Cash Transaction: ಎಚ್ಚರ, ಮನೆಯಲ್ಲಿ ಹೆಚ್ಚೆಚ್ಚು ನಗದು ಇಟ್ಟುಕೊಳ್ಳುವವರು ನೀವಾದರೆ ಈ ವಿಚಾರಗಳನ್ನು ತಿಳಿದಿರಿ

| Updated By: Digi Tech Desk

Updated on: Jan 17, 2023 | 5:42 PM

ಮನೆಯಲ್ಲಿ ಭಾರೀ ಮೊತ್ತದ ನಗದು ಇಟ್ಟುಕೊಳ್ಳುವುದು ತಪ್ಪೇ? ಅಲ್ಲವಾದರೆ ಎಷ್ಟು ಮೊತ್ತದ ನಗದು ಮನೆಯಲ್ಲಿ ಇಟ್ಟುಕೊಳ್ಳಬಹುದು? ಬೇರೆ ಯಾರಾದರೂ ನಗದು ತಂದು ನಿಮ್ಮ ಮನೆಯಲ್ಲಿಟ್ಟರೆ ನೀವೇ ಅದಕ್ಕೆ ಜವಾಬ್ದಾರರೇ? ನಿಗದಿತ ಮಿತಿಗಿಂತ ಹೆಚ್ಚಿನ ಹಣ ಮನೆಯಲ್ಲಿದ್ದರೆ ಏನು ಮಾಡಬೇಕಾಗುತ್ತದೆ? ಇಲ್ಲಿದೆ ಮಾಹಿತಿ.

Cash Transaction: ಎಚ್ಚರ, ಮನೆಯಲ್ಲಿ ಹೆಚ್ಚೆಚ್ಚು ನಗದು ಇಟ್ಟುಕೊಳ್ಳುವವರು ನೀವಾದರೆ ಈ ವಿಚಾರಗಳನ್ನು ತಿಳಿದಿರಿ
ಸಾಂದರ್ಭಿಕ ಚಿತ್ರ
Image Credit source: PTI
Follow us on

ಇನ್ನೇನು ರಾಜ್ಯ ವಿಧಾನಸಭೆ ಚುನಾವಣೆ (Karnataka Assembly Election) ಸಮೀಪಿಸುತ್ತಿದೆ. ರಾಜಕೀಯ ಪಕ್ಷಗಳು ಜನರಿಗೆ ದುಡ್ಡು ಹಂಚುವುದಕ್ಕೆ ಸಂಬಂಧಿಸಿದ ಆರೋಪ, ಪ್ರತ್ಯಾರೋಪಗಳು ಕೇಳಿ ಬರಲು ಆರಂಭವಾಗಲಿದೆ. ಈ ಮಧ್ಯೆ, ಅಲ್ಲಲ್ಲಿ ನಗದು ವಶಪಡಿಸಿಕೊಂಡ ಬಗ್ಗೆ ಮಾಧ್ಯಮ ವರದಿಗಳೂ ಕಾಣಿಸಬಹುದು. ಹಾಗಿದ್ದರೆ ಮನೆಯಲ್ಲಿ ಭಾರೀ ಮೊತ್ತದ ನಗದು (Cash) ಇಟ್ಟುಕೊಳ್ಳುವುದು ತಪ್ಪೇ? ಅಲ್ಲವಾದರೆ ಎಷ್ಟು ಮೊತ್ತದ ನಗದು ಮನೆಯಲ್ಲಿ ಇಟ್ಟುಕೊಳ್ಳಬಹುದು? ಬೇರೆ ಯಾರಾದರೂ ನಗದು ತಂದು ನಿಮ್ಮ ಮನೆಯಲ್ಲಿಟ್ಟರೆ ನೀವೇ ಅದಕ್ಕೆ ಜವಾಬ್ದಾರರೇ? ನಿಗದಿತ ಮಿತಿಗಿಂತ ಹೆಚ್ಚಿನ ಹಣ ಮನೆಯಲ್ಲಿದ್ದರೆ ಏನು ಮಾಡಬೇಕಾಗುತ್ತದೆ? ಮನೆಯಲ್ಲಿ ನಗದು ಇಟ್ಟುಕೊಳ್ಳುವುದಕ್ಕೆ ಮತ್ತು ನಗದು ವಹಿವಾಟಿಗೆ ಸಂಬಂಧಿಸಿ ಆದಾಯ ತೆರಿಗೆ ಇಲಾಖೆ (Income Tax Department) ಕೆಲವೊಂದು ನಿಯಮಗಳನ್ನು ರೂಪಿಸಿದೆ. ಹಾಗೆಂದು ಮನೆಯಲ್ಲಿ ಗರಿಷ್ಠ ಇಂತಿಷ್ಟೇ ಮೊತ್ತದ ನಗದು ಹಣ ಇಟ್ಟುಕೊಳ್ಳಬಹುದೆಂಬ ಮಿತಿಯನ್ನು ಇಲಾಖೆ ನಿಗದಿಪಡಿಸಿಲ್ಲ. ಆದರೆ, ಕೆಲವು ಷರತ್ತುಗಳನ್ನು ವಿಧಿಸಿದೆ. ಮನೆಯಲ್ಲಿ ನಗದು ಇಟ್ಟುಕೊಳ್ಳುವುದೂ ಸೇರಿದಂತೆ ನಗದು ವ್ಯವಹಾರಕ್ಕೆ ಸಂಬಂಧಿಸಿ ತೆರಿಗೆ ಇಲಾಖೆ ರೂಪಿಸಿರುವ ನಿಯಮಗಳ ಬಗ್ಗೆ ಇಲ್ಲಿದೆ ವಿವರ.

