
ನವದೆಹಲಿ, ನವೆಂಬರ್ 9: ಚಿನ್ನದ ಬೆಲೆ ಸಿಕ್ಕಾಪಟ್ಟೆ ಏರತೊಡಗಿದ ಬಳಿಕ ಬಹಳ ಜನರಿಗೆ ಡಿಜಿಟಲ್ ಗೋಲ್ಡ್ ಹೂಡಿಕೆ ಆಕರ್ಷಕವಾಗಿ ಕಾಣತೊಡಗಿದೆ. ಕೆಲವಾರು ವರ್ಷಗಳಿಂದಲೂ ಡಿಜಿಟಲ್ ಗೋಲ್ಡ್ ಹೂಡಿಕೆ (Digital gold investment) ಲಭ್ಯ ಇದೆಯಾದರೂ ಕಳೆದ ಕೆಲ ದಿನಗಳಿಂದ ಭಿನ್ನಾಭಿಪ್ರಾಯಗಳು ಕೇಳಿಬರತೊಡಗಿವೆ. ಇದಕ್ಕೆ ಪೂರಕವಾಗಿ ಸೆಬಿ (SEBI) ಕೂಡ ನಿನ್ನೆ (ನ. 8) ಎಚ್ಚರಿಕೆಯೊಂದನ್ನು ಹೊರಡಿಸಿದೆ. ಸೆಬಿ ಪ್ರಕಾರ, ಡಿಜಿಟಲ್ ಗೋಲ್ಡ್ನಲ್ಲಿನ ಹೂಡಿಕೆಗಳು ಯಾವುದೇ ಕಾನೂನು ಚೌಕಟ್ಟಿಗೆ ಒಳಪಟ್ಟಿಲ್ಲ. ಅದರಲ್ಲಿ ಹೂಡಿಕೆ ಮಾಡುವುದು ಬಹಳ ಅಪಾಯಕಾರಿಯಾಗಬಹುದು ಎಂದು ವಾರ್ನಿಂಗ್ ಮೆಸೇಜ್ ನೀಡಿದೆ.
‘ಕೆಲ ಆನ್ಲೈನ್ ಮತ್ತು ಡಿಜಿಟಲ್ ಪ್ಲಾಟ್ಫಾರ್ಮ್ಗಳು ಡಿಜಿಟಲ್ ಗೋಲ್ಡ್ ಅಥವಾ ಇ ಗೋಲ್ಡ್ ಉತ್ಪನ್ನಗಳಲ್ಲಿ ಹೂಡಿಕೆ ಮಾಡುವ ಆಫರ್ ಅನ್ನು ಹೂಡಿಕೆದಾರರಿಗೆ ಕೊಡುತ್ತಿರುವುದು ಸೆಬಿ ಗಮನಕ್ಕೆ ಬಂದಿದೆ. ಭೌತಿಕ ಚಿನ್ನಕ್ಕೆ ಡಿಜಿಟಲ್ ಗೋಲ್ಡ್ ಪರ್ಯಾಯ ಎಂದು ಪ್ರಚಾರ ಮಾಡಲಾಗುತ್ತಿರುವುದು ತಿಳಿದುಬಂದಿದೆ’ ಎಂದು ಸೆಬಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದು, ಡಿಜಿಟಲ್ ಗೋಲ್ಡ್ನಲ್ಲಿ ಹೂಡಿಕೆ ಮಾಡುವುದು ಎಷ್ಟು ರಿಸ್ಕಿ ಎಂಬುದನ್ನೂ ವಿವರಿಸಿದೆ.
ಡಿಜಿಟಲ್ ಗೋಲ್ಡ್ ಉತ್ಪನ್ನಗಳು ಸೆಬಿ ನಿಯಂತ್ರಿತ ಚಿನ್ನ ಉತ್ಪನ್ನಗಳಿಗಿಂತ ಭಿನ್ನವಾಗಿವೆ. ಅವುಗಳನ್ನು ಸೆಕ್ಯೂರಿಟೀಸ್ (ಷೇರು, ಬಾಂಡು ಇತ್ಯಾದಿ) ಆಗಿಯಾಗಲೀ, ಕಮಾಡಿಟಿ ಡಿರೈವೇಟಿವ್ಸ್ (ಸರಕು ನಿಷ್ಪನ್ನ) ಆಗಿಯಾಗಲೀ ಪರಿಗಣಿಸಲಾಗಿಲ್ಲ. ಸೆಬಿ ಕಣ್ಗಾವಲಿನ ಹೊರಗೆ ಅವು ಕಾರ್ಯನಿರ್ವಹಿಸುತ್ತಿವೆ. ಇಂಥ ಡಿಜಿಟಲ್ ಗೋಲ್ಡ್ ಉತ್ಪನ್ನಗಳಿಂದ ಹೂಡಿಕೆದಾರರಿಗೆ ದೊಡ್ಡಮಟ್ಟದ ರಿಸ್ಕ್ ಎದುರಾಗಬಹುದು. ಕೌಂಟರ್ಪಾರ್ಟಿ ರಿಸ್ಕ್ (ಚಿನ್ನ ಹೊಂದಿರುವ ಕಂಪನಿಗಳು) ಹಾಗೂ ಕಾರ್ಯಾತ್ಮಕ ರಿಸ್ಕ್ಗಳಿಗೆ (ಪ್ಲಾಟ್ಫಾರ್ಮ್ ವೈಫಲ್ಯ) ಹೂಡಿಕೆದಾರರು ಒಳಗಾಗುವ ಸಂಭವ ಇರುತ್ತದೆ’ ಎಂದು ಸೆಬಿ ಹೇಳಿದೆ.
