ಫಿಕ್ಸೆಡ್ ಡೆಪಾಸಿಟ್​ಗೆ ಟಿಡಿಎಸ್ ಕಡಿತ ಇರುತ್ತಾ? ಅದನ್ನು ತಪ್ಪಿಸಲು ಏನು ಮಾಡಬೇಕು? ಇಲ್ಲಿದೆ ಡೀಟೇಲ್ಸ್

TDS on Fixed Deposit interest income: ಫಿಕ್ಸೆಡ್ ಡೆಪಾಸಿಟ್ ಮೇಲೆ ತೆರಿಗೆ ಇರುವುದಿಲ್ಲವಾದರೂ ಅದರಿಂದ ಸಿಗುವ ಬಡ್ಡಿ ಆದಾಯಕ್ಕೆ ಟ್ಯಾಕ್ಸ್ ಅನ್ವಯ ಆಗುತ್ತದೆ. ವಾರ್ಷಿಕ ಬಡ್ಡಿ ಆದಾಯ 40,000 ರೂಗಿಂತ ಹೆಚ್ಚಾಗಿದ್ದರೆ ಶೇ. 10ರಷ್ಟು ಟಿಡಿಎಸ್ ಅನ್ನು ಬ್ಯಾಂಕ್​​ನವರು ಕಡಿತಗೊಳಿಸುತ್ತಾರೆ. ಟಿಡಿಎಸ್ ಮುರಿದುಕೊಳ್ಳಬಾರದೆಂದಿದ್ದರೆ ಫಾರ್ಮ್ 15ಜಿ ಅಥವಾ 15ಎಚ್ ಅನ್ನು ಸಲ್ಲಿಸಬಹುದು. ನಿಮ್ಮ ಒಟ್ಟಾರೆ ಆದಾಯವು ಟ್ಯಾಕ್ಸಬಲ್ ಇನ್ಕಮ್ ಮಿತಿಯೊಳಗೆ ಇರಬೇಕು.

ಫಿಕ್ಸೆಡ್ ಡೆಪಾಸಿಟ್​ಗೆ ಟಿಡಿಎಸ್ ಕಡಿತ ಇರುತ್ತಾ? ಅದನ್ನು ತಪ್ಪಿಸಲು ಏನು ಮಾಡಬೇಕು? ಇಲ್ಲಿದೆ ಡೀಟೇಲ್ಸ್
ಡೆಪಾಸಿಟ್

Updated on: Jun 26, 2025 | 11:20 AM

ನಿಶ್ಚಿತ ಠೇವಣಿ ಅಥವಾ ಫಿಕ್ಸೆಡ್ ಡೆಪಾಸಿಟ್ (Fixed Deposit) ಭಾರತದಲ್ಲಿ ಅತಿಹೆಚ್ಚು ಬಳಕೆ ಆಗುವ ಹೂಡಿಕೆ ಪ್ಲಾನ್​ಗಳಾಗಿವೆ. ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಜನರು ತಮ್ಮ ಉಳಿತಾಯ ಹಣವನ್ನು ಎಫ್​ಡಿಗಳಲ್ಲಿ ಇರಿಸುವುದುಂಟು. ಈಗ ಎಸ್​​ಐಪಿ ಕಾಲವಾದರೂ ಸಾಂಪ್ರದಾಯಿಕ ಹೂಡಿಕೆ ಯಂತ್ರವಾಗಿ ಎಫ್​​ಡಿ ಮುಂದುವರಿದುಕೊಂಡು ಬಂದಿದೆ. ಫಿಕ್ಸೆಡ್ ಡೆಪಾಸಿಟ್​ನಲ್ಲಿ ಟ್ಯಾಕ್ಸ್ ಕಡಿತ ಆಗುತ್ತದೆ ಎನ್ನುವ ಅಂಶ ಈಗಲೂ ಬಹಳ ಮಂದಿಗೆ ಗೊತ್ತಿಲ್ಲ. ಫಿಕ್ಸೆಡ್ ಡೆಪಾಸಿಟ್ ಮೇಲೆ ತೆರಿಗೆ ಇರೋದಿಲ್ಲ. ಆದರೆ, ಎಫ್​​ಡಿಯಿಂದ ಸಿಗುವ ಬಡ್ಡಿಗೆ ಟ್ಯಾಕ್ಸ್ ಹಾಕಲಾಗುತ್ತದೆ. ನೇರವಾಗಿ ಟಿಡಿಎಸ್ ಕಡಿತಗೊಳಿಸಲಾಗುತ್ತದೆ, ಗಮನದಲ್ಲಿರಲಿ.

ಬಡ್ಡಿ ಆದಾಯ ವರ್ಷಕ್ಕೆ 40,000 ರುಗಿಂತ ಹೆಚ್ಚಿದೆಯಾ?

ಫಿಕ್ಸೆಡ್ ಡೆಪಾಸಿಟ್​ಗಳಿಂದ ವಾರ್ಷಿಕ ಬಡ್ಡಿ ಆದಾಯ 40,000 ರೂ ದಾಟಿದಾಗ ಬ್ಯಾಂಕುಗಳು ಶೇ. 10ರಷ್ಟು ಟಿಡಿಎಸ್ ಕಡಿತಗೊಳಿಸಬೇಕು ಎನ್ನುವ ನಿಯಮವೇ ಇದೆ. ಹಿರಿಯ ನಾಗರಿಕರಾದರೆ 50,000 ರೂ ಬಡ್ಡಿ ಆದಾಯಕ್ಕಿಂತ ಹೆಚ್ಚಿದ್ದರೆ ಟಿಡಿಎಸ್ ಕಡಿತ ಮಾಡಲಾಗುತ್ತದೆ.

