ಗಮನಿಸಿ, ಐಸಿಐಸಿಐ ಬ್ಯಾಂಕ್​​ನ ಎಟಿಎಂ ಟ್ರಾನ್ಸಾಕ್ಷನ್, ಕ್ಯಾಷ್ ಡೆಪಾಸಿಟ್ ಇತ್ಯಾದಿ ಶುಲ್ಕಗಳಲ್ಲಿ ಬದಲಾವಣೆ

ICICI bank revises charges on ATM transactions and other services: ಭಾರತದ ಪ್ರಮುಖ ಕಮರ್ಷಿಯಲ್ ಬ್ಯಾಂಕುಗಳಲ್ಲಿ ಒಂದಾದ ಐಸಿಐಸಿಐ ಬ್ಯಾಂಕ್ ಜುಲೈ 1ರಿಂದ ಜಾರಿಗೆ ಬರುವಂತೆ ಕೆಲ ಶುಲ್ಕಗಳನ್ನು ಬದಲಾವಣೆ ಮಾಡಿದೆ. ಬ್ಯಾಂಕ್ ಕಚೇರಿಯಲ್ಲಿ, ಎಟಿಎಂಗಳಲ್ಲಿ ಕ್ಯಾಷ್ ವಿತ್​ಡ್ರಾ ಮಾಡಿದರೆ, ಕ್ಯಾಷ್ ಡೆಪಾಸಿಟ್ ಮಾಡಿದರೆ ವಿಧಿಸಲಾಗುವ ಶುಲ್ಕಗಳಲ್ಲಿ ಬದಲಾವಣೆ ಮಾಡಲಾಗಿದೆ. ಡಿಮ್ಯಾಂಡ್ ಡ್ರಾಫ್ಟ್, ಐಎಂಪಿಎಸ್, ಡೆಬಿಟ್ ಕಾರ್ಡ್ ಶುಲ್ಕಗಳೂ ಅಪ್​ಡೇಟ್ ಆಗಿವೆ.

ಗಮನಿಸಿ, ಐಸಿಐಸಿಐ ಬ್ಯಾಂಕ್​​ನ ಎಟಿಎಂ ಟ್ರಾನ್ಸಾಕ್ಷನ್, ಕ್ಯಾಷ್ ಡೆಪಾಸಿಟ್ ಇತ್ಯಾದಿ ಶುಲ್ಕಗಳಲ್ಲಿ ಬದಲಾವಣೆ
ಐಸಿಐಸಿಐ ಬ್ಯಾಂಕ್

Updated on: Jun 18, 2025 | 12:38 PM

ನವದೆಹಲಿ, ಜೂನ್ 18: ಐಸಿಐಸಿಐ ಬ್ಯಾಂಕ್ ತನ್ನ ಕೆಲ ಹಣಕಾಸು ಸೇವೆಗಳಿಗೆ ಶುಲ್ಕಗಳನ್ನು ಪರಿಷ್ಕರಿಸಿದೆ. ಎಟಿಎಂ ಟ್ರಾನ್ಸಾಕ್ಷನ್, ಡಿಮ್ಯಾಂಡ್ ಡ್ರಾಫ್ಟ್, ಕ್ಯಾಷ್ ಡೆಪಾಸಿಟ್, ಡೆಬಿಟ್ ಕಾರ್ಡ್ ಇತ್ಯಾದಿಗಳಿಗೆ ಶುಲ್ಕಗಳನ್ನು ಪರಿಷ್ಕರಿಸಿದೆ. 2025ರ ಜುಲೈ 1ರಿಂದ ಈ ಹೊಸ ಶುಲ್ಕಗಳು ಜಾರಿಗೆ ಬರಲಿವೆ. ನೀವು ಬ್ಯಾಂಕ್ ಬ್ರ್ಯಾಂಚ್​​ಗೆ ಹೋಗಿ ಪದೇ ಪದೇ ಕ್ಯಾಷ್ ವಿತ್​​ಡ್ರಾ ಮಾಡಿದರೆ ಶುಲ್ಕ ಕಟ್ಟಬೇಕಾದೀತು. ಬೇರೆ ಬ್ಯಾಂಕುಗಳಲ್ಲೂ ಕೂಡ ಈ ಎಲ್ಲಾ ಸೇವೆಗಳಿಗೆ ಶುಲ್ಕ ಇರುತ್ತದೆ. ಸದ್ಯ ಐಸಿಐಸಿಐ ಬ್ಯಾಂಕ್​​ನ ಪರಿಷ್ಕೃತ ದರಗಳ ವಿವರ ಇಲ್ಲಿ ಮುಂದಿದೆ ಗಮನಿಸಿ.