ಇದನ್ನೂ ಓದಿ: 2026ರ ಜನವರಿ 1ರಿಂದ ನಿಷ್ಕ್ರಿಯಗೊಳ್ಳಲಿವೆ ಈ ಪ್ಯಾನ್ ಕಾರ್ಡ್ಗಳು; ಕಾರಣವೇನು, ಪರಿಹಾರವೇನು ಇತ್ಯಾದಿ ವಿವರ ಇಲ್ಲಿದೆ
ಪೇಟಿಎಂ, ಫೋನ್ಪೇ ಇತ್ಯಾದಿ ಹಲವು ಡಿಟಿಟಲ್ ಆ್ಯಪ್ಗಳು ಗೋಲ್ಡ್ ಇನ್ವೆಸ್ಟ್ಮೆಂಟ್ ಸ್ಕೀಮ್ಗಳನ್ನು ಆಫರ್ ಮಾಡುತ್ತವೆ. ಈ ಪ್ಲಾಟ್ಫಾರ್ಮ್ಗಳು ಎಂಎಂಟಿಸಿ ಪಿಎಎಂಪಿ, ಸೇಫ್ಗೋಲ್ಡ್, ಐಡಿಬಿಐ ಟ್ರಸ್ಟೀಶಿಪ್, ಬ್ರಿಂಕ್ಸ್ ಇಂಡಿಯಾ ಮೊದಲಾದ ಸಂಸ್ಥೆಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿರುತ್ತವೆ.
ನಾವು ಪೇಟಿಎಂನ ಡಿಜಿಟಲ್ ಗೋಲ್ಡ್ ಸ್ಕೀಮ್ನಲ್ಲಿ ಹೂಡಿಕೆ ಮಾಡಿದಾಗ, ಆ ಹಣವನ್ನು ಎಂಎಂಟಿಸಿ-ಪಿಎಎಂಪಿ ಇಂಡಿಯಾ ಪ್ರೈ ಲಿ ಸಂಸ್ಥೆಯು ಭೌತಿಕ ಚಿನ್ನದ ಖರೀದಿಗೆ ಬಳಸುತ್ತದೆ. ಎಂಎಂಟಿಸಿ ಎಂಬುದು ಸರ್ಕಾರಿ ಉದ್ದಿಮೆಯಾದರೆ, ಪಿಎಎಂಪಿ ಎಂಬುದು ಸ್ವಿಟ್ಜರ್ಲ್ಯಾಂಡ್ನ ಮೆಟಲ್ ರಿಫೈನರಿ ಸಂಸ್ಥೆ. ಇವು ಚಿನ್ನವನ್ನು ಖರೀದಿಸಿ ಇಟ್ಟುಕೊಳ್ಳುತ್ತವೆ. ನೀವು ಹೂಡಿಕೆಯನ್ನು ಮಾರಿದಾಗ ಈ ಸಂಸ್ಥೆಯು ಭೌತಿಕ ಚಿನ್ನವನ್ನು ಮಾರುತ್ತವೆ. ಈ ಮೂಲಕ ನಿಮ್ಮ ಹೂಡಿಕೆಗೆ ನಿಗದಿತ ರಿಟರ್ನ್ ಸಿಗುತ್ತದೆ.
ಅದೇ ರೀತಿ ಫೋನ್ ಪೇಗೆ ಸೇಫ್ಗೋಲ್ಡ್ ಎನ್ನುವ ಸಂಸ್ಥೆ ಪಾರ್ಟ್ನರ್ ಆಗಿರುತ್ತದೆ. ಇವುಗಳ ಪರವಾಗಿ ಬ್ರಿಂಕ್ಸ್ ಇಂಡಿಯಾ ಸಂಸ್ಥೆಯು ಚಿನ್ನದ ಖರೀದಿ ಮತ್ತು ಮಾರಾಟದ ಕೆಲಸ ಮಾಡುತ್ತದೆ. ಈ ರೀತಿ ಡಿಜಿಟಲ್ ಗೋಲ್ಡ್ ಪ್ಲಾಟ್ಫಾರ್ಮ್ಗಳು ಕೆಲಸ ಮಾಡುತ್ತವೆ.
