ನವದೆಹಲಿ, ಆಗಸ್ಟ್ 20: ಭಾರತದಲ್ಲಿ 5-6 ಸಾವಿರದಷ್ಟು ಕಂಪನಿಗಳ ಷೇರುಗಳು ಸ್ಟಾಕ್ ಮಾರ್ಕೆಟ್ನಲ್ಲಿ ಲಿಸ್ಟ್ ಆಗಿವೆ. ಮ್ಯೂಚುವಲ್ ಫಂಡ್ಗಳ ಸಂಖ್ಯೆಯೇ ಸುಮಾರು ಒಂದೂವರೆ ಸಾವಿರದಷ್ಟಿವೆ. ಇದರಲ್ಲಿ ಆ್ಯಕ್ಟಿವ್ ಫಂಡ್ಸ್, ಪಾಸಿವ್ ಫಂಡ್ಸ್ (passive funds) ಎಂದು ಸ್ಥೂಲವಾಗಿ ವರ್ಗೀಕರಿಸಬಹುದು. ಆ್ಯಕ್ಟಿವ್ ಫಂಡ್ ಎಂದರೆ ಫಂಡ್ ಮ್ಯಾನೇಜರ್ಗಳು ಸ್ವಂತವಾಗಿ ಯಾವ ಷೇರುಗಳ ಮೇಲೆ ಹಣ ಹೂಡಿಕೆ ಮಾಡಬೇಕು ಎಂದು ನಿರ್ಧರಿಸಿ, ಹೂಡಿಕೆಯನ್ನು ನಿರ್ವಹಿಸುತ್ತಾರೆ. ಪಾಸಿವ್ ಫಂಡ್ ಎಂಬುದು ಇಂಡೆಕ್ಸ್ ಫಂಡ್ಗಳು. ಷೇರುಪೇಟೆಯಲ್ಲಿರುವ ವಿವಿಧ ಇಂಡೆಕ್ಸ್ಗಳಿಗೆ ಬದ್ಧವಾಗಿರುವ ಫಂಡ್ಗಳು ಇವು. ಅಂದರೆ, ನಿಫ್ಟಿ 50 ಇಂಡೆಕ್ಸ್ನಲ್ಲಿ ಟಾಪ್ 50 ಕಂಪನಿಗಳ ಷೇರುಗಳಿರುತ್ತವೆ. ಈ ಐವತ್ತು ಷೇರುಗಳ ಮೇಲೆ ಮಾತ್ರವೇ ಲಾರ್ಜ್ ಕ್ಯಾಪ್ ಫಂಡ್ಗಳು ಹಣ ಹೂಡಿಕೆ ಮಾಡಬಹುದು.
ಷೇರು ಮಾರುಕಟ್ಟೆಯಲ್ಲಿ ಸಾಕಷ್ಟು ಇಂಡೆಕ್ಸ್ ಫಂಡ್ಗಳಿವೆ. ನಿಫ್ಟಿ50 ಎಂಬುದು ದೊಡ್ಡ ಕಂಪನಿಗಳ ಷೇರುಗಳಾದರೆ, ನಿಫ್ಟಿ ಸ್ಮಾಲ್ ಕ್ಯಾಪ್ ಫಂಡ್ಗಳು ಅಲ್ಪ ಮಾರುಕಟ್ಟೆ ಸಂಪತ್ತಿರುವ ಷೇರುಗಳಾಗಿರುತ್ತವೆ. ಬಹಳಷ್ಟು ಹೂಡಿಕೆದಾರರಿಗೆ ಯಾವ ಫಂಡ್ನಲ್ಲಿ ಹಣ ಹೂಡಿಕೆ ಮಾಡಬೇಕು ಎಂಬ ಗೊಂದಲ ಇರುತ್ತದೆ. ಈ ರೀತಿ ಗೊಂದಲ ಇರುವವರು ತಮ್ಮ ಹೂಡಿಕೆಯನ್ನು ವಿವಿಧ ಇಂಡೆಕ್ಸ್ ಫಂಡ್ಗಳಲ್ಲಿ ಹಂಚಿಬಿಡುವುದುಂಟು. ಕೆಲವೊಮ್ಮೆ ಒಂದೇ ಒಂದು ಫಂಡ್ನಲ್ಲಿ ಮಾತ್ರವೇ ಹೂಡಿಕೆ ಮಾಡಬೇಕು ಎನ್ನುವ ಸಂದರ್ಭ ಬಂದಾಗ ಯಾವುದನ್ನು ಆಯ್ಕೆ ಮಾಡಬೇಕು? ಲಾರ್ಜ್ ಕ್ಯಾಪ್ ಫಂಡ್ಗಳಾ, ಮಿಡ್ ಕ್ಯಾಪ್ ಫಂಡ್ಗಳಾ, ಸ್ಮಾಲ್ ಕ್ಯಾಪ್ ಫಂಡ್ಗಳಾ, ಬೇರೆ ಬೇರೆ ಸೆಕ್ಟರ್ ಫಂಡ್ಗಳಾ, ಥಿಮ್ಯಾಟಿಕ್ ಫಂಡಾ, ಯಾವುದು ಉತ್ತಮ?
ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ಮಹೇಶ್ ಹೆಸರಿನ ವ್ಯಕ್ತಿಯೊಬ್ಬರು ಈ ವಿಚಾರವನ್ನು ಪ್ರಸ್ತಾಪಿದ್ದು, ಹೂಡಿಕೆದಾರರಿಗೆ ಯಾವ ಇಂಡೆಕ್ಸ್ ಫಂಡ್ಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಇರುವ ಗೊಂದಲಗಳ ಬಗ್ಗೆ ತಮಾಷೆ ಮಾಡಿದ್ದಾರೆ. ಇದಕ್ಕೆ ಎಡಲ್ವೀಸ್ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಯ ಸಿಇಒ ರಾಧಿಕಾ ಗುಪ್ತಾ ಪ್ರತಿಕ್ರಿಯಿಸಿದ್ದು, ಲಾರ್ಜ್ ಅಂಡ್ ಮಿಡ್ಕ್ಯಾಪ್ 250 ಇಂಡೆಕ್ಸ್ ಫಂಡ್ ಉತ್ತಮ ಆಯ್ಕೆ ಆಗಬಹುದು ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ವಯಸ್ಸಾಗಿರುವ ಮನೆ ಮಾಲೀಕರಿಗೆ ಈ ಮೂರು ಕಷ್ಟಗಳು: ಸಿಇಒ ರಾಧಿಕಾ ಗುಪ್ತಾ ತೆರೆದಿಟ್ಟ ವಾಸ್ತವ ಸಂಗತಿ
‘ಸದಾ ಕಾಲಕ್ಕೂ ಸಲ್ಲುವಂತಹ ಫಂಡ್ಗಳ ಬಗ್ಗೆ ನಾನು ಸದಾ ಹೇಳುತ್ತಿರುತ್ತೇನೆ. ಈಗ ಒಂದೇ ಒಂದು ಇಂಡೆಕ್ಸ್ ಫಂಡ್ ಅನ್ನು ಆಯ್ಕೆ ಮಾಡಬೇಕು ಎನ್ನುವುದಾದರೆ ನನ್ನ ಪ್ರಕಾರ ಲಾರ್ಜ್ ಅಂಡ್ ಮಿಡ್ಕ್ಯಾಪ್ 250 ಇಂಡೆಕ್ಸ್ ಉತ್ತಮ ಆಯ್ಕೆ. ಇದರಲ್ಲಿ ಲಾರ್ಜ್ ಕ್ಯಾಪ್ ಮತ್ತು ಮಿಡ್ಕ್ಯಾಪ್ ಷೇರುಗಳಲ್ಲಿ ಹೂಡಿಕೆ ಹಂಚಿಕೆ ಆಗುತ್ತದೆ. ಭಾರತದ ವಿಸ್ತೃತ ಆರ್ಥಿಕತೆಯನ್ನು ಇದು ಪ್ರತಿಫಲಿಸುತ್ತದೆ,’ ಎಂದು ರಾಧಿಕಾ ಗುಪ್ತಾ ತಮ್ಮ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