ಐಸಿಐಸಿಐ ಬ್ಯಾಂಕ್ ಎಟಿಎಂ ವಹಿವಾಟು ಶುಲ್ಕ ನೀತಿಯಲ್ಲಿ ಬದಲಾವಣೆ

ಐಸಿಐಸಿಐ ಬ್ಯಾಂಕ್​​ನ ಎಟಿಎಂ ಬಳಕೆದಾರರು ಮೆಟ್ರೋ ನಗರಗಳಲ್ಲಿರುವ ಐಸಿಐಸಿಐ ಬ್ಯಾಂಕ್​​ಗೆ ಸೇರದ ಬೇರೆ ಬ್ಯಾಂಕುಗಳ ಎಟಿಎಂಗಳಲ್ಲಿ ತಿಂಗಳಿಗೆ ಮೂರು ಬಾರಿ ಉಚಿತವಾಗಿ ಟ್ರಾನ್ಸಾಕ್ಷನ್ ನಡೆಸಬಹುದು. ಅದರ ಮೇಲಿನ ವಹಿವಾಟಿಗೆ ಶುಲ್ಕ ಏರಿಕೆ ಆಗಿದೆ. ಹಣ ವಿತ್​ಡ್ರಾ ಮಾಡುವುದು ಇತ್ಯಾದಿ ಪ್ರತೀ ಹಣಕಾಸು ವಹಿವಾಟಿಗೆ 23 ರೂ ತೆರಬೇಕಾಗುತ್ತದೆ. ಹಣಕಾಸು ಅಲ್ಲದ ಟ್ರಾನ್ಸಾಕ್ಷನ್​​ಗೆ 8.50 ರೂ ಶುಲ್ಕ ಇರುತ್ತದೆ. ಬೆಂಗಳೂರು, ಹೈದರಾಬಾದ್, ಚೆನ್ನೈ, ಮುಂಬೈ, ದೆಹಲಿ, ಮತ್ತು ಕೋಲ್ಕತಾ ನಗರಗಳಲ್ಲಿ ಇದು ಅನ್ವಯ ಆಗುತ್ತದೆ.

ಇನ್ನು, ಇತರ ನಗರಗಳಲ್ಲಾದರೆ ಉಚಿತವಾಗಿ ಐದು ಟ್ರಾನ್ಸಾಕ್ಷನ್ಸ್ ನಡೆಸಬಹುದು. ಆ ನಂತರದ ಶುಲ್ಕಗಳು ಮೆಟ್ರೋ ನಗರಗಳಿಗಿರುವಷ್ಟೇ ಇರುತ್ತವೆ.

ಇದನ್ನೂ ಓದಿ
ನಿಮ್ಮ ಸಾಲದ ಮಿತಿ ಇದಕ್ಕಿಂತ ಹೆಚ್ಚಿರದಂತೆ ನೋಡಿಕೊಳ್ಳಿ
ಬರಲಿವೆ ಹೊಸ ಗೋಲ್ಡ್ ಲೋನ್ ನಿಯಮಗಳು? ಹೈಲೈಟ್ಸ್
ಬ್ಯಾಂಕ್ ಲಾಕರ್ ದರೋಡೆಯಾದರೆ ಯಾರು ಜವಾಬ್ದಾರರು?
ಇನ್ಷೂರೆನ್ಸ್ ಪಾಲಿಸಿ ಪಡೆಯುವಾಗ ಧೂಮಪಾನ ಅಭ್ಯಾಸ ಮುಚ್ಚಿಟ್ಟರೆ ಏನು?

