Health Insurance: ಹೆಲ್ತ್ ಇನ್ಷೂರೆನ್ಸ್ ಮಾಡಿಸಲು ಭಯವಾ? ಹಣ ಕ್ಲೇಮ್​ಗೆ ಗೊಂದಲವಾ? ಇಲ್ಲಿದೆ ಟಿಪ್ಸ್

|

Updated on: May 05, 2023 | 3:21 PM

Medical expense reimbursement: ಆಸ್ಪತ್ರೆಗೆ ದಾಖಲಾದರೆ ಸರಾಸರಿಯಾಗಿ 30-50 ಸಾವಿರ ರೂ ಬಿಲ್ ಆಗುತ್ತದೆ. ಕೆಲವರಿಗೆ ಆಸ್ಪತ್ರೆ ವೆಚ್ಚ ಹಲವು ಲಕ್ಷಗಳೇ ಆಗಬಹುದು. ಬಹಳ ಮಂದಿಗೆ ಆಸ್ಪತ್ರೆಯ ಖರ್ಚು ಬಹಳ ದೊಡ್ಡ ಹೊರೆಯಾಗಬಲ್ಲುದು. ಈ ಕಾರಣಕ್ಕೆ ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಹೊಂದುವುದು ಬಹಳ ಮುಖ್ಯ.

Health Insurance: ಹೆಲ್ತ್ ಇನ್ಷೂರೆನ್ಸ್ ಮಾಡಿಸಲು ಭಯವಾ? ಹಣ ಕ್ಲೇಮ್​ಗೆ ಗೊಂದಲವಾ? ಇಲ್ಲಿದೆ ಟಿಪ್ಸ್
ಹೆಲ್ತ್ ಇನ್ಷೂರೆನ್ಸ್
Follow us on

ಇವತ್ತಿನ ದಿನಗಳಲ್ಲಿ ಹೆಲ್ತ್ ಇನ್ಷೂರೆನ್ಸ್ (Health Insurance) ಬಹಳ ಅಗತ್ಯದ ವಿಮಾ ಸೇವೆಯಾಗಿದೆ. ಯಾರಿಗೆ ಯಾವಾಗ ಆರೋಗ್ಯ ಹೇಗೆ ಕೈಕೊಡುತ್ತೆ ಎಂದು ಹೇಳುವುದು ಕಷ್ಟ. ಭಾರತದಲ್ಲಿ ಒಬ್ಬ ವ್ಯಕ್ತಿಯ ವೈದ್ಯಕೀಯ ವೆಚ್ಚ ಸರಾಸರಿಯಾಗಿ 2,500 ರೂ ಎಂದು ಒಂದು ಸಮೀಕ್ಷೆ ಹೇಳುತ್ತದೆ. ಭಾರತೀಯರು ಔಷಧಕ್ಕಾಗಿ 1.38 ಲಕ್ಷ ಕೋಟಿ ರೂ ವ್ಯಯಿಸಿದರೆ, ಆಸ್ಪತ್ರೆಗಳಲ್ಲಿ 1.28 ಲಕ್ಷ ಕೋಟಿ ರೂನಷ್ಟು ಖರ್ಚು ಮಾಡುತ್ತಾರಂತೆ. ಒಬ್ಬ ರೋಗಿ ಖಾಸಗಿ ಆಸ್ಪತ್ರೆಗೆ ದಾಖಲಾದರೆ ಕನಿಷ್ಠ 10,000 ರೂ ಆದರೂ ಬಿಲ್ ಆಗುತ್ತದೆ. ಆಸ್ಪತ್ರೆಗೆ ದಾಖಲಾದರೆ ಸರಾಸರಿಯಾಗಿ 30-50 ಸಾವಿರ ರೂ ಬಿಲ್ ಆಗುತ್ತದೆ. ಕೆಲವರಿಗೆ ಆಸ್ಪತ್ರೆ ವೆಚ್ಚ ಹಲವು ಲಕ್ಷಗಳೇ ಆಗಬಹುದು. ಬಹಳ ಮಂದಿಗೆ ಆಸ್ಪತ್ರೆಯ ಖರ್ಚು ಬಹಳ ದೊಡ್ಡ ಹೊರೆಯಾಗಬಲ್ಲುದು. ಈ ಕಾರಣಕ್ಕೆ ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಹೊಂದುವುದು ಬಹಳ ಮುಖ್ಯ.

