ಹೆಲ್ತ್ ಇನ್ಷೂರೆನ್ಸ್
ನವದೆಹಲಿ, ಮೇ 30: ಇನ್ಷೂರೆನ್ಸ್ ನಿಯಂತ್ರಕ ಪ್ರಾಧಿಕಾರವಾದ ಐಆರ್ಡಿಎಐ ಸಂಸ್ಥೆ ಹೆಲ್ತ್ ಇನ್ಷೂರೆನ್ಸ್ ಕಂಪನಿಗಳಿಗೆ ಮೇ 29ರಂದು ಹೊಸ ಮಾರ್ಗಸೂಚಿಗಳನ್ನು (IRDAI master circular) ಹೊರಡಿಸಿದೆ. ಆಸ್ಪತ್ರೆಯಲ್ಲಿ ಕ್ಯಾಷ್ಲೆಸ್ ಚಿಕಿತ್ಸೆ ಸರಾಗವಾಗಿ ನಡೆಯುವ ರೀತಿಯಲ್ಲಿ ನಿರ್ದೇಶನ ನೀಡಲಾಗಿದೆ. ಹೆಲ್ತ್ ಇನ್ಷೂರೆನ್ಸ್ ಅವಧಿಯಲ್ಲಿ ಪಾಲಿಸಿದಾರ ಯಾವುದೇ ಕ್ಲೇಮ್ ಮಾಡದೇ ಹೋದಲ್ಲಿ ಪ್ರೀಮಿಯಮ್ ಹಣ ಕಡಿಮೆ ಮಾಡುವುದೋ ಅಥವಾ ಇನ್ಷೂರ್ಡ್ ಮೊತ್ತ ಹೆಚ್ಚಿಸುವುದೋ ಮೂಲಕ ಪ್ರೋತ್ಸಾಹ ನೀಡಬೇಕು, ಇವೇ ಮುಂತಾದ ಅಂಶಗಳನ್ನು ಐಆರ್ಡಿಎಐ ತನ್ನ ಮಾಸ್ಟರ್ ಸರ್ಕ್ಯುಲಾರ್ನಲ್ಲಿ ತಿಳಿಸಿದೆ. ಈ ಸರ್ಕ್ಯುಲಾರ್ನಲ್ಲಿರುವ ಕೆಲ ಪ್ರಮುಖ ಅಂಶಗಳ ಮಾಹಿತಿ ಈ ಕೆಳಕಂಡಂತಿದೆ:
ಇನ್ಷೂರೆನ್ಸ್ ಕಂಪನಿಗಳಿಗೆ ಐಆರ್ಡಿಎಐ ಹೊಸ ನಿರ್ದೇಶನಗಳು:
- ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಅವಧಿಯಲ್ಲಿ ಪಾಲಿಸಿದಾರರು ಯಾವುದೇ ಕ್ಲೇಮ್ ಮಾಡದೇ ಹೋದಲ್ಲಿ, ಅಂದರೆ ಇನ್ಷೂರೆನ್ಸ್ ಬಳಕೆ ಮಾಡದೇ ಹೋದಲ್ಲಿ ಅವರಿಗೆ ಉತ್ತೇಜಕ ನೀಡಬಹುದು. ಉದಾಹರಣೆಗೆ, ಒಟ್ಟಾರೆ ಕವರೇಜ್ ಮೊತ್ತ ಹೆಚ್ಚಿಸಬಹುದು ಅಥವಾ ಪ್ರೀಮಿಯಮ್ ಹಣ ಕಡಿಮೆ ಮಾಡಬಹುದು.
- ಪಾಲಿಸಿ ದಾಖಲೆ ಜೊತೆಗೆ ನೀಡಲಾಗುವ ಕಸ್ಟಮರ್ ಇನ್ಫಾರ್ಮೇಶನ್ ಶೀಟ್ನಲ್ಲಿ ಇನ್ಷೂರೆನ್ಸ್ ಪಾಲಿಸಿ, ಕವರೇಜ್ ಮೊತ್ತ, ಯಾವ್ಯಾವುದು ಸೇರ್ಪಡೆಯಾಗಿರುತ್ತದೆ, ಸೇರ್ಪಡೆಯಾಗಿರುವುದಿಲ್ಲ, ಕಾಯುವಿಕೆ ಅವಧಿ ಇತ್ಯಾದಿ ವಿವರಗಳನ್ನು ಬಹಳ ಸರಳ ಭಾಷೆಯಲ್ಲಿ, ಗ್ರಾಹಕರಿಗೆ ಅರ್ಥವಾಗುವ ರೀತಿಯಲ್ಲಿ ಬರೆದಿರಬೇಕು.