ಐಸಿಐಸಿಐ ಬ್ಯಾಂಕ್ ಎಟಿಎಂಗಳಲ್ಲಿ ಟ್ರಾನ್ಸಾಕ್ಷನ್ ಶುಲ್ಕ

ಐಸಿಐಸಿಐ ಬ್ಯಾಂಕ್ ಗ್ರಾಹಕರು ತಮ್ಮದೇ ಬ್ಯಾಂಕ್​​ನ ಎಟಿಎಂಗಳಲ್ಲಿ ತಿಂಗಳಿಗೆ ಐದು ಟ್ರಾನ್ಸಾಕ್ಷನ್​​ಗಳನ್ನು ಉಚಿತವಾಗಿ ಮಾಡಬಹುದು. ಈ ಮಿತಿ ದಾಟಿದರೆ ಪ್ರತೀ ಹಣಕಾಸು ವಹಿವಾಟಿಗೆ 23 ರೂ ಶುಲ್ಕ ಇರುತ್ತದೆ. ಬ್ಯಾಲನ್ಸ್ ನೋಡುವುದು, ಮಿನಿ ಸ್ಟೇಟ್ಮೆಂಟ್ ಪಡೆಯುವುದು ಇತ್ಯಾದಿ ಹಣಕಾಸೇತರ ವಹಿವಾಟುಗಳಿಗೆ ಶುಲ್ಕ ಇರುವುದಿಲ್ಲ. ಹಿರಿಯ ನಾಗರಿಕರಿಗೆ ಯಾವ ಶುಲ್ಕವೂ ಇರುವುದಿಲ್ಲ.

ಇದನ್ನೂ ಓದಿ: ಒಬ್ಬ ವ್ಯಕ್ತಿ ಎಷ್ಟು ಸಾಲ ಮಾಡಬಹುದು? ಮಿತಿ ಎಷ್ಟಿರಬೇಕು?

ಐಸಿಐಸಿಐ ಬ್ಯಾಂಕ್ ಅಂತರರಾಷ್ಟ್ರೀಯ ಎಟಿಎಂ ವಹಿವಾಟು

ಭಾರತದಿಂದ ಹೊರಗಿರುವ ಎಟಿಎಂಗಳಲ್ಲಿ ನೀವು ಹಣ ವಿತ್​​ಡ್ರಾ ಮಾಡಿದರೆ ಪ್ರತಿ ಟ್ರಾನ್ಸಾಕ್ಷನ್​​ಗೆ 125 ರೂ ಶುಲ್ಕ ತೆರಬೇಕಾಗುತ್ತದೆ. ಜೊತೆಗೆ, ಶೇ. 3.50ರಷ್ಟು ಕರೆನ್ಸಿ ಕನ್ವರ್ಷನ್ ದರವನ್ನೂ ನೀಡಬೇಕಾಗುತ್ತದೆ. ಹಣಕಾಸು ಅಲ್ಲದ ವಹಿವಾಟುಗಳಿಗೆ 25 ರೂ ಶುಲ್ಕ ಇರುತ್ತದೆ. ಗಮನಿಸಬೇಕಾದ ಸಂಗತಿ ಎಂದರೆ, ಹಿರಿಯ ನಾಗರಿಕರಿಗೆ ಶುಲ್ಕ ಇರುವುದಿಲ್ಲ.

