ಎಚ್​ಡಿಎಫ್​ಸಿ ಬ್ಯಾಂಕ್​ನಿಂದ ಎಂಸಿಎಲ್​ಆರ್ ದರ ಪರಿಷ್ಕಾರ; ಲೋನ್ ಇಎಂಐ ಹೆಚ್ಚಳ ಸಾಧ್ಯತೆ

|

Updated on: Dec 08, 2023 | 5:08 PM

HDFC bank Hikes MCLR Rates: ಎಚ್​ಡಿಎಫ್​ಸಿ ಬ್ಯಾಂಕ್ ತನ್ನ ಓವರ್​ನೈಟ್ ಮತ್ತು ಒಂದು ತಿಂಗಳ ಎಂಸಿಎಲ್​ಆರ್ ದರಗಳನ್ನು 50 ಬೇಸಿಸ್ ಪಾಯಿಂಟ್​ಗಳಷ್ಟು ಹೆಚ್ಚಿಸಿದೆ. ಅದರ ಮೂರು ತಿಂಗಳ, ಆರು ತಿಂಗಳ ಮತ್ತು ಒಂದು ವರ್ಷದ ಎಂಸಿಎಲ್​ಆರ್ ದರದಲ್ಲಿ ವ್ಯತ್ಯಾಸವಾಗಿಲ್ಲ. ಓವರ್​ನೈಟ್ ಮತ್ತು ಒಂದು ತಿಂಗಳ ಎಂಸಿಎಲ್​ಆರ್ ದರಗಳಿಗೆ ಜೋಡಿತವಾಗಿರುವ ಎಚ್​ಡಿಎಫ್​ಸಿ ಸಾಲಗಳ ಇಎಂಐ ಹೆಚ್ಚಲಿದೆ.

ಎಚ್​ಡಿಎಫ್​ಸಿ ಬ್ಯಾಂಕ್​ನಿಂದ ಎಂಸಿಎಲ್​ಆರ್ ದರ ಪರಿಷ್ಕಾರ; ಲೋನ್ ಇಎಂಐ ಹೆಚ್ಚಳ ಸಾಧ್ಯತೆ
ಎಚ್​ಡಿಎಫ್​ಸಿ ಬ್ಯಾಂಕ್
Follow us on

ನವದೆಹಲಿ, ಡಿಸೆಂಬರ್ 8: ದೇಶದ ಅತಿದೊಡ್ಡ ಬ್ಯಾಂಕ್ ಎನಿಸಿರುವ ಎಚ್​ಡಿಎಫ್​ಸಿ (HDFC bank) ತನ್ನ ಕೆಲ ಎಂಸಿಎಲ್​ಆರ್ ದರಗಳನ್ನು (MCLR) ಹೆಚ್ಚಿಸಿದೆ. ಆರ್​ಬಿಐನ ಎಂಪಿಸಿ ಸಭೆಯ ಮುಕ್ತಾಯಕ್ಕೆ ಮುನ್ನ ನಿನ್ನೆ ಗುರುವಾರ (ಡಿ. 7) ಎಚ್​ಡಿಎಫ್​ಸಿ ಬ್ಯಾಂಕ್ ತನ್ನ ಎರಡು ಎಂಸಿಎಲ್​ಆರ್ ದರಗಳನ್ನು ಪರಿಷ್ಕರಿಸಿದೆ. ಇದರೊಂದಿಗೆ ಕೆಲ ಸಾಲಗಳ ದರ ಹೆಚ್ಚಲಿದ್ದು, ಪರಿಣಾಮವಾಗಿ ಲೋನ್ ಇಎಂಐ ಹೆಚ್ಚಲಿದೆ. ಎಚ್​​ಡಿಎಫ್​ಸಿ ಬ್ಯಾಂಕ್ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಓವರ್​ನೈಟ್ ಎಂಸಿಎಲ್​ಆರ್ ಅನ್ನು ಶೇ. 8.65ರಿಂದ ಶೇ. 8.70ಕ್ಕೆ ಹೆಚ್ಚಿಸಲಾಗಿದೆ. ಒಂದು ತಿಂಗಳ ಎಂಸಿಎಲ್​ಆರ್ ದರವನ್ನು ಶೇ. 8.70ರಿಂದ ಶೇ. 8.75ಕ್ಕೆ ಏರಿಸಲಾಗಿದೆ. ಇವೆರಡು ಎಂಸಿಎಲ್​​ಆರ್​ಗೆ ಜೋಡಿತವಾಗಿರುವ ಸಾಲಗಳ ದರವೂ ಏರಲಿದೆ.

ಏನಿದು ಎಂಸಿಎಲ್​ಆರ್?

