EPF: 2023-24ರ ಸಾಲಿನಲ್ಲಿ ಇಪಿಎಫ್ ಹಣಕ್ಕೆ ಶೇ. 8.25ರ ಬಡ್ಡಿ; ಹಣಕಾಸು ಸಚಿವಾಲಯದಿಂದ ಅನುಮೋದನೆ

|

Updated on: Jul 11, 2024 | 7:59 PM

EPF interest rate of 8.25% for 2023-24: ಎಂಪ್ಲಾಯಿ ಪ್ರಾವಿಡೆಂಟ್ ಫಂಡ್ ನಿಧಿಗೆ 2023-24ರ ಸಾಲಿಗೆ ಶೇ. 8.25ರ ಬಡ್ಡಿಯಲ್ಲಿ ಹಣ ಜಮೆ ಮಾಡಲಾಗುತ್ತಿದೆ. ಸಿಬಿಟಿ ಮಾಡಿದ ಬಡ್ಡಿದರ ಶಿಫಾರಸಿಗೆ ಹಣಕಾಸು ಸಚಿವಾಲಯ ಅನುಮೋದನೆ ಮಾಡಿದೆ. ಈ ವಿಚಾರವನ್ನು ಇಪಿಎಫ್​ಒ ಸಂಸ್ಥೆ ತನ್ನ ಎಕ್ಸ್ ಪ್ಲಾಟ್​ಫಾರ್ಮ್​ನಲ್ಲಿ ಹಂಚಿಕೊಂಡಿದೆ.

EPF: 2023-24ರ ಸಾಲಿನಲ್ಲಿ ಇಪಿಎಫ್ ಹಣಕ್ಕೆ ಶೇ. 8.25ರ ಬಡ್ಡಿ; ಹಣಕಾಸು ಸಚಿವಾಲಯದಿಂದ ಅನುಮೋದನೆ
ಇಪಿಎಫ್
Follow us on

ನವದೆಹಲಿ, ಜುಲೈ 11: ಉದ್ಯೋಗಿಗಳ ಪಿಂಚಣಿ ನಿಧಿ ಅಥವಾ ಇಪಿಎಫ್ ಖಾತೆಗಳಲ್ಲಿ ಹಣಕ್ಕೆ ಶೇ. 8.25ರ ಬಡ್ಡಿದರಕ್ಕೆ ಹಣಕಾಸು ಸಚಿವಾಲಯ ಅನುಮೋದನೆ ನೀಡಿದೆ. 2023-24ರ ಹಣಕಾಸು ವರ್ಷದ ಪ್ರಾವಿಡೆಂಟ್ ಫಂಡ್ ಡೆಪಾಸಿಟ್​​ಗಳಿಗೆ ಈ ಬಡ್ಡಿ ಹಣ ಸೇರ್ಪಡೆ ಆಗಲಿದೆ. ಹಿಂದಿನ ವರ್ಷದ, ಅಂದರೆ 2022-23ರ ಹಣಕಾಸು ವರ್ಷದಲ್ಲಿ ಇಪಿಎಫ್ ಡೆಪಾಸಿಟ್​ಗಳಿಗೆ ಶೇ. 8.15ರ ಬಡ್ಡಿದರ ನಿಗದಿ ಮಾಡಲಾಗಿತ್ತು. 2023-24ಕ್ಕೆ ಬಡ್ಡಿದರವನ್ನು ಶೇ. 8.25ಕ್ಕೆ ಹೆಚ್ಚಳ ಮಾಡಲಾಯಿತು. 2024ರ ಮೇ 31ರಂದು ಇಪಿಎಫ್​ಒ ಸಂಸ್ಥೆ ವತಿಯಿಂದ ಸರ್ಕಾರ ಇಪಿಎಫ್ ಠೇವಣಿ ದರಗಳನ್ನು ಪರಿಷ್ಕರಿಸುವ ನಿರ್ಧಾರ ಪ್ರಕಟಿಸಿತ್ತು.

