
ನವದೆಹಲಿ, ಸೆಪ್ಟೆಂಬರ್ 4: ಸರ್ಕಾರ ಪ್ರಕಟಿಸಿದ ಜಿಎಸ್ಟಿ ಸರಳೀಕರಣ ಕ್ರಮದಲ್ಲಿ ಬಹಳ ಗಮನ ಸೆಳೆದಿರುವ ನಿರ್ಧಾರಗಳಲ್ಲಿ ಇನ್ಷೂರೆನ್ಸ್ ಪ್ರೀಮಿಯಮ್ (Insurance) ಮೇಲಿನ ಜಿಎಸ್ಟಿ ರದ್ದು ಮಾಡಿದ್ದು ಒಂದು. ವೈಯಕ್ತಿಕ ಹೆಲ್ತ್ ಮತ್ತು ಲೈಫ್ ಇನ್ಷೂರೆನ್ಸ್ ಪಾಲಿಸಿಗಳ ಪ್ರೀಮಿಯಮ್ಗಳ ಮೇಲೆ ಶೇ. 18ರಷ್ಟಿದ್ದ ಜಿಎಸ್ಟಿಯನ್ನು ಸೊನ್ನೆಗೆ ಇಳಿಸಲಾಗಿದೆ. ಇದು 2025ರ ಸೆಪ್ಟೆಂಬರ್ 22ರಿಂದ ಜಾರಿಗೆ ಬರುತ್ತದೆ. ಇದರೊಂದಿಗೆ ಇನ್ಷೂರೆನ್ಸ್ ಪ್ರೀಮಿಯಮ್ಗಳ ಬೆಲೆಯಲ್ಲಿ ಶೇ. 15ರಷ್ಟು ಕಡಿಮೆ ಆಗುವ ನಿರೀಕ್ಷೆ ಇದೆ.
ಸರ್ಕಾರದ ನೂತನ ಜಿಎಸ್ಟಿ ದರಗಳು ಸೆಪ್ಟೆಂಬರ್ 22ರಿಂದ ಜಾರಿಗೆ ಬರುತ್ತವೆ. ಸೆಪ್ಟೆಂಬರ್ 21ರವರೆಗೂ ನೀವು ಪಾವತಿಸುವ ಇನ್ಷೂರೆನ್ಸ್ ಪ್ರೀಮಿಯಮ್ ಮೇಲೆ ಶೇ. 18 ಜಿಎಸ್ಟಿ ಅನ್ವಯ ಆಗುತ್ತದೆ. ಹಾಗಾದರೆ, ಪ್ರೀಮಿಯಮ್ಗೆ ಜಿಎಸ್ಟಿ ತಪ್ಪಿಸಿಕೊಳ್ಳಲು ಸೆಪ್ಟೆಂಬರ್ 22ರವರೆಗೂ ಕಾಯಬೇಕಾ?
ಇನ್ಷೂರೆನ್ಸ್ ಪ್ರೀಮಿಯಮ್ ಕಟ್ಟಲು ಒಂದು ಗಡುವು ನಿಗದಿ ಮಾಡಲಾಗಿರುತ್ತದೆ. ಅದಾದ ಬಳಿಕ ಕೆಲ ದಿನಗಳಷ್ಟು ಗ್ರೇಸ್ ಪೀರಿಯಡ್ ಇರುತ್ತದೆ. ವಾಹನ ಇನ್ಷೂರೆನ್ಸ್ ಪಾಲಿಸಿಗಳಿಗೆ ಗ್ರೇಸ್ ಪೀರಿಯಡ್ ಇರೋದಿಲ್ಲ. ಅವು ತತ್ಕ್ಷಣವೇ ಲ್ಯಾಪ್ಸ್ ಆಗುತ್ತದೆ ಎಂಬುದೂ ಗಮನದಲ್ಲಿರಲಿ.