- ಪಾಲಿಸಿದಾರರು ಆಸ್ಪತ್ರೆಗೆ ದಾಖಲಾದಾಗ ಆಸ್ಪತ್ರೆಯಿಂದ ಇನ್ಷೂರೆನ್ಸ್ ಕಂಪನಿಯನ್ನು ಸಂಪರ್ಕಿಸಿ ಮಾಹಿತಿ ನೀಡಲಾಗುತ್ತದೆ. ಅದಾಗಿ ಒಂದು ಗಂಟೆಯ ಒಳಗೆ ಇನ್ಷೂರೆನ್ಸ್ ಕಂಪನಿ ನಿರ್ಧಾರ ಪ್ರಕಟಿಸಬೇಕು.
ಇದನ್ನೂ ಓದಿ: ವಿಮಾ ಪಾಲಿಸಿ ನಿಯಮ ತಪ್ಪದೇ ಓದಿ; ರೋಗದಿಂದ ಸತ್ತರೂ ಹಣ ಕ್ಲೇಮ್ ಅಸಾಧ್ಯವಾಗಬಹುದು
- ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವಾಗ ಮನವಿ ಬಂದ ಮೂರು ಗಂಟೆಯ ಒಳಗಾಗಿ ಇನ್ಷೂರೆನ್ಸ್ ಕಂಪನಿ ಅಂತಿಮ ಒಪ್ಪಿಗೆ ನೀಡಬೇಕು.
- ಕ್ಲೇಮ್ ಸೆಟಲ್ಮೆಂಟ್ಗೆ ಪಾಲಿಸಿದಾರ ಯಾವ ದಾಖಲೆಗಳನ್ನು ಸಲ್ಲಿಸುವ ಅಗತ್ಯ ಬರಬಾರದು. ಬದಲಾಗಿ ಇನ್ಷೂರೆನ್ಸ್ ಕಂಪನಿ ಮತ್ತು ಟಿಪಿಎ (ಮಧ್ಯವರ್ತಿ) ಸಂಸ್ಥೆಗಳೂ ಆಸ್ಪತ್ರೆಯಿಂದ ಅಗತ್ಯ ದಾಖಲೆಗಳನ್ನು ಸಂಗ್ರಹಿಸಬೇಕು.
- ಓಂಬುಡ್ಸ್ಮನ್ (ನ್ಯಾಯಪಾಲಕ) ನೀಡಿದ ಆದೇಶವನ್ನು 30 ದಿನದೊಳಗೆ ಪಾಲಿಸದಿದ್ದರೆ ಪಾಲಿಸಿದಾರನಿಗೆ ದಿನಕ್ಕೆ 5,000 ರೂನಂತೆ ದಂಡ ಕಟ್ಟಿಕೊಡಬೇಕಾಗುತ್ತದೆ.
- ಚಿಕಿತ್ಸೆ ವೇಳೆ ಮೃತಪಟ್ಟಾಗ ಪಾರ್ಥಿಕ ಶರೀರವನ್ನು ಆಸ್ಪತ್ರೆಯಿಂದ ಕೂಡಲೇ ಬಿಡುಗಡೆ ಮಾಡಬೇಕು.
- ಇನ್ಷೂರೆನ್ಸ್ ಕಂಪನಿಗಳು ಪಾಲಿಸಿ ಮಾರುವಾಗ ಸಂಭಾವ್ಯ ಗ್ರಾಹಕರಿಗೆ ವಿಮಾ ಉತ್ಪನ್ನಗಳು, ರೈಡರ್ಸ್, ಆಡ್ ಆನ್ ಇತ್ಯಾದಿ ಮಾಹಿತಿ ನೀಡಬೇಕು. ಎಲ್ಲಾ ವಯೋಮಾನ, ಪ್ರದೇಶ, ಆರೋಗ್ಯ ಸ್ಥಿತಿಗೂ ಇನ್ಷೂರೆನ್ಸ್ ಉತ್ಪನ್ನಗಳು ಲಭ್ಯ ಇರಬೇಕು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