ಫೆಬ್ರುವರಿ 10ರಂದು ಸಿಬಿಟಿ ಸಭೆಯಲ್ಲಿ 2023-24ರ ಸಾಲಿನ ಇಪಿಎಫ್ ನಿಧಿಗೆ ಶೇ. 8.25ರ ವಾರ್ಷಿಕ ಬಡ್ಡಿ ಕೊಡಲು ಶಿಫಾರಸು ಮಾಡಲಾಗಿತ್ತು. ಅದನ್ನು ಹಣಕಾಸು ಸಚಿವಾಲಯದ ಅನುಮೋದನೆಗೆ ಕಳುಹಿಸಲಾಗಿತ್ತು. ಇದೀಗ ಅನುಮೋದನೆ ಸಿಕ್ಕಿದೆ ಎಂದು ಇಪಿಎಫ್​ಒ ಸಂಸ್ಥೆ ಇಂದು ಗುರುವಾರ ಎಕ್ಸ್ ಪ್ಲಾಟ್​ಫಾರ್ಮ್​ನಲ್ಲಿ ತಿಳಿಸಿದೆ.

ಸ್ಮಾಲ್ ಸೇವಿಂಗ್ಸ್ ಸ್ಕೀಮ್​ಗಳಲ್ಲಿ ಸರ್ಕಾರ ತ್ರೈಮಾಸಿಕ ಅವಧಿಗೆ ದರಗಳನ್ನು ಪರಿಷ್ಕರಿಸುತ್ತದೆ. ಆದರೆ, ಇಪಿಎಫ್ ನಿಧಿಗೆ ತ್ರೈಮಾಸಿಕ ಬಡ್ಡಿ ಇರುವುದಿಲ್ಲ. ವಾರ್ಷಿಕ ಬಡ್ಡಿ ದರ ಇರುತ್ತದೆ. ಹೊಸ ಹಣಕಾಸು ವರ್ಷದ ಮೊದಲ ಕ್ವಾರ್ಟರ್​ನಲ್ಲಿ ಈ ಬಡ್ಡಿದರ ಘೋಷಣೆ ಆಗುತ್ತದೆ.

ಇದನ್ನೂ ಓದಿ: ನಿಮ್ಮ ಇಪಿಎಫ್ ಖಾತೆಗೆ ನಾಮಿನಿ ಹೆಸರು ಸೇರಿಸುವುದು ಹೇಗೆ? ಆನ್ಲೈನ್​ನಲ್ಲಿ ಮಾಡುವ ಕ್ರಮಗಳಿವು…

ಬಡ್ಡಿದರ ಹೇಗೆ ನಿಗದಿ ಆಗುತ್ತದೆ?

ಇಪಿಎಫ್​ನ ಖಾತೆಗಳಿಗೆ ಸಂದಾಯವಾಗುವ ಹಣವನ್ನು ಇಪಿಎಫ್​ಒ ಸಂಸ್ಥೆ ಡೆಟ್ ಮತ್ತು ಈಕ್ವಿಟಿ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುತ್ತದೆ. ಅದರಲ್ಲಿ ಸಿಗುವ ರಿಟರ್ನ್ಸ್ ಆಧಾರದ ಮೇಲೆ ಇಪಿಎಫ್ ಹಣಕ್ಕೆ ಬಡ್ಡಿದರ ನಿಗದಿ ಮಾಡಲಾಗುತ್ತದೆ.

ಪಿಎಫ್ ಹಣ ಹಿಂಪಡೆಯುತ್ತಿರುವವರಿಗೆ ಯಾವ ಬಡ್ಡಿ?

ಈಗ ಪಿಎಫ್ ಹಣಕ್ಕೆ ಸೆಟಲ್ಮೆಂಟ್ ಕ್ಲೇಮ್ ಮಾಡುತ್ತಿರುವವರಿಗೆ ಅಥವಾ ರಿಟೈರ್ ಆಗುತ್ತಿರುವವರಿಗೆ ಹಳೆಯ ಬಡ್ಡಿ ಬದಲು ಹೊಸ ಬಡ್ಡಿದರ ಅನ್ವಯ ಆಗುತ್ತದೆ. ಅವರ ಪಿಎಫ್ ಖಾತೆಗೆ ಶೇ. 8.25ರ ಬಡ್ಡಿಯಲ್ಲಿ ಹಣ ಜಮೆ ಮಾಡಿ ಬಳಿಕ ಸೆಟಲ್ ಮಾಡಲಾಗುತ್ತಿದೆ.

ಇಪಿಎಫ್​ಒ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ 23,04,516 ಕ್ಲೇಮ್​ಗಳ ವಿಲೇವಾರಿ ಮಾಡಲಾಗಿದೆ. 9260 ಕೋಟಿ ರೂನಷ್ಟು ಹಣವನ್ನು ಶೇ. 8.25ರ ಬಡ್ಡಿ ಸಮೇತವಾಗಿ ಸದಸ್ಯರಿಗೆ ಸೆಟಲ್ ಮಾಡಲಾಗಿದೆ.

ಇದನ್ನೂ ಓದಿ: ಚೆಕ್ ಲೀಫ್, ಪಾಸ್​ಬುಕ್ ಫೋಟೋ ಲಗತ್ತಿಸುವ ಅಗತ್ಯವಿಲ್ಲ; ಸರಳವಾಗಲಿದೆ ಪಿಎಫ್ ಹಣಕ್ಕೆ ಕ್ಲೇಮ್ ಪ್ರಕ್ರಿಯೆ

ನಿಮ್ಮ ಪಿಎಫ್ ಖಾತೆಗೆ ಬಡ್ಡಿ ಬಂದಿದೆಯಾ ಪರಿಶೀಲಿಸಿ…

ಉಮಂಗ್ ಆ್ಯಪ್, ಇಪಿಎಫ್​ಒ ವೆಬ್​ಸೈಟ್, ಮೊಬೈಲ್ ಎಸ್ಸೆಮ್ಮೆಸ್ ಮತ್ತು ಮಿಸ್ಡ್ ಕಾಲ್ ವಿಧಾನಗಳ ಮೂಲಕ ಪಿಎಫ್ ಬ್ಯಾಲನ್ಸ್ ಎಷ್ಟಿದಎ ನೋಡಬಹುದು. ಉಮಂಗ್ ಆ್ಯಪ್ ಮತ್ತು ಇಪಿಎಫ್​ಒ ವೆಬ್​ಸೈಟ್​ನಲ್ಲಿ ನೀವು ಲಾಗಿನ್ ಆಗಿ ಪಾಸ್​ಬುಕ್ ಅನ್ನು ತೆರೆದು ನೋಡಬಹುದು.

ಎಸ್ಸೆಮ್ಮೆಸ್ ಸರ್ವಿಸ್​ನಲ್ಲಿ ನೀವು 7738299899 ನಂಬರ್​ಗೆ ‘EPFOHO UAN’ ಟೈಪ್ ಮಾಡಿ ಕಳುಹಿಸಬೇಕು. ಇಲ್ಲಿ ಯುಎಎನ್ ಎಂದರೆ ನಿಮ್ಮ ಯುಎಎನ್ ಅಂಕಿಗಳನ್ನು ಹಾಕಬೇಕು. ಆಗ ಪಿಎಫ್ ಬ್ಯಾಲನ್ಸ್ ವಿವರ ಇರುವ ಎಸ್ಸೆಮ್ಮೆಸ್ ನಿಮಗೆ ಬರುತ್ತದೆ.

ಮಿಸ್ಡ್ ಕಾಲ್ ಸರ್ವಿಸ್​ನಲ್ಲಿ ನೀವು ನಿಮ್ಮ ನೊಂದಾಯಿತ ಮೊಬೈಲ್ ನಂಬರ್​ನಿಂದ 9966044425 ಸಂಖ್ಯೆಗೆ ಕರೆ ಮಾಡಬೇಕು. ಆ ಕರೆ ತನ್ನಂತಾನೆ ಕಡಿತಗೊಳ್ಳುತ್ತದೆ. ಬಳಿಕ ನಿಮ್ಮ ಪಿಎಫ್ ಪಾಸ್​ಬುಕ್ ಬ್ಯಾಲನ್ಸ್​ನ ವಿವರ ಇರುವ ಎಸ್ಸೆಮ್ಮೆಸ್ ಬರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