ಮೆಡಿಕಲ್ ಇನ್ಷೂರೆನ್ಸ್ ಪಾಲಿಸಿ ಪಡೆಯಲು ಜನರು ಹಿಂದೇಟು ಹಾಕುವುದು ಯಾಕೆ?

ಒಂದು ಅಂದಾಜಿನ ಪ್ರಕಾರ ಶೇ. 30ಕ್ಕಿಂತ ಹೆಚ್ಚು ಮಂದಿ ಭಾರತೀಯರು ಯಾವುದೇ ರೀತಿಯ ಮೆಡಿಕಲ್ ಇನ್ಷೂರೆನ್ಸ್ ಹೊಂದಿಲ್ಲ. ಇನ್ನೂ ಕೆಲ ಎನ್​ಜಿಒಗಳ ಪ್ರಕಾರ ಶೇ. 25ರಷ್ಟು ಮಂದಿ ಮಾತ್ರವೇ ಮೆಡಿಕಲ್ ಇನ್ಷೂರೆನ್ಸ್ ಹೊಂದಿರುವುದಂತೆ. ಉದ್ಯೋಗದಲ್ಲಿರುವ ಕಂಪನಿಗಳು ಮಾಡಿಸುವ ಇನ್ಷೂರೆನ್ಸ್ ಬಿಟ್ಟರೆ ಜನರು ವೈಯಕ್ತಿಕವಾಗಿ ಮೆಡಿಕಲ್ ಇನ್ಷೂರೆನ್ಸ್ ಹೊಂದಿರುವುದು ತೀರಾ ಕಡಿಮೆ ಎನ್ನುವ ಸ್ಥಿತಿ ಇದೆ. ಮೆಡಿಕಲ್ ಇನ್ಷೂರೆನ್ಸ್ ಪಡೆಯಲು ಜನರು ಹಿಂದೇಟು ಹಾಕಲು ಕೆಲ ಕಾರಣಗಳಿವೆ:

  • ಇನ್ಷೂರೆನ್ಸ್ ಕಂಪನಿಗಳು ಪಟ್ಟಿ ಮಾಡಿದ ಅಸ್ಪತ್ರೆಗಳಲ್ಲೇ ಅಡ್ಮಿಟ್ ಆಗಬೇಕು ಎಂಬುದು
  • ಪಟ್ಟಿಯಲ್ಲಿಲ್ಲದ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ ಬಳಿಕ ಕ್ಲೇಮ್ ಮಾಡುವುದು ಕಷ್ಟ ಎಂಬ ಭಾವನೆ
  • ಆಸ್ಪತ್ರೆಗೆ ದಾಖಲಾಗುವುದು ಅಪರೂಪವಾದ್ದರಿಂದ, ಯಾಕೆ ಬೇಕು ಇನ್ಷೂರೆನ್ಸ್ ಎಂಬ ಪ್ರಶ್ನೆ
  • ಮೆಡಿಕಲ್ ಇನ್ಷೂರೆನ್ಸ್ ಪಾಲಿಸಿ ಪ್ರೀಮಿಯಮ್ ತೀರಾ ಹೆಚ್ಚಾಯಿತಲ್ಲ ಎಂಬುದು

ಇದನ್ನೂ ಓದಿUPI Lite: ಪೇಟಿಎಂ ಬಳಿಕ ಫೋನ್​ಪೇನಲ್ಲೂ ಲೈಟ್; ಯುಪಿಐ ವಹಿವಾಟು ಕಡಿಮೆಗೊಳಿಸುವ ಕಾಲ ಬಂತಾ?

