ವಾಷಿಂಗ್‌ಟನ್: ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯ ಪ್ರಗತಿ ದರ ತುಸು ಕುಂಠಿತವಾಗಬಹುದು ಎಂದು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (International Monetary Fund – IMF) ಅಭಿಪ್ರಾಯಪಟ್ಟಿದೆ. ಆದರೆ ಇದೇ ಮಾರ್ಚ್ 31ಕ್ಕೆ ಅಂತ್ಯಗೊಳ್ಳುವ ಪ್ರಸಕ್ತ ಸಾಲಿನ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಪ್ರಗತಿ ದರದಲ್ಲಿ (ಶೇ 6.8) ಯಾವುದೇ ಬದಲಾವಣೆಯನ್ನು ಐಎಂಎಫ್ ಮಾಡಿಲ್ಲ. ಆದರೆ ಮುಂದಿನ ಹಣಕಾಸು ವರ್ಷದಲ್ಲಿ (2023-24) ಪ್ರಗತಿ ದರವು ಶೇ 6.1ಕ್ಕೆ ಇಳಿಯಬಹುದು ಎಂದು ಅಂದಾಜಿಸಿದೆ. ಐಎಂಎಫ್ ಮಂಗಳವಾರ ಬಿಡುಗಡೆ ಮಾಡಿದ ವಿಶ್ವ ಹಣಕಾಸು ಮುನ್ನೋಟ (World Economic Outlook) ವರದಿಯಲ್ಲಿ ಭಾರತದ ಆರ್ಥಿಕ ಪ್ರಗತಿಯೂ ಸೇರಿದಂತೆ ವಿಶ್ವ ವಿತ್ತ ವಿದ್ಯಮಾನದ ಬದಲಾಗುತ್ತಿರುವ ಸ್ಥಿತಿಗತಿ ಕುರಿತು ವಿವರಗಳಿವೆ. ಪ್ರಸಕ್ತ ಹಣಕಾಸು ವರ್ಷದಲ್ಲಿ (2022-23) ವಿಶ್ವ ಆರ್ಥಿಕ ಪ್ರಗತಿ ದರವು ಶೇ 2.9ಕ್ಕೆ ಕುಸಿಯಬಹುದು ಎಂದು ವರದಿ ತಿಳಿಸಿದೆ. ಈ ಮೊದಲು ಪ್ರಸಕ್ತ ಹಣಕಾಸು ವರ್ಷದ ಪ್ರಗತಿ ದರವು ಶೇ 3.4 ಇರಬಹುದು ಎಂದು ಅಂದಾಜಿಸಲಾಗಿತ್ತು. ಮುಂದಿನ ಹಣಕಾಸು ವರ್ಷದಲ್ಲಿ (2023-24) ಪ್ರಗತಿ ದರವು ಶೇ 3.1ಕ್ಕೆ ಏರಬಹುದು ಎಂದು ನಿರೀಕ್ಷಿಸಲಾಗಿದೆ.
‘ಭಾರತದ ವಿಚಾರದಲ್ಲಿ ನಾವು ಮಾಡಿರುವ ಪ್ರಗತಿಯ ಅಂದಾಜಿನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪ್ರಸಕ್ತ ಹಣಕಾಸು ವರ್ಷಕ್ಕೆ ಪ್ರಗತಿ ದರವನ್ನು ಶೇ 6.8ರಲ್ಲಿಯೇ ಮುಂದುವರಿಸುತ್ತಿದ್ದೇವೆ. ಮಾರ್ಚ್ ನಂತರ ಪರಿಸ್ಥಿತಿ ತುಸು ಬದಲಾಗುವ ನಿರೀಕ್ಷೆಯಿದ್ದು, ಪ್ರಗತಿಯು ಶೇ 6.1ಕ್ಕೆ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ. ಇದಕ್ಕೆ ಭಾರತದ ಆಂತರಿಕ ವಿದ್ಯಮಾನಗಳಿಗಿಂತಲೂ ಬಾಹ್ಯ ಬೆಳವಣಿಗೆಯ ಪರಿಣಾಮಗಳು ಕಾರಣ’ ಎಂದು ಐಎಂಎಫ್‌ನ ಸಂಶೋಧನಾ ವಿಭಾಗದ ಮುಖ್ಯ ಆರ್ಥಶಾಸ್ತ್ರಜ್ಞ ಪಿರೆ-ಆಲಿವೀರ್ ಗೌರಿಂಚಸ್ ಹೇಳಿದರು.
