AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

April 2026 Rules Changes: ಡಿಜಿಟಲ್ ಪಾವತಿ, ಪ್ಯಾನ್ ಇತ್ಯಾದಿ ನಿಯಮಗಳಲ್ಲಿ ಬದಲಾವಣೆ; ಆರ್‌ಬಿಐಯಿಂದ ಹೊಸ ಗೈಡ್‌ಲೈನ್ಸ್ ತಿಳಿದಿರಿ

Digital payment, PAN and other financial rules changes from April 1st: ಡಿಜಿಟಲ್ ಪೇಮೆಂಟ್ ಮಾಡುವಾಗ ಎರಡು ಫ್ಯಾಕ್ಟರ್ ಅಥೆಂಟಿಕೇಶನ್ ಕಡ್ಡಾಯವಿರಲಿದೆ. ಒಟಿಪಿ, ಪಿನ್, ಪಾಸ್ವರ್ಡ್, ಬಯೋಮೆಟ್ರಿಕ್ ಇತ್ಯಾದಿ ವಿವಿಧ ಅಥೆಂಟಿಕೇಶನ್​ಗಳಲ್ಲಿ ಎರಡನ್ನು ಆಯ್ದುಕೊಳ್ಳಬಹುದು. ಏಪ್ರಿಲ್ 1ರಿಂದ ಈ ನಿಯಮ ಜಾರಿಗೆ ಬರಲಿದೆ. ಹಾಗೆಯೇ, ಹೊಸ ಪ್ಯಾನ್ ಕಾರ್ಡ್ ಪಡೆಯಲು ಇರುವ ನಿಯಮದಲ್ಲೂ ಬದಲಾವಣೆ ಇದೆ, ಗಮನಿಸಬೇಕು.

April 2026 Rules Changes: ಡಿಜಿಟಲ್ ಪಾವತಿ, ಪ್ಯಾನ್ ಇತ್ಯಾದಿ ನಿಯಮಗಳಲ್ಲಿ ಬದಲಾವಣೆ; ಆರ್‌ಬಿಐಯಿಂದ ಹೊಸ ಗೈಡ್‌ಲೈನ್ಸ್ ತಿಳಿದಿರಿ
ಡಿಜಿಟಲ್ ಪೇಮೆಂಟ್Image Credit source: Shutterstock
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 31, 2026 | 4:31 PM

Share

ನವದೆಹಲಿ, ಮಾರ್ಚ್ 31: ನಾಳೆ ಹೊಸ ಹಣಕಾಸು ವರ್ಷದ ಆರಂಭ. ಏಪ್ರಿಲ್ 1ರಿಂದ ಡಿಜಿಟಲ್ ಪೇಮೆಂಟ್, ಪ್ಯಾನ್ ಕಾರ್ಡ್, ಕ್ರೆಡಿಟ್ ಕಾರ್ಡ್, ಎಟಿಎಂ ಬಳಕೆ ಇತ್ಯಾದಿ ಕೆಲ ನಿಯಮಗಳಲ್ಲಿ ಬದಲಾವಣೆ ಇರಲಿದೆ. ಎಚ್​ಡಿಎಫ್​ಸಿ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕುಗಳು ಎಟಿಎಂ ವಿತ್​ಡ್ರಾಯಲ್, ಲಾಕರ್, ಎಫ್​ಡಿ, ಸಾಲ ಇತ್ಯಾದಿಗಳ ದರಗಳನ್ನು ಪರಿಷ್ಕರಿಸಿವೆ. ಕೆಲ ಕ್ರೆಡಿಟ್ ಕಾರ್ಡ್​ಗಳ ರಿವಾರ್ಡ್ ಪಾಯಿಂಟ್ಸ್ ನಿಯಮಗಳಲ್ಲಿ ಬದಲಾವಣೆ ಇದೆ. ಏಪ್ರಿಲ್ 1ರಿಂದ ಕೆಲ ಮಹತ್ವದ ಹಣಕಾಸು ನಿಯಮಗಳ (Financial Rules) ಬದಲಾವಣೆ ಏನೇನು ಎನ್ನುವ ವಿವರ ಇಲ್ಲಿದೆ:

ಡಿಜಿಟಲ್ ಪೇಮೆಂಟ್ ನಿಯಮಗಳು

ಆರ್​ಬಿಐ ಮಾರ್ಗಸೂಚಿ ಪ್ರಕಾರ ಡಿಜಿಟಲ್ ಪೇಮೆಂಟ್ಸ್ ನಿಯಮಗಳಲ್ಲಿ ಏಪ್ರಿಲ್ 1ರಿಂದ ಕೆಲ ಬದಲಾವಣೆ ಇರಲಿದೆ. ಯುಪಿಐ ಪೇಮೆಂಟ್ಸ್, ಕಾರ್ಡ್ ಪೇಮೆಂಟ್, ವ್ಯಾಲಟ್ ಪೇಮೆಂಟ್​ಗಳಲ್ಲಿ ಎರಡು ಹಂತದ ದೃಢೀಕರಣ ವ್ಯವಸ್ಥೆ ಇರುತ್ತದೆ. ಒಟಿಪಿ ಜೊತೆಗೆ ಪಿನ್ ಅಥವಾ ಪಾಸ್ವರ್ಡ್ ಅಥವಾ ಬಯೋಮೆಟ್ರಿಕ್ ಅಥವಾ ಸೆಕ್ಯೂರಿಟಿ ಟೋಕನ್​ಗಳನ್ನು ಸಲ್ಲಿಸುವ ಅವಶ್ಯಕತೆ ಇರುತ್ತದೆ. ಒಟಿಪಿ ಇಲ್ಲದೆಯೂ ಅಥೆಂಟಿಕೇಶನ್ ಸಾಧ್ಯ. ಪಿನ್ ಮತ್ತು ಬಯೋಮೆಟ್ರಿಕ್ ಮೂಲಕ ಟ್ರಾನ್ಸಾಕ್ಷನ್ ದೃಢೀಕರಿಸಬಹುದು. ಯಾವುದಾದರೂ ಎರಡು ಫ್ಯಾಕ್ಟರ್ ದೃಢೀಕರಣವನ್ನು ಆಯ್ದುಕೊಳ್ಳಬಹುದು.