ಈಗ ಹಲವು ಆಸ್ಪತ್ರೆಗಳಲ್ಲಿ ಹೈಟೆಕ್ ಚಿಕಿತ್ಸೆ ವ್ಯವಸ್ಥೆ ಇದ್ದು, ಒಂದೆರಡು ಗಂಟೆಯಲ್ಲೇ ರೋಗಿಗೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗುತ್ತದೆ. ಮನೆಯಿಂದಲೇ ಟ್ರೀಟ್ಮೆಂಟ್ ಪಡೆದುಕೊಳ್ಳುವ ಅವಕಾಶ ಕೊಡಲಾಗುತ್ತದೆ. ಈ ಕಾರಣಕ್ಕೆ ಹೆಲ್ತ್ ಇನ್ಷೂರೆನ್ಸ್ ನಿರುಪಯುಕ್ತ ಎನಿಸಬಹುದು. ಈ ಭಾವನೆ ತಪ್ಪು. ಈಗ ಬಹುತೇಕ ಹೆಲ್ತ್ ಇನ್ಷೂರೆನ್ಸ್ ಪಾಲಿಸಿಗಳು ಆಸ್ಪತ್ರೆಗೆ ದಾಖಲಾಗದೇ ಪಡೆಯುವ ವೈದ್ಯಕೀಯ ಚಿಕಿತ್ಸೆ ಮತ್ತು ಔಷಧಗಳ ವೆಚ್ಚವನ್ನು ಭರಿಸುತ್ತವೆ. ಪಾಲಿಸಿ ಆಯ್ದುಕೊಳ್ಳುವಾಗ ಇದನ್ನು ವಿಚಾರಿಸಿ ತಿಳಿದುಕೊಳ್ಳುವುದು ಅವಶ್ಯ.

ಇನ್ನು, ಇನ್ಷುರೆನ್ಸ್ ಕಂಪನಿಗಳು ಪಟ್ಟಿ ಮಾಡಿದ ಆಸ್ಪತ್ರೆಗಳಲ್ಲೇ ಅಡ್ಮಿಟ್ ಆಗಬೇಕು ಎಂಬುದೂ ತಪ್ಪು ಕಲ್ಪನೆ. ತುರ್ತು ಸಂದರ್ಭ ಬಂದಾಗ ಬೇರೆ ಆಸ್ಪತ್ರೆಯಲ್ಲೂ ದಾಖಲಾಗುವ ಸಂದರ್ಭ ಬರುತ್ತದೆ. ಹಾಗೊಂದು ವೇಳೆ ಆದರೆ ಅದಕ್ಕೆ ತಗುಲುವ ವೆಚ್ಚವನ್ನು ಡಿಸ್ಚಾರ್ಜ್ ಆದ ಬಳಿಕ ಕ್ಲೇಮ್ ಮಾಡಬಹುದು. ಸರಿಯಾದ ದಾಖಲಾತಿಗಳು ಇದ್ದರೆ ರೀಇಂಬರ್ಸ್​ಮೆಂಟ್​ಗೆ ಸಮಸ್ಯೆ ಏನಿರಲ್ಲ.

ಮೆಡಿಕಲ್ ಇನ್ಷೂರೆನ್ಸ್ ಕ್ಯಾಷ್​ಲೆಸ್ ವ್ಯವಸ್ಥೆ

ಹೆಲ್ತ್ ಇನ್ಷೂರೆನ್ಸ್ ಸಂಸ್ಥೆಗಳು ವಿವಿಧ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತವೆ. ದೇಶಾದ್ಯಂತ ಸಾವಿರಾರು ಆಸ್ಪತ್ರೆಗಳ ಆಯ್ಕೆ ಗ್ರಾಹಕರಿಗೆ ಸಿಗುತ್ತದೆ. ಇನ್ಷೂರೆನ್ಸ್ ಕಂಪನಿ ಪಟ್ಟಿ ಮಾಡಿದ ಆಸ್ಪತ್ರೆಗಳಲ್ಲಿ ಅಡ್ಮಿಟ್ ಆದರೆ ಕ್ಯಾಷ್​ಲೆಸ್ ಸೌಲಭ್ಯ ಸಿಗುತ್ತದೆ. ಅಂದರೆ ಆಸ್ಪತ್ರೆಯ ರಿಜಿಸ್ಟ್ರೇಶನ್ ಶುಲ್ಕ ಹೊರತಪಡಿಸಿ ಬಹುತೇಕ ಇತರ ಎಲ್ಲಾ ಖರ್ಚುಗಳನ್ನೂ ಇನ್ಷೂರೆನ್ಸ್ ಕಂಪನಿಯೇ ಭರಿಸುತ್ತದೆ. ಸಾಧ್ಯವಾದರೆ ನೀವು ಆಸ್ಪತ್ರೆಗೆ ದಾಖಲಾಗುವ ಕನಿಷ್ಠ 24 ಗಂಟೆ ಮುನ್ನ ಇನ್ಷೂರೆನ್ಸ್ ಕಂಪನಿಗೆ ಮಾಹಿತಿ ನೀಡುವುದು ಉತ್ತಮ. ಬಹುತೇಕ ಸಂದರ್ಭದಲ್ಲಿ ಅದು ಸಾಧ್ಯವಾಗುವುದಿಲ್ಲ. ನೀವು ಆಸ್ಪತ್ರೆಗೆ ದಾಖಲಾಗುವ ಸಮಯದಲ್ಲಿ ಆಸ್ಪತ್ರೆ ವತಿಯಿಂದಲೇ ಇನ್ಷೂರೆನ್ಸ್ ಕಂಪನಿಗೆ ಮಾಹಿತಿ ತಲುಪುತ್ತದೆ. ಕ್ಯಾಷ್​ಲೆಸ್ ಆಗಿ ಆಸ್ಪತ್ರೆಗೆ ದಾಖಲಾಗಿ ಡಿಸ್​ಚಾರ್ಜ್ ಆಗಬಹುದು.