ಐಸಿಐಸಿಐ ಬ್ಯಾಂಕ್ ಡಿಮ್ಯಾಂಡ್ ಡ್ರಾಫ್ಟ್ ಶುಲ್ಕ

ಡಿಮ್ಯಾಂಡ್ ಡ್ರಾಫ್ಟ್ ಪಡೆಯಲು ಕನಿಷ್ಠ ಶುಲ್ಕ 50 ರೂ ಇದೆ. ಒಂದು ಸಾವಿರ ರೂಗೆ 2 ರೂನಂತೆ ಡಿಡಿ ಶುಲ್ಕ ವಿಧಿಸಲಾಗುತ್ತದೆ. ಉದಾಹರಣೆಗೆ, ನೀವು 50,000 ರೂಗೆ ಡಿಡಿ ಪಡೆದರೆ 100 ರೂ ಶುಲ್ಕ ನೀಡಬೇಕಾಗುತ್ತದೆ. 10,000 ರೂಗೆ ಡಿಡಿ ಶುಲ್ಕ 20 ರೂ ಆದರೂ, ಕನಿಷ್ಠ ಶುಲ್ಕ 50 ರೂ ಅನ್ನು ನೀಡಬೇಕಾಗುತ್ತದೆ.

ಐಸಿಐಸಿಐ ಬ್ಯಾಂಕ್ ಕ್ಯಾಷ್ ಡೆಪಾಸಿಟ್ ಸೇವೆ

ಐಸಿಐಸಿಐ ಬ್ಯಾಂಕ್ ಗ್ರಾಹಕರು ತಮ್ಮ ಬ್ಯಾಂಕ್ ಕಚೇರಿಗೆ ಹೋಗಿ ಕ್ಯಾಷ್ ಡೆಪಾಸಿಟ್ ಮಾಡಬಹುದು. ಈ ರೀತಿಯ ಮೂರು ಡೆಪಾಸಿಟ್​​ಗಳಿಗೆ ಶುಲ್ಕ ಇರುವುದಿಲ್ಲ. ಈ ಮಿತಿ ದಾಟಿದರೆ, ಪ್ರತೀ ಟ್ರಾನ್ಸಾಕ್ಷನ್​​ಗೂ 150 ರೂ ಶುಲ್ಕ ಇರುತ್ತದೆ.

ಮತ್ತೊಂದು ಸಂಗತಿ ಎಂದರೆ, ಒಂದು ತಿಂಗಳಲ್ಲಿ ನೀವು ಎಷ್ಟೇ ಒಂದು ಲಕ್ಷ ರೂವರೆಗೆ ಉಚಿತವಾಗಿ ಕ್ಯಾಷ್ ಡೆಪಾಸಿಟ್ ಮಾಡಬಹುದು. ಆ ನಂತರ ಡೆಪಾಸಿಟ್ ಮೊತ್ತಕ್ಕೆ 150 ರೂ ಶುಲ್ಕ ಅಥವಾ ಪ್ರತೀ 1,000 ರೂಗೆ 3.50 ರೂನಂತೆ ಶುಲ್ಕ ವಿಧಿಸಲಾಗುತ್ತದೆ. ಥರ್ಡ್ ಪಾರ್ಟಿ ಟ್ರಾನ್ಸಾಕ್ಷನ್ ಆದರೆ ಪ್ರತೀ ವಹಿವಾಟಿಗೆ 25,000 ರೂ ಡೆಪಾಸಿಟ್ ಮಿತಿ ಇರುತ್ತದೆ.

ಇದನ್ನೂ ಓದಿ: ಎಲ್​ಟಿವಿ ಏರಿಕೆಯಿಂದ ಹಿಡಿದು ಚಿನ್ನದ ಹರಾಜುವರೆಗೆ, ಆರ್​​ಬಿಐನ ಹೊಸ ಗೋಲ್ಡ್ ಲೋನ್ ನಿಯಮಗಳನ್ನು ತಿಳಿದಿರಿ