ಇದನ್ನೂ ಓದಿ: ವಿವಿಧ ಪೋಸ್ಟ್ ಆಫೀಸ್ ಸ್ಕೀಮ್ಸ್; ಏಪ್ರಿಲ್-ಜೂನ್ ಕ್ವಾರ್ಟರ್​ಗೆ ಬಡ್ಡಿದರ ಘೋಷಣೆ; ಇಲ್ಲಿದೆ ಪಟ್ಟಿ

ಹೊಸ ಪ್ಯಾನ್ ಕಾರ್ಡ್ ನಿಯಮಗಳು

ಈ ಮೊದಲು ನೀವು ಹೊಸ ಪ್ಯಾನ್ ಕಾರ್ಡ್​ಗೆ ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್ ದಾಖಲೆ ಕೊಟ್ಟರೆ ಸಾಕಿತ್ತು. ಆದರೆ, ಏಪ್ರಿಲ್ 1ರಿಂದ ನಿಯಮ ಕಠಿಣಗೊಳ್ಳುತ್ತದೆ. ಪ್ಯಾನ್​ಗೆ ಅರ್ಜಿ ಸಲ್ಲಿಸುವಾಗ ಆಧಾರ್ ಜೊತೆಗೆ ಇನ್ನೊಂದು ಹೆಚ್ಚುವರಿ ದಾಖಲೆ ಸಲ್ಲಿಸಬೇಕಾಗುತ್ತದೆ. ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ, ಆಧಾರ್​ನಲ್ಲಿರುವಂತೆಯೇ ಸ್ಪೆಲ್ಲಿಂಗ್ ಸಮೇತ ಹೆಸರು ಪ್ಯಾನ್​ನಲ್ಲಿ ಇರಬೇಕು. ಇಲ್ಲದಿದ್ದರೆ ಅರ್ಜಿ ರಿಜೆಕ್ಟ್ ಆಗಬಹುದು.

ಫಾಸ್​ಟ್ಯಾಗ್ ವಾರ್ಷಿಕ ಪಾಸ್ ಶುಲ್ಕ ಹೆಚ್ಚಳ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್​ಎಚ್​ಎಐ) 2026-27ರ ಹಣಕಾಸು ವರ್ಷಕ್ಕೆ ಫಾಸ್​ಟ್ಯಾಗ್ ವಾರ್ಷಿಕ ಪಾಸ್​ನ ದರ ಪರಿಷ್ಕರಣೆ ಮಾಡಿದೆ. ಏಪ್ರಿಲ್ 1ರಿಂದ ಪಾಸ್ ತುಸು ದುಬಾರಿಯಾಗಲಿದೆ. ಈಗ 3,000 ರೂ ಇರುವ ಫಾಸ್​ಟ್ಯಾಗ್ ವಾರ್ಷಿಕ ಪಾಸ್​ನ ಬೆಲೆ 3,075 ರೂಗೆ ಏರಲಿದೆ.

ಇದನ್ನೂ ಓದಿ: ಹೆಚ್ಚು ನಾಮಿನಿಗಳು, ಸೊನ್ನೆ ಲೋನ್ ಪ್ರೀಪೇಮೆಂಟ್ ಚಾರ್ಜ್; ಜನಸಾಮಾನ್ಯರು ಗಮನಿಸಬೇಕಾದ ಹೊಸ ನಿಯಮಗಳಿವು

ಡಿಜಿಟಲ್ ಪೇಮೆಂಟ್ ಪಾವತಿ ಮತ್ತು ಪ್ಲಾಟ್​ಫಾರ್ಮ್​ಗಳ ನಿರ್ವಹಣೆ ವಿಚಾರದಲ್ಲಿ ಆರ್​ಬಿಐ ಮಾರ್ಗಸೂಚಿ ಗಮನಾರ್ಹವೆನಿಸಿದೆ. ಡಿಜಿಟಲ್ ಇಕೋಸಿಸ್ಟಂನಲ್ಲಿರುವ ಸಂಸ್ಥೆಗಳು ಸೆಕ್ಯೂರಿಟಿ ಸ್ಟ್ಯಾಂಡರ್ಡ್​ಗಳನ್ನು ಸರಿಯಾಗಿ ಪಾಲಿಸಬೇಕು. ಸಿಸ್ಟಂ ದೋಷದಿಂದ ಯಾವುದಾದರೂ ವಂಚನೆಯಾದಲ್ಲಿ ಗ್ರಾಹಕರಿಗೆ ಬ್ಯಾಂಕುಗಳೇ ಪರಿಹಾರ ನೀಡಬೇಕು. ಗ್ರಾಹಕರ ವ್ಯಾಜ್ಯ ಪರಿಹಾರ ವ್ಯವಸ್ಥೆ ವೇಗವಾಗಿ ಆಗಬೇಕು. ಇವೇ ಮುಂತಾದ ನಿಯಮಗಳನ್ನು ಆರ್​ಬಿಐ ರೂಪಿಸಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More