ಇದನ್ನೂ ಓದಿSBI Rules: ಕ್ಯಾಷ್​ಬ್ಯಾಕ್ ಸರ್ವಿಸ್: ಎಸ್​ಬಿಐನ ವಿವಿಧ ಕ್ರೆಡಿಟ್ ಕಾರ್ಡ್​ಗಳಲ್ಲಿ ನಿಯಮಗಳು ಬದಲಾಗಿವೆ; ತಿಳಿದಿರಲಿ

ಮೆಡಿಕಲ್ ಇನ್ಷೂರೆನ್ಸ್ ರೀ ಇಂಬರ್ಸ್ಮೆಂಟ್ ಸೌಲಭ್ಯ

ತುರ್ತು ಸಂದರ್ಭ ಬಂದಾಗ ನಮಗೆ ಇನ್ಷೂರೆನ್ಸ್ ಕಂಪನಿಯ ಪಟ್ಟಿಯಲ್ಲಿರುವ ಆಸ್ಪತ್ರೆಗೆ ಹೋಗಲು ಸಾಧ್ಯವಾಗದೇ ಮನೆ ಸಮೀಪದ ಯಾವುದಾದರೂ ಆಸ್ಪತ್ರೆಗೆ ದಾಖಲಾಗಬೇಕಾಗಿ ಬರಬಹುದು. ಹೀಗಾದಲ್ಲಿ ಆಸ್ಪತ್ರೆಯ ವೆಚ್ಚವನ್ನು ನಾವೇ ಭರಿಸಬೇಕು. ಆಸ್ಪತ್ರೆಗೆ ದಾಖಲಾಗುವ ವೇಳೆ ಇನ್ಷೂರೆನ್ಸ್ ಇರುವುದನ್ನು ತಿಳಿಸಬೇಕು. ಆಗ ಆಸ್ಪತ್ರೆಯವರು ಇನ್ಷೂರೆನ್ಸ್ ಕಂಪನಿಗೆ ಅವಶ್ಯ ಇರುವ ಬಿಲ್ ಇತ್ಯಾದಿ ದಾಖಲೆಗಳನ್ನು ಕೊನೆಯಲ್ಲಿ ಕೊಟ್ಟು ಕಳುಹಿಸುತ್ತಾರೆ.

ಡಿಸ್​ಚಾರ್ಜ್ ಆದ ಬಳಿಕ ಈ ದಾಖಲೆಗಳ ಫೋಟೋಕಾಪಿ ಮಾಡಿ ನೀವಿಟ್ಟುಕೊಳ್ಳಿ. ಮೂಲಪ್ರತಿಯನ್ನು ಇನ್ಷೂರೆನ್ಸ್ ಕಂಪನಿಗೆ ತಲುಪಿಸಬೇಕು. ಅದು ಕೇಳುವ ಎಲ್ಲಾ ದಾಖಲೆಯೂ ತಲುಪಿದ್ದರೆ ನೀವು ಕ್ಲೇಮ್ ಮಾಡಿರುವ ಶೇ. 90ಕ್ಕೂ ಹೆಚ್ಚು ಹಣವನ್ನು ನಿಮಗೆ ರೀಇಂಬರ್ಸ್ ಮಾಡಲಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