ಐಸಿಐಸಿಐ ಬ್ಯಾಂಕ್ ಕ್ಯಾಷ್ ವಿತ್​​ಡ್ರಾಯಲ್ ಶುಲ್ಕ

ಎಟಿಎಂನಲ್ಲಷ್ಟೇ ಅಲ್ಲ, ಬ್ಯಾಂಕುಗಳಲ್ಲೂ ನೀವು ಕ್ಯಾಷ್ ವಿತ್​​ಡ್ರಾ ಮಾಡಿದರೆ ಶುಲ್ಕ ಇರುತ್ತದೆ. ಒಂದು ತಿಂಗಳಲ್ಲಿ ನೀವು ಬ್ಯಾಂಕ್ ಬ್ರ್ಯಾಂಚ್​​ಗೆ ಹೋಗಿ ಮೂರು ಬಾರಿ ಕ್ಯಾಷ್ ವಿತ್​​ಡ್ರಾ ಮಾಡಬಹುದು. ಗರಿಷ್ಠ ಒಂದು ಲಕ್ಷ ರೂವರೆಗೆ ಹಣ ಪಡೆಯಬಹುದು. ಶುಲ್ಕ ಇರುವುದಿಲ್ಲ. ಆದರೆ, ಈ ಒಂದು ಲಕ್ಷ ರೂ ಮಿತಿ ಮತ್ತು ಮೂರು ವಿತ್​​​ಡ್ರಾಯಲ್ ಮಿತಿ ದಾಟಿದರೆ 150 ರೂ ಶುಲ್ಕ ಇರುತ್ತದೆ. ಅಥವಾ ಪ್ರತೀ 1,000 ರೂಗೆ 3.50 ರೂನಂತೆ ಶುಲ್ಕ ಹಾಕಲಾಗುತ್ತದೆ.

ಐಸಿಐಸಿಐ ಬ್ಯಾಂಕ್ ಡೆಬಿಟ್ ಕಾರ್ಡ್ ಶುಲ್ಕಗಳು

ಐಸಿಐಸಿಐ ಬ್ಯಾಂಕ್​​ನ ರೆಗ್ಯುಲರ್ ಡೆಬಿಟ್ ಕಾರ್ಡ್​​ಗಳ ವಾರ್ಷಿಕ ಶುಲ್ಕವನ್ನು 300 ರೂಗೆ ನಿಗದಿ ಮಾಡಲಾಗಿದೆ. ಗ್ರಾಮೀಣ ಭಾಗದ ಬ್ಯಾಂಕ್ ಗ್ರಾಹಕರಿಗೆ 150 ರೂ ವಾರ್ಷಿಕ ಶುಲ್ಕ ಇರುತ್ತದೆ. ಹೊಸ ಕಾರ್ಡ್ ಪಡೆಯುವುದಾದರೆ ಅದಕ್ಕೆ 300 ರೂ ಶುಲ್ಕ ನೀಡಬೇಕಾಗುತ್ತದೆ.

ಐಎಂಪಿಎಸ್ ಟ್ರಾನ್ಸಾಕ್ಷನ್ ಶುಲ್ಕ

ಐಸಿಐಸಿಐ ಬ್ಯಾಂಕ್ ಖಾತೆಯಿಂದ ಬೇರೆ ಖಾತೆಗೆ ಐಎಂಪಿಎಸ್ ಪೇಮೆಂಟ್ ಟ್ರಾನ್ಸಾಕ್ಷನ್ ಮಾಡಿದರೆ, ಆ ಮೊತ್ತಕ್ಕೆ ಅನುಗುಣವಾಗಿ ಶುಲ್ಕ ವಿಧಿಸಲಾಗುತ್ತದೆ. 1,000 ರೂವರೆಗಿನ ಹಣಕ್ಕೆ 2.50 ರೂ ಶುಲ್ಕ ಇರುತ್ತದೆ. 1,000 ರೂ ಮೇಲ್ಪಟ್ಟು 1,00,000 ರೂವರೆಗಿನ ಹಣವಾದರೆ 5 ರೂ ಶುಲ್ಕ ಇರುತ್ತದೆ. ಒಂದು ಲಕ್ಷ ರೂನಿಂದ ಐದು ಲಕ್ಷ ರೂವರೆಗಿನ ಟ್ರಾನ್ಸಾಕ್ಷನ್ ಆದರೆ 15 ರೂ ಶುಲ್ಕ ವಿಧಿಸಲಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