ಇದನ್ನೂ ಓದಿ: Insurance Hack: ಈ ಟೆಕ್ನಿಕ್ ಉಪಯೋಗಿಸಿ, ಇನ್ಷೂರೆನ್ಸ್ ಪ್ರೀಮಿಯಮ್ ಉಚಿತಗೊಳಿಸಿ
ಹೆಲ್ತ್ ಇನ್ಷೂರೆನ್ಸ್ ಪಾಲಿಸಿಗಳಿಗೆ ಗ್ರೇಸ್ ಪೀರಿಯಡ್ ಸಾಮಾನ್ಯವಾಗಿ 15 ದಿನ ಮಾತ್ರವೇ ಇರುತ್ತದೆ. ಲೈಫ್ ಇನ್ಷೂರೆನ್ಸ್ ಆದರೆ 15ರಿಂದ 30 ದಿನಗಳವರೆಗೂ ಇರಬಹುದು. ನಿಮ್ಮ ಇನ್ಷೂರೆನ್ಸ್ ಪಾಲಿಸಿಯ ಡಾಕ್ಯುಮೆಂಟ್ನಲ್ಲಿ ಗ್ರೇಸ್ ಪೀರಿಯಡ್ ಎಷ್ಟಿದೆ ಎಂಬುದನ್ನು ಗಮನಿಸಿ.
ನಿಮ್ಮ ಹೆಲ್ತ್ ಮತ್ತು ಲೈಫ್ ಇನ್ಷೂರೆನ್ಸ್ ಪ್ರೀಮಿಯಮ್ಗೆ ಡ್ಯೂ ಡೇಟ್ ಮೀರಿ ಗ್ರೇಸ್ ಪೀರಿಯಡ್ ಕೂಡ ಗತಿಸಿ ಹೋದಾಗ, ಪಾಲಿಸಿ ನಿಷ್ಕ್ರಿಯಗೊಳ್ಳುತ್ತದೆ. ಲೈಫ್ ಇನ್ಷೂರೆನ್ಸ್ ಆದರೆ ರಿವೈವಲ್ ಫೀ, ಬಡ್ಡಿ ತೆರಬೇಕಾಗುತ್ತದೆ. ಹೊಸದಾಗಿ ವೈದ್ಯಕೀಯ ಪರೀಕ್ಷೆ ಮಾಡಿಸಬೇಕಾಗಬಹುದು.
ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಲ್ಯಾಪ್ಸ್ ಆದಾಗ ಅದನ್ನು ಮತ್ತೆ ರಿವೈವಲ್ ಮಾಡಲು ಆಗುವುದಿಲ್ಲ. ಹೊಸ ಪಾಲಿಸಿಯನ್ನೇ ಪಡೆಯಬೇಕಾಗಬಹುದು. ಹಿಂದಿನ ಹೆಲ್ತ್ ಪಾಲಿಸಿಯಲ್ಲಿ ನೀವು ಉಳಿಸಿಟ್ಟಿರುವ ನೋ ಕ್ಲೇಮ್ ಬೋನಸ್, ವೇಟಿಂಗ್ ಪೀರಿಯಡ್ ಇತ್ಯಾದಿಗಳು ಹೊಸ ಪಾಲಿಸಿಗೆ ವರ್ಗವಾಗುವುದಿಲ್ಲ.
ಇದನ್ನೂ ಓದಿ: LIC campaign: ಎಲ್ಐಸಿ ಪಾಲಿಸಿ ಲ್ಯಾಪ್ಸ್ ಆಗಿದೆಯಾ? ರಿವೈವಲ್ಗೆ ಅ. 17ರವರೆಗೂ ಅವಕಾಶ
ಶೇ. 18 ಜಿಎಸ್ಟಿ ಉಳಿಸಲು ಹೋದರೆ ಬೇರೆ ಕೆಲ ರಿಸ್ಕ್ ಅಂಶಗಳು ಇರುವುದು ನಿಮ್ಮ ಗಮನದಲ್ಲಿರಲಿ. ಸೆಪ್ಟೆಂಬರ್ 22ರವರೆಗೆ ನಿಮ್ಮ ಪಾಲಿಸಿಗೆ ಗ್ರೇಸ್ ಪೀರಿಯಡ್ ಇದ್ದರೆ ಪ್ರೀಮಿಯಮ್ ಕಟ್ಟುವುದನ್ನು ವಿಳಂಬ ಮಾಡಬಹುದು. ಇಲ್ಲದಿದ್ದರೆ ರಿವೈವಲ್ ಫೀ ಇತ್ಯಾದಿ ಕಟ್ಟುವ ತಲೆನೋವಿನ ಬದಲು ಶೇ. 18 ಜಿಎಸ್ಟಿಯೊಂದಿಗೆ ಈಗಲೇ ಪ್ರೀಮಿಯಮ್ ಕಟ್ಟುವುದು ಸಂದರ್ಭೋಚಿತ ಎನಿಸಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