ಎಂಸಿಎಲ್​ಆರ್ ಅನ್ನು ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್ಸ್ ಎನ್ನುತ್ತಾರೆ. ಇದು ಒಂದು ಬ್ಯಾಂಕ್​ನ ಕನಿಷ್ಠ ಬಡ್ಡಿದರ. ಇದಕ್ಕಿಂತ ಕಡಿಮೆ ಬಡ್ಡಿಗೆ ಬ್ಯಾಂಕ್ ಸಾಲ ಕೊಡುವಂತಿಲ್ಲ. 2016ರಿಂದ ಆರ್​ಬಿಐ ಎಂಸಿಎಲ್​ಆರ್ ಅನ್ನು ಜಾರಿಗೆ ತಂದಿದೆ. ಅದಕ್ಕಿಂತ ಮುಂಚೆ ಬೇಸ್ ರೇಟ್ ಇತ್ತು. ಈಗ ಆ ಜಾಗಕ್ಕೆ ಎಂಸಿಎಲ್​ಆರ್ ಇದೆ. ಇದರ ದರದಲ್ಲಿ ವ್ಯತ್ಯಯವಾದರೆ ಸಾಲದ ದರವೂ ವ್ಯತ್ಯಯವಾಗಬಹುದು. ಅಂದರೆ ಬಡ್ಡಿ ದರವನ್ನು ಏರಿಕೆ ಮಾಡಬಹುದು ಅಥವಾ ಇಳಿಕೆ ಮಾಡಬಹುದು. ಹೀಗಾಗಿ, ಬ್ಯಾಂಕ್​ನ ಸಾಲಗಾರರಿಗೆ ಈ ಎಂಸಿಎಲ್​ಆರ್ ದರ ಮುಖ್ಯ ಎನಿಸುತ್ತದೆ. ಫ್ಲೋಟಿಂಗ್ ರೇಟ್ ಇಂಟರೆಸ್ಟ್ ಇರುವ ಸಾಲಗಳಿಗೆ ಇದು ಅನ್ವಯ ಆಗುತ್ತದೆ.

ಇದನ್ನೂ ಓದಿ: ಒಟಿಪಿ ಇಲ್ಲದೇ ಯುಪಿಐ ಆಟೊ ಪೇಮೆಂಟ್; ಮಿತಿ 1 ಲಕ್ಷ ರೂಗೆ ಏರಿಕೆ: ಆರ್​ಬಿಐ ಪ್ರಕಟಣೆ

ಒಂದು ತಿಂಗಳ ಎಂಸಿಎಲ್​ಆರ್ ದರ ಎಂದರೇನು?

ಹಿಂದೆ ಇದ್ದ ಬೇಸ್ ರೇಟ್ ಒಂದೇ ದರ ಹೊಂದಿತ್ತು. ಎಂಸಿಎಲ್​ಆರ್ ದರ ಐದು ವಿಭಾಗಗಳಲ್ಲಿ ಇದೆ. ಓವರ್​ನೈಟ್ ಎಂಸಿಎಲ್​ಆರ್, ಒಂದು ತಿಂಗಳ ಎಂಸಿಎಲ್​ಆರ್, ಮೂರು ತಿಂಗಳ ಎಂಸಿಎಲ್​ಆರ್, ಆರು ತಿಂಗಳ ಎಂಸಿಎಲ್​ಆರ್ ಮತ್ತು ಒಂದು ವರ್ಷದ ಎಂಸಿಎಲ್​ಆರ್ ಇದೆ. ಈ ಪ್ರತಿಯೊಂದು ಎಂಸಿಎಲ್​ಆರ್​ಗೂ ಬೇರೆ ದರ ನಿಗದಿ ಮಾಡಬಹುದು.

ನೀವು ಫ್ಲೋಟಿಂಗ್ ರೇಟ್​ನಲ್ಲಿ ಸಾಲ ಪಡೆಯುವಾಗ ನಿರ್ದಿಷ್ಟ ಎಂಸಿಎಲ್​ಆರ್​ಗೆ ಜೋಡಿಸುವ ಅವಕಾಶ ನೀಡಲಾಗುತ್ತದೆ. ಅಂದರೆ, ನೀವು ಒಂದು ತಿಂಗಳ ಎಂಸಿಎಲ್​ಆರ್​ಗೆ ಜೋಡಿಸಿದ ಸಾಲದಲ್ಲಿ ತಿಂಗಳಿಗೊಮ್ಮೆ ಎಂಸಿಎಲ್​ಆರ್ ದರದ ಪ್ರಕಾರ ಬಡ್ಡಿದರ ಪರಿಷ್ಕರಣೆ ಆಗುತ್ತದೆ.

ಇದನ್ನೂ ಓದಿ: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ 604 ಬಿಲಿಯನ್ ಡಾಲರ್​ಗೆ ಏರಿಕೆ; ಆರ್​ಬಿಐ ಗವರ್ನರ್ ಮಾಹಿತಿ

ನೀವು ಒಂದು ವರ್ಷದ ಎಂಸಿಎಲ್​ಆರ್ ಆಧಾರದಲ್ಲಿ ಸಾಲ ಪಡೆದಿದ್ದೀರಿ ಎಂದಿಟ್ಟುಕೊಳ್ಳಿ. ಮೂರು ತಿಂಗಳಲ್ಲಿ ಬ್ಯಾಂಕ್ ತನ್ನ ಎಂಸಿಎಲ್​ಆರ್ ದರವನ್ನು ಕಡಿಮೆ ಮಾಡಿದೆ ಎನ್ನಿ. ಆದರೆ, ನೀವು ಒಂದು ವರ್ಷದ ಎಂಸಿಎಲ್​ಆರ್ ಆಯ್ಕೆ ಮಾಡಿರುವುದರಿಂದ ನಿಮಗೆ ಬಡ್ಡಿದರ ಪರಿಷ್ಕರಣೆ ಆಗಲು ಒಂದು ವರ್ಷ ಕಾಯಬೇಕು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