ಮನೆಯಲ್ಲಿರುವ ನಗದಿನ ಮೂಲದ ಬಗ್ಗೆ ಸ್ಪಷ್ಟ ದಾಖಲೆ ಅಗತ್ಯ

ಕೆಲವೊಮ್ಮೆ ತೀರಾ ಶ್ರೀಮಂತರೇ ಆಗಿರಬೇಕೆಂದಿಲ್ಲ, ಸಾಮಾನ್ಯ ವರ್ಗದವರೂ ಬ್ಯಾಂಕ್​ನಲ್ಲಿಡುವ ಬದಲು ನಗದನ್ನು ಮನೆಯಲ್ಲೇ ಇಟ್ಟುಕೊಳ್ಳುವ ಅಭ್ಯಾಸ ಹೊಂದಿರುತ್ತಾರೆ. ಹೀಗೆ ಹೆಚ್ಚು ಮೊತ್ತದ ನಗದು ಮನೆಯಲ್ಲಿ ಇದ್ದರೆ ಅದರ ಮೂಲದ ಬಗ್ಗೆ ಸ್ಪಷ್ಟ ಮಾಹಿತಿ ಹಾಗೂ ದಾಖಲೆಗಳನ್ನು ಹೊಂದಿರುವುದು ಅನಿವಾರ್ಯ. ಒಂದು ವೇಳೆ ಮನೆಯಲ್ಲಿರುವ ಹಣದ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ದಾಖಲೆ ಕೇಳಿದಲ್ಲಿ ಒದಗಿಸಬೇಕಾಗುತ್ತದೆ. ಎಲ್ಲ ದಾಖಲೆಗಳು ಬಳಿ ಇದ್ದರೆ ಮತ್ತು ನೀವು ಐಟಿ ರಿಟರ್ನ್ಸ್ ಸಲ್ಲಿಸಿದ್ದರೆ ಆತಂಕಪಡಬೇಕಾಗಿಲ್ಲ. ಇಲ್ಲವಾದಲ್ಲಿ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಮತ್ತು ಸಿಬಿಐಯಂಥ ಸಂಸ್ಥೆಗಳು ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬಹುದು.

ದಾಖಲೆ ಇಲ್ಲದ ಹಣಕ್ಕೆ ಎಷ್ಟು ದಂಡ ಪಾವತಿಸಬೇಕು?

ಮನೆಯಲ್ಲಿ ಭಾರೀ ಮೊತ್ತದ ನಗದು ಇಟ್ಟುಕೊಂಡಿದ್ದು ಅದಕ್ಕೆ ಸಂಬಂಧಪಟ್ಟ ದಾಖಲೆಗಳು ಇಲ್ಲದಿದ್ದಲ್ಲಿ ಹಾಗೂ ಆದಾಯದ ಮೂಲದ ವಿವರ ಇಲ್ಲದಿದ್ದಲ್ಲಿ ತನಿಖಾ ಸಂಸ್ಥೆಗಳು ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು. ನೇರ ತೆರಿಗೆಗಳ ಕೇಂದ್ರ ಮಂಡಳಿ ಅಥವಾ ಸಿಬಿಡಿಟಿ ನಿಯಮಗಳು ಹೇಳುವ ಪ್ರಕಾರ, ಮನೆಯಲ್ಲಿರುವ ಭಾರೀ ಮೊತ್ತದ ನಗದಿನ ಮೂಲವನ್ನು ಸಂಬಂಧಪಟ್ಟ ಸಂಸ್ಥೆಗೆ ತಿಳಿಸಲು ವಿಫಲವಾದಲ್ಲಿ ಶೇ 137ರಷ್ಟು ದಂಡ ಪಾವತಿಸಬೇಕಾಗಲಿದೆ.

