ಚಿನ್ನದ ಬೆಲೆ ಹೆಚ್ಚಾದರೆ ಸಾಲದ ದರ ಹೆಚ್ಚುತ್ತದಾ, ಕಡಿಮೆ ಆಗುತ್ತದಾ? ಇಲ್ಲಿದೆ ಡೀಟೇಲ್ಸ್

|

Updated on: Dec 11, 2023 | 11:54 AM

Gold Loan Facts: ಬಹಳ ಸುಲಭವಾಗಿ ಸಿಗುವ ಸಾಲಗಳಲ್ಲಿ ಗೋಲ್ಡ್ ಲೋನ್ ಒಂದು. ಇದು ಅಪ್ಪಟ ಸೆಕ್ಯೂರ್ಡ್ ಲೋನ್ ಆಗಿರುವುದರಿಂದ ಬ್ಯಾಂಕುಗಳೂ ಖುಷಿಯಿಂದ ಸಾಲ ಕೊಡುತ್ತವೆ. ಚಿನ್ನದ ಮೇಲಿನ ಸಾಲಕ್ಕೆ ಬಡ್ಡಿದರ ಕನಿಷ್ಠ ಮಟ್ಟದಲ್ಲಿ ಇರುತ್ತದೆ. ಚಿನ್ನದ ಬೆಲೆಯ ಶೇ. 75ರಷ್ಟು ಹಣವನ್ನು ಸಾಮಾನ್ಯವಾಗಿ ಸಾಲವಾಗಿ ನೀಡಲಾಗುತ್ತದೆ. ಸಾಲದ ಅವಧಿಯಲ್ಲಿ ಚಿನ್ನದ ಬೆಲೆ ಏರಿದರೆ ಬಡ್ಡಿದರ ಇನ್ನಷ್ಟು ಕಡಿಮೆ ಮಾಡುವ ಅವಕಾಶ ಇರುತ್ತದೆ. ನಿಯಮಿತವಾಗಿ ಕಂತುಗಳನ್ನು ಕಟ್ಟುತ್ತಿದ್ದರೂ ಬಡ್ಡಿದರ ಕಡಿಮೆ ಮಾಡಬಹುದು.

ಚಿನ್ನದ ಬೆಲೆ ಹೆಚ್ಚಾದರೆ ಸಾಲದ ದರ ಹೆಚ್ಚುತ್ತದಾ, ಕಡಿಮೆ ಆಗುತ್ತದಾ? ಇಲ್ಲಿದೆ ಡೀಟೇಲ್ಸ್
ಚಿನ್ನದ ಸಾಲ
Follow us on

ಬೆಂಗಳೂರು, ಡಿಸೆಂಬರ್ 11: ಚಿನ್ನದ ಬೆಲೆ (Gold Rates) ಒಂದು ವರ್ಷದ ಅಂತದಲ್ಲಿ ಇಳಿಕೆ ಕಂಡಿದ್ದೇ ಇಲ್ಲ. ಪೆಟ್ರೋಲ್​ನಂತೆ ಚಿನ್ನವೂ ಸೀಮಿತ ಪ್ರಮಾಣದಲ್ಲಿ ಲಭ್ಯ ಇರುವ ಸಂಪನ್ಮೂಲವಾಗಿರುವುದರಿಂದ ಬೆಲೆ ಇಳಿಮುಖವಾಗುವುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಸದ್ಯ ಅಪರಂಜಿ ಚಿನ್ನ 10 ಗ್ರಾಮ್​ಗೆ 62,000 ರೂನಿಂದ 63,000 ರೂವರೆಗೆ ಇದೆ. 22 ಕ್ಯಾರಟ್ ಚಿನ್ನ ಸುಮಾರು 57,000 ರೂ ಆಸುಪಾಸಿನ ಬೆಲೆ ಹೊಂದಿದೆ. ಚಿನ್ನ ಬಹೂಪಯೋಗಿ ವಸ್ತು. ಆಭರಣವಾಗಿ ಅದನ್ನು ಬಳಸಬಹುದು. ಹೂಡಿಕೆಯಾಗಿ ಅದನ್ನು ಇಟ್ಟುಕೊಳ್ಳಬಹುದು. ಕಷ್ಟ ಬಂದಾಗ ಅಡ ಇಟ್ಟು ಸಾಲ ಪಡೆಯಬಹುದು. ಹಾಗೆಯೇ, ಬಾಡಿಗೆಗೆ ಕೊಟ್ಟು ಆದಾಯ ಕೂಡ ಮಾಡಿಕೊಳ್ಳಬಹುದು.

ಚಿನ್ನದ ಮೇಲಿನ ಸಾಲ ಬಹಳ ಸುಲಭ

ಬ್ಯಾಂಕಾಗಲೀ ಅಥವಾ ಯಾವುದೇ ಹಣಕಾಸು ಸಂಸ್ಥೆಯಾಗಲೀ ಚಿನ್ನದ ಮೇಲೆ ಸಾಲವನ್ನು ಬಹಳ ಖುಷಿಯಾಗಿ ನೀಡುತ್ತದೆ. ಯಾಕೆಂದರೆ ಇದು ಅಪ್ಪಟ ಸೆಕ್ಯೂರ್ಡ್ ಲೋನ್. ಸಾಲ ವಾಪಸ್ ಮಾಡದಿದ್ದರೆ ಚಿನ್ನವನ್ನು ಇಟ್ಟುಕೊಂಡು ಸಾಲದ ಹಣ ಮುರಿದುಕೊಳ್ಳಬಹುದು. ಹೀಗಾಗಿ, ನಿಮ್ಮ ಬಳಿ ಒಡವೆಯೋ ಅಥವಾ ಇನ್ಯಾವುದಾದರೂ ರೂಪದ ಚಿನ್ನವೋ ಇದ್ದರೆ ಸುಲಭವಾಗಿ ಸಾಲ ಪಡೆಯಬಹುದು.