ಇಲ್ಲಿ ಡಿಜಿಟಲ್ ಗೋಲ್ಡ್ ಸ್ಕೀಮ್ನಲ್ಲಿ ಭಾಗಿಯಾಗಿರುವ ಯಾವುದೇ ಹೂಡಿಕೆ ಅಥವಾ ಸಂಸ್ಥೆಗಳು ರೆಗ್ಯುಲೇಟರಿಗೆ ಒಳಪಟ್ಟಿರುವುದಿಲ್ಲ. ಅಂದರೆ, ನಿಮ್ಮ ಹೂಡಿಕೆಗೆ ಪ್ರತಿಯಾಗಿ ಭೌತಿಕ ಚಿನ್ನವನ್ನು ಖರೀದಿಸಿ ಇಟ್ಟುಕೊಳ್ಳುವ ಕಂಪನಿ ವಂಚನೆ ಮಾಡಿದರೆ, ಅಥವಾ ದಿವಾಳಿ ಎದ್ದರೆ ಹೂಡಿಕೆದಾರರ ಹಣವನ್ನು ಹಿಂಪಡೆಯುವ ಕಾನೂನು ಅವಕಾಶ ಇರುವುದಿಲ್ಲ. ಡಿಜಿಟಲ್ ಗೋಲ್ಡ್ ಆಫರ್ ಮಾಡುವ ಡಿಜಿಟಲ್ ಪ್ಲಾಟ್ಫಾರ್ಮ್ಗಳೂ ಕೂಡ ದಿವಾಳಿ ಎದ್ದರೆ ಅಥವಾ ಹ್ಯಾಕ್ ಆಗಿ ಹೂಡಿಕೆದಾರರ ಹಣ ಸಿಗದಂತಾದರೆ ಆಗಲೂ ಕೂಡ ಸೆಬಿ, ಆರ್ಬಿಐನಂತಹ ನಿಯಂತ್ರಕ ಸಂಸ್ಥೆಗಳು ಅಸಹಾಯಕವಾಗಬಹುದು.
ಇದನ್ನೂ ಓದಿ: 24 ಕ್ಯಾರಟ್ ಚಿನ್ನದ ಮೇಲೆ ಸಿಕ್ಕಾಪಟ್ಟೆ ಹರಿದುಬಂದ ಹೂಡಿಕೆ; ಚಿನ್ನದ ಬೆಲೆ ಇಷ್ಟೊಂದು ಏರಲು ಇದಪ್ಪಾ ಕಾರಣ..!
ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ, ಬ್ಯಾಂಕುಗಳು ಆರ್ಬಿಐನಿಂದ ರೆಗ್ಯುಲೇಟೆಡ್ ಆಗಿರುತ್ತವೆ. ಇಲ್ಲಿ ನಿಮ್ಮ ಐದು ಲಕ್ಷ ರೂವರೆಗಿನ ಹಣಕ್ಕೆ ಆರ್ಬಿಐ ಗ್ಯಾರಂಟಿ ಒದಗಿಸುತ್ತದೆ. ಅಂದರೆ, ಬ್ಯಾಂಕುಗಳಲ್ಲಿ ನಿಮ್ಮ ಐದು ಲಕ್ಷ ರೂ ಹಣ ಸುರಕ್ಷಿತ ಎಂಬುದು ನಿಮಗೆ ಸ್ಪಷ್ಟವಿರುತ್ತದೆ. ಅದರಲ್ಲಿ ಹೂಡಿಕೆ ಮಾಡುವುದು ಎಷ್ಟು ರಿಸ್ಕ್ ಅಥವಾ ಎಷ್ಟು ರಿಸ್ಕ್ ಇಲ್ಲ ಎಂಬುದು ನಿಮಗೆ ಗೊತ್ತಿರುತ್ತದೆ. ಆದರೆ, ಡಿಜಿಟಲ್ ಗೋಲ್ಡ್ನಲ್ಲಿ ಈ ರೀತಿ ಹೇಳಲು ಸಾಧ್ಯವಿಲ್ಲ ಎಂಬುದು ಸೆಬಿ ನಿರ್ದೇಶನದ ಹಿಂದಿರುವ ಇಂಗಿತವಾಗಿದೆ.
ನೀವು ಸೆಬಿ ನಿಯಂತ್ರಿತ ಯಂತ್ರಗಳಲ್ಲಿ ಡಿಜಿಟಲ್ ಗೋಲ್ಡ್ನಲ್ಲಿ ಹೂಡಿಕೆ ಮಾಡಲು ಅವಕಾಶ ಇದೆ. ಇಟಿಎಫ್ ಗೋಲ್ಡ್, ಇಟಿಎಫ್ ಸಿಲ್ವರ್, ಇಜಿಆರ್ (ಎಲೆಕ್ಟ್ರಾನಿಕ್ ಗೋಲ್ಡ್ ರಿಸಿಪ್ಟ್) ಇಲ್ಲಿ ನೀವು ಹೂಡಿಕೆ ಮಾಡಬಹುದು. ಸೆಬಿ ನಿಯಂತ್ರಿತವಾಗಿರುವ ಮ್ಯುಚುವಲ್ ಫಂಡ್ ಸಂಸ್ಥೆಗಳು ಇವುಗಳನ್ನು ನಡೆಸುತ್ತವೆ. ಇವುಗಳಲ್ಲಿನ ಹೂಡಿಕೆಗಳು ಸೆಬಿ ನಿಯಮಗಳಿಗೆ ಒಳಪಟ್ಟಿರುವುದರಿಂದ ಒಂದಷ್ಟು ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