ನಗದು ವ್ಯವಹಾರಗಳಿಗೆ ಸಂಬಂಧಿಸಿದ ಈ ನಿಯಮಗಳನ್ನು ತಿಳಿದಿರಿ

  • ಒಂದು ಹಣಕಾಸು ವರ್ಷದಲ್ಲಿ 20 ಲಕ್ಷ ರೂ.ಗಿಂತ ಹೆಚ್ಚು ನಗದು ವ್ಯವಹಾರ ನಡೆಸುವುದರಿಂದ ದಂಡಕ್ಕೆ ಗುರಿಯಾಗಬೇಕಾಗಬಹುದು.
  • ಒಂದು ಬಾರಿಗೆ 50,000 ರೂ.ಗಿಂತ ಹೆಚ್ಚು ಮೊತ್ತ ಠೇವಣಿ ಇಡುವುದಾದರೆ ಅಥವಾ ವಿತ್​​ಡ್ರಾ ಮಾಡುವುದಾದರೆ ಪ್ಯಾನ್ ಸಂಖ್ಯೆ ನೀಡುವುದು ಕಡ್ಡಾಯವಾಗಿದೆ.
  • ಒಬ್ಬ ವ್ಯಕ್ತಿ ಒಂದು ಹಣಕಾಸು ವರ್ಷದಲ್ಲಿ 20 ಲಕ್ಷ ರೂ. ನಗದನ್ನು ಠೇವಣಿ ಇಡುವುದಾದರೆ ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ನೀಡಬೇಕು.
  • ಪ್ಯಾನ್​ ಮತ್ತು ಆಧಾರ್ ಸಂಖ್ಯೆ ನೀಡದಿದ್ದಲ್ಲಿ 20 ಲಕ್ಷ ರೂ.ವರೆಗೆ ದಂಡ ಪಾವತಿಸಬೇಕಾಗಬಹುದು.
  • 2 ಲಕ್ಷ ರೂ.ಗಿಂತ ಹೆಚ್ಚು ಮೊತ್ತದ ನಗದು ನೀಡಿ ವಸ್ತುಗಳನ್ನು ಖರೀದಿಸುವುದು ಅಥವಾ ಶಾಪಿಂಗ್ ಮಾಡುವಂತಿಲ್ಲ.
  • ಒಂದು ವೇಳೆ 2 ಲಕ್ಷ ರೂ.ಗಿಂತ ಹೆಚ್ಚು ಮೊತ್ತದ ನಗದು ನೀಡಿ ವಸ್ತುಗಳನ್ನು ಖರೀದಿಸುವುದಾದರೆ ಪ್ಯಾನ್ ಮತ್ತು ಆಧಾರ್ ಕಾರ್ಡ್​ ಪ್ರತಿಯನ್ನು ಸಲ್ಲಿಸಬೇಕಾಗುತ್ತದೆ.
  • 30 ಲಕ್ಷ ರೂ.ಗಿಂತ ಹೆಚ್ಚಿನ ಆಸ್ತಿಯನ್ನು ನಗದು ನೀಡಿ ಖರೀದಿಸಿದರೆ ಅಥವಾ ನಗದು ಪಡೆದು ಮಾರಾಟ ಮಾಡಿದರೆ ಅಂಥ ವ್ಯಕ್ತಿಗಳ ಬಗ್ಗೆ ತನಿಖಾ ಸಂಸ್ಥೆಗಳು ಕ್ರಮ ಕೈಗೊಳ್ಳಬಹುದು.
  • ಕ್ರೆಡಿಟ್, ಡೆಬಿಟ್ ಕಾರ್ಡ್​​ ಮೂಲಕ ಒಂದೇ ಬಾರಿಗೆ 1 ಲಕ್ಷ ರೂ.ಗಿಂತ ಹೆಚ್ಚು ಪಾವತಿ ಮಾಡಿದರೂ ತನಿಖೆಗೆ ಗುರಿಯಾಗಬೇಕಾಗಬಹುದು.
  • ಸಂಬಂಧಿಕರಿಂದ ಒಂದೇ ದಿನ 2 ಲಕ್ಷ ರೂ. ನಗದು ಸ್ವೀಕರಿಸಬೇಡಿ. ಸ್ವೀಕರಿಸುವುದಾದರೆ ಬ್ಯಾಂಕ್​ ಖಾತೆ ಮೂಲಕವೇ ಸ್ವೀಕರಿಸಿ.
  • ನಗದು ರೂಪದಲ್ಲಿ ದೇಣಿಗೆ ಅಥವಾ ದಾನ ಮಾಡುವ ಮಿತಿಯನ್ನು 2,000 ರೂ.ಗೆ ಸೀಮಿತಗೊಳಿಸಲಾಗಿದೆ.
  • ಯಾರೇ ಆಗಲಿ ಮತ್ತೊಬ್ಬ ವ್ಯಕ್ತಿಯಿಂದ 20,000 ರೂ.ಗಿಂತ ಹೆಚ್ಚು ಮೊತ್ತವನ್ನು ನಗದು ರೂಪದಲ್ಲಿ ಸಾಲ ಪಡೆಯುವಂತಿಲ್ಲ.
  • ಬ್ಯಾಂಕ್ ಖಾತೆಯಿಂದ 2 ಕೋಟಿ ರೂ. ವಿತ್​​ಡ್ರಾ ಮಾಡುವುದಾದರೆ ಟಿಡಿಎಸ್ ಪಾವತಿಸಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:37 pm, Tue, 17 January 23