ಇದನ್ನೂ ಓದಿ: Gold Income: ಗೋಲ್ಡ್ ಮಾನಿಟೈಸೇಶನ್ ಸ್ಕೀಮ್​ಗೆ ನಿಮ್ಮ ಒಡವೆ ಬಳಸುವ ಮುನ್ನ ಈ ಸಂಗತಿಗಳನ್ನು ತಿಳಿದಿರಿ

ಚಿನ್ನದ ಸಾಲಕ್ಕೆ ಬಡ್ಡಿಯೂ ಕಡಿಮೆ

ಸಾಮಾನ್ಯವಾಗಿ ಚಿನ್ನದ ಬೆಲೆಯ ಶೇ. 75ರಷ್ಟು ಹಣವನ್ನು ಸಾಲವಾಗಿ ಪಡೆಯಬಹುದು. ಕೆಲ ಬ್ಯಾಂಕುಗಳಲ್ಲಿ 50 ಲಕ್ಷ ರೂವರೆಗೂ ಸಾಲ ಸಿಗುತ್ತದೆ. ಕೆಲ ಹಣಕಾಸು ಸಂಸ್ಥೆಗಳು ಕೋಟಿ ರೂಗೂ ಹೆಚ್ಚು ಮೊತ್ತದ ಸಾಲವನ್ನು ನೀಡಬಹುದು. ಕೆಲ ಸಹಕಾರಿ ಬ್ಯಾಂಕುಗಳಲ್ಲಿ ಸದಸ್ಯರಲ್ಲದ ಖಾತೆದಾರರಿಗೆ 1 ಲಕ್ಷ ರೂವರೆಗೂ ಮಾತ್ರ ಸಾಲ ಮಿತಿ ಇರುತ್ತದೆ.

ಚಿನ್ನದ ಸಾಲಕ್ಕೆ ಬಡ್ಡಿದರ ಬಹಳ ಕಡಿಮೆ ಇರುತ್ತದೆ. ಕೆಲವೊಮ್ಮೆ ಗೃಹಸಾಲಕ್ಕಿಂತಲೂ ಕಡಿಮೆ ದರ ಇರಬಹುದು. ಹಾಗೆಯೇ, ಗೃಹಸಾಲ, ವೈಯಕ್ತಿಕ ಸಾಲಗಳ ರೀತಿ ಚಿನ್ನದ ಸಾಲಕ್ಕೆ ಮರುಪಾವತಿ ಕಟ್ಟುಪಾಡು ಇರುವುದಿಲ್ಲ. ಅಂದರೆ, ನೀವು ಪ್ರತೀ ತಿಂಗಳು ನಿರ್ದಿಷ್ಟ ಕಂತು ಹಣ ಕಟ್ಟಬೇಕೆಂಬುದಿರುವುದಿಲ್ಲ. ನಿಮಗೆ ಇಷ್ಟ ಬಂದಂತೆ ಇಷ್ಟ ಬಂದಷ್ಟು ಹಣವನ್ನು ಸಾಲಕ್ಕೆ ಕಟ್ಟಬಹುದು. ಆದರೆ, ಒಂದು ವರ್ಷ ಅವಧಿಯಲ್ಲಿ ಸಾಲ ಮರುಪಾವತಿಸಬೇಕು. ಅಥವಾ ಸಾಲ ನವೀಕರಿಸಬೇಕು.

ಸಾಲ ನವೀಕರಿಸುವುದೆಂದರೆ, ಮತ್ತೆ ನಿಮ್ಮ ಚಿನ್ನವನ್ನು ಪರಾಮರ್ಶಿಸಿ, ಹೊಸ ಸಾಲವನ್ನು ನೀಡಲಾಗುತ್ತದೆ.

ಇದನ್ನೂ ಓದಿ: ಚಿನ್ನ ಖರೀದಿಸಲು ಮುಂದಾಗಿದ್ದೀರಾ? ತೆರಿಗೆ ನಿಯಮ, ಹೂಡಿಕೆ ಆಯ್ಕೆ ಇತ್ಯಾದಿ ವಿವರ ತಿಳಿಯಿರಿ

ಚಿನ್ನದ ಬೆಲೆ ಹೆಚ್ಚಾದರೆ ಬಡ್ಡಿದರ ಏನಾಗುತ್ತದೆ?

ಒಂದು ವೇಳೆ ನೀವು ಚಿನ್ನವನ್ನು ಒತ್ತೆ ಇಟ್ಟು ಸಾಲ ಪಡೆದಿರುತ್ತೀರಿ ಎಂದಿಟ್ಟುಕೊಳ್ಳಿ. ಕೆಲ ದಿನಗಳ ಬಳಿಕ ಚಿನ್ನದ ಬೆಲೆ ಏರುತ್ತದೆ. ಆಗ ನೀವು ಬ್ಯಾಂಕಿಗೆ ಹೋಗಿ ಬಡ್ಡಿದರ ಕಡಿಮೆ ಮಾಡುವಂತೆ ಕೇಳಿಕೊಳ್ಳಬಹುದು. ಕೆಲ ಬ್ಯಾಂಕುಗಳು ಬಡ್ಡಿದರ ತುಸು ಕಡಿಮೆ ಮಾಡಬಹುದು.

ನೀವು ನಿಯಮಿತವಾಗಿ ಮರುಪಾವತಿ ಮಾಡುತ್ತಿದ್ದಾಗಲೂ ಬ್ಯಾಂಕು ನಿಮಗೆ ಬಡ್ಡಿದರ ಕಡಿಮೆ ಮಾಡಲು ಪರಿಗಣಿಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