Global growth remains weak, but it may be at a turning point. We have slightly increased our 2022 and 2023 growth forecasts. Global growth will slow from 3.4% in 2022 to 2.9% in 2023 then rebound to 3.1% in 2024. https://t.co/TxZ9Co4S0j pic.twitter.com/elHTkvgUAA
— Gita Gopinath (@GitaGopinath) January 31, 2023
ವರದಿಯ ಪ್ರಕಾರ ಏಷ್ಯಾದ ಪ್ರವರ್ಧಮಾನಕ್ಕೆ ಬರುತ್ತಿರುವ ಹಾಗೂ ಅಭಿವೃದ್ಧಿಶೀಲ ದೇಶಗಳಲ್ಲಿ 2023-24ರ ಆರ್ಥಿಕ ವರ್ಷದಲ್ಲಿ ಪ್ರಗತಿದರವು ಶೇ 5.3ರಷ್ಟು ಇರಬಹುದು ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ ಇದು ಶೇ 4.3ಕ್ಕೆ ಇಳಿದಿದ್ದು. ಕಳೆದ ವರ್ಷದ ಕಳಾಹೀನ (ಸ್ಲೋಡೌನ್) ಸ್ಥಿತಿಗೆ ಚೀನಾದ ವಿದ್ಯಮಾನಗಳು ಮುಖ್ಯ ಕಾರಣ ಎಂದು ಐಎಂಎಫ್ ಹೇಳಿದೆ.
ಪ್ರಸಕ್ತ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಚೀನಾದ ಜಿಡಿಪಿ ತಗ್ಗಿದೆ. ಹೀಗಾಗಿ ಒಟ್ಟಾರೆ ಪ್ರಗತಿಯ ಪ್ರಮಾಣವು ಶೇ 0.2ರಷ್ಟು ಕಡಿಮೆಯಾಗಿದೆ. ಕಳೆದ 40 ವರ್ಷಗಳ ಚೀನಾದ ಇತಿಹಾಸದಲ್ಲಿ ಹೀಗೆ ಆಗಿರುವುದು ಇದೇ ಮೊದಲು. ಚೀನಾದ ಪ್ರಗತಿದರವು ಎಂದಿಗೂ ಜಾಗತಿಕ ಪ್ರಗತಿ ದರಕ್ಕಿಂತಲೂ ಕಡಿಮೆಯಿರಲಿಲ್ಲ. ಮುಂದಿನ ಹಣಕಾಸು ವರ್ಷದಲ್ಲಿ ಚೀನಾದ ಪ್ರಗತಿದರವು ಶೇ 5.2ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಆದರೆ 2024-25ರಲ್ಲಿ ಮತ್ತೆ ಚೀನಾದ ಆರ್ಥಿಕ ಪ್ರಗತಿ ಶೇ 4.5ಕ್ಕೆ ಕುಸಿಯಬಹುದು. ನಂತರದ ವರ್ಷಗಳಲ್ಲಿ ಶೇ 4ರ ಆಸುಪಾಸಿನಲ್ಲಿ ಚೀನಾದ ಪ್ರಗತಿ ಮುಂದುವರಿಯುವ ನಿರೀಕ್ಷೆಯಿದೆ ಎಂದು ಅವರು ವಿವರಿಸಿದರು.
ಮತ್ತಷ್ಟು ಓದಿ:Budget 2023: ಆ್ಯಪ್ನಲ್ಲೂ ಸಿಗಲಿದೆ ಬಜೆಟ್ ಪ್ರತಿ; ಯೂನಿಯನ್ ಬಜೆಟ್ ಆ್ಯಪ್ ಹೀಗೆ ಬಳಸಬಹುದು
‘ವಿಶ್ವದ ಬಹುತೇಕ ಪ್ರಗತಿಶೀಲ ದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳು ಯಥಾಸ್ಥಿತಿಗೆ ಮರಳುತ್ತಿವೆ. ಏಷ್ಯಾದಲ್ಲಿ ಕಳೆದ ಹಣಕಾಸು ವರ್ಷದಲ್ಲಿ ಪ್ರಗತಿದರವು ಶೇ 3.9 ಇತ್ತು. ಮುಂದಿನ ಆರ್ಥಿಕ ವರ್ಷದಲ್ಲಿ ಇದು ಶೇ 4ಕ್ಕೆ ಮುಟ್ಟಬಹುದು. ಚೀನಾ ಮತ್ತು ಭಾರತ ದೇಶಗಳು ಮುಂದಿನ ಹಣಕಾಸು ವರ್ಷದಲ್ಲಿ ಜಾಗತಿಕ ಪ್ರಗತಿಯ ಅರ್ಧದಷ್ಟು ಪಾಲು ಪಡೆಯಲಿವೆ. ಇದು ಗಮನಾರ್ಹ ಸಂಗತಿ’ ಎಂದು ಅವರು ಹೇಳಿದರು.
ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ಆರ್ಥಿಕತೆಗಳು ವಿಶ್ವದ ಆರ್ಥಿಕ ಪ್ರಗತಿಯಲ್ಲಿ 10ನೇ 1ರಷ್ಟು ಪಾಲು ಪಡೆದಿವೆ. ಇದಕ್ಕೆ ಹೋಲಿಸಿದರೆ ಅರ್ಧದಷ್ಟು ಪಾಲು ಪಡೆದಿರುವ ಭಾರತ-ಚೀನಾ ಆರ್ಥಿಕತೆಗಳು ಪ್ರಾಮುಖ್ಯತೆ ಅರ್ಥವಾಗುತ್ತದೆ ಎಂದು ಐಎಂಎಫ್ ಬ್ಲಾಗ್‌ನಲ್ಲಿ ಆರ್ಥಶಾಸ್ತ್ರಜ್ಞ ಪಿರೆ-ಆಲಿವೀರ್ ಗೌರಿಂಚಸ್ ಬರೆದಿದ್ದರೆ. ಈ ಅಂಶವು ಎಲ್ಲರ ಗಮನ ಸೆಳೆಯುತ್ತಿದೆ.
ಮುಂದುವರಿದ ದೇಶಗಳ ಆರ್ಥಿಕತೆಗೆ ಇದು ಸುಸಮಯ ಅಲ್ಲ. ಆರ್ಥಿಕ ಹಿಂಜರಿತಕ್ಕೆ ಪೂರ್ವಭಾವಿಯಾಗಿ ಕಾಣಿಸಿಕೊಳ್ಳುವ ಸ್ಲೋಡೌನ್ ಭೀತಿ ಮುಂದುವರಿಯಲಿದೆ. ಕಳೆದ ವರ್ಷ ಆರ್ಥಿಕ ಪ್ರಗತಿಯು ಶೇ 2.7ರಷ್ಟಿದ್ದರೆ, ಈ ವರ್ಷ ಮತ್ತು ಮುಂದಿನ ವರ್ಷದ ಆರ್ಥಿಕ ಪ್ರಗತಿಯು ಶೇ 1.4 ಇರಬಹುದು ಎಂದು ಅಂದಾಜಿಸಲಾಗಿದೆ. ಮುಂದುವರಿದ 10 ದೇಶಗಳ ಪೈಕಿ 9 ದೇಶಗಳಲ್ಲಿ ಆರ್ಥಿಕ ಪ್ರಗತಿ ಕುಂಠಿತಗೊಳ್ಳಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕದ ಕೇಂದ್ರೀಯ ಬ್ಯಾಂಕ್ (ಫೆಡರಲ್ ರಿಸರ್ವ್) ಬಡ್ಡಿದರಗಳನ್ನು ಹೆಚ್ಚಿಸುವ ನಿರೀಕ್ಷೆಯಿರುವುದರಿಂದ ಅಮೆರಿಕದ ಆರ್ಥಿಕತೆಯು 2023ರಲ್ಲಿ ಶೇ 1.4ರಷ್ಟು ಕಡಿಮೆಯಾಗಬಹುದು. ಯೂರೋ ಕರೆನ್ಸಿ ಬಳಕೆಯಿರುವ ದೇಶಗಳಲ್ಲಿ ಇಂಧನ ಬಿಕ್ಕಟ್ಟು ದೊಡ್ಡ ಸಮಸ್ಯೆ ಉಂಟು ಮಾಡಿದೆ. ಯೂರೋಪಿನಲ್ಲಿ ಈ ವರ್ಷ ಚಳಿಗಾಲದ ತೀವ್ರತೆ ಕಡಿಮೆಯಿರುವುದು ಆರ್ಥಿಕತೆಗೆ ಪೂರಕವಾಗಬಹುದು. ಒಟ್ಟಾರೆ ಐರೋಪ್ಯ ಒಕ್ಕೂಟ ಶೇ 0.7ರ ಪ್ರಗತಿ ದಾಖಲಿಸಬಹುದು ಎಂದು ಐಎಂಎಫ್ ಅಂದಾಜಿಸಿದೆ.
ಬಜೆಟ್‌ಗೆ ಸಂಬಂಧಿಸಿದ ಮತ್ತು ಬರಹಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