ಶೇ. 7.5ರ ವಾರ್ಷಿಕ ಬಡ್ಡಿ ನೀಡುವ ಫಿಕ್ಸೆಡ್ ಡೆಪಾಸಿಟ್​ನಲ್ಲಿ ನೀವು ಇಡುವ ಠೇವಣಿ 5.3 ಲಕ್ಷ ರೂ ದಾಟಿದರೆ ನಿಮ್ಮ ಬಡ್ಡಿ ಆದಾಯ 40,000 ರೂ ದಾಟುತ್ತದೆ. ಆಗ ಟಿಡಿಎಸ್ ಕಡಿತ ಆಗಬಹುದು. ಗಮನಿಸಬೇಕಾದ ಸಂಗತಿ ಎಂದರೆ ಈ 40,000 ರೂಗಿಂತ ಮೇಲಿನ ಬಡ್ಡಿ ಆದಾಯ ಇದ್ದಾಗ ಹೆಚ್ಚುವರಿ ಹಣಕ್ಕೆ ಟಿಡಿಎಸ್ ಕಡಿತ ಆಗುತ್ತದೆ. 40,000 ರೂಗೆ ಟಿಡಿಎಸ್ ಅನ್ವಯ ಆಗುವುದಿಲ್ಲ.

ಇದನ್ನೂ ಓದಿ: ಇಪಿಎಫ್ ಅಕೌಂಟ್​​ನಿಂದ ಒಮ್ಮೆಗೆ 5 ಲಕ್ಷ ರೂವರೆಗೆ ಅಡ್ವಾನ್ಸ್ ವಿತ್​​ಡ್ರಾ ಸಾಧ್ಯ; ಇಲ್ಲಿದೆ ಹಿಂಪಡೆಯುವ ಕ್ರಮ

ಒಂದು ವೇಳೆ, ಬ್ಯಾಂಕ್ ಖಾತೆಗೆ ಪ್ಯಾನ್ ಲಿಂಕ್ ಮಾಡಿಲ್ಲದೇ ಇದ್ದರೆ ಆಗ ಶೇ. 20ರಷ್ಟು ಟಿಡಿಎಸ್ ಡಿಡಕ್ಟ್ ಆಗುತ್ತದೆ.

ಬ್ಯಾಂಕ್​​ಗೆ 15ಜಿ ಅಥವಾ 15ಎಚ್ ಫಾರ್ಮ್ ಸಲ್ಲಿಸಬಹುದು

ನಿಮ್ಮ ಒಟ್ಟಾರೆ ಎಲ್ಲಾ ಆದಾಯವನ್ನೂ ಸೇರಿಸಿದಾಗ ಅದು ಇನ್ಕಮ್ ಟ್ಯಾಕ್ಸ್ ಎಕ್ಸೆಂಪ್ಷನ್ ವ್ಯಾಪ್ತಿಗೆ ಬರುತ್ತಿರಬಹುದು. ಆದರೂ ಕೂಡ ಬ್ಯಾಂಕ್ ಟಿಡಿಎಸ್ ಕಡಿತಗೊಳಿಸುತ್ತದೆ. ಟಿಡಿಎಸ್ ಕಡಿತ ಆಗದಂತೆ ಮಾಡಲು ಸಾಧ್ಯ ಇದೆ. ಅದಕ್ಕೆ ನೀವು ಫಾರ್ಮ್ 15ಜಿ ಸಲ್ಲಿಸಬೇಕು. ಒಟ್ಟಾರೆ ಆದಾಯವು ಟ್ಯಾಕ್ಸಬಲ್ ವ್ಯಾಪ್ತಿಗೆ ಬರುವುದಿಲ್ಲ ಎಂದು ಘೋಷಿಸುವ ಫಾರ್ಮ್ ಇದು. ಇದನ್ನು ಸಲ್ಲಿಸಿದಾಗ ಬ್ಯಾಂಕ್ ನಿಮ್ಮ ಎಫ್​​ಡಿ ಆದಾಯಕ್ಕೆ ತೆರಿಗೆ ಕಡಿತ ಮಾಡುವುದಿಲ್ಲ. ಹಿರಿಯ ನಾಗರಿಕರಾದರೆ ಫಾರ್ಮ್ 15ಎಚ್ ಅನ್ನು ಸಲ್ಲಿಸಬೇಕಾಗುತ್ತದೆ.

ಇದನ್ನೂ ಓದಿ: ಜುಲೈ 31ರ ಬಳಿಕ ಐಟಿ ರಿಟರ್ನ್ಸ್ ಸಲ್ಲಿಸಿದರೆ ಬಡ್ಡಿ, ದಂಡ ಸೇರಿಸಿ ಕಟ್ಟಬೇಕಾಗುತ್ತದಾ? ಇಲ್ಲಿದೆ ಮಾಹಿತಿ

ನೀವು ಐಟಿ ರಿಟರ್ನ್ಸ್ ಸಲ್ಲಿಸುವಾಗ ಎಫ್​​ಡಿಯ ಬಡ್ಡಿ ಆದಾಯವನ್ನು ‘ಇಂಟರೆಸ್ಟ್ ಫ್ರಂ ಅದರ ಸೋರ್ಸಸ್’ ಎಂದು ಆಯ್ಕೆ ಮಾಡಿಕೊಳ್ಳಬೇಕು. ಒಂದು ವೇಳೆ ಎಫ್​​ಡಿಗೆ ಟಿಡಿಎಸ್ ಕಡಿತಗೊಳಿಸಲಾಗಿದ್ದರೆ ಐಟಿಆರ್ ಮೂಲಕ ಅದರ ರೀಫಂಡ್​​ಗೆ ಮನವಿ ಮಾಡಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