯ ಇಲ್ಲ. ಆದರೆ, ರುಪೇ ಕ್ರೆಡಿಟ್ ಕಾರ್ಡ್ ಅನ್ನು ಯುಪಿಐ ಪಾವತಿಗೆ ಬಳಸುವಾಗ ನಿರ್ಬಂಧಗಳಿವೆ. ವರ್ತಕರಿಗೆ ಮಾತ್ರ ಹಣ ಪಾವತಿಸಲು ಸಾಧ್ಯ. ವ್ಯಕ್ತಿಯಿಂದ ವ್ಯಕ್ತಿಗೆ ಹಣದ ರವಾನೆ ಸಾಧ್ಯವಾಗುವುದಿಲ್ಲ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